ಉಡುಪಿ: ʼನಾವಿಬ್ಬರೂ ಒಂದು ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದೇವೆ…ʼ ಇದು ಬೆಂಗಳೂರು ಮೂಲದ ಪ್ರೇಮಿಗಳು ತಮ್ಮ ಕುಟುಂಬದವರಿಗೆ ಉಡುಪಿಯಿಂದ ಕಳಿಸಿದ ಕೊನೆಯ ವಾಟ್ಸ್‌ಅಪ್ ಸಂದೇಶ. ಬೆಳಗಿನ ಜಾವ 3.02ಕ್ಕೆ ಬಂದ ಈ ಸಂದೇಶವನ್ನು ಕುಡುಂಬದವರು ನೋಡುವ ವೇಳೆಗಾಗಲೆ ಕಾಲ ಮಿಂಚಿ ಹೋಗಿ Udupi Suicide ಪ್ರಕರಣ ಬೆಳಕಿಗೆ ಬಂದಿದೆ.
ಉಡುಪಿಯ ಮಂದಾರ್ತಿ ಸಮೀಪ ಹೆಗ್ಗುಂಜೆ ಬಳಿಯಲ್ಲಿ ಒಂದು ಕಾರು ಧಗಧಗನೆ ಉರಿದು ಯಶವಂತ ಯಾದವ್ ಹಾಗೂ ಜ್ಯೋತಿ ದೇಹಗಳು ಸುಟ್ಟು ಕರಕಲಾಗಿವೆ. ಭಾನುವಾರ ಬೆಳಗ್ಗೆ ಹೆಗ್ಗುಂಜೆಯ ಸ್ಥಳೀಯರು ಹೊತ್ತಿ ಉರಿಯುತ್ತಿರುವ ಕಾರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಎರಡು ಜೀವಗಳು ಹಾರಿಹೋಗಿದ್ದವು.
ಇದನ್ನೂ ಓದಿ | ಎಂಬಿಎ ಪದವೀಧರೆ ವಿಷ ಸೇವಿಸಿ ಆತ್ಮಹತ್ಯೆ, ಇಷ್ಟು ಕಲಿತರೂ ಕೆಲಸ ಸಿಗಲಿಲ್ಲವೆಂಬ ಬೇಸರ
ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಕಾರಿನ ಬೆಂಕಿಯನ್ನು ನಂದಿಸಿದ್ದಾರೆ. ಈ ವೇಳೆಗಾಗಲೆ ಸ್ವಿಫ್ಟ್ ಕಾರಿನ ಹಿಂಬದಿಯ ಬಾಗಿಲು ತೆರೆದುಕೊಂಡಿದೆ. ಬಾಗಿಲಿನಿಂದ ಹೊರಕ್ಕೆ ಎರಡೂ ದೇಹಗಳು ಹೊರಬಿದ್ದಿದ್ದವು. ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿದ್ದ ದೇಹಗಳು ಸಂಪೂರ್ಣ ಸುಟ್ಟುಹೋಗಿದ್ದವು. ಕಾರಿನೊಳಗೆ ಕುಳಿತು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಿಂದ ಕುಟುಂಬದವರೊಬ್ಬರು ಆಗಮಿಸಿದ್ದು, ಅವರ ಸಮ್ಮುಖದಲ್ಲೆ ಪೊಲೀಸರು ಮಹಜರು ಮಾಡಿದ್ದಾರೆ. ಇಬ್ಬರ ಶವವನ್ನೂ ಮಳಿಪಾಲದ ಕೆಎಂಸಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.
ಎರಡೂ ಕುಟುಂಬಗಳು ಮಾಹಿತಿ ನೀಡಿಲ್ಲ
ಬೆಂಗಳೂರಿನ ಆರ್‌ಟಿ ನಗರ ನಿವಾಸಿಯಾದ ಯಶವಂತ್ ಹಾಗೂ ಜ್ಯೋತಿ ಕಳೆದ ಮೂರು ದಿನದ ಹಿಂದೆ ಮನೆಯಿಂದ ಹೊರಟಿದ್ದರು. ಇಬ್ಬರ ಮನೆಯಲ್ಲೂ, ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಹೇಳಿಲ್ಲ. ಈ ಕುರಿತು ಎರಡೂ ಕುಟುಂಬಗಳು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಖ ದೂರನ್ನು ದಾಖಲಿಸಿದ್ದವು. ಎರಡೂ ದೂರಿನಲ್ಲಿಯೂ ಇವರಿಬ್ಬರ ಕುರಿತು ಮಾಹಿತಿಯನ್ನು ನೀಡಲಾಗಿಲ್ಲ. ವಮನೆ ಬಿಟ್ಟು ಹೋದವರು ಬಂದಿಲ್ಲ, ಹುಡುಕಿಕೊಡಿ ಎಂದಷ್ಟೆ ತಿಳಿಸಿದ್ದಾರೆ. ಎರಡೂ ಕುಟುಂಬದ ನಡುವೆ ಪ್ರೇಮದ ವಿಚಾರದಲ್ಲಿ ಏಣೋ ನಡೆದಿರುವ ಸಾಧ್ಯತೆ ಇದೆ. ಆದರೆ ಕುಟುಂಬಗಳೂ ಇದನ್ನು ಯಾವ ಕಾರಣದಿಂದ ಹೇಳಿಲ್ಲ ಎನ್ನುವುದು ಸೇರಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲು ಪೊಲೀಸರು ಸಿದ್ಧರಾಗುತ್ತಿದ್ದಾರೆ.
