Site icon Vistara News

Rajkumar Birthday : ಇಂದು ಡಾ. ರಾಜ್​ಕುಮಾರ್ ಜನುಮದಿನ; ವರನಟನಿಗೆ ಕನ್ನಡಿಗರ ನಮನ

, Dr. Rajkumar's birthday

ಕನ್ನಡದ ಕುಲಪುತ್ರ ದಿವಂಗತ ಡಾ. ರಾಜ್ ಕುಮಾರ್ (Dr. Rajkumar) ಎಂದರೆ ಅದು ಕೇವಲ ವ್ಯಕ್ತಿಯಲ್ಲ. ಅವರು ಕನ್ನಡ (Kannada) ಕಲಾರಸಿಕರ ಹೃದಯ ಸಾಮ್ರಾಟ. ಕನ್ನಡಿಗರಿಗೆಲ್ಲರಿಗೂ ಅವರೊಂದು ಶಕ್ತಿ. ಅವರು ಕನ್ನಡ ಭಾಷೆಯ ಅಸ್ಮಿತೆ. ಮೇರುನಟನಾಗಿ, ಹೆಮ್ಮೆಯ ಕನ್ನಡಿಗನಾಗಿ ಬಾಳಿ ಬದುಕಿದ ವರನಟ ದಿವಂಗತ ಡಾ.ರಾಜಕುಮಾರ್ ಅವರಿಗೆ ಇಂದು 95ನೇ ಜನುಮ ದಿನದ ಸಂಭ್ರಮ (Dr Rajkumar Birthday). ಚಲನಚಿತ್ರ ರಂಗ ಹಾಗೂ ನಿಜಜೀವನದಲ್ಲಿ ಆದರ್ಶವಾಗಿದ್ದ ಅವರಿಗೆ ಹ್ಯಾಪಿ ಬರ್ತ್​​ಡೇ ಹೇಳೋಣ. ಜತೆಗೆ ಅವರ ಸಾಧಕ ಹೆಜ್ಜೆಗಳನ್ನು ಸ್ಮರಿಸೋಣ.

ಚಾಮರಾಜನಗರದ ಸಿಂಗಾನಲ್ಲೂರು ಎಂಬ ಗ್ರಾಮದಲ್ಲಿ ಹುಟ್ಟಿದ್ದ ಮುತ್ತುರಾಜನನ್ನು ಕಾಲಕ್ರಮೇಣ ರಾಜ್​ಕುಮಾರ್​ ಎಂಬ ಅಜರಾಮರ ಹೆಸರಿನಿಂದ ಕರೆದಿದ್ದು ಅವರ ಅಭಿಮಾನಿ ದೇವರುಗಳು. ಇಂಥ ಮಹಾನ್​ ಚೇತನ​ ಹುಟ್ಟಿದ್ದು 1929, ಏಪ್ರಿಲ್ 24ರಂದು. ಅವರು ಪುಟ್ಟಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿ ಹಿರಿಮಗ. ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದ ಡಾ.ರಾಜ್ ಅವರ ಶಿಕ್ಷಣ ನಾಲ್ಕನೇ ಕ್ಲಾಸ್​ಗೆ ಮುಗಿದು ಹೋಗಿತ್ತು. ಆದರೆ, ಅವರು ಆಳಿರುವುದು ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರ ರಂಗವನ್ನು. ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಅವರಿಗೆ ಸರಿಸಾಟಿಯಾದ ಇನ್ನೊಬ್ಬರಿಲ್ಲ ಎಂಬುದಕ್ಕೆ ಅವರ ಸಿನಿಮಾ ಮತ್ತು ಜೀವನವೇ ಸಾಕ್ಷಿ.

