ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಜುಲೈ 23ರಂದು) 2024-2025ನೇ ಸಾಲಿನ ಕೇಂದ್ರ ಬಜೆಟ್ (Union Budget 2024) ಮಂಡಿಸಿದ್ದಾರೆ. ಇದರ ನಂತರ, ಹಲವಾರು ವಸ್ತುಗಳು ಗ್ರಾಹಕರಿಗೆ ಅಗ್ಗ ಮತ್ತು ದುಬಾರಿಯಾಗಿವೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಬಜೆಟ್ ಭಾರತದ ಆರ್ಥಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದೆ. ಮೂಲಸೌಕರ್ಯ ಅಭಿವೃದ್ಧಿಯಿಂದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳವರೆಗೆ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ.
ಮೊಬೈಲ್ ಫೋನ್ ಬೆಲೆಗಳು, ಚಿನ್ನ, ಬೆಳ್ಳಿ ಮತ್ತು ತಾಮ್ರದ ಬೆಲೆಗಳನ್ನು ಕಡಿಮೆ ಮಾಡಲು ಕಾರಣವಾಗುವ ಕ್ರಮಗಳನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ. ಈ ಕೆಳಗೆ ಅಗ್ಗ ಮತ್ತ ದುಬಾರಿಯಾಗಿರುವ ವಸ್ತುಗಳ ವಿವರ ಇಲ್ಲಿ ನೀಡಲಾಗಿದೆ.
ಬಜೆಟ್ ಬಳಿಕ ಬೆಲೆ ಇಳಿಕೆಯಾಗುವ ವಸ್ತುಗಳ ಪಟ್ಟಿ ಇಲ್ಲಿದೆ
- ಮೊಬೈಲ್ ಫೋನ್ಗಳು, ಮೊಬೈಲ್ ಚಾರ್ಜರ್ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 15ಕ್ಕೆ ಇಳಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದಾರೆ. ಹೀಗಾಗಿ ಇವುಗಳ ಬೆಲೆ ಇಳಿಕೆಯಾಗಲಿದೆ.
- ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 6 ಕ್ಕೆ ಮತ್ತು ಪ್ಲಾಟಿನಂ ಮೇಲಿನ ಸುಂಕವನ್ನು ಶೇಕಡಾ 6.4 ಕ್ಕೆ ಇಳಿಸಲಾಗಿದೆ. ಹೀಗಾಗಿ ದುಬಾರಿ ಲೋಹಗಳ ಬೆಲೆಯು ಕಡಿಮೆಯಾಗಲಿದೆ.
- ಕ್ಯಾನ್ಸರ್ ಚಿಕಿತ್ಸೆಯ ಮೂರು ಔಷಧಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಈ ಔಷಧಗಳು ಅಗತ್ಯ ಇರುವವರಿಗೆ ಕಡಿಮೆಗೆ ದೊರೆಯಲಿದೆ.
- ಸೌರ ಫಲಕಗಳ ತಯಾರಿಕೆಯಲ್ಲಿ ಬಳಸುವ ವಿನಾಯಿತಿ ಪಡೆದ ಬಂಡವಾಳ ಸರಕುಗಳ ಪಟ್ಟಿಯನ್ನು ವಿಸ್ತರಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. ಇದು ಸೌರ ವಿದ್ಯುತ್ ಆಧಾರಿತ ವಸ್ತುಗಳ ಬೆಲೆಯಲ್ಲಿ ಇಳಿಕೆ ಮಾಡಲಿದೆ.
- ಇ-ಕಾಮರ್ಸ್ ಮೇಲಿನ ಟಿಡಿಎಸ್ ದರವನ್ನು ಶೇಕಡಾ 1 ರಿಂದ 0.1 ಕ್ಕೆ ಇಳಿಸಲಾಗಿದೆ. ಹೀಗಾಗಿ ಇ ಕಾಮರ್ಸ್ ವಹಿವಾಟಿನಿಂದ ಜನರಿಗೆ ಆಗುತ್ತಿದ್ದ ಹೊರೆಯುವ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ.