ನಿರ್ಜನ ಪ್ರದೇಶದಲ್ಲಿ ಘಟನೆ
ಮೂರು ದಿನದ ಹಿಂದೆ ಮಂಗಳೂರಿಗೆ ಆಗಮಿಸಿದ ಜೋಡಿ, ಅಲ್ಲಿ ಬಾಡಿಗೆ ಮನೆಯನ್ನು ಪಡೆದಿದ್ದಾರೆ. ಐದು ಸಾವಿರ ರೂಪಾಯಿ ಅಡ್ವಾನ್ಸ್ ನೀಡಿ, ಮನೆ ಮಾಲೀಕರಿಗೆ ತಮ್ಮ ಆಧಾರ್ ಕಾರ್ಡನ್ನೂ ನೀಡಿದ್ದಾರೆ. ನಂತರ ಅದೇಕೊ ಇದ್ದಕ್ಕಿದ್ದಂತೆ ಬಾಡಿಗೆ ಕಾರನ್ನು ಪಡೆದು ಮಂದರ್ತಿ ಬಳಿಯ ನಿರ್ಜನ ಪ್ರದೇಶಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಾರುತಿ ಸ್ವಿಫ್ಟ್ ಕಾರು ಅಲ್‌ಮಿಸ್ಬಾ ಕಾರ್ ರೆಂಟಲ್ ಕಂಪನಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಇದನ್ನೂ ಓದಿ | ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೆ ಮಹಿಳೆ ಕಾರಣ !
ಮನೆ ಬಾಡಿಗೆ ಪಡೆದದ್ದೇಕೆ?
ಇಬ್ಬರೂ ಮನೆಯನ್ನು ಬಾಡಿಗೆಗೆ ಪಡೆದ ಕೂಡಲೆ ಪೋಷಕರಿಗೆ ಮೆಸೇಜ್ ಮಾಡಿದ್ದಾರೆ. ಎಲ್ಲ ಮೆಸೇಜ್ ಇಂಗ್ಲಿಷ್‌ನಲ್ಲಿದೆ. ನಾವಿಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದೇವೆ ಎಂದು ಮೊದಲಿಗೆ ತಿಳಿಸಿದ್ದಾರೆ. ಕೆಲ ನಿಮಿಷದಲ್ಲೆ, ಆದರೂ ನಾವು ಸಂತೋಷವಾಗಿಲ್ಲ ಎಂದು ಸಂದೇಶ ಕಳಿಸಿದ್ದಾರೆ. ಮತ್ತೆ ಕೆಲವೇ ಸಮಯದಲ್ಲಿ ಇನ್ನೊಂದು ಸಂದೇಶ ಕಳಿಸಿದ್ದಾರೆ. ನಮ್ಮನ್ನು ಕ್ಷಮಿಸಿ, ನಾವು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಹಾಗಾದರೆ ಇಬ್ಬರೂ ಮನೆಯನ್ನು ಬಾಡಿಗೆ ಪಡೆದದ್ದು ಏಕೆ ಎಂಭ ಪ್ರಶ್ನೆ ಉದ್ಭವವಾಗಿದೆ. ಮನೆ ಮಾಡಿ ಜೀವಿಸುವ ಉದ್ದೇಶ ಹೊಂದಿದ್ದವರು ಇದ್ದಕ್ಕಿದ್ದಂತೆ ಆತ್ಮಹತ್ಯೆ ನಿರ್ಧಾರ ಮಾಡಲು ಕಾರಣ ಪೊಲೀಸ್ ತನಿಖೆ ನಂತರವಷ್ಟೆ ತಿಳಿಯಬೇಕಿದೆ.
ಲೊಕೇಷನ್ ರವಾನೆ
ನಾವು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂಬ ಕೊನೆಯ ಸಂದೇಶದ ನಂತರ, ಆತ್ಮಹತ್ಯೆ ಮಾಡಿಕೊಂಡ ಸ್ಥಳದ ಲೊಕೇಷನ್ನನ್ನೂ ಕಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಂತರ ಹುಡುಕಲು ಮನೆಯವರಿಗೆ ಕಷ್ಟವಾಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.
ಎಫ್‌ಎಸ್‌ಎಲ್ ಸಿಬ್ಬಂದಿ ಆಗಮನ
ಕಾರು ಸುಟ್ಟು ಭಸ್ಮವಾದ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಆಗಮಿಸಿದ್ದಾರೆ. ಸ್ಥಳದಲ್ಲಿ ಇಬ್ಬರೂ ಸುಟ್ಟುಹೋಗಲು ಯಾವ ದ್ರಾವಣವನ್ನು ಹಾಕಿಕೊಂಡಿದ್ದಾರೆ? ಎಲ್ಲಿಂದ ತಂದರು? ಎಂಬುದೂ ಸೇರಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹ ಮಾಡುತ್ತಿದ್ದಾರೆ.
ಇದನ್ನೂ ಓದಿ | Acid Attack | ಆ್ಯಸಿಡ್ ನಾಗೇಶ್ ಬಂಧನಕ್ಕೆ ಕೈಕೊಟ್ಟ Technology: ಪೊಲೀಸರ ಕೈಹಿಡಿದ ಓಲ್ಡ್ ಟೆಕ್ನಿಕ್