ವಿಜಯನಗರ : ತುಂಗಭದ್ರಾ ಜಲಾಶಯ 19ನೇ ಕ್ರಸ್ಟ್ ಕಿತ್ತುಹೋದ (Tungabhadra Dam) ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ವಿಧಿಸಲಾಗಿದ್ದ ಸೆಕ್ಷನ್ 144 ಅನ್ನು ಅಧಿಕಾರಿಗಳು ವಾಪಸ್ ಪಡೆದುಕೊಂಡಿದ್ದದಾರೆ. ಕ್ರಸ್ಟ್ ಗೇಟ್ ದುರಸ್ತಿ ವೇಳೆ ಕಾನೂನು ಸುರಕ್ಷತೆ ಹಾಗೂ ಸುರಕ್ಷತೆ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಸೆಕ್ಷನ್ ವಾಪಸ್ ಪಡೆಯಲಾಗಿದೆ. ಗೇಟ್ ಕುಸಿತದ ಸುದ್ದಿ ಹರಡಿದಾಗ ಜನರು ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆಗೆ ಬರಬಹುದು ಹಾಗೂ ಅದರಿಂದ ಅಪಾಯ ಉಂಟಾಗಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು
ಜಲಾಶಯ ಸುತ್ತಮುತ್ತಲಿನ ಕಾಲುವೆಗಳು, ಡ್ಯಾಂ ವೀಕ್ಷಣೆಗೆ ಆ.12ರಿಂದ ನಿರ್ಬಂಧ ಹೇರಿ ಆದೇಶಿಸಿದ್ದ ವಿಜಯನಗರ ಜಿಲ್ಲಾಡಳಿತ ಗೇಟ್ ದುರಸ್ತಿ ಆದ ಹಿನ್ನೆಲೆಯಲ್ಲಿ ವಾಪಸ್ ಪಡೆದುಕೊಂಡಿದೆ. ಇದೀಗ ನಿರ್ಬಂಧ ಆದೇಶ ತೆರವುಗೊಳಿಸಿ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಳಿಸಿದೆ. ಕ್ರಸ್ಟ್ ಗೇಟ್ ಕೂಡಿಸುವ ವೇಳೆ ಸಾಮಾನ್ಯ ಜನ ಪ್ರವೇಶ ನಿರ್ಬಂಧಕ್ಕೆ ಮನವಿ ಮಾಡಿದ್ದ ದುರಸ್ತಿ ತಂಡದ ಮುಖ್ಯಸ್ಥರಾದ ಕನ್ಹಯ್ಯ ನಾಯ್ಡು ಕೋರಿದ್ದರು.
ರೈತರಿಗೆ ಸಮಸ್ಯೆಯಾಗದಂತೆ ಕ್ರಮ
ಹವಾಮಾನ ಮುನ್ಸೂಚನೆಯಂತೆ ತುಂಗಭದ್ರಾ ಜಲಾಶಯದಿಂದ (Tungabhadra Dam) ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭರವಸೆ ವ್ಯಕ್ತಪಡಿಸಿದ್ದರು.
ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು ತುಂಗಭದ್ರಾ ಜಲಾಶಯದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಇದು ರಾಜಕೀಯ ಮಾಡುವ ವಿಷಯವಲ್ಲ. ತುಂಗಭದ್ರಾ ಮಂಡಳಿಯ ನೇತೃತ್ವವನ್ನು ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು ನಿರ್ವಹಿಸುತ್ತಾರೆ. ಆಂಧ್ರ, ಕರ್ನಾಟಕ, ತೆಲಂಗಾಣ ರಾಜ್ಯದ ಸದಸ್ಯರು ಮಂಡಳಿಯಲ್ಲಿರುತ್ತಾರೆ.. ಈ ಜಲಾಶಯದ ನಿರ್ವಹಣೆಯ ಜವಾಬ್ದಾರಿ ತುಂಗಭದ್ರಾ ಮಂಡಳಿಗೆ ಸೇರಿರುತ್ತದೆ. ಆದರೆ ಈ ವಿಷಯದಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲ ಎಂದು ಹೇಳಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 105 ಟಿಎಂಸಿ ನೀರು ತುಂಬಿತ್ತು. ಆದರೆ ತುಂಡಾಗಿರುವ ಗೇಟ್ ನ ದುರಸ್ತಿಗಾಗಿ 50 ರಿಂದ 60 ಟಿಎಂಸಿ ನೀರು ಹೊರಗೆ ಬಿಡಬೇಕಾಗಿದೆ. ಈ ವರ್ಷದ ಅಕ್ಟೋಬರ್ ವರೆಗೆ ಮಳೆಯಾಗಲಿದ್ದು, ಜಲಾಶಯದಲ್ಲಿ ಪುನ: ನೀರು ತುಂಬುವ ಸಾಧ್ಯತೆಯಿದೆ. ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ 15 ರ ನಂತರ ಪುನಃ ಮಳೆಬರುವ ನಿರೀಕ್ಷೆಯಿದೆ. ಆದ್ದರಿಂದ ಈಗ ಪೋಲಾಗಿರುವ ನೀರು ಮತ್ತೊಮ್ಮೆ ಜಲಾಶಯದಲ್ಲಿ ತುಂಬಲಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Raichur News : ಉಸಿರಾಡುತ್ತಿವೆ ಮುಸ್ಲಿಂ ಧರ್ಮಗುರುಗಳ ಗೋರಿಗಳು, ಪವಾಡ ಎಂದ ಭಕ್ತರು
ಎರಡನೇ ಬೆಳೆಗೆ ನೀರು ಸಿಗುವುದೇ?
ಗೇಟ್ ರಿಪೇರಿಗಾಗಿ 60 TMC ನೀರನ್ನು ಅಣೆಕಟ್ಟಿನಿಂದ ಖಾಲಿ ಮಾಡುವ ಅನಿವಾರ್ಯತೆ ಇದೆ. 105 TMC ಸಾಮರ್ಥ್ಯದ TB ಡ್ಯಾಂನಲ್ಲಿ 20 ಅಡಿ ನೀರು ಕುಗ್ಗಿಸಿ 60 TMCಯಷ್ಟು ನೀರನ್ನು ಅಧಿಕಾರಿಗಳು ಖಾಲಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿಂದ ಮಳೆ ಪ್ರಮಾಣ ಕುಗ್ಗಬಹುದು. ಹೀಗಾಗಿ ಖಾಲಿಯಾದ 60 ಟಿಎಂಸಿ ನೀರನ್ನು ಮತ್ತೆ ತುಂಬಿಸುವುದು ಕಷ್ಟಸಾಧ್ಯ. ಬೇಸಿಗೆಯಲ್ಲಿ ನಿರ್ವಹಣೆಗಾಗಿ ಡ್ಯಾಂ ತುಂಬಿಸುವುದು ಅಧಿಕಾರಿಗಳಿಗೆ ಸವಾಲು ಆಗುತ್ತದೆ. ಸೆಪ್ಟೆಂಬರ್ ಬಳಿಕ ಕಾಲುವೆ ನೀರು ಕೈಕೊಟ್ಟರೆ ಬೆಳೆಗಳು ಬಾಡುತ್ತವೆ. ಹೀಗಾಗಿ ಈ ಬಾರಿ ಬೆಳೆಗಳಿಗೆ ಡ್ಯಾಂ ನೀರು ಸಿಗುವುದೇ ಅನುಮಾನ ಎಂಬಂತಾಗಿದೆ.