ಚೆನ್ನೈ: ಕರ್ನಾಟಕದ ಬೆಂಗಳೂರಿನಿಂದ (Bengaluru) ಕೇವಲ 4೦ ಕಿಲೋಮೀಟರ್ ದೂರದಲ್ಲಿರುವ, ತಮಿಳುನಾಡಿನ (Tamil Nadu) ಹೊಸೂರಿನಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Hosur Airport) ನಿರ್ಮಿಸಲಾಗುವುದು ಎಂಬುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಘೋಷಣೆ ಮಾಡಿದ್ದಾರೆ. ಇದರಿಂದ ಬೆಂಗಳೂರಿನ ಜನತೆಗೂ ಅನುಕೂಲವಾಗಲಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಬೆಂಗಳೂರಿನಲ್ಲಿಯೇ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸುವ ಕುರಿತು ಸಚಿವ ಎಂ.ಬಿ.ಪಾಟೀಲ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬೆನ್ನಲ್ಲೇ ಎಂ.ಕೆ.ಸ್ಟಾಲಿನ್ ಅವರು ಹೊಸೂರಿನಲ್ಲಿ ಹೊಸ ಏರ್‌ಪೋರ್ಟ್ ನಿರ್ಮಿಸಲಾಗುವುದು ಎಂಬುದಾಗಿ ಘೋಷಣೆ ಮಾಡಿದ್ದಾರೆ.
“ಇತ್ತೀಚಿನ ವರ್ಷಗಳಲ್ಲಿ ಹೊಸೂರು ಹೆಚ್ಚಿನ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುತ್ತಿದೆ. ಹಾಗಾಗಿ, ಹೊಸೂರಿನಲ್ಲಿ ಹಲವು ಆಧುನಿಕ ಮೂಲ ಸೌಕರ್ಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅದನ್ನು ಆರ್ಥಿಕ ಕೇಂದ್ರವನ್ನಾಗಿ ರೂಪಿಸುವ ಗುರಿ ಇದೆ. ಹೊಸೂರಿಗಾಗಿ ಹೊಸ ಮಾಸ್ಟರ್ ಪ್ಲಾನ್ ಕೂಡ ಅಂತಿಮ ಹಂತಕ್ಕೆ ಬಂದಿದೆ. ಹೂಸೂರು, ಕೃಷ್ಣಗಿರಿ ಹಾಗೂ ಧರ್ಮಪುರಿಯಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕೈಗೊಳ್ಳಲು ಹೊಸೂರಿನಲ್ಲಿ ವಿಮಾನ ನಿಲ್ದಾಣದ ನಿರ್ಮಾಣವು ಅತ್ಯವಶ್ಯಕವಾಗಿದೆ” ಎಂಬುದಾಗಿ ವಿಧಾನಸಭೆಯಲ್ಲಿ ಎಂ.ಕೆ.ಸ್ಟಾಲಿನ್ ತಿಳಿಸಿದರು.
ಹೊಸೂರಿನಲ್ಲಿ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ವರ್ಷಕ್ಕೆ ಸುಮಾರು 3 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ರೀತಿಯಲ್ಲಿ ಏರ್‌ಪೋರ್ಟ್ ನಿರ್ಮಿಸಲಾಗುತ್ತದೆ ಎಂಬುದಾಗಿ ಅವರು ಹೇಳಿದ್ದಾರೆ. ಹೊಸೂರಿನಲ್ಲಿ ಹೊಸ ಏರ್‌ಪೋರ್ಟ್ ನಿರ್ಮಾಣವಾದರೆ ಬೆಂಗಳೂರಿನ ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ ಸೇರಿ ಹಲವು ನಗರಗಳ ನಾಗರಿಕರಿಗೆ ಭಾರಿ ಅನುಕೂಲವಾಗಲಿದೆ. ಹಾಗಾಗಿ, ಹೊಸೂರು ವಿಮಾನ ನಿಲ್ದಾಣದ ನಿರ್ಮಾಣವು ಪ್ರಮುಖ ಸಂಗತಿಯಾಗಿದೆ.
2033ರ ನಂತರವೇ ಚಾಲನೆ?
ಹೊಸೂರಿನಲ್ಲಿ ಈಗಾಗಲೇ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್ (TAAL) ಕಂಪನಿಯು ಥಾಲಿ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ನಡುವೆ ಒಪ್ಪಂದ ಮಾಡಿಕೊಂಡ ಕಾರಣ ಥಾಲಿ ವಿಮಾನ ನಿಲ್ದಾಣದಿಂದ ವಾಣಿಜ್ಯಿಕ ವಿಮಾನಗಳ ಹಾರಾಟ ಸಾಧ್ಯವಾಗಿಲ್ಲ. ಬೆಂಗಳೂರು ವಿಮಾನ ನಿಲ್ದಾಣದಿಂದ 150 ಕಿಲೋಮೀಟರ್ ವೈಮಾನಿಕ ಮಾರ್ಗದ ಅಂತರದಲ್ಲಿ 25 ವರ್ಷ ಯಾವುದೇ ಹೊಸ ಏರ್‌ಪೋರ್ಟ್ ನಿರ್ಮಾಣ ಮಾಡುವಂತಿಲ್ಲ ಎಂಬುದು ಒಪ್ಪಂದವಾಗಿದೆ. ಹಾಗಾಗಿ ಒಪ್ಪಂದದ ಪ್ರಕಾರ, ಹೊಸೂರಿನಲ್ಲಿ 2033ರ ನಂತರವೇ ವಿಮಾನ ಹಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 2008ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಸೂರಿಗೆ 86 ಕಿಲೋಮೀಟರ್ ಅಂತರ ಇದೆ.
ಇದನ್ನೂ ಓದಿ: Electric Airport Taxi : ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇನ್ಮುಂದೆ ಮಹಿಳೆಯರಿಗಾಗಿ ಗುಲಾಬಿ ಟ್ಯಾಕ್ಸಿ