ಹೈದರಾಬಾದ್: ತೆಲಂಗಾಣದಲ್ಲಿ (Telangana) ಕೆ. ಚಂದ್ರಶೇಖರ ರಾವ್ (K Chandrashekar Rao) ನೇತೃತ್ವದ ಭಾರತ್ ರಾಷ್ಟ್ರ ಸಮಿತಿಯ (Bharat Rashtra Samiti) ಸರ್ಕಾರ, ಆಗಿನ ಪ್ರತಿಪಕ್ಷ ನಾಯಕ, ಹಾಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಸೇರಿದಂತೆ ಪ್ರತಿಪಕ್ಷ ನಾಯಕರ ಫೋನ್ ಕದ್ದಾಲಿಕೆ (Snooping) ಮಾಡಿಸಿತ್ತು ಎಂಬ ಆರೋಪ ಈಗ ಭುಗಿಲೆದ್ದಿದೆ. ಈ ಪ್ರಕರಣಕ್ಕೆ (Telangana Snoopgate) ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ.
ಬಿಆರ್‌ಎಸ್ ಈ ಕದ್ದಾಲಿಕೆಗೆ ರಾಜ್ಯದ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡಿತ್ತು ಎಂಬ ಆಘಾತಕಾರಿ ಆರೋಪಗಳು ಮುನ್ನೆಲೆಗೆ ಬರುತ್ತಿವೆ. ಬಿಆರ್‌ಎಸ್ ಪಕ್ಷದ ನಿಧಿಗೆ ಬೃಹತ್ ಮೊತ್ತದ ಕೊಡುಗೆ ನೀಡುವಂತೆ ಉದ್ಯಮಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಸಹ ಈ ಕಣ್ಗಾವಲನ್ನು ಬಳಸಿಕೊಂಡಿತ್ತು ಎಂದು ಆರೋಪಿಸಲಾಗಿದೆ. ಆರೋಪಗಳಿಗೆ ಬಿಆರ್‌ಎಸ್ ಇನ್ನೂ ಪ್ರತಿಕ್ರಿಯಿಸಿಲ್ಲ.
ಈ ಸಂಬಂಧ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಇದೀಗ ಅಮೆರಿಕದಲ್ಲಿರುವ ರಾಜ್ಯ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಟಿ. ಪ್ರಭಾಕರ ರಾವ್ ವಿರುದ್ಧ ಲುಕ್‌ಔಟ್ ನೋಟಿಸ್ ಸಹ ಜಾರಿ ಮಾಡಲಾಗಿದೆ.
ಇಬ್ಬರು ಹಿರಿಯ ಅಧಿಕಾರಿಗಳು- ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಭುಜಂಗ ರಾವ್ ಮತ್ತು ತಿರುಪತಣ್ಣ- ಅಕ್ರಮ ಕಣ್ಗಾವಲು ಮತ್ತು ಸಾಕ್ಷ್ಯ ನಾಶವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಆಗಿನ BRS ಸರ್ಕಾರದ ಅಡಿಯಲ್ಲಿ ರಾಜ್ಯ ಗುಪ್ತಚರ ಬ್ಯೂರೋದ ತಾಂತ್ರಿಕ ಸಲಹೆಗಾರ ರವಿ ಪಾಲ್, ರೇವಂತ್ ರೆಡ್ಡಿ ಅವರ ಸಂಭಾಷಣೆಗಳನ್ನು ಕೇಳಲು ರೆಡ್ಡಿ ಅವರ ನಿವಾಸದ ಬಳಿ ಫೋನ್ ಟ್ಯಾಪಿಂಗ್ ಉಪಕರಣಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಾಫ್ಟ್‌ವೇರ್ ಕಂಪನಿಯನ್ನು ಬಳಸಿಕೊಂಡು ಇಸ್ರೇಲ್‌ನಿಂದ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಅಂತಹ ಆಮದುಗಳಿಗೆ ಕೇಂದ್ರದಿಂದ ಯಾವುದೇ ಅನುಮತಿಯನ್ನು ತೆಗೆದುಕೊಳ್ಳಲಾಗಿಲ್ಲ ಎಂದು ತಿಳಿದುಬಂದಿದೆ. ಈ ಸೆಟಪ್‌ನೊಂದಿಗೆ, 300 ಮೀಟರ್ ವ್ಯಾಪ್ತಿಯಲ್ಲಿ ಮಾತನಾಡುವ ಯಾವುದನ್ನಾದರೂ ಕೇಳಬಹುದು ಎಂದು ವರದಿಗಳು ಹೇಳುತ್ತವೆ.
