Site icon Vistara News

Union Budget 2023 : ನಿರೀಕ್ಷೆಯಂತೆ ಉದ್ಯೋಗ ಸೃಷ್ಟಿಯ ಗುರಿ, ಕೌಶಲ ಕಲಿಕೆಗೆ ಉತ್ತೇಜನ

Union Budget 2023

Union Budget 2023

ನವ ದೆಹಲಿ: ನಿರೀಕ್ಷೆಯಂತೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಬಜೆಟ್‌ನಲ್ಲಿ (Union Budget 2023) ಪ್ರಕಟಿಸಲಾಗಿರುವ ಮೂರು ಕಾರ್ಯಸೂಚಿಯಲ್ಲಿ ಉದ್ಯೋಗ ಸೃಷ್ಟಿಯೂ ಒಂದಾಗಿದೆ.

ಇದರ ಜತೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿಯೂ ಕೌಶಲ ಅಭಿವೃದ್ಧಿಗೆ ಉತ್ತೇಜನ ನೀಡಲಾಗಿದೆ. ದೇಶದ ಯುವಕರು ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳಲು ಸನ್ನದ್ಧರಾಗುವಂತೆ ನೋಡಿಕೊಳ್ಳಲು ದೇಶಾದ್ಯಂತ ಅಂತಾರಾಷ್ಟ್ರೀಯ ಮಟ್ಟದ 30 ಕೌಶಲ ತರಬೇತಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ, “ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ 4.0ʼʼ ಜಾರಿಯನ್ನು ಘೋಷಿಸಲಾಗಿದೆ.

ಸರ್ಕಾರವು ಬಂಡವಾಳ ವೆಚ್ಚವನ್ನು ಶೇ. 33ರಷ್ಟು ಹೆಚ್ಚಿಸಿದ್ದು, ಇದರಿಂದಾಗಿ ಉದ್ಯೋಗ ಸೃಷ್ಟಿಗೆ ಉತ್ತೇಜನ ದೊರೆಯಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಸತತ ಮೂರನೇ ಬಾರಿಗೆ ಬಂಡವಾಳ ವೆಚ್ಚವನ್ನು ಸರ್ಕಾರ ಹೆಚ್ಚಿಸಿದ್ದು, ಇದರಿಂದ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಹೆಚ್ಚುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿರುವುದರಿಂದ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಗಳಿವೆ. ದೇಶದ 50 ಪ್ರವಾಸಿ ತಾಣಗಳನ್ನು ಎಲ್ಲ ರೀತಿಯಲ್ಲಿಯೂ ಅಭಿವೃದ್ಧಿ ಪಡಿಸಿ, ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲಾಗುತ್ತದೆ. ಇದರಿಂದ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೂಡ ಬಜೆಟ್‌ನಲ್ಲಿ ಹೇಳಲಾಗಿದೆ.