- ಫೆರೋನಿಕ್ಕಲ್, ಬ್ಲಿಸ್ಟರ್ ತಾಮ್ರದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಲಾಗಿದೆ. ಈ ಎರಡು ಲೋಹಗಳು ಕಡಿಮೆಗೆ ದೊರೆಯಲಿವೆ.
ದುಬಾರಿಯಾದ ವಸ್ತುಗಳ ಪಟ್ಟಿ ಇಲ್ಲಿದೆ
- ಜೈವಿಕ ವಿಘಟನೀಯವಲ್ಲದ ಪ್ಲಾಸ್ಟಿಕ್ ಗಳ ಮೇಲೆ ಅಮೋನಿಯಂ ನೈಟ್ರೇಟ್ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 10ಕ್ಕೆ ಮತ್ತು ಶೇಕಡಾ 25ಕ್ಕೆ ಹೆಚ್ಚಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು. ಈ ಎರಡು ವಸ್ತುಗಳು ದೊಡ್ಡ ಪ್ರಮಾಣದಲ್ಲಿ ದುಬಾರಿ ಎನಿಸಿಕೊಳ್ಳಲಿವೆ.
- ನಿರ್ದಿಷ್ಟ ಟೆಲಿಕಾಂ ಉಪಕರಣಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 10 ರಿಂದ 15 ಕ್ಕೆ ಹೆಚ್ಚಿಸಲಾಗಿದೆ. ಇಂಥ ಉಪಕರಗಳ ಬೆಲೆ ಏಕಾಏಕಿ ಜಾಸ್ತಿಯಾಗಲಿದೆ.
ಹಣಕಾಸು ಸಚಿವರ ಇನ್ನಷ್ಟು ಯೋಜನೆಗಳ ಮಾಹಿತಿ ಇಲ್ಲಿದೆ
- ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಕ್ಯಾಮೆರಾ ಲೆನ್ಸ್ಗಳು ಸೇರಿದಂತೆ ವಿವಿಧ ಘಟಕಗಳ ಮೇಲಿನ ಆಮದು ತೆರಿಗೆಯನ್ನು ಕಡಿಮೆ ಮಾಡುವುದಾಗಿ ಹಣಕಾಸು ಸಚಿವರು ಬಜೆಟ್ನಲ್ಲಿ ಘೋಷಿಸಿದ್ದಾರೆ.
- ಫೋನ್ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾದ ಅಂಶವಾದ ಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲಿನ ತೆರಿಗೆ ದರವನ್ನು ಹಣಕಾಸು ಸಚಿವರು ಕಡಿತಗೊಳಿಸಿದ್ದರು. ಈ ನೀತಿ ಬದಲಾವಣೆಯು ಕಂಪನಿಗಳಿಗೆ ಭಾರತದಲ್ಲಿ ಫೋನ್ ಗಳನ್ನು ತಯಾರಿಸುವುದನ್ನು ಅಗ್ಗವಾಗಿಸುವ ಗುರಿಯನ್ನು ಹೊಂದಿದೆ.
- ಆರ್ಥಿಕ ಸಮೀಕ್ಷೆ 2024 ರ ಪ್ರಕಾರ ಭಾರತದ ಜಿಡಿಪಿ ಈ ವರ್ಷ 6.5-7% ನಡುವೆ ಬೆಳೆಯಬಹುದು ಮತ್ತು ಚಿಲ್ಲರೆ ಹಣದುಬ್ಬರವು 2023-24ರಲ್ಲಿ 5.4% ಕ್ಕೆ ಇಳಿದಿದೆ ಎಂದು ಹೇಳಿತ್ತು.
