Site icon Vistara News

Kannada Name Board : ಕನ್ನಡ ಬೋರ್ಡ್ ಹಾಕದವರ ಮಳಿಗೆಗೆ ಬೀಗ ಹಾಕುವಂತಿಲ್ಲ; ಸರ್ಕಾರಕ್ಕೆ ಕೋರ್ಟ್ ಆದೇಶ

Kannada Board

ಬೆಂಗಳೂರು : ರಾಜ್ಯದ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ (Kannada Name Board) ಕಡ್ಡಾಯ ಕನ್ನಡವಿರಬೇಕು ಎಂಬು ರಾಜ್ಯ ಸರ್ಕಾರದ ಆದೇಶಕ್ಕೆ ಹಿನ್ನಡೆಯಾಗಿದೆ. ಆದೇಶ ಪಾಲನೆ ಮಾಡದವರ ಮಳಿಗೆಗಳನ್ನು ಜಪ್ತಿ ಮಾಡುವಂತಿಲ್ಲ ಹಾಗೂ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರಕ್ಕೆ ಕೋರ್ಟ್​​ ಸೂಚನೆ ನೀಡಿದೆ.

ರಾಜ್ಯದ ವಾಣಿಜ್ಯ ಸಂಸ್ಥೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆ ಬಳಿಕ ಆದೇಶ ಅನುಸರಿಸದವರ ಮೇಲೆ ಕ್ರಮ ಕೈಗೊಳ್ಳಲು ಆರಂಭಿಸಿತ್ತು. ಹೀಗಾಗಿ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022″ ಅನ್ನು ಪ್ರಶ್ನಿಸಿ ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹೈಕೋರ್ಟ್ ಮೆಟ್ಟಿಲೇರಿತ್ತು.

ಟೈಟನ್ ಕಂಪನಿ ಲಿಮಿಟೆಡ್ ಹಾಗೂ ಪಿವಿರ್ ಐನಾಕ್ಸ್ ಲಿಮಿಟೆಡ್ ಮತ್ತಿತರ ಕಂಪನಿಗಳು ಕೂಡ ಹೈಕೋರ್ಟ್​​ನಲ್ಲಿ ತಕರಾರು ಅರ್ಜಿ ಸಲ್ಲಿಕೆ ಮಾಡಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನಿಂದ ರಾಜ್ಯ ಸರ್ಕಾರಕ್ಕೆ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ.

ನಾಮಫಲಕದಲ್ಲಿ ಶೇ60 ಕನ್ನಡ ಕಡ್ಡಾಯವಾಗಿ ಬಳಸದೇ ಇದ್ದರೆ ಬಲವಂತ ಕ್ರಮ ತೆಗೆದುಕೊಳ್ಳುವಂತಿಲ್ಲ. ಅಂತಹ ವಾಣಿಜ್ಯ ಮಳಿಗೆಯನ್ನು ಸೀಲ್ಡ್ ಡೌನ್ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022 ಯಾವ ದಿನದಿಂದ ಜಾರಿಗೆ ಬಂದಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಠಿಣ ಕ್ರಮಕೈಗೊಳ್ಳಲಾಗಿತ್ತು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಮಫಲಕಗಳಲ್ಲಿ (Kannada Name Board) ಶೇ. 60 ಕನ್ನಡ ಅಳವಡಿಸದ ವಾಣಿಜ್ಯ ಉದ್ದಿಮೆ, ಮಳಿಗೆಗಳಿಗೆ ಬೀಗ ಮುದ್ರೆ ಹಾಕುವ ಜತೆಗೆ ಪರವಾನಗಿ ಅಮಾನತು ಮಾಡಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಲಾಗಿತ್ತು. ಗಡುವು ಫೆ.29ಕ್ಕೆ ಮುಕ್ತಾಯಗೊಂಡಿದ್ದ ಹಿನ್ನೆಲೆಯಲ್ಲಿ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ : ಕನ್ನಡ ನಾಮಫಲಕ ಅಳವಡಿಸದ ಅಂಗಡಿಗಳಿಗೆ ಬೀಗ, ಲೈಸೆನ್ಸ್‌ ಅಮಾನತು: ಬಿಬಿಎಂಪಿ ಆದೇಶದಲ್ಲಿ ಏನೇನಿದೆ?

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ದೇಶನದಂತೆ ವಿಶೇಷ ಆಯುಕ್ತರು (ಆರೋಗ್ಯ) ಸುತ್ತೋಲೆ ಹೊರಡಿಸಿದ್ದರು. ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ ಮುಂತಾದವುಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಇರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಮುಖ್ಯ ಆಯುಕ್ತರವರ ಅಧ್ಯಕ್ಷತೆಯಲ್ಲಿ ಫೆ.2 ಮತ್ತು 12ರಂದು ನಡೆದ ಸಭೆಯಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲಾ ವಾಣಿಜ್ಯ ಉದ್ದಿಮೆಗಳ ಮೇಲೆ ಫೆ.28 ರೊಳಗೆ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸುವಂತೆ ಎಲ್ಲಾ ವಾಣಿಜ್ಯದಾರರಿಗೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಫೆ.29 ರಿಂದ ಅನ್ವಯವಾಗುವಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸದೇ ಇರುವ ವಾಣಿಜ್ಯ ಉದ್ದಿಮೆಗಳಿಗೆ ಇಲಾಖಾ ವತಿಯಿಂದ ನೀಡಿರುವ ಉದ್ದಿಮೆ ಪರವಾನಗಿಯನ್ನು ಅಮಾನತು ಮಾಡಲು ಹಾಗೂ ಅಂತಹ ವಾಣಿಜ್ಯ ಉದ್ದಿಮೆಗಳಿಗೆ ಬೀಗಮುದ್ರೆ (Sealdown) ಮಾಡಲು ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು.

ಪ್ರತಿಭಟನೆ ಎಚ್ಚರಿಕೆ ನೀಡಿದ್ದ ನಾರಾಯಣಗೌಡ

ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಫೆಬ್ರವರಿ 28 ರೊಳಗಾಗಿ ಶೇ. 60ರಷ್ಟು ಕನ್ನಡ ಅಳವಡಿಕೆಗೆ ಬಿಬಿಎಂಪಿ ಗಡುವು ನೀಡಿತ್ತು. ಆದರೆ, ಇನ್ನೂ ಹಲವು ಕಡೆ ಕನ್ನಡ ನಾಮಫಲಕ ಅಳವಡಿಕೆ (Kannada Name Board) ಮಾಡದಿರುವುದು ಕಂಡುಬಂದಿದೆ. ಹೀಗಾಗಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹಿಸಿ ಮಾ.5ರಂದು ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದ್ದರು. ಆದರೆ ಸರ್ಕಾರ ಕ್ರಮ ಕೈಗೊಳ್ಳಲು ಆರಂಭಿಸಿದ ಬಳಿಕ ಪ್ರತಿಭಟನೆ ಕೈಬಿಡಲಾಗಿತ್ತು

Exit mobile version