ಬೆಂಗಳೂರು: ಟಿ 20 ವಿಶ್ವಕಪ್ 2024 ರ (T20 World Cup) ಗ್ರೂಪ್ ಬಿ ಪಂದ್ಯದಲ್ಲಿ ಇಂಗ್ಲೆಂಡ್ ತನ್ನ ಎದುರಾಳಿ ಒಮನ್ ತಂಡವನ್ನು ಕೇವಲ 47 ರನ್ಗಳಿಗೆ ಆಲೌಟ್ ಮಾಡಿತು ಮತ್ತು ನಂತರ 101 ಎಸೆತಗಳು ಮತ್ತು 8 ವಿಕೆಟ್ಗಳು ಬಾಕಿ ಇರುವಾಗ ಗುರಿಯನ್ನು ಬೆನ್ನಟ್ಟಿತು. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆದಿಲ್ ರಶೀದ್ 4 ವಿಕೆಟ್ ಪಡೆದರೆ, ಮಾರ್ಕ್ ವುಡ್ ಹಾಗೂ ಜೋಫ್ರಾ ಆರ್ಚರ್ ತಲಾ 3 ವಿಕೆಟ್ ಪಡೆದರು. ಅಂದ ಹಾಗೆ ಈ ಫಲಿತಾಂಶ ಇಂಗ್ಲೆಂಡ್ ಪಾಲಿಗೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಲು ನೆರವಾಯಿತು.
ಟಿ20 ವಿಶ್ವಕಪ್ ಪಂದ್ಯವೊಂದನ್ನು 100 ಅಥವಾ ಅದಕ್ಕಿಂತ ಹೆಚ್ಚು ಎಸೆತಗಳು (101 ಎಸೆತಗಳು) ಬಾಕಿ ಇರುವಾಗಲೇ ಗೆದ್ದ ಮೊದಲ ಟೆಸ್ಟ್ ಆಡುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ. ಜೋಸ್ ಬಟ್ಲರ್ ಮತ್ತು ಫಿಲ್ ಸಾಲ್ಟ್ ಬೇಗನೆ ಪಂದ್ಯವನ್ನು ಮುಗಿಸಲು ನಿರ್ಧರಿಸಿದ ಬಳಿಕ ಇಂಗ್ಲೆಂಡ್ ಕೇವಲ 3.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿ ಜಯ ಶಾಲಿಯಾಯಿತು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ಐದು ತಂಡಗಳ ಗ್ರೂಪ್ ಸಿ ಟೇಬಲ್ನಲ್ಲಿ ಆಸ್ಟ್ರೇಲಿಯಾ ಮತ್ತು ಎರಡನೇ ಸ್ಥಾನದಲ್ಲಿರುವ ಸ್ಕಾಟ್ಲೆಂಡ್ ನಂತರ ಮೂರನೇ ಸ್ಥಾನಕ್ಕೆ ಏರಿತು. ಎಲ್ಲಕ್ಕಿಂತ ಮುಖ್ಯವಾಗಿ, ಇಂಗ್ಲೆಂಡ್ನ ನೆಟ್ ರನ್ ರೇಟ್ ಸ್ಕಾಟ್ಲೆಂಡ್ಗಿಂತ ಅಧಿಕವಾಗಿದೆ. ಇಂಗ್ಲೆಂಡ್ನ ನೆಟ್ ರನ್ ರೇಟ್ +3.018 ಕ್ಕೆ ಏರಿತು. ಆದಾಗ್ಯೂ, ಅವರ ಸೂಪರ್ 8 ಅವಕಾಶಗಳು ಇಕ್ಕಟ್ಟಿನಲ್ಲಿದೆ.
