Site icon Vistara News

Team India : ಟೆಸ್ಟ್​​ ಕ್ರಿಕೆಟ್​ನ ಒಂದೇ ದಿನದಲ್ಲಿ ಗರಿಷ್ಠ ರನ್​; ದಾಖಲೆ ಬರೆದ ಭಾರತ ತಂಡ

Team India

ಬೆಂಗಳೂರು: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ಭಾರತದ ಮಹಿಳೆಯರ ತಂಡ ದಾಖಲೆ ಬರೆದಿದೆ. ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್​ಗೆ 525 ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದೆ. ಇದು ಟೆಸ್ಟ್​ ಪಂದ್ಯವೊಂದರಲ್ಲಿ ಮಹಿಳೆಯರ ತಂಡ ದಿನವೊಂದರಲ್ಲಿ ಬಾರಿಸಿದ ಗರಿಷ್ಠ ಸ್ಕೋರ್ ಆಗಿದೆ.

ಪಂದ್ಯದಲ್ಲಿ ಟಾಸ್​ ಗೆದ್ದ ನಾಯಕಿ ಹರ್ಮನ್ ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು . ಮೊದಲ ದಿನ ಭಾರತವು 98 ಓವರ್ ಆಡಿ ಬೃಹತ್ ಮೊತ್ತ ಪೇರಿಸಿತು. ಈ ಮೂಲಕ ನಾಯಕಿಯ ನಿರ್ಧಾರವು ಸಂಪೂರ್ಣವಾಗಿ ಸಮರ್ಥನೀಯವಾಗಿತ್ತು. ಯುವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ದ್ವಿಶತಕ ಬಾರಿಸಿದರೆ, ಸ್ಮೃತಿ ಮಂಧಾನಾ ಶತಕ ಬಾರಿಸಿದರು.

ಬಲಗೈ ಬ್ಯಾಟರ್​ ಶಫಾಲಿ ಮಹಿಳೆಯರ ಟೆಸ್ಟ್​​ನಲ್ಲಿ ವೇಗವಾಗಿ ದ್ವಿಶತಕ ದಾಖಲಿಸಿದ ಸಾಧನೆಯೂ ಮಾಡಿದ್ದಾರೆ. ಅವರು ಕೇವಲ 198 ಎಸೆತಗಳಲ್ಲಿ ತಮ್ಮ ಮೊದಲ ಟೆಸ್ಟ್ ದ್ವಿಶತಕವನ್ನು ಗಳಿಸಿದರು. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ಸ್ 248 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಇದುವರೆಗೆ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದರು.

ಮಿಥಾಲಿ ರಾಜ್ ನಂತರ ಮಹಿಳಾ ಟೆಸ್ಟ್​ನಲ್ಲಿ ದ್ವಿಶತಕ ಬಾರಿಸಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ವರ್ಮಾ 197 ಎಸೆತಗಳಲ್ಲಿ 23 ಬೌಂಡರಿ ಮತ್ತು 8 ಸಿಕ್ಸರ್ ಗಳ ಸಹಾಯದಿಂದ 205 ರನ್ ಗಳಿಸಿದ್ದಾರೆ. ವರ್ಮಾ ಅವರಲ್ಲದೆ, ಅವರ ಆರಂಭಿಕ ಪಾಲುದಾರೆ ಸ್ಮೃತಿ ಮಂದಾನ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ . 52ನೇ ಓವರ್​​ನಲ್ಲಿ ಡೆಲ್ಮಿ ಟಕರ್ ಅವರನ್ನು ಔಟ್ ಮಾಡುವ ಮೊದಲು 149 ರನ್ ಗಳಿಸಿದ್ದರು. ಔಟಾಗುವ ಮೊದಲು, ಮಂದಾನಾ ಮೊದಲ ವಿಕೆಟ್​ಗೆ ವರ್ಮಾ ಅವರೊಂದಿಗೆ ರನ್​ಗಳ ದಾಖಲೆಯ ಜೊತೆಯಾಟ ಹಂಚಿಕೊಂಡಿದ್ದರು.. ಜೆಮಿಮಾ ರೋಡ್ರಿಗಸ್ ಕೂಡ ಅರ್ಧಶತಕ ಗಳಿಸಿ 55 ರನ್ ಗಳಿಸಿದ ನಂತರ ನಿರ್ಗಮಿಸಿದರು. ಕೌರ್ 42 ಮತ್ತು ರಿಚಾ ಘೋಷ್ 43 ರನ್ ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.

ಭಾರತಕ್ಕೆ ದಾಖಲೆಯ ದಿನ

ಅದ್ಭುತ ಬ್ಯಾಟಿಂಗ್ ಪ್ರದರ್ಶನವು ಭಾರತಕ್ಕೆ ಹಲವಾರು ಸ್ಮರಣೀಯ ದಾಖಲೆಗಳನ್ನು ಮುರಿಯಲು ಸಹಾಯ ಮಾಡಿತು. ಪುರುಷರ ಮತ್ತು ಮಹಿಳಾ ಕ್ರಿಕೆಟ್ನಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡದ ದಾಖಲೆ ಅವರು ಮುರಿದಿದ್ದಾರೆ. 2002ರಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 509 ರನ್ ಗಳಿಸಿತ್ತು.

ಇದನ್ನೂ ಓದಿ: GR vishwanath : ಬೆಂಗಳೂರು ನಗರ ವಿವಿಯಿಂದ ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್​ಗೆ ಗೌರವ ಡಾಕ್ಟರೇಟ್

ಮಹಿಳಾ ಕ್ರಿಕೆಟ್​ನಲ್ಲಿ ಒಂದು ದಿನದಲ್ಲಿ 500 ರನ್ ಗಡಿ ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. 1935ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 431 ರನ್ ಗಳಿಸಿದ್ದು ಮಹಿಳಾ ಕ್ರಿಕೆಟ್​​ನಲ್ಲಿ ತಂಡವೊಂದರ ಗರಿಷ್ಠ ಒಂದು ದಿನ ಸ್ಕೋರ್ ಆಗಿದೆ. ಈ ವರ್ಷ ಭಾರತ ಒಂದೇ ದಿನದಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿರುವುದು ಇದು ಎರಡನೇ ಬಾರಿ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತ್ತು.

ಮಹಿಳಾ ಟೆಸ್ಟ್ ನಲ್ಲಿ ಒಂದು ದಿನದ ಆಟದಲ್ಲಿ ಅತಿ ಹೆಚ್ಚು ರನ್ ಗಳು

Exit mobile version