ಮಂಜುನಾಥ ಅಜ್ಜಂಪುರ
ಸಂಗೀತವೇ ಅದ್ಭುತ. ಅದರಲ್ಲೂ ಹಿಂದೂಸ್ತಾನಿ ಸಂಗೀತವೆಂಬುದು ಅನೂಹ್ಯ, ಅಸಾಮಾನ್ಯ. ಅದರ ಭಾವಲೋಕದ ಸಾಧ್ಯತೆಗಳೇ ಅಪಾರ. ಕ್ಷಣಕಾಲ ಕಣ್ಣುಮುಚ್ಚಿ ಕೇಳಿದರೂ ಅನುಭವ ಅನುಭಾವವಾಗಿಬಿಡುತ್ತದೆ.
ಬಾಲ್ಯದಲ್ಲಿ ಕರ್ನಾಟಕ ಸಂಗೀತದ ಕೆಲವು ವಾದ್ಯಗಳನ್ನು ನೋಡಿ ಪರಿಚಯ ಮಾಡಿಕೊಂಡಿದ್ದರೂ ಸಿತಾರ್, ಸರೋದ್, ಸಂತೂರ್, ಬಾನ್ಸುರಿ, ಸಾರಂಗಿಗಳಂತಹ ವಾದ್ಯಗಳನ್ನು ನೋಡುವ ಅವಕಾಶವೇ ಇರಲಿಲ್ಲ. ನಮ್ಮ ತಂದೆಯವರು (ಅಜ್ಜಂಪುರದ ಎ.ಪಿ. ನಾಗರಾಜ ಶ್ರೇಷ್ಠಿಯವರು) ರೇಡಿಯೋದಲ್ಲಿ ಮುಂಜಾನೆ ಬರುತ್ತಿದ್ದ ರಾಮರಾವ್ ನಾಯಕ್, ಮಲ್ಲಿಕಾರ್ಜುನ ಮನ್ಸೂರ್ ಮೊದಲಾದವರ ಗಾಯನ ಕೇಳುತ್ತಿದ್ದರು. ಕೇಳಿ ಕೇಳಿ ನಾನೂ ಹಿಂದೂಸ್ತಾನಿ ಸಂಗೀತ ಕೇಳುವ – ಆನಂದಿಸುವ ಸಂಸ್ಕಾರ ಬೆಳೆಸಿಕೊಂಡೆ. 1970ರ ದಶಕದ ಆರಂಭದ ಆ ಕಾಲದಲ್ಲಿ, ಪ್ರತಿ ವರ್ಷ ಆಕಾಶವಾಣಿಯಲ್ಲಿ ಬರುತ್ತಿದ್ದ ರೇಡಿಯೋ ಸಂಗೀತ ಸಮ್ಮೇಳನಗಳು, ಗಾಯನ ಮತ್ತು ವಾದ್ಯ ಸಂಗೀತಗಳ ಪರಮಾದ್ಭುತ ಲೋಕಕ್ಕೆ ಕರೆದೊಯ್ಯುತ್ತಿದ್ದವು. ಹಾಗೆ ವಿಜಯರಾಘವ ರಾವ್, ಬಿಸ್ಮಿಲ್ಲಾ ಖಾನ್, ಪರ್ವೀನ್ ಸುಲ್ತಾನಾ, ಶಿವಕುಮಾರ್ ಶರ್ಮ ಮೊದಲಾದವರ ದಿವ್ಯ ಸಂಗೀತದ ಪರಿಚಯವಾಯಿತು. ವಿಶೇಷವಾಗಿ ಸರೋದ್, ಸಂತೂರ್ ಮತ್ತು ಬಾನ್ಸುರಿಗಳು ಅಂದಿಗೂ – ಇಂದಿಗೂ ನನಗೆ ಬಹಳ ಬಹಳ ಆಪ್ಯಾಯಮಾನ.
