Site icon Vistara News

Vastu For Money: ದುಡಿದ ದುಡ್ಡು ನಿಮ್ಮ ಕೈಯಲ್ಲೇ ಉಳಿಯಬೇಕೆ? ಈ ಸರಳ ವಾಸ್ತು ಸೂತ್ರ ಪಾಲಿಸಿ

Vastu For Money

ಹಣ ಜೀವನದಲ್ಲಿ ಅತಿ ಮುಖ್ಯ. ಹಣದ (Vastu for money) ಮೇಲೆ ಯಾರಿಗೆ ತಾನೆ ಆಸೆ ಇರುವುದಿಲ್ಲ ಹೇಳಿ. ಆದರೆ ಅದು ಅಸ್ಥಿರ. ಇಂದು ಇರುವ ಹಣ ನಾಳೆ ಇಲ್ಲದಾಗಬಹುದು. ಇಂದು ಕಡುಬಡತನದಲ್ಲಿ ಬೇಯುತ್ತಿರುವವರು ನಾಳೆ ಕೋಟ್ಯಧಿಪತಿಯೂ ಆಗಬಹುದು. ಹೀಗೆ ಯಾರಿಗೆ ಯಾವಾಗ ಅದೃಷ್ಟ ಕುದುರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಈ ಹಣ, ಆರ್ಥಿಕ ಸ್ಥಿರತೆ ಮೇಲೆ ವಾಸ್ತು ಶಾಸ್ತ್ರವೂ ಪ್ರಭಾವ ಬೀರುತ್ತದೆ. ನಮ್ಮ ಮನೆಯಲ್ಲಿ ನಾವು ಅನುಸರಿಸುವ ಸಣ್ಣ ಸಣ್ಣ ಸೂತ್ರಗಳು ಹಣಕಾಸಿನ ಹರಿವಿನ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನೇ ಬೀರಬಲ್ಲದು. ಹಣಕಾಸಿನ ಮೇಲೆ ವಾಸ್ತು ಶಾಸ್ತ್ರ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.

ನಕಾರಾತ್ಮಕತೆ ದೂರ ಮಾಡಬೇಕು

ವಾಸ್ತು ಶಾಸ್ತ್ರದ ಪ್ರಕಾರ ಪಂಚಭೂತಗಳಾದ ಬೆಂಕಿ, ನೀರು, ಭೂಮಿ, ಗಾಳಿ ಮತ್ತು ಬಾಹ್ಯಾಕಾಶ ಸಮತೋಲನದಲ್ಲಿರಬೇಕು. ಇದರಲ್ಲಿ ಯಾವುದೇ ಸಮತೋಲನ ತಪ್ಪಿದರೆ ಮನುಷ್ಯನ ಮೇಲೆ ನಕಾರಾತ್ಮಕತೆ ಶುರುವಾಗುತ್ತದೆ. ಹಾಗಾದಾಗ ಒಮ್ಮೆ ನೀವು ವಾಸ್ತು ಶಾಸ್ತ್ರವನ್ನು ಸರಿಯಾದ ರೀತಿಯಲ್ಲಿ ಅನುಸರಿಸಲು ಆರಂಭಿಸಿದರೆ ಕ್ರಮೇಣವಾಗಿ ನೀವು ನಕಾರಾತ್ಮಕತೆಯನ್ನು ದೂರ ಸರಿಸಬಹುದು. ಹಾಗೆಯೇ ಜೀವನದಲ್ಲಿ ಸಂತೋಷ, ಸಮೃದ್ಧಿ, ಸಂಪತ್ತನ್ನು ಪಡೆಯಬಹುದಾಗಿದೆ.