ಮೊದಲ ಚಿತ್ರ ‘ಬೇಡರ ಕಣ್ಣಪ್ಪ’

ಡಾ. ರಾಜ್​ಕುಮಾರ್ ಅವರು ಚಲನಚಿತ್ರ ಕ್ಷೇತ್ರಕ್ಕೆ ಪ್ರವೇಶ ಮಾಡುವುದಕ್ಕೆ ಮೊದಲೇ ಕಲಾರಾಧಕ. ರಾಜ್ ಅವರ ತಂದೆ ರಂಗಭೂಮಿ ಕಲಾವಿದರಾಗಿದ್ದರಿಂದ ಬಣ್ಣದ ನಂಟು ಅವರಿ ಜನ್ಮದತ್ತವಾಗಿ ದೊರಕಿತ್ತು. ಮೊದಲಿಗೆ ಕೆಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದ ನಂತರ ಸಣ್ಣ ಪುಟ್ಟ ಪಾತ್ರಗಳ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಪಡೆದರು. ಆದರೆ 1954ರಲ್ಲಿ ಬಿಡುಗಡೆಗೊಂಡ ಬೇಡರ ಕಣ್ಣಪ್ಪ ಚಿತ್ರದಲ್ಲಿ ಕಣ್ಣಪ್ಪನ ಪಾತ್ರದ ಮೂಲಕ ಅವರು ಹೆಸರುವಾಸಿಯಾದರು. ಅದು ಅವರ ಮೊದಲ ಸಿನಿಮಾವೆಂದೇ ಹೇಳಲಾಗುತ್ತಿದೆ.

ಶಬ್ದವೇದಿ ಕೊನೇ ಚಿತ್ರ

ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ನಿಂದ ಹಿಡಿದು ತಮ್ಮ ಕೊನೇ ಚಿತ್ರ ‘ಶಬ್ದವೇದಿ’ವರೆಗೂ ರಾಜ್ ಅಭಿನಯಿಸಿದ್ದೆಲ್ಲವೂ ಸ್ಮರಣೀಯ ಚಿತ್ರಗಳೇ. ಓಹಿಲೇಶ್ವರ, ಭೂಕೈಲಾಸ, ರಣಧೀರ ಕಂಠೀರವ, ದಶಾವತಾರ, ಭಕ್ತ ಕನಕದಾಸ, ವಿಜಯನಗರದ ವೀರಪುತ್ರ, ಇಮ್ಮಡಿ ಪುಲಕೇಶಿ, ಹುಲಿಯ ಹಾಲಿನ ಮೇವು, ವೀರ ಕೇಸರಿ, ಶ್ರೀಕೃಷ್ಣ ದೇವರಾಯ, ಮಂತ್ರಾಲಯ ಮಹಾತ್ಮೆ, ಸತ್ಯಹರೀಶ್ಚಂದ್ರ, ಸನಾದಿ ಅಪ್ಪಣ್ಣ, ಬೀದಿ ಬಸವಣ್ಣ, ಬಂಗಾರದ ಮನುಷ್ಯ, ಜೇಡರಬಲೆ, ಮೇಯರ್ ಮುತ್ತಣ್ಣ, ಭಲೇಜೋಡಿ, ಗೋವಾದಲ್ಲಿ ಸಿಐಡಿ 999, ಕಸ್ತೂರಿ ನಿವಾಸ, ಹೊಸಬೆಳಕು, ಕವಿರತ್ನ ಕಾಳಿದಾಸ, ಸಿಪಾಯಿ ರಾಮು, ಶಂಕರ್ ಗುರು, ಬಂಗಾರದ ಪಂಜರ, ಭಕ್ತ ಪ್ರಹ್ಲಾದ, ದಾರಿತಪ್ಪಿದ ಮಗ, ಭಾಗ್ಯವಂತರು, ಆಪರೇಷನ್ ಡೈಮಂಡ್ ರಾಕೆಟ್, ಗಂಧದಗುಡಿ ಅವರ ಜನಪ್ರಿಯ ಚಿತ್ರಗಳು. ಡಾಕ್ಟರ್ ರಾಜ್​ಕುಮಾರ್ ಅವರು ಬರೋಬ್ಬರಿ 200ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಬಣ್ಣ ಹಚ್ಚಿದ್ದಾರೆ.