ಇಂದಿಗೂ ಪ್ರತಿನಿತ್ಯ ಕೇಳುತ್ತೇನೆ
ಹಾಗೆ ತಮ್ಮ ಸರೋದ್ ನಿಂದ ಪರಿಚಯವಾದವರು ರಾಜೀವ್ ತಾರಾನಾಥ್ (Rajeev Taranath). ಹಾಗೆ ನೋಡಿದರೆ, ಅವರು ಬಹಳ ಅದ್ಭುತ ಲೇಖಕರು. ಅಂದಿನ ನಮ್ಮ ಹಾಟ್ ಫೇವರಿಟ್ ಲೇಖಕ ಯು.ಆರ್.ಅನಂತಮೂರ್ತಿಯವರ ಕಥಾ ಸಂಕಲನ “ಮೌನಿ” ಕೃತಿಗೆ ಅತ್ಯುತ್ತಮ ಮುನ್ನುಡಿ ಬರೆದಿದ್ದರು. ಅದೆಷ್ಟು ಒಳ್ಳೆಯ ಮುನ್ನುಡಿ ಬರೆದಿದ್ದರೆಂದರೆ, ಸಂಕಲನಕ್ಕಿಂತ ಮುನ್ನುಡಿಯನ್ನೇ ನಾವೆಲ್ಲ ನಾಲ್ಕಾರು ಬಾರಿ ಓದಿದ್ದೆವು. ಇದೆಲ್ಲ ಅರ್ಧ ಶತಮಾನಕ್ಕೂ ಹಿಂದಿನ ವಿಷಯ.
ಬಹುಮುಖ ಪ್ರತಿಭೆಯ ಮತ್ತು ಕ್ರಾಂತಿಕಾರಿ ವ್ಯಕ್ತಿತ್ವದ ತಾರಾನಾಥರು ಇವರ ತಂದೆ. ಸಾಹಿತ್ಯವಂತೂ ಸಹಜವಾಗಿಯೇ ರಾಜೀವರಿಗೆ ಒಲಿದಿತ್ತು. ಆದರೂ ಅನಂತರದ ವರ್ಷಗಳಲ್ಲಿ ಅವರು ಸಂಗೀತಕ್ಕೆ ಆದ್ಯತೆ, ಪ್ರಾಧಾನ್ಯ ನೀಡಿದರು. ಬೆಂಗಳೂರಿನಲ್ಲಿ ಒಮ್ಮೆ ಅವರ ಸರೋದ್ ವಾದನದ ಕಛೇರಿ ಇತ್ತು. ಪ್ರಾಯಶಃ 1979 ಇಲ್ಲವೇ 1980 ಇರಬಹುದು. ಬಸವನಗುಡಿಯ ದೊಡ್ಡ ಗಣೇಶನ ಬಳಿಯ ಕಹಳೆ ಬಂಡೆಯ ಬಳಿ ಮುಂಜಾನೆಯೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜೀವರನ್ನು ಮತ್ತು ಸರೋದ್ ವಾದ್ಯವನ್ನು ಮೊದಲ ಬಾರಿಗೆ ನೋಡುವ ಅವಕಾಶ. ಲೇಖಕ ರಾಜೀವರ ಅಭಿಮಾನಿಗಳಾದ ಮತ್ತು ಸರೋದ್ ವಾದನದ ಅಭಿಮಾನಿಗಳೂ ಆದ ನಮ್ಮಂತಹವರಿಗೆ ಅದೊಂದು ಸುವರ್ಣಾವಕಾಶವಾಗಿತ್ತು. “ಕ್ಯಾಲಿಫೋರ್ನಿಯಾದಿಂದ ಬಂದೆ” ಎಂದಿದ್ದರು. ನಾನೂ, ಮಾಲಾ ಸರೋದ್ ಕಚೇರಿ ಕೇಳಿದ್ದೇ ಅದೇ ಮೊದಲು. ರೇಡಿಯೋದಲ್ಲಿ ಕೇಳುವುದಕ್ಕೂ, ಮಹಾನ್ ಕಲಾವಿದರನ್ನು ನೇರಾನೇರ ನೋಡುತ್ತ ಕೇಳುವುದಕ್ಕೂ ತುಂಬ ವ್ಯತ್ಯಾಸವಿದೆ.
