ಮಕ್ಕಳಿಗೆ ಉತ್ತಮ ಶಿಕ್ಷಣ (Vastu Tips for children) ನೀಡುವುದು ಪೋಷಕರ ಕನಸು ಮತ್ತು ಕರ್ತವ್ಯವಾಗಿರುತ್ತದೆ. ಹಾಗಾಗಿ ಪೋಷಕರು ತಮ್ಮ ಶಕ್ತಿ ಮೀರಿ ಮಕ್ಕಳಿಗೆ ವಿದ್ಯಾಭ್ಯಾಸ ದೊರಕುವಂತೆ ಮಾಡುತ್ತಾರೆ. ಹಾಗಾಗಿ ಮನೆಯಲ್ಲಿಯೂ ಮಕ್ಕಳ ಓದಿಗೆ ಪೂರಕವಾಗುವಂಥ ಜಾಗ ಮತ್ತು ಪರಿಕರಗಳ ಅವಶ್ಯಕತೆ ಇರುತ್ತದೆ. ಜೊತೆಗೆ ಅದಕ್ಕೆ ತಕ್ಕಂತೆ ಸರಿಯಾದ ದಿಕ್ಕು ಅತ್ಯವಶ್ಯಕವೆಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಕ್ಕಳ ಓದಿಗೆಂದೇ ಕೆಲವರ ಮನೆಯಲ್ಲಿ ಪ್ರತ್ಯೇಕ ಕೋಣೆ ಮತ್ತು ವ್ಯವಸ್ಥೆ ಇರುತ್ತದೆ. ಕೆಲವು ಮನೆಗಳಲ್ಲಿ ಮಕ್ಕಳು ಮನೆಯ ಯಾವುದಾದರೂ ಕೋಣೆ ಅಥವಾ ಹಾಲ್‌ನಲ್ಲಿ ಓದುವುದು ಮತ್ತು ಬರೆಯುವುದು ಮಾಡಿಕೊಳ್ಳುತ್ತಾರೆ. ದಿಕ್ಕು ಮತ್ತು ವಾಸ್ತುವಿನ ಬಗ್ಗೆ ಗಮನ ಹರಿಸುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳು ಓದಿದ್ದು ನೆನಪಿನಲ್ಲಿ ಉಳಿಯಲು ಮತ್ತು ಆತ್ಮವಿಶ್ವಾಸ ಮಕ್ಕಳಲ್ಲಿ ವೃದ್ಧಿಯಾಗಲು ಸಕಾರಾತ್ಮಕ ಶಕ್ತಿ ನೀಡುವ ದಿಕ್ಕುಗಳಲ್ಲೇ ಅಭ್ಯಾಸ ಮಾಡಬೇಕು.
ಮಕ್ಕಳು ಮನೆಯಲ್ಲಿ ಅಭ್ಯಾಸ ಮಾಡಲು ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಕುಳಿತುಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ. ಹಾಗಾದರೆ ವಾಸ್ತು ಶಾಸ್ತ್ರದಲ್ಲಿ ಮಕ್ಕಳು ಓದಲು ಕುಳಿತುಕೊಳ್ಳುವ ಸ್ಥಳ ಮತ್ತು ಸ್ಟಡಿ ಟೇಬಲ್ ಬಗ್ಗೆ ಪಾಲಿಸಬೇಕಾದ ವಾಸ್ತು ನಿಯಮಗಳನ್ನು ತಿಳಿದುಕೊಳ್ಳೋಣ.
ಸರಿಯಾದ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು
ಮಕ್ಕಳು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಸರಿಯಾದ ದಿಕ್ಕಿನಲ್ಲಿ ಕುಳಿತುಕೊಳ್ಳುವುದರಿಂದ ಸಕಾರಾತ್ಮಕತೆಯ ಜೊತೆಗೆ ಆಸಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಇದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚುತ್ತದೆ. ವಿಷಯಗಳನ್ನು ತಿಳಿದುಕೊಳ್ಳುವ ಕುತೂಲಹ ಮತ್ತಷ್ಟು ಅಧಿಕವಾಗುತ್ತದೆ. ಇದರಿಂದ ಓದಿನಲ್ಲಿ ಸಾಮರ್ಥ್ಯ ಹೆಚ್ಚುವುದಲ್ಲದೇ, ಯಶಸ್ಸು ಸಹ ಸಿಗುತ್ತದೆ. ಹಾಗಾದರೆ ಮಕ್ಕಳ ಸ್ಟಡಿ ಟೇಬಲ್ ಬಗೆಗಿನ ವಾಸ್ತು ನಿಯಮವೇನು ತಿಳಿಯೋಣ.