ಅವರು ದುಡ್ಡಿಗಾಗಿ ಸಿನಿಮಾ ಮಾಡಿಲ್ಲ. ಪಾತ್ರಾಭಿನಯಕ್ಕಾಗಿ ಮಾಡಿದ್ದಾರೆ. ಪ್ರತಿಯೊಂದು ಪಾತ್ರಗಳಿಗೂ ಜೀವ ತುಂಬಿದ್ದಾರೆ. ದೈವ ಭಕ್ತ, ರಾಜ, ರಾಕ್ಷಸ, ಬಡವ, ವೈದ್ಯ, ಸಾಹುಕಾರ, ಆಳು, ಶಿಕ್ಷಕ, ಅಮರ ಪ್ರೇಮಿ, ಆ್ಯಂಗ್ರಿ ಯಂಗ್ ಮ್ಯಾನ್ ಸೇರಿದಂತೆ ಎಲ್ಲ ಪಾತ್ರಗಳನ್ನು ಮಾಡಿದ್ದಾರೆ. ರಾಜ್ ಅಭಿನಯಿಸದ ಪಾತ್ರಗಳೇ ಇಲ್ಲ ಎಂಬ ಮಾತು ಭಾರತೀಯ ಚಿತ್ರರಂಗದಲ್ಲಿ ಇನ್ನೂ ಚಾಲ್ತಿಯಲ್ಲಿದೆ.

ರಾಜ್​ಕುಮಾರ್ ರಿಯಲ್ ಹೀರೊ

ತಾವು ಮಾಡುವ ಪಾತ್ರಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡಬಾರದು ಅನ್ನೋ ಕಾಳಜಿ ರಾಜ್ ಕುಮಾರ್ ಅವರಿಗೆ ಇತ್ತು. ಹೀಗಾಗಿಯೇ ಸಿನಿಮಾಗಳಲ್ಲಿ ರಾಜ್ ಕುಡಿದಿಲ್ಲ, ಸಿಗರೇಟ್ ಸೇದಿಲ್ಲ, ರೇಪ್ ಸೀನ್, ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಿಲ್ಲ. ಅದಷ್ಟೇ ಸಂಭಾವನೆ ಕೊಟ್ಟರೂ ನಾನು ಇಂತ ಪಾತ್ರಗಳಲ್ಲಿ ನಟಿಸಲ್ಲ ಎಂದು ಅವರು ಕಡ್ಡಿ ಮುರಿದಂತೆ ಹೇಳಿದ್ದರು. ಪಾತ್ರಗಳಿಗೆ ಜೀವ ತುಂಬುವ ರಾಜ್ ಅದಕ್ಕಾಗಿ ಕಠಿಣ ನಿಯಮಗಳನ್ನು ಪಾಲಿಸುತ್ತಿದ್ದರು. ‘ಮಂತ್ರಾಲಯ ಮಹಾತ್ಮೆ’ ಸಿನಿಮಾಕ್ಕಾಗಿ ಅವರು ಬಾಡೂಟವನ್ನೇ ಬಿಟ್ಟಿದ್ದರು.

ಮೇರು ಗಾಯಕ!

ಡಾ.ರಾಜ್ ಮೇರು ಗಾಯಕರಾಗಿದ್ದರು ಎಂಬುದನ್ನು ಹೇಳಲೇಬೇಕಾಗಿಲ್ಲ. ಅವರು ಕೆಲವು ಹಾಡುಗಳು ಈಗಲೂ ಕರುನಾಡಿನ ಮನೆಗಳಲ್ಲಿ ಈಗಲೂ ಕೇಳಿಸುತ್ತಿವೆ. ಹಾಡಿಗಾಗಿಯೇ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಡಾ.ರಾಜ್. ‘ಸಂಪತ್ತಿಗೆ ಸವಾಲ್’ ಸಿನಿಮಾದ ಶುರುವಾರ ಅವರ ಹಾಡಿನ ಅಭಿಯಾನ ಕೊನೆವರೆಗೂ ಮುಂದುವರಿದಿತ್ತು. ‘ಜೀವನಚೈತ್ರ’ ಸಿನಿಮಾದ ‘ನಾದಮಯ’ ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದರು.

