Site icon Vistara News

UPSC Results 2023: ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್‌ ಆದ ಪೊಲೀಸ್‌ ಅಧಿಕಾರಿ!

UPSC Results 2023

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ನಾಗರಿಕ ಸೇವೆಗಳ ಅಂತಿಮ ಪರೀಕ್ಷೆ 2023ರ ಫಲಿತಾಂಶ ಪ್ರಕಟಿಸಿದ್ದು, ಒಟ್ಟು 1,016 ಅಭ್ಯರ್ಥಿಗಳ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಈ ಪೈಕಿ ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಳ್ಳಾರಿಯ ಶಾಂತಪ್ಪ ಕುರುಬರ್ (ಶಾಂತಪ್ಪ ಜಡೆಮ್ಮನವರ್‌) ಅವರು ನಾಗರಿಕ ಸೇವೆಗೆ (UPSC Results 2023) ಆಯ್ಕೆಯಾಗಿದ್ದು, ಇವರು ಕನ್ನಡದಲ್ಲೇ ಪರೀಕ್ಷೆ ಬರೆದು ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಶಾಂತಪ್ಪ ಕುರುಬರ್ ಬಳ್ಳಾರಿಯಿಂದ ಬೆಂಗಳೂರಿಗೆ ವಲಸೆ ಬಂದು ವಿದ್ಯಾಭ್ಯಾಸ ಮಾಡಿದ್ದಾರೆ. ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಇವರು ಪಿಯುಸಿಯಲ್ಲಿ ಫೇಲ್‌ ಆಗಿದ್ದರೂ ಛಲ ಬಿಡದೇ ನಿರಂತರ ಅಧ್ಯಯನದೊಂದಿಗೆ ಪಿಎಸ್‌ಐ ಆಗಿ ನೇಮಕವಾಗಿದ್ದರು. ಇದೀಗ ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದಿದ್ದಾರೆ.

ಕರ್ತವ್ಯದ ಜತೆಗೆ ಸಮಾಜಮುಖಿ ಕಾರ್ಯ

ಶಾಂತಪ್ಪ ಕುರುಬರ್ ಅವರು ಪೊಲೀಸ್‌ ಆಗಿ ಕೆಲಸ ನಿರ್ವಹಿಸುತ್ತಲೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಬೆಂಗಳೂರಿನ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕರಿಗಾಗಿ 10 ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ ಮಾಡಿದ್ದಾರೆ. ಇವರು ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ ಮಾಡಲು ಕಾರಣ ಅವರ ತಾಯಿ. ಈ ಮಾರ್ಗದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ತಾಯಿ ಶೌಚಾಲಯಕ್ಕೆ ಹೋಗಬೇಕು ಎಂದಿದ್ದರು. ಆಗ ಹತ್ತಿರದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಶೌಚಕ್ಕೆ ಹೋಗಲು ತೊಂದರೆಯಾಗಿತ್ತು. ಇದರಿಂದ ತಮ್ಮ ತಾಯಿಗಾದ ಕಷ್ಟ ಯಾರಿಗೂ ಆಗಬಾರದು ಎಂದು ಸಾರ್ವಜನಿಕರಿಗೆ ನೆರವಾಗಲು ಮೊಬೈಲ್‌ ಟಾಯ್ಲೆಟ್‌ಗಳ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ | UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್‌ ರ‍್ಯಾಂಕ್;‌ ಯಾರಿವರು?

ಪಿಯುಸಿ ಅನುತ್ತೀರ್ಣವಾಗಿದ್ದ ಶಾಂತಪ್ಪ ಕುರುಬರ್

ಯುಪಿಎಸ್‌ಸಿ ಫಲಿತಾಂಶದ ಬಗ್ಗೆ ಪಿಎಸ್‌ಐ ಶಾಂತಪ್ಪ ಕುರುಬರ್ ಪ್ರತಿಕ್ರಿಯಿಸಿ, ಕನ್ನಡದಲ್ಲಿ ಪರೀಕ್ಷೆ ಬರೆಯುವುದು ಎಂದರೆ ತುಂಬಾ ಕಷ್ಟ. ಪಿಯುಸಿ ಅನುತ್ತೀರ್ಣವಾಗಿದ್ದೆ, ಆಗ ಊರಿನಲ್ಲಿ ಜನ ಅಡಿಕೊಂಡಿದ್ದರು. ಅಗ ತೀರ್ಮಾನ ಮಾಡಿ ಓದಲು ಮುಂದೆ ಬಂದೆ. ನಂತರ ಸಬ್ ಇನ್ ಸ್ಪೆಕ್ಟರ್ ಆದೆ. ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದೆ. ಈಗ ವಿಧಾನಸೌಧ ಭದ್ರತಾ ವಿಭಾಗದಲ್ಲಿ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.

