ನವ ದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇಂದು ದಿಲ್ಲಿಯಲ್ಲಿ ಅಧಿಕಾರ ಹಂಚಿಕೆಯ ಸೂತ್ರವನ್ನು ಅಂತಿಮಪಡಿಸುವ ನಿರೀಕ್ಷೆ ಇದೆ.
ಉಭಯ ನಾಯಕರೂ ಗುರುವಾರ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ನೂತನ ಸಚಿವರ ತಂಡದ ಆಯ್ಕೆ ಆಗಿದೆ. ಆದರೆ ಖಾತೆ ಹಂಚಿಕೆ ಅಂತಿಮವಾಗಬೇಕು ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಶಿಂಧೆ ಬಣಕ್ಕೆ ೧೪ ಸಚಿವ ಹುದ್ದೆ ಹಾಗೂ ಬಿಜೆಪಿಗೆ ೨೮ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಜಾತಿ ಪ್ರಾತಿನಿಧ್ಯ, ಪ್ರಾದೇಶಿಕ ಸಮತೋಲನ ಈ ನಿಟ್ಟಿನಲ್ಲಿ ನಿರ್ಣಾಯಕವಾಗಲಿದೆ.
ಶಿಂಧೆ ಅವರನ್ನು ಬೆಂಬಲಿಸಿರುವ ೪೦ ಮಂದಿ ಶಿವಸೇನಾ ಶಾಸಕರಲ್ಲಿ ೯ ಮಂದಿ ಈ ಹಿಂದೆ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದಲ್ಲಿ ಸಚಿವರಾಗಿದ್ದವರು. ಹೀಗಾಗಿ ಎಲ್ಲರನ್ನೂ ತೃಪ್ತಿಪಡಿಸುವುದು ಸವಾಲಾಗಬಹುದು.
ಗೃಹ, ಹಣಕಾಸು, ಕಂದಾಯ, ಸಹಕಾರ ಮತ್ತು ಮಾರುಕಟ್ಟೆ, ಸಾರ್ವಜನಿಕ ಆರೋಗ್ಯ, ಕೈಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಯನ್ನು ಬಿಜೆಪಿ ವಹಿಸುವ ನಿರೀಕ್ಷೆ ಇದೆ. ಶಿಂಧೆ ಬಣಕ್ಕೆ ನಗರಾಭಿವೃದ್ಧಿ, ಲೋಕೋಪಯೋಗಿ, ಜಲ ಸಂಪನ್ಮೂಲ, ಶಿಕ್ಷಣ ಇಲಾಖೆ ದೊರೆಯುವ ಸಾಧ್ಯತೆ ಇದೆ.
ಇದನ್ನೂ ಓದಿ:ಜುಲೈ 11ರ ಬಳಿಕ ಮಹಾ ಸಂಪುಟ ವಿಸ್ತರಣೆ: ಬಿಜೆಪಿಯಿಂದ 25, ಶಿವಸೇನೆಯಿಂದ 13 ಮಂತ್ರಿಗಳು?