ಇದನ್ನೂ ಓದಿ: Union Budget 2024 : ಹೊಸ ಉದ್ದಿಮೆಗಳಿಗೆ ನೀಡುವ ಮುದ್ರಾ ಸಾಲದ ಮೊತ್ತ 10ರಿಂದ 20 ಲಕ್ಷ ರೂಪಾಯಿಗೆ ಏರಿಕೆ
ಕೇಂದ್ರ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕ ಭರ್ಜರಿ ಕೊಡುಗೆ; ಯಾರಿಗೆ ಎಷ್ಟು? ಇಲ್ಲಿದೆ ಮಾಹಿತಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್ನಲ್ಲಿ (Union Budget 2024) ಕೃಷಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ. ಗ್ರಾಮೀಣ ಪ್ರದೇಶದ ಕೃಷಿಕರು ಹಾಗೂ ಕೃಷಿ ಕ್ಷೇತ್ರವನ್ನು ನಂಬಿಕೊಂಡಿರುವ ಕೋಟ್ಯಂತರ ನಾಗರಿಕರ ಒಳಿತಿಗಾಗಿ ಅವರು ದೊಡ್ಡ ಪ್ರಮಾಣದ ಕೊಡುಗೆಗಳನ್ನು ಘೋಷಿಸಿದ್ದಾರೆ. ಅವುಗಳ ವಿವರ ಇಲ್ಲಿದೆ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂಪಾಯಿ ಘೋಷಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ದೇಶಾದ್ಯಂತ 10,000 ಜೈವಿಕ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್ನಲ್ಲಿ ಭರವಸೆ ನೀಡಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ, 1 ಕೋಟಿ ರೈತರನ್ನು ಬ್ರ್ಯಾಂಡಿಂಗ್ ಮತ್ತು ಪ್ರಮಾಣೀಕರಣ ನೀಡುವ ಮೂಲಕ ನೈಸರ್ಗಿಕ ಕೃಷಿಗೆ ಪ್ರೇರಣೆ ನೀಡಲಾಗುವುದು ಎಂದು ಅವರು ಬಜೆಟ್ನಲ್ಲಿ ಹೇಳಿದ್ದಾರೆ.
ತರಕಾರಿ ಬೆಳೆಗಳನ್ನು ಜೀವನಾಧಾರವಾಗಿ ಮಾಡಿಕೊಂಡಿರುವ ರೈತರಿಗೆ ಅನುಕೂಲಕ ಮಾಡಿಕೊಡುವ ನಿಟ್ಟಿನಲ್ಲಿ
ತರಕಾರಿ ಉತ್ಪಾದನೆ ಮತ್ತು ಪೂರೈಕೆ ಸರಪಳಿ ನಿರ್ಮಿಸುವ ಯೋಜನೆ ಪ್ರಕಟಿಸಿದ್ದಾರೆ. ಅದೇ ರೀತಿ ಮಾರುಕಟ್ಟೆಗೆಳ ಕೇಂದ್ರಗಳ ಹತ್ತಿರ ದೊಡ್ಡ ಕ್ಲಸ್ಟರ್ಗಳನ್ನು ನಿರ್ಮಿಸುವ ಭರವಸೆಯನ್ನು ಕೊಟ್ಟಿದ್ದಾರೆ.
ಮೀನು ಸಾಕಣದಾರರ ಅಭಿವೃದ್ಧಿಗಾಗಿ ಸಿಗಡಿ ಸಂತಾನೋತ್ಪತ್ತಿ ಕೇಂದ್ರಗಳಿಗೆ ಆರ್ಥಿಕ ನೆರವು ನೀಡಲಾಗುವುದ ಎಂದು ಹಣಕಾಸು ಸಚಿವರು ಭರವಸೆ ಕೊಟ್ಟಿದ್ದಾರೆ. ಅದೇ ರೀತಿ ನಬಾರ್ಡ್ ಮೂಲಕ ಸಿಗಡಿಗಳ ರಫ್ತಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.