ಕುಬೇರ ಯಂತ್ರ

ಹಿಂದೂ ಧರ್ಮದ ಪ್ರಕಾರ ಕುಬೇರನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾಗಿದ್ದಾನೆ. ಈಶಾನ್ಯ ದಿಕ್ಕನ್ನು ಕುಬೇರ ದೇವರು ನಿಯಂತ್ರಿಸುತ್ತಾರೆ. ಆದ್ದರಿಂದಾಗಿ ಆ ದಿಕ್ಕಿನಲ್ಲಿ ಶೌಚಾಲಯವನ್ನಾಗಲೀ ಅಥವಾ ನಕಾರಾತ್ಮಕ ಶಕ್ತಿ ರೂಪಿಸುವ ಯಾವುದೇ ರೀತಿಯ ನಿರ್ಮಾಣವನ್ನು ಮಾಡಬಾರದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ನಿಮ್ಮ ಮನೆಯ ಈಶಾನ್ಯ ಮೂಲೆಯನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಿ. ಅಲ್ಲಿ ಗೊಂದಲವಾಗುವಂತೆ ವಸ್ತುಗಳನ್ನು ಇಡದೆ ಅಚ್ಚುಕಟ್ಟಾಗಿ ಎಲ್ಲವನ್ನು ಜೋಡಿಸಿಟ್ಟುಕೊಳ್ಳಿ. ಹಾಗೆಯೇ ಇನ್ನಷ್ಟು ಒಳ್ಳೆಯ ಪರಿಣಾಮಗಳು ಬೇಕೆಂದರೆ ಈಶಾನ್ಯ ದಿಕ್ಕಿನಲ್ಲಿ ಕುಬೇರ ಯಂತ್ರವನ್ನೂ ಇರಿಸಬಹುದಾಗಿದೆ.

ಕಸದ ಬುತ್ತಿ ಎಲ್ಲಿರಬೇಕು?

ಹಾಗೆಯೇ ಇನ್ನೊಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಿ. ಮನೆಯ ಪಶ್ಚಿಮ ಅಥವಾ ಆಗ್ನೇಯ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಡಬಾರದು ಅಥವಾ ಮನೆಯಲ್ಲಿ ಬೇಡವಾದ ವಸ್ತು ಎಂದು ಗುಜುರಿಗೆ ಹಾಕುವ ವಸ್ತುಗಳನ್ನೆಲ್ಲ ಈ ದಿಕ್ಕುಗಳಲ್ಲಿ ಜೋಡಿಸಿಡಬಾರದು. ಪಶ್ಚಿಮ ಮತ್ತು ಆಗ್ನೇಯ ದಿಕ್ಕುಗಳಲ್ಲಿ ಕಸವಿದ್ದರೆ ನಿಮಗೆ ಹಣಕಾಸು ಬರುವಲ್ಲಿ ತೊಂದರೆಯುಂಟಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ನೀರಿನ ಕಾರಂಜಿ ಎಲ್ಲಿರಬೇಕು?

ಈಶಾನ್ಯ ದಿಕ್ಕಿನಲ್ಲಿ ನೀರಿನ ಕಾರಂಜಿ ನಿರ್ಮಿಸುವುದು ಒಳ್ಳೆಯದು. ಇಲ್ಲವೇ ಈಶಾನ್ಯ ದಿಕ್ಕಿನಲ್ಲಿ ನೀರಿಗೆ ಸಂಬಂಧಿಸಿದ ಬೇರೆ ವಸ್ತುಗಳನ್ನು ಇಡಬಹುದು. ಅಥವಾ ನಿಮ್ಮ ಮನೆ ಹೊರಗೆ ಹೆಚ್ಚು ಜಾಗವಿದ್ದರೆ ಈಶಾನ್ಯ ದಿಕ್ಕಿನಲ್ಲಿ ನೀರು ನಿಲ್ಲುವಂತೆ ಮಾಡಬಹುದು. ಮನೆಯ ಒಳಗೆ ಈಶಾನ್ಯ ದಿಕ್ಕಿನಲ್ಲಿ ಮೀನುಗಳ ಅಕ್ವೇರಿಯಂ ಕೂಡ ಇಡಬಹುದು. ನೀರು ದ್ರವರೂಪದ ಹಣವನ್ನು ಪ್ರತಿನಿಧಿಸುತ್ತದೆ. ಈಶಾನ್ಯ ದಿಕ್ಕಿನಲ್ಲಿ ನೀರು ಹಣದ ಹರಿವಿಗೆ ಅಡೆತಡೆ ಇಲ್ಲದಂತೆ ಮಾಡುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಆದರೆ ಆ ದಿಕ್ಕಿನಲ್ಲಿ ನೀರಿನ ಟ್ಯಾಂಕರ್‌ ಅನ್ನು ಇಡಬೇಡಿ. ಏಕೆಂದರೆ ಅದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನಲಾಗುತ್ತದೆ.