ರೆಡ್ಡಿ ನಿವಾಸದ ಬಳಿ ರವಿ ಪಾಲ್ ಹೊಸ ಕಚೇರಿಯನ್ನು ಸ್ಥಾಪಿಸಿ ಸಾಧನವನ್ನು ಅಳವಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪಾಲ್‌ರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ. ತೆಲುಗು ಟಿವಿ ಚಾನೆಲ್ ಐ ನ್ಯೂಸ್ ನಡೆಸುತ್ತಿರುವ ಶರ್ವಣ್ ರಾವ್ ಮತ್ತು ಸಿಟಿ ಟಾಸ್ಕ್ ಫೋರ್ಸ್‌ನ ಪೊಲೀಸ್ ಅಧಿಕಾರಿ ರಾಧಾ ಕಿಶನ್ ರಾವ್ ಅವರಿಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಕಣ್ಗಾವಲು ವಿರೋಧ ಪಕ್ಷದ ನಾಯಕರಿಗೆ ಮಾತ್ರ ಸೀಮಿತವಾಗಿರಲಿಲ್ಲ. ರಿಯಲ್ ಎಸ್ಟೇಟ್ ವ್ಯಾಪಾರಿಗಳು, ಆಭರಣ ವ್ಯಾಪಾರಿಗಳು ಸೇರಿದಂತೆ ಪ್ರಮುಖ ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳ ಮೇಲೂ ನಿಗಾ ಇರಿಸಲಾಗಿತ್ತು. ಫೋನ್ ಸಂಭಾಷಣೆಗಳ ಕದ್ದಾಲಿಕೆಯು ಸೆಲೆಬ್ರಿಟಿ ದಂಪತಿಯೊಂದರ ವಿಚ್ಛೇದನಕ್ಕೂ ಕಾರಣವಾಯಿತು ಎಂದು ವರದಿಗಳು ಹೇಳುತ್ತವೆ.
ಕಳೆದ ವರ್ಷ ಹಿರಿಯ ಪೊಲೀಸ್ ಅಧಿಕಾರಿಗಳು ತನ್ನನ್ನು ಅಪಹರಿಸಿ ಮಾಜಿ ಸಚಿವ ಹಾಗೂ ಬಿಆರ್‌ಎಸ್ ಮುಖಂಡ ಎರ್ರಬೆಲ್ಲಿ ದಯಾಕರ್ ರಾವ್ ಅವರ ಸಂಬಂಧಿಗೆ ಜಮೀನು ಮಾರುವ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ ಎಂದು ಉದ್ಯಮಿ ಮತ್ತು ಬಿಜೆಪಿ ಮುಖಂಡ ಸರಣ್ ಚೌಧರಿ ಆರೋಪಿಸಿದ್ದು, ಈ ಕುರಿತು ದೂರನ್ನು ಮುಖ್ಯಮಂತ್ರಿ ರೆಡ್ಡಿಗೆ ನೀಡಿದ್ದಾರೆ.
ಆಗಸ್ಟ್ 21ರಂದು ಕಚೇರಿಗೆ ತೆರಳುತ್ತಿದ್ದಾಗ ರಾಧಾ ಕಿಶನ್ ರಾವ್ ಮತ್ತು ಹಿರಿಯ ಪೊಲೀಸ್ ಅಧಿಕಾರಿ ಎಸಿಪಿ ಉಮಾಮಹೇಶ್ವರ ರಾವ್ ಅವರು ತನ್ನನ್ನು ಅಪಹರಿಸಿದ್ದಾರೆ. ತನ್ನನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡು ಸಚಿವರ ಹತ್ತಿರದ ಸಂಬಂಧಿ ವಿಜಯ್ ಹೆಸರಿಗೆ ತಮ್ಮ ಆಸ್ತಿ ನೋಂದಣಿ ಮಾಡಿಸಲು ಒತ್ತಾಯಿಸಿದ್ದಾರೆ. ತನ್ನನ್ನು ಹೋಗಲು ಬಿಡುವ ಮೊದಲು ₹ 50 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ. ಘಟನೆಯ ನಂತರ ತಾನು ಹೈಕೋರ್ಟ್‌ಗೆ ಮೊರೆ ಹೋಗಿದ್ದೆ ಎಂದು ಉದ್ಯಮಿ ಹೇಳಿದ್ದಾರೆ. ಆದರೆ ಉಮಾ ಮಹೇಶ್ವರ್ ರಾವ್ ತಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಅರ್ಜಿಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಆರೋಪವನ್ನು ಮಾಜಿ ಸಚಿವರು ನಿರಾಕರಿಸಿದ್ದಾರೆ. ತನಗೆ ಸರಣ್ ಚೌಧರಿ ಪರಿಚಯವಿಲ್ಲ. ರಾಜಕೀಯ ಷಡ್ಯಂತ್ರದ ಭಾಗವಾಗಿ ನನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: Governor: ಸಿ.ಪಿ ರಾಧಾಕೃಷ್ಣನ್‌ಗೆ ತೆಲಂಗಾಣ ರಾಜ್ಯಪಾಲ ಹುದ್ದೆ ಉಸ್ತುವಾರಿ