ಇಂಗ್ಲೆಂಡ್ ವಿರುದ್ಧದ ತನ್ನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ ಒಮಾನ್ ಮತ್ತು ನಮೀಬಿಯಾವನ್ನು ಸೋಲಿಸಿದ ಸ್ಕಾಟ್ಲೆಂಡ್ ತಂಡ 3 ಪಂದ್ಯಗಳಲ್ಲಿ 5 ಅಂಕಗಳನ್ನು ಹೊಂದಿದೆ. ಇಂಗ್ಲೆಂಡ್ ಸೂಪರ್ ಹಂತಕ್ಕೇರಲು ಸ್ಕಾಟ್ಲೆಂಡ್ ಗ್ರೂಪ್ ಬಿಯ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಬೇಕು ಹಾಗೂ ಇಂಗ್ಲೆಂಡ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನಮೀಬಿಯಾವನ್ನು ಸೋಲಿಸಬೇಕಾಗುತ್ತದೆ. ಆಂಟಿಗುವಾದಲ್ಲಿ ನಮೀಬಿಯಾ ವಿರುದ್ಧದ ಇಂಗ್ಲೆಂಡ್ ಪಂದ್ಯಕ್ಕೂ ಮುನ್ನ ಸ್ಕಾಟ್ಲೆಂಡ್ ಶನಿವಾರ ಸೇಂಟ್ ಲೂಸಿಯಾದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಇಂಗ್ಲೆಂಡ್-ಒಮಾನ್ ಪಂದ್ಯದ ವಿವರಣೆ ಹೀಗಿದೆ
ಜೋಸ್ ಬಟ್ಲರ್ ಕೇವಲ 8 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿದರು. ಅವರ ಇನಿಂಗ್ಸ್ನಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು. ಅವರು ಇಂಗ್ಲೆಂಡ್ ತಂಡಕ್ಕೆ ಕೇವಲ 3.1 ಓವರ್ಗಳಲ್ಲಿ ಮೊತ್ತವನ್ನು ಬೆನ್ನಟ್ಟಲು ಸಹಾಯ ಮಾಡಿದರು. ಫಿಲ್ ಸಾಲ್ಟ್ 2 ಸಿಕ್ಸರ್ ಸಮೇತ 12 ರನ್ ಗಳಿಸಿದರು. ಸಾಲ್ಟ್ ಕೇವಲ 3 ಎಸೆತಗಳಲ್ಲಿ ಎರಡು ಸಿಕ್ಸರ್ ಬಾರಿಸಿದರು ಮತ್ತು ನಂತರ ಬಿಲಾಲ್ ಖಾನ್ ಎಸೆದ ಮೊದಲ ಓವರ್ನ ಮೂರನೇ ಎಸೆತದಲ್ಲಿ ಔಟಾದರು.
ಇಂಗ್ಲೆಂಡ್ ನಂತರದಲ್ಲಿ ಬಂದ ವಿಲ್ ಜಾಕ್ಸ್ ಅವರನ್ನು 5 ರನ್ ಗಳಿಗೆ ಕಳೆದುಕೊಂಡಿತು. ಆರ್ಸಿಬಿಯ ಬ್ಯಾಟ್ಸ್ಮನ್ ಅಬ್ಬರಿಸಲು ಯತ್ನಿಸಿದರೂ ಕಲೀಮುಲ್ಲಾ ಎಸೆತಕ್ಕೆ ಔಟಾದರು. ಆದರೆ, ಒಮಾನ್ ತಂಡವು ಉತ್ಸಾಹಭರಿತ ಇಂಗ್ಲೆಂಡ್ ವಿರುದ್ಧ ಸಂಪೂರ್ಣವಾಗಿ ಶರಣಾಯಿತು. ಜಾನಿ ಬೈರ್ಸ್ಟೋವ್ ಅಜೇಯ 8 ರನ್ ಬಾರಿದರು.
ಇಂಗ್ಲೆಂಡ್ ಭರ್ಜರಿ ಗೆಲುವು
ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅಧಿಕ ಎಸೆತಗಳು ಉಳಿದಿರುವಂತೆ (101 ಎಸೆತ) ಗೆಲುವು ದಾಖಲಿಸಿದ ಜಂಟಿ ಆರನೇ ತಂಡವಾಯಿತು ಇಂಗ್ಲೆಂಡ್. ಫೆಬ್ರವರಿ 2023 ರಲ್ಲಿ ಕೇವಲ 2 ಎಸೆತಗಳಲ್ಲಿ 11 ರನ್ಗಳನ್ನು ಬೆನ್ನಟ್ಟಿದ ಐಲ್ ಆಫ್ ಮ್ಯಾನ್ ವಿರುದ್ಧದ ಸ್ಪೇನ್ ಈ ವಿಚಾರದಲ್ಲಿ ವಿಶ್ವ ದಾಖಲೆ ಹೊಂದಿದೆ. ಸ್ಪೇನ್ 118 ಎಸೆತ ಬಾಕಿ ಇರುವಂತೆಯೇ ಗೆಲುವು ದಾಖಲಿಸಿತ್ತು.
