ತುಮಕೂರು: ಕೇಂದ್ರದ ಎನ್ಡಿಎ ಸರ್ಕಾರದಲ್ಲಿ ಜಲಶಕ್ತಿ ರಾಜ್ಯ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ವಿ. ಸೋಮಣ್ಣ (V Somanna) ಅವರು ತಮ್ಮ ಸ್ವಕ್ಷೇತ್ರ ತುಮಕೂರಿಗೆ ಶುಕ್ರವಾರ ಮೊದಲ ಬಾರಿ ಆಗಮಿಸಿದ್ದರು. ಈ ವೇಳೆ ಶಿಷ್ಟಾಚಾರ ಉಲ್ಲಂಘಿಸಿ ಸ್ಥಳದಲ್ಲಿ ಹಾಜರಿರದ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಸೋಮಣ್ಣ ಅವರದ್ದು ಪೂರ್ವ ನಿಗದಿತ ಭೇಟಿಯಾಗಿದ್ದರೂ ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಓ ಪ್ರಭು ಅವರು ಸ್ಥಳದಲ್ಲಿ ಹಾಜರಿರಲಿಲ್ಲ. ಬದಲಾಗಿ ಸೋಮಣ್ಣ ಸ್ವಾಗತಕ್ಕೆ ಸಹಾಯಕ ಆಯುಕ್ತರನ್ನು ಕಳುಹಿಸಿದ್ದರು. ಅವರಿಬ್ಬರೂ ಜಿಲಾಸ್ತುವಾರಿ ಸಚಿವ ಜಿ.ಪರಮೇಶ್ವರ್ ಪ್ರವಾಸದ ಕಾರ್ಯಕ್ರಮಗಳಿಗೆ ಹಾಜರಾಗಲು ಹೋಗಿದ್ದರು. ಅವರಿಬ್ಬರ ನಡೆಯಿಂದ ಕೆಂಡಾಮಂಡಲರಾದ ಸೋಮಣ್ಣ ಫೋನ್ ಮೂಲಕವೇ ತರಾಟೆಗೆ ತೆಗೆದುಕೊಂಡಿದ್ದಾರೆ. ವಿವಾದ ಮಾಡಿಕೊಳ್ಳಲು ಹೋಗಬೇಡಿ. ಸ್ಥಳದಲ್ಲಿ ಹಾಜರಿದ್ದು ಜನರ ಸಮಸ್ಯೆಗೆ ಕಿವಿಯಾಗಬೇಕು. ಇಲ್ಲದಿದ್ದರೆ ಜನವೇ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಕಲುಷಿತ ನೀರು ಸೇವನೆಯಿಂದ ವಾಂತಿ- ಭೇದಿ ಉಂಟಾಗಿ ಆಸ್ಪತ್ರೆಗೆ ದಾಖಲಾಗಿ ಮಧುಗಿರಿ ತಾಲೂಕಿನ ಸಂತ್ರಸ್ತರನ್ನು ಭೇಟಿಯಾದ ಸೋಮಣ್ಣ ಅವರು ಸಾಂತ್ವನ ಹೇಳಿದರು. ಈ ವೇಳೆಯೂ ಈ ವೇಳೆ ಸ್ಥಳದಲ್ಲಿ ಜಿಲ್ಲಾಧಿಕಾರಿ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಡಿಸಿ ಶುಭಕಲ್ಯಾಣ್, ಸಿಇಓ ಪ್ರಭುಗೆ ಪೋನ್ ಮಾಡಿ ವಿಚಾರಿಸಿದರು. ಪರಿಹಾರ ಹೇಳಲು ಇಲ್ಲಿ ಯಾರೂ ಇಲ್ಲ. ಜಿಲ್ಲಾ ಆರೋಗ್ಯ ಅಧಿಕಾರಿಗೂ ಕುಡಿಯುವ ನೀರಿನ ಸಮಸ್ಯೆಗೆ ಏನು ಸಂಬಂಧ. ನೀರು ಕೊಡೋರು ಯಾರು ಎಂದು ಪ್ರಶ್ನಿಸಿದರು.
