Site icon Vistara News

UP Accident : ಉತ್ತರ ಪ್ರದೇಶದ ಉನ್ನಾವೊ ಬಳಿ ಹಾಲಿನ ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಬಸ್​; 18 ಮಂದಿ ಸಾವು, ಹಲವರಿಗೆ ಗಾಯ

UP Accident

ಲಖನೌ: ಉತ್ತರ ಪ್ರದೇಶದ ಉನ್ನಾವೊದ ಆಗ್ರಾ-ಲಕ್ನೋ ಎಕ್ಸ್​ಪ್ರೆಸ್​ವೇನಲ್ಲಿ ಬುಧವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. (UP Accident) ದೆಹಲಿಗೆ ತೆರಳುತ್ತಿದ್ದ ಡಬಲ್ ಡೆಕ್ಕರ್ ಬಸ್ ಹಾಲಿನ ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಪರಿಣಾಮ 18 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಗಾಯಗೊಂಡ ಎಲ್ಲರನ್ನು ಹೊರತೆಗೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತಪಟ್ಟವರ ಗುರುತು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಬಸ್ ಬಿಹಾರದ ಸೀತಾಮರ್ಹಿಯಿಂದ ದೆಹಲಿ ಕಡೆಗೆ ಸಾಗುತ್ತಿತ್ತು. ವೇಗವಾಗಿ ಸಾಗುತ್ತಿದ್ದ ಬಸ್​​ ಹಾಲಿನ ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಕಾರಣ ಬಸ್​ ನಜ್ಜುಗುಜ್ಜಾಗಿದೆ. ಪ್ರಯಾಣಿಕರ ದೇಹಗಳು ಆಘಾತಕ್ಕೆ ಚಿಂದಿಯಾಗಿವೆ.

ಪೊಲೀಸರು ಮತ್ತು ಇತರ ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹೊರತೆಗೆಯಲು ಮತ್ತು ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ. ಘಟನಾ ಸ್ಥಳದ ದೃಶ್ಯಗಳು ಭೀಕವಾಗಿವೆ. ನೆಲದ ಮೇಲೆ ಹರಡಿರುವ ದೇಹಗಳು, ತುಂಡಾದ ಲೋಹದ ಚೂರುಗಳು, ಚೂರುಚೂರಾದ ಗಾಜು ರಸ್ತೆಯುದ್ದಕ್ಕೂ ಹರಡಿವೆ.

ಅಪಘಾತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತದಲ್ಲಿ ಆದ ಪ್ರಾಣಹಾನಿ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. “ದುಃಖಿತ ಕುಟುಂಬಗಗಳ ಬಗ್ಗೆ ಸಂತಾಪವಿದೆ. ಸ್ಥಳದಲ್ಲಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು ಜಿಲ್ಲಾ ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Hit And Run Case : ಮಹಾರಾಷ್ಟ್ರದಲ್ಲಿ ಮತ್ತೊಂದು ಹಿಟ್ ಆ್ಯಂಡ್​​ ರನ್ ಪ್ರಕರಣ; ಮಹಿಳೆ ಸಾವು

ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಅವರು ಅಪಘಾತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಸೂಚನೆ ನೀಡಿದ್ದಾರೆ.

ಉನ್ನಾನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರಂಗ್ ರಾಠಿ ಮಾತನಾಡಿ, “ಬುಧಾರ ಬೆಳಿಗ್ಗೆ 05.15 ರ ಸುಮಾರಿಗೆ ಬಿಹಾರದ ಮೋತಿಹಾರಿಯಿಂದ ಬರುತ್ತಿದ್ದ ಖಾಸಗಿ ಬಸ್ ಹಾಲಿನ ಟ್ಯಾಂಕರ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 18 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 19 ಜನರು ಗಾಯಗೊಂಡಿದ್ದಾರೆ. ಪ್ರಾಥಮಿಕ ತನಿಖೆಯ ನಂತರ, ಬಸ್ ಅತಿಯಾದ ವೇಗದಲ್ಲಿತ್ತು ಎಂದು ಕಾಣುತ್ತದೆ . ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಂದು ಹೇಳಿದ್ದಾರೆ.

Exit mobile version