ಸ್ಟಡಿ ಟೇಬಲ್ ವಾಸ್ತು
ಮನೆಯಲ್ಲಿ ಸ್ಟಡಿ ಟೇಬಲ್ ಇಡುವಾಗ, ದಿಕ್ಕಿನ ಬಗ್ಗೆ ಗಮನ ಹರಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರ ಮತ್ತು ಪೂರ್ವ ದಿಕ್ಕು ಅತ್ಯಂತ ಉತ್ತಮವೆಂದು ಹೇಳಲಾಗುತ್ತದೆ. ಮಕ್ಕಳು ಓದಲು ಮತ್ತು ಬರೆಯಲು ಕುಳಿತುಕೊಂಡಾಗ, ಮಕ್ಕಳ ಮುಖ ಉತ್ತರ ಅಥವಾ ಪೂರ್ವ ದಿಕ್ಕಿಗೆ ಇರುವಂತೆ ಸ್ಟಡಿ ಟೇಬಲ್ ಇಡಬೇಕಾಗುತ್ತದೆ.
ಈ ರೀತಿ ಕುಳಿತುಕೊಳ್ಳುವುದರಿಂದ ಮಕ್ಕಳ ಓದಿನಲ್ಲಿ ಉತ್ತಮ ಬದಲಾವಣೆ ಕಾಣ ಸಿಗುತ್ತದೆ. ಜೊತೆಗೆ ಓದಿನಲ್ಲಿ ಆಸಕ್ತಿ ಮತ್ತು ಏಕಾಗ್ರತೆ ಮತ್ತಷ್ಟು ಹೆಚ್ಚಲು ಇದು ಸಹಾಯಕವಾಗುತ್ತದೆ ಎಂಬುದು ಅನೇಕ ವಾಸ್ತು ತಜ್ಞರ ಅಭಿಪ್ರಾಯವಾಗಿದೆ.
ಸ್ಟಡಿ ಟೇಬಲ್ ಆಕಾರ ಹೀಗಿರಬೇಕು
ಮಾರುಕಟ್ಟೆಯಲ್ಲಿ ಅನೇಕ ರೀತಿಯ ಸ್ಟಡಿ ಟೇಬಲ್ ಸಿಗುತ್ತದೆ. ಮಕ್ಕಳಿಗೆ ಖುಷಿ ಕೊಡುವಂತ ಅನೇಕ ಬಗೆಯ, ವಿವಿಧ ಆಕಾರದ ಟೇಬಲ್‌ಗಳು ಲಭ್ಯವಾಗುತ್ತದೆ. ಆದರೆ ವಾಸ್ತು ಪ್ರಕಾರ ಆಯತಾಕಾರ ಇಲ್ಲವೇ ಚೌಕ ಆಕಾರದ ಟೇಬಲ್‌ಗಳು ಉತ್ತಮ. ಅಷ್ಟೇ ಅಲ್ಲದೇ ಆಯತಾಕಾರದ ಸ್ಟಡಿ ಟೇಬಲ್ ಆಯ್ಕೆ ಮಾಡಿಕೊಂಡಿದ್ದರೆ, ಅದು 1:2 ಈ ಅನುಪಾತಕ್ಕಿಂತ ಹೆಚ್ಚಿರಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹಾಗಾಗಿ ಸ್ಟಡಿ ಟೇಬಲ್ ಖರೀದಿಸುವಾಗ ಈ ನಿಯಮಗಳ ಬಗ್ಗೆ ಗಮನ ಇಡುವುದು ಅವಶ್ಯಕ. ಜೊತೆಗೆ ಸ್ಟಡಿ ಟೇಬಲ್ ಅನ್ನು ಗೋಡೆಗೆ ವಿರುದ್ಧವಾಗಿ ಇಡಬೇಕು. ಗೋಡೆಯ ಬಣ್ಣ ತಿಳಿ ಬಣ್ಣವಾಗಿರುವುದು ಉತ್ತಮ.