ಇನ್ನೊಮ್ಮೆ ಆರ್.ವಿ.ಕಾಲೇಜಿನಲ್ಲೂ ಅದೇ ಕಾಲಘಟ್ಟದಲ್ಲಿ ರಾಜೀವ್ ತಾರಾನಾಥರ ಸರೋದ್ ವಾದನ ಕೇಳುವ ದಿವ್ಯ ಅವಕಾಶ ನಮಗೆ ದೊರೆತಿತ್ತು. ಆ ಕಾಲವೇ ಹಾಗಿತ್ತು. ರೇಡಿಯೋ ಬಿಟ್ಟರೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾತ್ರವೇ ಕೇಳುವ – ನೋಡುವ ಅವಕಾಶ ಲಭ್ಯ.
ಇದನ್ನೂ ಓದಿ: Rajeev Taranath: ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಇನ್ನಿಲ್ಲ
ದಿಗ್ಗಜರ ಒಡನಾಟ
ರಾಜೀವ್ ತಾರಾನಾಥರ ಬಹು ಆಯಾಮಗಳ ಪ್ರತಿಭೆಯ ಆಸ್ವಾದನಕ್ಕೆ ದೊರೆತ ಮತ್ತೊಂದು ಅವಕಾಶ ಎಂದರೆ, 1983ರಲ್ಲಿ ಗಿರೀಶ್ ಕಾಸರವಳ್ಳಿಯವರು ನಡೆಸಿಕೊಟ್ಟ 8 ದಿನಗಳ ಚಲನಚಿತ್ರ ರಸಗ್ರಹಣ ಶಿಬಿರ. ಗೆಳೆಯ ಅಪೂರ್ವ ಅಜ್ಜಂಪುರ ಅವರೊಂದಿಗೆ, ನಾನೂ – ಮಾಲಾ ಶಿಬಿರದಲ್ಲಿ ಭಾಗವಹಿಸಿದ್ದೆವು. ಇಂದಿಗೂ ನೆನಸಿಕೊಳ್ಳುವಂತಹ ಅಪೂರ್ವ ಶಿಬಿರವದು. ಚಲನಚಿತ್ರಗಳ ಸಂಗೀತದ ಆಯಾಮದ ಬಗೆಗೆ ರಾಜೀವ್ ವಿವರಣೆ ನೀಡುತ್ತಿದ್ದರು. ನೆನಪು ಮಾಡಿಕೊಂಡರೆ, ಇಂದಿಗೂ ರೋಮಾಂಚನವಾಗುತ್ತದೆ. ಅದು ಅಕ್ಷರಶಃ ದಿಗ್ಗಜರ ಒಡನಾಟ.