ಇದನ್ನೂ ಓದಿ: Anushka Sharma: ಕೊಹ್ಲಿಯಂತೆ ತಾಳ್ಮೆ ಕಳೆದುಕೊಂಡ ಪತ್ನಿ ಅನುಷ್ಕಾ; ವಿಡಿಯೊ ವೈರಲ್
2014ರಲ್ಲಿ ನೆದರ್ಲೆಂಡ್ಸ್ ವಿರುದ್ಧ ಶ್ರೀಲಂಕಾ 5 ಓವರ್ಗಳಲ್ಲಿ 40 ರನ್ಗಳನ್ನು ಚೇಸ್ ಮಾಡಿದಾಗ ಟಿ20ಐ ಕ್ರಿಕೆಟ್ನಲ್ಲಿ ಉಳಿದಿರುವ ಎಸೆತಗಳ ವಿಷಯದಲ್ಲಿ ಟೆಸ್ಟ್ ಆಡುವ ರಾಷ್ಟ್ರದ ಅತಿದೊಡ್ಡ ಗೆಲುವಿನ ದಾಖಲೆ ಮಾಡಿತ್ತು.
ಒಮಾನ್ 47 ರನ್ ಗಳಿಗೆ ಆಲೌಟ್ ಆಗಿದ್ದು ಹೇಗೆ?
ಒಮಾನ್ ಬ್ಯಾಟರ್ಗಳು ಇಂಗ್ಲೆಂಡ್ನ ಬೌಲಿಂಗ್ ದಾಳಿಯ ಗುಣಮಟ್ಟಕ್ಕೆ ಸರಿಸಾಟಿಯಾಗಲಿಲ್ಲ. ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ಜೋಡಿಯ ವೇಗಕ್ಕೆ ತತ್ತರಿಸಿದ ಒಮಾನ್ 4 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿತು. ಒಮಾನ್ ನಿರಂತರವಾಗಿ 150 ಕಿ.ಮೀ ಮತ್ತು ಅದಕ್ಕಿಂತ ಹೆಚ್ಚಿನ ವೇಗದ ಬೌಲಿಂಗ್ ಎದುರಿಸುವ ಸಾಮರ್ಥ್ಯ ಹೊಂದಿಲ್ಲ.
ಪುರುಷರ ಟಿ 20 ವಿಶ್ವಕಪ್ ಇತಿಹಾಸದಲ್ಲಿ ಒಮಾನ್ ಗಳಿಸಿದ 47 ರನ್ ನಾಲ್ಕನೇ ಕನಿಷ್ಠ ಮೊತ್ತ. ಅಲ್ಲದೇ ವಿಶ್ವ ಕಪ್ನಲ್ಲಿ ಪಂದ್ಯಾವಳಿಯಲ್ಲಿ ಅವರ ಕನಿಷ್ಠ ಮೊತ್ತವಾಗಿದೆ. ಇದು ಪುರುಷರ ಟಿ 20 ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ತಂಡವೊಂದು ಗಳಿಸಿದ ಕನಿಷ್ಠ ರನ್ ಕೂಡ ಹೌದು.
ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ತಲಾ ಎರಡು ವಿಕೆಟ್ ಪಡೆದರೆ, ಓಮನ್ ಆರಂಭಿಕ ಆಟಗಾರರಾದ ಪ್ರತೀಕ್ ಅಠಾವಳೆ, ಪ್ರಜಾಪತಿ ಕಶ್ಯಪ್, ನಾಯಕ ಅಕಿಬ್ ಇಲ್ಯಾಸ್ ಮತ್ತು ಜೀಶಾನ್ ಮಕ್ಸೂದ್ ಸೇರಿದಂತೆ ಎಲ್ಲರೂ ಒಂದಂಕಿಮೊತ್ತಕ್ಕೆ ಔಟಾದರು.