ಬೆಂಗಳೂರಿನ ಅಚಾರ್ಯ ಐಎಎಸ್ ಕೋಚಿಂಗ್ ಸೆಂಟರ್‌ನ 3 ವಿದ್ಯಾರ್ಥಿಗಳು ಪಾಸ್‌

ಶಾಂತಪ್ಪ ಕುರುಬರ್, ಭರತ್ ಸಿ ಯಾರಮ್ ಹಾಗೂ ಭಾನು ಪ್ರಕಾಶ್

ಯೂಪಿಎಸ್‌ಸಿ ಪರೀಕ್ಷೆಯಲ್ಲಿ ಬೆಂಗಳೂರಿನ ಅಚಾರ್ಯ ಐಎಎಸ್ ಕೋಚಿಂಗ್ ಸೆಂಟರ್‌ನ ಮೂವರು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಬಳ್ಳಾರಿಯ ಶಾಂತಪ್ಪ ಕುರುಬರ್ (644 ರ‍್ಯಾಂಕ್‌), ಮೈಸೂರಿನ ಭಾನು ಪ್ರಕಾಶ್ (600 ರ‍್ಯಾಂಕ್‌), ಶಿವಮೊಗ್ಗ ಭರತ್ ಸಿ ಯಾರಮ್ (667 ರ‍್ಯಾಂಕ್‌) ಉತ್ತೀರ್ಣರಾದವರು.

ಶಾಂತಪ್ಪ ಕುರುಬರ್ ಬಳ್ಳಾರಿಯಿಂದ ಬೆಂಗಳೂರಿಗೆ ವಲಸೆ ಬಂದು ವಿದ್ಯಾಭ್ಯಾಸ ಮಾಡಿದ್ದಾರೆ. ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಇವರು ಪಿಯುಸಿಯಲ್ಲಿ ಫೇಲ್‌ ಆಗಿದ್ದರೂ ಛಲ ಬಿಡದೇ ನಿರಂತರ ಅಧ್ಯಯನದೊಂದಿಗೆ ಪಿಎಸ್‌ಐ ಆಗಿ ನೇಮಕವಾಗಿದ್ದರು. ಇದೀಗ ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದಿದ್ದಾರೆ.

ಭಾನು ಪ್ರಕಾಶ್ ಅವರು ಮೂಲತಃ ಮೈಸೂರಿನವರಾಗಿದ್ದು, ಕಳೆದ ಬಾರಿ ಐಪಿಎಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು.
ಮತ್ತೆ ಐಎಎಸ್ ಮಾಡುವ ಕನಸಿನೊಂದಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಈ ಬಾರಿ 600ನೇ ರ‍್ಯಾಂಕ್‌ ಪಡೆದಿದ್ದಾರೆ.

ಭರತ್ ಸಿ ಯಾರಮ್ ಅವರು ಶಿವಮೊಗ್ಗ ಮೂಲದವರಾಗಿದ್ದು, ನಾಲ್ಕನೇ ಬಾರಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದು, ಇವರು 667 ರ‍್ಯಾಂಕ್‌ ಪಡೆದಿದ್ದಾರೆ.

2023ರ ಸೆಪ್ಟೆಂಬರ್ 15, 16, 17, 23 ಮತ್ತು 24ರಂದು ನಡೆದ ಪರೀಕ್ಷೆಗಳಲ್ಲಿ ನಾಗರಿಕ ಸೇವೆಗಳ ಮುಖ್ಯ ಸಂದರ್ಶನ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸೇವಾ ಆಯೋಗವು 2024ರ ಮೊದಲ ಎರಡು ತಿಂಗಳುಗಳಲ್ಲಿ ಸಂದರ್ಶಿಸಿತು.

ಇದನ್ನೂ ಓದಿ | UPSC Results 2023: ಕೋಚಿಂಗ್‌ ಇಲ್ಲದೆ ಓದಿದ ಅನನ್ಯಾ ರೆಡ್ಡಿಗೆ ಯುಪಿಎಸ್‌ಸಿಯಲ್ಲಿ 3ನೇ ರ‍್ಯಾಂಕ್!

2023ರ ಸೆಪ್ಟೆಂಬರ್‌ನಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ನಾಗರಿಕ ಸೇವೆಗಳ ಲಿಖಿತ ಪರೀಕ್ಷೆಯ ಫಲಿತಾಂಶ ಮತ್ತು 2024ರ ಜನವರಿ- ಏಪ್ರಿಲ್‌ಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳ ಆಧಾರದ ಮೇಲೆ ಒಟ್ಟು 1,016 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳಲ್ಲಿ ಗುಂಪು ʼಎʼ ಮತ್ತು ಗುಂಪು ʼಬಿʼ ಹುದ್ದೆಗಳಿಗೆ ಇವರು ನಿಯುಕ್ತರಾಗುತ್ತಾರೆ.

Exit mobile version