ಕನ್ನಡದ ಹೋರಾಟಗಳು

ರಾಜಕುಮಾರ್ ಅವರು ನಾಡು, ನುಡಿ, ನೆಲದ ಅಸ್ಮಿತೆಗೆ ಧಕ್ಕೆ ಬಂದಾಗ ಹೋರಾಟದ ಮುಂಚೂಣಿಯಲ್ಲಿ ಇರುತ್ತಿದ್ದರು. ಗೋಕಾಕ್ ಚಳುವಳಿ ನಡೆಸಿ ಆ ಮೂಲಕ ಕನ್ನಡಿಗರ ದನಿಯಾಗಿದ್ದರು ಅವರು. ಕಾವೇರಿ ನೀರಿನ ಹೋರಾಟ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮುಂತಾದ ಹೋರಾಟಗಳಲ್ಲಿ ರಾಜ್​ ಮುಂಚೂಣಿಯಲ್ಲಿದ್ದರು.

ಕಲಾ ಹೃದಯಿ

ಹಣ, ಪ್ರಶಸ್ತಿ, ಹೆಸರು ಬಂದಮೇಲೂ ರಾಜ್​ಕುಮಾರ್ ಅವರು ತಾವು ನಡೆದು ಬಂದ ದಾರಿ ಮರೆತಿರಲಿಲ್ಲ. ದುಡ್ಡು ಪಡೆಯದೇ ಅಥವಾ ಕಡಿಮೆ ಸಂಭಾವನೆ ಪಡೆದು ಹಲವರಿಗೆ ಸಿನಿಮಾ ಮಾಡಿಕೊಟ್ಟಿದ್ದಾರೆ. ಸಹ ಕಲಾವಿದರನ್ನು ಮನೆ ಮಕ್ಕಳಂತೆ ಅವರು ಕಾಣುತ್ತಿದ್ದರು.

ರಾಜ್ ಅವರ ಹಿಂದೆ ಅಭಿಮಾನಿಗಳ ಪಡೆ ಇದ್ದದ್ದನ್ನು ಬಳಸಿಕೊಳ್ಳುವುದಕ್ಕೆ ರಾಜಕೀಯ ಪಕ್ಷಗಳು ಹೊಂಚು ಹಾಕಿದ್ದವು. ರಾಜ್ ರಾಜಕೀಯವನ್ನು ಹತ್ತಿರಕ್ಕೂ ಬಿಟ್ಟುಕೊಂಡಿರಲಿಲ್ಲ. ಗೆದ್ದು ಸಿಎಂ ಆಗುವಷ್ಟು ಬಲ ಹೊಂದಿದ್ದರೂ ತಾನು ಕೇವಲ ನಟ ಎಂಬುದಕ್ಕಷ್ಟೇ ಸೀಮಿತರಾಗಿದ್ದರು. ಅಮಿತಾಬ್ ಬಚ್ಚನ್, ಎನ್.ಟಿ.ರಾಮರಾವ್, ಎಂಜಿಆರ್, ರಜನಿಕಾಂತ್, ಕಮಲ್ ಹಾಸನ್ ಸೇರಿದರೆ ಒಬ್ಬ ರಾಜ್ ಆಗ್ತಾರೆ ಅಂತ ಖುದ್ದು ರಜನಿಕಾಂತ್ ಹೇಳಿದ್ದು ಇಲ್ಲಿ ಸ್ಮರಣೀಯ.