ಟೇಬಲ್‌ನ ಗುಣಮಟ್ಟ ಮತ್ತು ಸ್ಥಿತಿ
ಮನೆಯ ಯಾವುದೇ ಪಿಠೋಪಕರಣಗಳಾಗಿದ್ದರೂ ಸರಿ, ಅದು ಉತ್ತಮ ಸ್ಥಿತಿಯಲ್ಲಿರುವುದು ಅವಶ್ಯಕ. ಇದರಿಂದ ಮನೆಗೆ ಎಲ್ಲ ರೀತಿಯ ಸಕಾರಾತ್ಮಕ ಶಕ್ತಿಯ ಹರಿವು ಸರಿಯಾಗಿ ಆಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮುರಿದ ಅಥವಾ ತೀರಾ ಹಾಳಾದ ಫರ್ನಿಚರ್‌ಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಈ ನಿಯಮ ಸ್ಟಡಿ ಟೇಬಲ್‌ಗೂ ಅನ್ವಯಿಸುತ್ತದೆ. ಸ್ಟಡಿ ಟೇಬಲ್ ಕೊಳ್ಳುವಾಗ ಉತ್ತಮ ಗುಣಮಟ್ಟದ ಮರದಿಂದ ತಯಾರಾದ ಟೇಬಲ್ ಖರೀದಿಸುವುದು ಅವಶ್ಯಕ.
ಬಣ್ಣ ಹೀಗಿರಲಿ
ಸ್ಟಡಿ ಟೇಬಲ್‌ಗೆ ತಿಳಿಯಾದ ಬಣ್ಣವನ್ನು ಆಯ್ಕೆ ಮಾಡಬೇಕು. ಹಸಿರು, ತಿಳಿ ಹಸಿರು, ತಿಳಿ ನೀಲಿ, ಕ್ರೀಮ್ ಅಥವಾ ಬಿಳಿ ಬಣ್ಣದ ಸ್ಟಡಿ ಟೇಬಲ್ ಆಗಿದ್ದರೆ ಉತ್ತಮ. ಜೊತೆಗೆ ಸ್ಟಡಿ ರೂಮ್ ಬಣ್ಣ ಸಹ ಇದೇ ರೀತಿಯಾಗಿದ್ದರೆ ಉತ್ತಮ. ಈ ಬಣ್ಣಗಳು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಗಾಢ ಬಣ್ಣದ ಸ್ಟಡಿ ಟೇಬಲ್‌ಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಿಲ್ಲ. ಒಂದೊಮ್ಮೆ ಗಾಢ ಬಣ್ಣದ ಟೇಬಲ್ ಆಗಿದ್ದರೆ ಅದಕ್ಕೆ ಬಿಳಿ ಅಥವಾ ಕ್ರೀಮ್ ಕಲರ್ ಬಟ್ಟೆಯನ್ನು ಮೇಲೆ ಹಾಕುವುದು ಉತ್ತಮ.
ಟೇಬಲ್ ಸ್ವಚ್ಛವಾಗಿರಲಿ
ಸ್ಟಡಿ ಟೇಬಲ್‌ಗೆ ಉತ್ತಮ ಬೆಳಕು ಬರುವುದು ಅವಶ್ಯಕ ಇದಕ್ಕಾಗಿ ಲೈಟ್ ಬಳಸುತ್ತಿದ್ದರೆ, ಲೈಟ್ ಅನ್ನು ಸ್ಟಡಿ ಟೇಬಲ್‌ನ ಆಗ್ನೇಯ ದಿಕ್ಕಿಗೆ ಇಟ್ಟುಕೊಳ್ಳುವುದು ಉತ್ತಮ. ಸ್ಟಡಿ ಟೇಬಲ್ ಸದಾ ಸ್ವಚ್ಛವಾಗಿರಬೇಕು. ಸ್ಟಡಿ ಟೇಬಲ್ ಮೇಲೆ ಅನಾವಶ್ಯಕ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ, ಏಕಾಗ್ರತೆಗೆ ತೊಂದರೆ ಆಗುತ್ತದೆ. ಮಕ್ಕಳ ಆಸಕ್ತಿ ಹೆಚ್ಚಿಸಲು ಉತ್ತಮ ಫೊಟೋ ಮತ್ತು ಪೊಸ್ಟರ್‌ಗಳಿಂದ ಟೇಬಲ್ ಅನ್ನು ಸಿಂಗರಿಸಬಹುದಾಗಿದೆ. ಇದರಿಂದ ಓದಿನಲ್ಲಿ ಆಸಕ್ತಿ ಹೆಚ್ಚುತ್ತದೆ.
ಮತ್ತಷ್ಟು ವಾಸ್ತು ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/category/horoscope-religion/astrology