ಕೌಶಲ ಹೊಂದಿದವರ ನೆರವಿಗೆ “ವಿಕಾಸ್‌ʼʼ
ಸಾಂಪ್ರದಾಯಿಕವಾಗಿ ವೃತ್ತಿ ಕೌಶಲ ಹೊಂದಿರುವವರ ನೆರವಿಗಾಗಿ “ಪಿಎಂ ವಿಕಾಸ್‌ʼʼ ಎಂಬ ಯೋಜನೆಯನ್ನು ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ” ಪಿಎಂ ವಿಕಾಸ್‌ʼʼ ಎಂದರೆ “ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ್‌ʼʼ ಎಂದು. ಮುಖ್ಯವಾಗಿ ಕೈಕುಶಲ ಕರ್ಮಿಗಳಾದ ವಿಶ್ವಕರ್ಮರ ನೆರವಿಗಾಗಿ ಈ ಯೋಜನೆ ರೂಪಿಸಲಾಗಿದ್ದು, ಈ ಯೋಜನೆಯಡಿ ಕುಶಲಕರ್ಮಿಗಳಿಗೆ ತಮ್ಮ ಗುಣಮಟ್ಟ ಹೆಚ್ಚಿಸಿಕೊಳ್ಳಲು, ಉತ್ಪನ್ನವನ್ನು ಮಾರಾಟ ಮಾಡಲು, ಇದನ್ನು MSME ಉತ್ಪನ್ನಗಳ ಮಾರಾಟ ಜಾಲದಲ್ಲಿ ಸೇರಿಸಲು ನೆರವು ಒದಗಿಸಲಾಗುತ್ತದೆ.
“ಇದೇ ಮೊದಲ ಬಾರಿಗೆ ಈ ರೀತಿಯ ಪ್ಯಾಕೇಜ್‌ ಒಂದನ್ನು ಜಾರಿಗೆ ತರಲಾಗುತ್ತಿದೆ. ಇದರಲ್ಲಿ ಕೇವಲ ಹಣಕಾಸಿನ ನೆರವು ಮಾತ್ರ ಇರುವುದಿಲ್ಲ. ಕುಶಲ ಕರ್ಮಿಗಳಿಗೆ ಅಗತ್ಯವಾಗಿರುವ ವೃತ್ತಿ ತರಬೇತಿ, ಆಧುನಿಕ ತಂತ್ರಜ್ಞಾನದ ಕುರಿತು ಮಾಹಿತಿ ಮತ್ತು ಬಳಕೆಯ ತರಬೇತಿ, ಬ್ರ್ಯಾಂಡ್‌ ಪ್ರಮೋಷನ್‌, ಸಾಮಾಜಿಕ ಭದ್ರತೆ ಒದಗಿಸುವುದು, ಡಿಜಿಟಲ್‌ ಪೇಮೆಂಟ್‌ ವ್ಯವಹಾರ ನಡೆಸಲು ತರಬೇತಿ ನೀಡುವುದು ಇತ್ಯಾದಿ ವಿಷಯಗಳನ್ನೂ ಒಳಗೊಂಡಿರುತ್ತದೆʼʼ ಎಂದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ಬಜೆಟ್‌ನಲ್ಲಿ ಹೇಳಿದ್ದಾರೆ. ಈ ಯೋಜನೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಹಾಗೂ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಾಂಪ್ರದಾಯಿಕ ಕರಕುಶಲ ಕರ್ಮಿಗಳಾಗಿ ಗುರುತಿಸಿಕೊಂಡಿರುವ ದೇಶದ ಸುಮಾರು 140 ಜಾತಿಯವರು ಇದರ ಫಲಾನುಭವಿಗಳಾಗಲಿದ್ದಾರೆ.

ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ-4.0 ಯೋಜನೆಯಡಿಯಲ್ಲಿ ಮುಂದಿನ ಮೂರು ವರ್ಷದಲ್ಲಿ ಈಗಿನ ಕೈಗಾರಿಕೆಗಳಿಗೆ ಅಗತ್ಯವಾಗಿರುವ ಕೌಶಲಗಳಾದ coding, AI, robotics, mechatronics, IOT, 3D printing, drones ಮತ್ತು ಸಾಫ್ಟ್‌ ಸ್ಕಿಲ್‌ ಕಲಿಸಲಾಗುತ್ತದೆ.

ಮುಂದಿನ ಮೂರು ವರ್ಷದಲ್ಲಿ ದೇಶದ 47 ಲಕ್ಷ ಯುವಕರಿಗೆ “ರಾಷ್ಟ್ರೀಯ ಅಪ್ರೆಂಟೀಸ್‌ಶಿಪ್ ಉತ್ತೇಜನ ಯೋಜನೆಯಡಿʼʼ ಸ್ಟೈಫೆಂಡ್‌ ನೀಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಸ್ಟೈಫೆಂಡ್‌ ಅನ್ನು ನೇರವಾಗಿ ಫಲಾನುಭವಿ ಯುವಕರ ಖಾತೆಗೆ ವರ್ಗಾಯಿಸಲಾಗುತ್ತದೆ.

ಬೇಡಿಕೆ ಆಧಾರಿತ ಔಪಚಾರಿಕ ಕೌಶಲವನ್ನು ಕಲಿಸಲು MSMEಗಳು ಸೇರಿದಂತೆ ಉದ್ಯೋಗದಾತರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಉದ್ಯಮಶೀಲತಾ ಯೋಜನೆಗಳಿಗೆ ಪ್ರವೇಶವನ್ನು ಸುಲಭಗೊಳಿಸಲು ಏಕೀಕೃತ ಸ್ಕಿಲ್ ಇಂಡಿಯಾ ಡಿಜಿಟಲ್ ವೇದಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಬಜೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇದನ್ನೂ ಓದಿ : Union Budget 2023: ದೇಶದ ಅಭಿವೃದ್ಧಿ ಪಥಕ್ಕೆ ಹೊಸ ಶಕ್ತಿ ತುಂಬುವ ಬಜೆಟ್​ ಇದು ಎಂದ ಪ್ರಧಾನಿ ಮೋದಿ

Exit mobile version