ಒಮ್ಮೆ ಜರ್ಮನಿಯ ಯಾತನಾ ಶಿಬಿರಗಳ ಸಾಕ್ಷ್ಯಚಿತ್ರ “ನೈಟ್ ಅಂಡ್ ಫಾಗ್” ತೋರಿಸಿದರು. Rarest ಎನ್ನಬಹುದಾದ ದೃಶ್ಯಗಳ ತುಣುಕುಗಳು ಅವು. ಮನಸ್ಸು, ಹೃದಯಗಳನ್ನು ಬಹುಕಾಲ ಕಲಕಿಬಿಡುವಂತಹ ಅನುಭವವಾಯಿತು. ಆ ಸಾಕ್ಷ್ಯಚಿತ್ರ ನೋಡಿ ಮುಗಿದ ಮೇಲೆ ನಮಗೆ, ಅಂದರೆ ಶಿಬಿರಾರ್ಥಿಗಳಿಗೆ, ರಾಜೀವ್ ” ಹಿಟ್ಲರನ ಸೈನ್ಯದ ಮೆರೆವಣಿಗೆಯ ದೃಶ್ಯದ ಅವಧಿಯಲ್ಲಿ ಹಿನ್ನೆಲೆ ಸಂಗೀತಕ್ಕೆ ಸಂಬಂಧಿಸಿದಂತೆ ಏನು ಗಮನಿಸಿದಿರಿ?” ಎಂದರು. ಆ ಇಡೀ ಸಾಕ್ಷ್ಯಚಿತ್ರ ಅತ್ಯಂತ ವೇದನಾದಾಯಕವಾದುದರಿಂದ, ಶಿಬಿರಾರ್ಥಿಗಳಿಗೆ ಹಿನ್ನೆಲೆ ಸಂಗೀತದ ಆ different ಆಯಾಮವನ್ನು ಗಮನಿಸಲು ಆಗಿರಲೇ ಇಲ್ಲ. ಕೊನೆಗೆ ರಾಜೀವ್ ಆ ದೃಶ್ಯವನ್ನು ಇನ್ನೊಮ್ಮೆ play ಮಾಡಿಸಿದರು. ಸೈನಿಕರ ಆ ಪಥಸಂಚಲನಕ್ಕೆ ಅಳುವ ಹಿನ್ನೆಲೆ ಸಂಗೀತವನ್ನು (Mourning Music) ನೀಡಲಾಗಿತ್ತು. ಅದು ಸೈನಿಕರ ಅಬ್ಬರದ ಪಥಸಂಚಲನವಾದರೂ, ಹಿಟ್ಲರನ ಪಡೆಗಳು ಎಸಗಿದ ಅಪಾರ ಕ್ರೌರ್ಯವನ್ನು ಆ ಸಂಗೀತ ಅದ್ಭುತವಾಗಿ ಪರಿಣಾಮಕಾರಿಯಾಗಿ ತೆರೆಯಮೇಲೆ ಹೊಮ್ಮಿಸಿತ್ತು.
ಡಾ|| ಯು.ಆರ್.ಅನಂತಮೂರ್ತಿ ಅವರ “ಸಮಕ್ಷಮ” ಅಪರೂಪದ ಸಂದರ್ಶನಗಳ ಸಂಕಲನವೂ ಹೌದು. ಅಲ್ಲಿ ರಾಜೀವ್ ತಾರಾನಾಥರ ಸಂದರ್ಶನವೂ ಇತ್ತು. ಶಿಬಿರದ ಬಿಡುವಿನಲ್ಲಿ ರಾಜೀವ್ ಅವರೊಂದಿಗೆ ಮಾತನಾಡುವಾಗ ಸಹಜವಾಗಿಯೇ ಅವರ ಆ ಸಂದರ್ಶನದ ವಿಷಯವು ಪ್ರಸ್ತಾಪವಾಗಿ ರೋಮಾಂಚನವಾಗುತ್ತಿತ್ತು.
ತೊಂಬತ್ತೆರಡು ವರ್ಷ ಇದ್ದ ರಾಜೀವ್ ಇನ್ನಿಲ್ಲ. ಹಾಗೆನ್ನುವಾಗ, ನಮ್ಮ “ಯಾದೊಂಕೀ ಬಾರಾತ್”ನಲ್ಲಿ ಅವರ ಬರವಣಿಗೆ, ಅವರ ಮಾತು, ಅವರ ತುಂಬು ಕಂಠ, ಅವರ ಅಸದೃಶ ಸರೋದ್ ವಾದನ ಎಲ್ಲವೂ ಒಟ್ಟೊಟ್ಟಿಗೇ ನುಗ್ಗಿನುಗ್ಗಿ ಬರುತ್ತಿವೆ.
ಅವರ ಅಪಾರ ಪ್ರತಿಭೆಗೆ ನಮೋ ನಮಃ.