ಜಿಲ್ಲಾಸ್ಪತ್ರೆಗೆ ನಾನು ಬಂದರೆ ಕೇಳುವುದಕ್ಕೆ ಗತಿಯಿಲ್ಲ. ನನಗೂ ನನ್ನದೇ ಆದಂತಹ ಜವಬ್ದಾರಿಯಿದೆ. ಇಲ್ಲಿ ಒಬ್ಬ ಅಧಿಕಾರಿಯೂ ಇಲ್ಲ. ಸ್ಥಳದಲ್ಲಿ ನೀವು ಇರಬೇಕಿತ್ತು. ಎಲ್ಲೆಲ್ಲಿಗೂ ಹೋಗಿ ನನಗೆ ಟೋಪಿ ಹಾಕಬೇಡಿ. ನಾನು ಎಂಪಿಯಾಗಿ ಆಸ್ಪತ್ರೆಗೆ ಬಂದಿದ್ದೇನೆ. ನಿಮ್ಮ ಯಾವ ಅಧಿಕಾರಿಯೂ ಇಲ್ಲ ಇಲ್ಲ. ಒಬ್ಬ ವೈದ್ಯರು ಇಲ್ಲ. ಜನರಿಗೆ ಮೋಸ ಮಾಡಿದರೆ ಅವರೂ ಪಾಠ ಕಲಿಸುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ಸಂತ್ರಸ್ತರಿಗೆ ಸಾಂತ್ವನ
ಕಲುಷಿತ ನೀರು ಕುಡಿದು ಚನ್ನೆನಹಳ್ಳಿ ಗ್ರಾಮದ ಜನರಿಗೆ ಸಚಿವ ಸೋಮಣ್ಣ ಆಸ್ಪತ್ರೆಯಲ್ಲಿ ಸಾಂತ್ವನ ಹೇಳಿದರು. ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರಿಗೆ ಸಾಂತ್ವನ ಹೇಳಿದರು. ವಿ.ಸೋಮಣ್ಣಗೆ ಜಿಲ್ಲಾ ಆರೋಗ್ಯಧಿಕಾರಿ ಓ ಡಾ ಮಂಜುನಾಥ್, ಶಾಸಕ ಜಿ.ಬಿ ಜ್ಯೋತಿ ಗಣೇಶ್, ಸುರೇಶ್ ಗೌಡ ಸಾಥ್ ಕೊಟ್ಟರು.
ಸಿದ್ದಗಂಗಾ ಮಠಕ್ಕೆ ಭೇಟಿ: ತುಮಕೂರಿಗೆ ಆಗಮಿಸಿದ್ದ ಸೋಮಣ್ಣ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ನನ್ನನ್ನ ಎನ್ ಡಿಎ ಸರ್ಕಾರದ ಸಚಿವನನ್ನಾಗಿ ಮಾಡಿದ್ದಾರೆ, ಇದಕ್ಕಾಗಿ ಪ್ರಧಾನಿ ಹಾಗೂ ಗೃಹ ಸಚಿವರಿಗೆ ಧನ್ಯವಾದಗಳು. ಜೊತೆಗೆ ಮಾಜಿ ಪ್ರಧಾನಿ ದೇವೇಗೌಡರಿಗೆ ಧನ್ಯವಾದ ಹೇಳುತ್ತೇನೆ. ಇಂದು ತುಮಕೂರು ಜಿಲ್ಲೆಯ ಸ್ವಾಮಿಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇವೆ ಎಂದು ಹೇಳಿದರು.
ಮಧುಗಿರಿಯಲ್ಲಿ ಕಲುಷಿತ ನೀರು ಕುಡಿದು ಸಾವನಪ್ಪಿದ್ದಾರೆ. ಇದು ನಡೆಯಬಾರದಿತ್ತು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿಯಿಂದ ವರದಿ ಪಡೆಯುತ್ತೇನೆ. ನಾನೂ ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸುವುದಾಗಿ ಹೇಳಿದರು.
ಇದನ್ನೂ ಓದಿ: CM Award : ಕಳಂಕಿತ ಡಿವೈಎಸ್ಪಿಜಾವೀದ್ಗೆ ಸಿಎಂ ಪದಕ ನೀಡುವಂತೆ ಶಿಫಾರಸು; ಶಾಸಕ ಕಂದಕೂರ ವಿರೋಧ
ನನಗೆ ಕೊಟ್ಟ ಖಾತೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಪ್ರಧಾನಿ ಮೋದಿ ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ. ಎನ್ ಡಿಎ ಒಕ್ಕೂಟದಿಂದ ರಾಷ್ಟ್ರದ ಎರಡು ಉಪಯುಕ್ತವಾದ ಜವಾಬ್ದಾರಿಗಳನ್ನು ನನಗೆ ನೀಡಿದ್ದಾರೆ. ಇಲಾಖೆಯನ್ನು ಅರ್ಥಮಾಡ್ಕೊಂಡು ನನ್ನ 45 ವರ್ಷದ ರಾಜಕೀಯ ಅನುಭವ ಬಳಸಿಕೊಂಡು ಕೆಲಸ ಮಾಡುವೆ ಎಂದು ಹೇಳಿದರು.
ಭಾನುವಾರ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಎರಡು ಪಕ್ಷದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ ಎಂದು ನುಡಿದರು.