Site icon Vistara News

Team India : ಭಾರತ ತಂಡಕ್ಕೆ ಸಿಕ್ಕಿದ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು? ಮಾಹಿತಿ ಬಹಿರಂಗ

Team India

ಬೆಂಗಳೂರು: ಅಮೆರಿಕದ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ನಡೆದ 2024 ರ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡ (Team India ) ಟ್ರೋಫಿ ಗೆದ್ದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 125 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಜೂನ್ 4 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಬಹುಮಾನದ ಮೊತ್ತವನ್ನು ಹಸ್ತಾಂತರಿಸಲಾಗಿತ್ತು. ಅದರಲ್ಲಿ ಯಾರಿಗೆ ಎಷ್ಟು ಎಂಬ ಕುತೂಹಲ ಮೂಡಿತ್ತು. ಆ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ವರದಿಗಳ ಪ್ರಕಾರ, ತಂಡದ ಎಲ್ಲಾ 15 ಸದಸ್ಯರು ತಲಾ 5 ಕೋಟಿ ರೂ ಪಡೆದಿದ್ದಾರೆ. ಮುಖ್ಯ ಕೋಚ್ ದ್ರಾವಿಡ್ ಕೂಡ ಇದೇ ಮೊತ್ತವನ್ನು ಪಡೆದಿದ್ದಾರೆ. ಉಳಿದ ಕೋಚಿಂಗ್ ಗ್ರೂಪ್ ತಲಾ 2.5 ರೂಪಾಯಿ ಪಡೆದುಕೊಂಡಿದ್ದಾರೆ. ವಿಡಿಯೋ ನಿರ್ಮಾಣ ತಂಡ ಸೇರಿದಂತೆ ಬ್ಯಾಕ್ರೂಮ್ ಸಿಬ್ಬಂದಿಗೆ ತಲಾ 2 ಕೋಟಿ ರೂ., ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ತಲಾ 1 ಕೋಟಿ ರೂಪಾಯಿ, ಮೀಸಲು ಆಟಗಾರರಾದ ರಿಂಕು ಸಿಂಗ್, ಖಲೀಲ್ ಅಹ್ಮದ್, ಶುಭ್ಮನ್ ಗಿಲ್ ಮತ್ತು ಅವೇಶ್ ಖಾನ್ ಅವರಿಗೆ ತಲಾ 1 ಕೋಟಿ ರೂಪಾಯಿ ದೊರಕಿದೆ.

ಬಿಸಿಸಿಐ ಹೊರತುಪಡಿಸಿ, ರಾಜ್ಯ ಸರ್ಕಾರಗಳು ಸಹ ಆಯಾ ಆಟಗಾರರಿಗೆ ಬಹುಮಾನದ ಮೊತ್ತ ಘೋಷಿಸಿವೆ. ಮಹಾರಾಷ್ಟ್ರ ಸರ್ಕಾರವು ರೋಹಿತ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ 11 ಕೋಟಿ ರೂ.ಗಳನ್ನು ನೀಡಿತ್ತು.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೀಮ್ ಇಂಡಿಯಾಕ್ಕೆ 2.45 ಮಿಲಿಯನ್ ಡಾಲರ್ ಅಂದರೆ ಸುಮಾರು 20.37 ಕೋಟಿ ರೂಪಾಯಿ ಬಹುಮಾನ ಕೊಟ್ಟಿತ್ತು. ಬಿಸಿಸಿಐನ ಆರ್ಥಿಕ ಸ್ಥಿರತೆಯು ಎಲ್ಲಾ ಆಟಗಾರರಿಗೆ ಟ್ರೋಫಿ ಜತೆ ಸಿಕ್ಕ ಬಹುಮಾನ ಮೊತ್ತಕ್ಕಿಂತ ಸುಮಾರು ಆರು ಪಟ್ಟು ಹೆಚ್ಚು ನಗದು ಸಿಗಲು ಸಹಾಯ ಮಾಡಿತು. ಇದು ಇವರೆಗಿನ ಗರಿಷ್ಠ ಗಳಿಕೆಯಾಗಿದೆ. 1983 ರಲ್ಲಿ ಏಕದಿನ ವಿಶ್ವಕಪ್ ಗೆಲುವಿನ ನಂತರ, ಆಡಳಿತ ಮಂಡಳಿಯು ಪ್ರತಿ ಆಟಗಾರನಿಗೆ 25,000 ರೂ.ಗಳ ಬಹುಮಾನವನ್ನು ಘೋಷಿಸಿತು. ಇದು ಆಧುನಿಕ ಕಾಲದಲ್ಲಿ ಆಟಗಾರರು ಪಡೆದ ಮೊತ್ತಕ್ಕೆ ಹೋಲಿಸಿದರೆ ಕನಿಷ್ಠ ಪ್ರಮಾಣದ ಮೊತ್ತವಾಗಿದೆ.

