Site icon Vistara News

Gyanvapi Mosque : ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೂ ಪೂಜೆಗೆ ಅವಕಾಶ ನೀಡಿದ ಕೋರ್ಟ್!

Gyanvapi Mosque

ವಾರಾಣಸಿ : ಕಾಶಿ ವಿಶ್ವನಾಥ ದೇಗುಲದ ಸನಿಹ ಇರುವ ಜ್ಞಾನವಾಪಿ ಮಸೀದಿ (Gyanvapi Mosque) ಆವರಣದಲ್ಲಿ ಹಿಂದೂಗಳು ಕೂಡ ಪೂಜೆ ಮಾಡಬಹುದು ಎಂದು ವಾರಾಣಸಿ ಜಿಲ್ಲಾ ಕೋರ್ಟ್​ ಆದೇಶ ನೀಡಿದೆ. ಈ ಪ್ರಕರಣವು ಮಸೀದಿ ಆವರಣದಲ್ಲಿರುವ ಸೋಮನಾಥ ವ್ಯಾಸ್ ನೆಲಮಾಳಿಗೆಗೆ ಸಂಬಂಧಿಸಿದ್ದಾಗಿದೆ. ಸೋಮನಾಥ್​ ಅವರ ಕುಟುಂಬವು 1993ರವರೆಗೆ ಇಲ್ಲಿ ಪೂಜೆ ಸಲ್ಲಿಸುತ್ತಿತ್ತು. ರಾಜ್ಯ ಸರ್ಕಾರದ ಆದೇಶದ ನಂತರ ನೆಲಮಾಳಿಗೆಯಲ್ಲಿ ಪೂಜೆ ನಿಲ್ಲಿಸಲಾಗಿತ್ತು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಮಸೀದಿ ಆವರಣದಲ್ಲಿ ನಡೆಸಿದ ವೈಜ್ಞಾನಿಕ ಸಮೀಕ್ಷೆಯ ಸಮಯದಲ್ಲಿ ನೆಲಮಾಳಿಗೆಯನ್ನು ಸ್ವಚ್ಛಗೊಳಿಸಲಾಗಿದೆ. ಜನವರಿ 17 ರಂದು ವ್ಯಾಸ್ ಅವರ ನೆಲಮಾಳಿಗೆಯನ್ನು ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿತ್ತು. ಇದೀಗ ಕೋರ್ಟ್​ ಆದೇಶ ಹಿಂದೂಗಳ ಪರ ಬಂದಿದೆ.

ಏಳು ದಿನಗಳಲ್ಲಿ ಪೂಜೆ ಪ್ರಾರಂಭವಾಗಲಿದೆ. ಪ್ರತಿಯೊಬ್ಬರಿಗೂ ಪೂಜೆ ಮಾಡುವ ಹಕ್ಕಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಅಂಜುಮನ್ ಇಂತೆಜಾಮಿಯಾ ಮಸ್ಜಿದ್​ ಸಮಿತಿಯ ವಕೀಲ ಅಖ್ಲಾಕ್ ಅಹ್ಮದ್ ಅವರು ಈ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ : Gyanvapi mosque case: ಜ್ಞಾನವಾಪಿ ಮಸೀದಿಯ ಪುರಾತತ್ವ ಸರ್ವೇ ವರದಿ ಬಹಿರಂಗಕ್ಕೆ ಕೋರ್ಟ್ ಒಪ್ಪಿಗೆ

ಮಸೀದಿ ನಿರ್ಮಾಣಕ್ಕೂ ಮೊದಲುಇಲ್ಲಿ ದೊಡ್ಡ ಹಿಂದೂ ದೇವಾಲಯ ಅಸ್ತಿತ್ವದಲ್ಲಿತ್ತು ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ವರದಿ ಹೇಳಿದ ನಂತರ ಮಸೀದಿಯ ಮುಚ್ಚಿದ ಭಾಗದಲ್ಲಿ ಉತ್ಖನನ ಮತ್ತು ವೈಜ್ಞಾನಿಕ ಸಮೀಕ್ಷೆ ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅದಾದ ಒಂದು ದಿನದ ನಂತರ ಜಿಲ್ಲಾ ನ್ಯಾಯಾಲಯದ ಆದೇಶ ಬಂದಿದೆ. ಮಸೀದಿ ಬಳಿ ವಿವಾದಿತ ರಚನೆಯಿದೆ. ಅದನ್ನು ಹಿಂದೂಗಳು ಶಿವಲಿಂಗ ಎಂದು ಹೇಳುತ್ತಿದ್ದಾರೆ. ಆದರೆ, ಇದು ಪ್ರಾರ್ಥನಾ ಕೊಳದ ಭಾಗವಾಗಿದೆ ಎಂದು ಮುಸ್ಲಿಂ ಸಮುದಾಯದವರು ಹೇಳುತ್ತಿದ್ದಾರೆ.

ಶಿವಲಿಂಗದ ಸುತ್ತಲಿನ ಆಧುನಿಕ ಗೋಡೆಗಳು ಮತ್ತು ಮಹಡಿಗಳನ್ನು ತೆಗೆದುಹಾಕಿದ ನಂತರ ವಸ್ತುವಿಗೆ ಯಾವುದೇ ಹಾನಿಯಾಗದಂತೆ ಉತ್ಖನನ ಮಾಡಬೇಕು. ಶಿವಲಿಂಗದ ಸ್ವರೂಪ ಮತ್ತು ಸಂಬಂಧಿತ ವೈಶಿಷ್ಟ್ಯಗಳನ್ನು ನಿರ್ಧರಿಸಲು ವೈಜ್ಞಾನಿಕ ವಿಧಾನಗಳನ್ನು ಬಳಸಲು ಎಎಸ್ಐಗೆ ನಿರ್ದೇಶಿಸಬೇಕು ಎಂದು ಎಂದು ಅರ್ಜಿದಾರರು ಮನವಿ ಮಾಡಿದ್ದರು.

Exit mobile version