ಹಲವು ಪ್ರಸ್ತಿಗಳು, ಬಿರುದುಗಳ ರಾಜ

ರಾಜ್ ಕುಮಾರ್ ಅವರ ಪ್ರತಿಭೆ ನೋಡಿ ಪ್ರಶಸ್ತಿಗಳೇ ಹುಡುಕಿಕೊಂಡು ಬಂದಿವೆ. ಅವರಿಗೆ ಪ್ರಶಸ್ತಿ ನೀಡಿದ ಮೇಲೆಯೇ ಆ ಪ್ರಶಸ್ತಿಗಳಿಗೆ ಖ್ಯಾತಿ ಬಂದಿದ್ದಿದೆ. ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಕರ್ನಾಟಕ ರತ್ನ, ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ, ಅಮೆರಿಕಾದ ಕೆಂಟಕಿ ಕರ್ನಲ್ ಪ್ರಶಸ್ತಿ, ನಾಡೋಜ, ಗೌರವ ಡಾಕ್ಟರೇಟ್ ಸೇರಿದಂತೆ ರಾಜ್ಯ, ದೇಶ, ವಿದೇಶದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಪ್ರಶಸ್ತಿ ಅವರಿಗೆ ಲಭಿಸಿವೆ.

ರಾಜ್ ಕುಮಾರ್ ಅವರಿಗೆ ಹಲವಾರು ಬಿರುದಗಳನ್ನು ನೀಡಲಾಗಿತ್ತು ಕನ್ನಡಿಗರ ಕಣ್ಮಣಿ, ನಟ ಸಾರ್ವಭೌಮ, ರಸಿಕರ ರಾಜ, ಯೋಗರಾಜ, ಗಾನಗಂಧರ್ವ, ವರನಟ, ಅಭಿಮಾನಿಗಳ ದೇವರು ಹೀಗೆ ನೂರಕ್ಕೂ ಹೆಚ್ಚು ಬಿರುದುಗಳು ಅವರಿಗಿದ್ದವು. ಜನ ಪ್ರೀತಿಯಿಂದ ಅಣ್ಣಾವ್ರು ಅಂಥ ಕರೆಯುತ್ತಿದ್ದರು. ಅವರು ಅಭಿಮಾನಿಗಳನ್ನು ‘ಅಭಿಮಾನಿ ದೇವರುಗಳು, ಎಂದೇ ಕರೆಯುತ್ತಿದ್ದರು.

ವಿವಾದ ಇತ್ತೇ?

ನರಹಂತಕ ವೀರಪ್ಪನ್ 2000ರಲ್ಲಿ ರಾಜ್ ಕುಮಾರ್ ಅವರನ್ನು ಅಪಹರಿಸಿದ್ದ. ಬರೋಬ್ಬರಿ 108 ದಿನಗಳ ಕಾಲ ಬಂಧನದಲ್ಲಿ ಇಟ್ಟಿದ್ದ. ಇದೊಂದು ಕೆಟ್ಟ ಗಳಿಗೆಯಾಗಿತ್ತು ಹಾಗೂ ರಾಜಕೀಯ ಸೇರಿದಂತೆ ನಾನಾ ಚರ್ಚೆಗಳಿಗೆ ಕಾರಣವಾಗಿತ್ತು. ಇನ್ನು ನಟಿ ಲೀಲಾವತಿ ಜೊತೆಗಿನ ಸಂಬಂಧ, ನಟ ವಿಷ್ಣುವರ್ಧನ್ ಜೊತೆಗಿನ ವೈಮನಸ್ಸು ಸಣ್ಣ ವಿವಾದಕ್ಕೆ ಕಾರಣವಾಗಿತ್ತು.

ರಾಜ್ ಕುಮಾರ್​ ಅವರು 2006ರ ಏಪ್ರಿಲ್ 12ರಂದು ನಿಧನ ಹೊಂದಿದ್ದರು. ಆಗ ಅಭಿಮಾನಿಗಳು
ಗಲಾಟೆ, ದೊಂಬಿ ನಡೆಸಿದ್ದು, ಗೋಲಿಬಾರ್ ಆಗಿದ್ದು, ಅಭಿಮಾನಿಗಳು ಪ್ರಾಣ ತ್ಯಜಿಸಿದ್ದು ಕರುನಾಡ ಇತಿಹಾಸದಲ್ಲಿ ದಾಖಲಾಗಿವೆ.

Exit mobile version