ಇದನ್ನೂ ಓದಿ: Gautam Gambhir : ಗಂಭೀರ್ ಕೆಕೆಆರ್ ತೊರೆಯುವುದು ನಿಶ್ಚಿತ​; ಈಡನ್​ ಗಾರ್ಡನ್ಸ್​​ನಲ್ಲಿ ವಿದಾಯದ ಶೂಟಿಂಗ್

ಐಪಿಎಲ್​ನ ಶಕ್ತಿ ಮತ್ತು ಹಣಕಾಸಿನ ವಿಷಯದಲ್ಲಿ ಭಾರತೀಯ ಕ್ರಿಕೆಟ್ ದೊಡ್ಡ ಗಳಿಕೆಯಲ್ಲಿದೆ. ಆದಾಗ್ಯೂ ಆಟಗಾರರು ಐಪಿಎಲ್ ಕಡೆಗೆ ಹೆಚ್ಚಿನ ಗಮನ ಸೆಳೆಯುತ್ತಿದ್ದಾರೆ ಎಂಬ ಆರೋಪವಿದೆ. ಇದನ್ನು ನಿವಾರಿಸಲೂ ಬಿಸಿಸಿಐ 125 ಕೋಟಿ ರೂಪಾಯಿ ಘೋಷಿಸಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆದ್ಯತೆ ನೀಡಿದವರಿಗೂ ದೊಡ್ಡ ಮೊತ್ತ ಸಿಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಬಿಸಿಸಿಐ ಎಲ್ಲಾ ಆಟಗಾರರಿಗೆ ಕಳುಹಿಸಿದೆ.

“ಐಪಿಎಲ್ ಯುಗದಲ್ಲಿ, ಆಟಗಾರರಿಗೆ ಅವರ ಫ್ರಾಂಚೈಸಿಗಳು ಸಾಕಷ್ಟು ಸಂಭಾವನೆ ನೀಡುತ್ತವೆ. ಟಿ 20 ವಿಶ್ವಕಪ್ ಗೆದ್ದ ತಂಡಕ್ಕೆ 125 ಕೋಟಿ ರೂ.ಗಳು ಆಟಗಾರರಿಗೆ ಸರಳ ಸಂದೇಶವಾಗಿದೆ. ಭಾರತಕ್ಕಾಗಿ ಟ್ರೋಫಿಗಳನ್ನು ಗೆಲ್ಲಿರಿ ಮತ್ತು ನೀವು ಶ್ರೀಮಂತರಾಗುತ್ತೀರಿ” ಎಂಬುದು ಬಿಸಿಸಿಐ ಸಂದೇಶ ಎಂಬುದಾಗಿ ಅಧಿಕಾರಿ ಹೇಳಿದ್ದಾರೆ.

ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಮತ್ತು ಚಾಂಪಿಯನ್ಸ್ ಟ್ರೋಫಿಗೆ ರೋಹಿತ್ ನಾಯಕನಾಗಿ ಮುಂದುವರಿಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

Exit mobile version