ನೀರು ಸೋರಿಕೆ ಆಗದಿರಲಿ

ಮನೆಯಲ್ಲಿ ನೀರಿನ ಸೋರಿಕೆಯಾಗುವುದು ಹಣದ ವಿಷಯದಲ್ಲಿ ಅಶುಭ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ನೀರಿನ ಸೋರಿಕೆಯಾಗುವುದನ್ನು ಆರ್ಥಿಕ ನಷ್ಟದ ಸಂಕೇತ ಎನ್ನಲಾಗುತ್ತದೆ. ಜನರು ಈ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಮನೆಯಲ್ಲಿ ನೀರು ಸೋರಿಕೆಯಾಗದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ನೀರಿನ ಸೋರಿಕೆ ಇದ್ದರೆ ಅದನ್ನು ಆದಷ್ಟು ಬೇಗ ಅದನ್ನು ಸರಿಪಡಿಸಿಕೊಳ್ಳಿ, ಇಲ್ಲದಿದ್ದರೆ ಅದು ಭಾರೀ ವಿತ್ತೀಯ ನಷ್ಟವನ್ನು ತರಬಹುದು.

ಶೌಚಾಲಯ ಎಲ್ಲಿರಬೇಕು?

ವಾಸ್ತು ಶಾಸ್ತ್ರದ ಪ್ರಕಾರ, ವಾಯವ್ಯ ಮತ್ತು ಈಶಾನ್ಯ ಮೂಲೆಗಳಲ್ಲಿ ಶೌಚಾಲಯವನ್ನು ನಿರ್ಮಿಸಬಾರದು. ಇದು ನಕಾರಾತ್ಮಕತೆಯನ್ನು ತರುತ್ತದೆ. ಇದರಿಂದ ಆರ್ಥಿಕ ಸಂಕಷ್ಟದ ಜತೆಯಲ್ಲಿ ಆರೋಗ್ಯದ ಸಮಸ್ಯೆಯೂ ಉಂಟಾಗುತ್ತದೆ ಎನ್ನಲಾಗುತ್ತದೆ.

ಗಂಟೆ ಬಾರಿಸುವುದರಿಂದ ಏನಾಗುತ್ತದೆ?

ಸಾಮಾನ್ಯವಾಗಿ ಹಿಂದೂ ಧರ್ಮದವರು ಮನೆಗಳಲ್ಲಿ ಪೂಜೆ ಮಾಡುವಾಗ ಗಂಟೆ ಬಾರಿಸುತ್ತಾರೆ. ಈ ರೀತಿ ಮನೆಯಲ್ಲಿ ಗಂಟೆ ಬಾರಿಸುವುದು ಕೂಡ ಮಂಗಳಕರ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಮನೆಯಲ್ಲಿನ ನಕಾರಾತ್ಮಕತೆಯನ್ನು ತಡೆಯುವ ಕಾಸ್ಮಿಕ್‌ ಧ್ವನಿ ಶಕ್ತಿಯನ್ನು ಗಂಟೆ ಸೃಷ್ಟಿಸುತ್ತದೆ.

ಅಗರಬತ್ತಿ ಎಲ್ಲಿ ಹಚ್ಚಬೇಕು?

ಹಾಗೆಯೇ ಮನೆಯ ದೇವರ ಕೋಣೆಯಲ್ಲಿ ಮತ್ತು ಲಾಕರ್‌ ಇರುವ ಜಾಗದಲ್ಲಿ ಅಗರಬತ್ತಿ ಬೆಳಗಿಸುವುದು ಕೂಡ ಸಕಾರಾತ್ಮಕತೆಯನ್ನು ತರುತ್ತದೆ. ಹಾಗೆಯೇ ಧನಾತ್ಮಕ ಶಕ್ತಿಯ ಹರಿವನ್ನು ಸೃಷ್ಟಿಸುತ್ತದೆ ಎನ್ನಲಾಗುತ್ತದೆ.

ಇದನ್ನೂ ಓದಿ: Morning Vastu Tips: ಈ ದಿನ ಪೂರ್ತಿ ಚೆನ್ನಾಗಿರಬೇಕೆ? ಬೆಳಗ್ಗೆ ಈ ಅಭ್ಯಾಸ ರೂಢಿಸಿಕೊಳ್ಳಿ

Exit mobile version