ನವ ದೆಹಲಿ: ರಾಜ್ಯಸಭೆ ನಾಮನಿರ್ದೇಶಿತ ಸದಸ್ಯರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ದಕ್ಷಿಣ ಭಾರತದಿಂದ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಈ ನಾಲ್ವರ ಪರಿಚಯ ಇಲ್ಲಿದೆ.
ನಾಮನಿರ್ದೇಶಿತ ನಾಲ್ವರು ಸದಸ್ಯರಲ್ಲಿ ಇಬ್ಬರು ಸಿನಿಮಾ ರಂಗದ ಸೃಜನಶೀಲ ಪ್ರತಿಭೆಗಳು, ಒಬ್ಬರು ಧಾರ್ಮಿಕ- ಸಮಾಜ ಸೇವಕರು, ಇನ್ನೊಬ್ಬರು ಕ್ರೀಡಾ ಸಾಧಕರು. ಇವರಲ್ಲಿ ಇಬ್ಬರು ಪದ್ಮವಿಭೂಷಣ ಪುರಸ್ಕೃತರು ಮತ್ತು ಒಬ್ಬರು ಪದ್ಮಶ್ರೀ ಪಡೆದವರು. ನೇಮಕಗೊಂಡ ಎಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ʼʼವೀರೇಂದ್ರ ಹೆಗ್ಗಡೆ ಅವರು ಸಮಾಜಸೇವೆಯ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳ ಕ್ಷೇತ್ರದಲ್ಲಿ ಅವರನ್ನು ಭೇಟಿ ಮಾಡುವ ಹಾಗೂ ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿ ರಂಗಗಳಲ್ಲಿ ಅವರು ಮಾಡಿರುವ ಸೇವೆಯನ್ನು ಕಣ್ಣಾರೆ ಕಾಣುವ ಸುಯೋಗ ನನ್ನದಾಗಿತ್ತು. ಅವರು ರಾಜ್ಯಸಭೆಯ ಔನ್ನತ್ಯವನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆʼʼ ಎಂದು ನರೇಂದ್ರ ಮೋದಿ ಅವರು ಹೆಗ್ಗಡೆಯವರನ್ನು ಅಭಿನಂದಿಸಿದ್ದಾರೆ.
“ಪಿ.ಟಿ ಉಷಾ ಅವರು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದ್ದಾರೆ. ಕ್ರೀಡೆಯಲ್ಲಿ ಅವರ ಸಾಧನೆಗಳು ವ್ಯಾಪಕವಾಗಿ ತಿಳಿದಿವೆ. ಆದರೆ ಕಳೆದ ಹಲವಾರು ವರ್ಷಗಳಿಂದ ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುತ್ತಿರುವ ಅವರ ಕೆಲಸವೂ ಅಷ್ಟೇ ಶ್ಲಾಘನೀಯವಾಗಿದೆ. ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಅವರಿಗೆ ಅಭಿನಂದನೆಗಳು.ʼʼ ಎಂದು ಉಷಾ ಅವರನ್ನು ಅಭಿನಂದಿಸಿದ್ದಾರೆ.
“ಇಳಯರಾಜ ಅವರ ಸೃಜನಶೀಲ ಪ್ರತಿಭೆ ತಲೆಮಾರುಗಳಾದ್ಯಂತ ಜನರನ್ನು ಆಕರ್ಷಿಸಿದೆ. ಅವರ ಕೃತಿಗಳು ಅನೇಕ ಭಾವನೆಗಳನ್ನು ಸುಂದರವಾಗಿ ಪ್ರತಿಬಿಂಬಿಸುತ್ತವೆ. ಅವರ ಜೀವನ ಪಯಣವೂ ಅಷ್ಟೇ ಸ್ಫೂರ್ತಿದಾಯಕವಾಗಿದೆ. ವಿನಮ್ರ ಹಿನ್ನೆಲೆಯಿಂದ ಬೆಳೆದು ಬಂದು ತುಂಬಾ ಎತ್ತರಕ್ಕೆ ಏರಿದ್ದಾರೆ. ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಸಂತಸ ತಂದಿದೆʼʼ ಎಂದಿದ್ದಾರೆ.
ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ
ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಧಾರ್ಮಿಕತೆ ಹಾಗೂ ಸೇವೆ ಸಂಗಮಗೊಂಡಿರುವ ಅಪೂರ್ವ ನಿದರ್ಶನ. ಇವರು ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಮತ್ತು “ಮಾತಾಡುವ ಮಂಜುನಾಥʼ ಎಂದು ಭಕ್ತಾದಿಗಳಿಂದ ಗೌರವ ಪಡೆಯುತ್ತಿರುವರೂ ಹೌದು.
ವೀರೇಂದ್ರ ಹೆಗ್ಗಡೆಯವರು 1948ರ ನವೆಂಬರ್ 25ರಂದು ಜನಿಸಿದರು. ಧರ್ಮಾಧಿಕಾರಿಗಳಾಗಿದ್ದ ರತ್ನವರ್ಮ ಹೆಗ್ಗಡೆ ಅವರ ತಂದೆ. ಪ್ರಾಥಮಿಕ ಶಿಕ್ಷಣವನ್ನು ದಕ್ಷಿಣ ಕನ್ನಡದ ಬಂಟ್ವಾಳದ ಬೋರ್ಡ್ ಶಾಲೆಯಲ್ಲಿ ಮುಗಿಸಿ, ಉಜಿರೆಯಲ್ಲಿ ಮಾಧ್ಯಮಿಕ ಶಿಕ್ಷಣದ ಜೊತೆ ಜೊತೆಯಲ್ಲಿ ಸಿದ್ಧವನ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ಬೆಂಗಳೂರಿನ ಶೇಷಾದ್ರಿಪುರಂ ಪ್ರೌಢಶಾಲೆ ಮತ್ತು ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿ 1963ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ, ನಂತರ ಬಿ.ಎ ಪದವೀಧರರಾದರು. ಕಾನೂನು ಪದವಿ ಕಲಿಯಬೇಕು ಎಂದು ಯೋಚಿಸುತ್ತಿರುವಾಗಲೇ, ಅವರ ತಂದೆ ರತ್ನವರ್ಮ ಹೆಗ್ಗಡೆ ಅವರು ವಿಧಿವಶರಾದರು. ಹೀಗಾಗಿ ತಮ್ಮ 20ನೇ ವಯಸ್ಸಿಗೇ, 1968ರ ಅಕ್ಟೋಬರ್ 24ರಂದು ಕ್ಷೇತ್ರದ 21ನೇ ಧರ್ಮಾಧಿಕಾರಿಗಳಾಗಿ ಜವಾಬ್ದಾರಿ ವಹಿಸಿಕೊಂಡರು. ಇಲ್ಲಿಯವರೆಗೂ ಅತ್ಯಂತ ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದಿರುವುದಲ್ಲದೆ, ದೇವಸ್ಥಾನದ ಕಾರ್ಯಗಳೊಂದಿಗೆ ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಐದು ದಶಕಗಳಿಗೂ ಹೆಚ್ಚು ಕಾಲದಿಂದ ನಾನಾ ಟ್ರಸ್ಟ್‌ಗಳನ್ನು ಸ್ಥಾಪಿಸಿ ಸಮಾಜ ಸೇವೆಯ ಮುಂಚೂಣಿಯಲ್ಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗದ ಉತ್ತೇಜನಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (RUDSETI) ಸ್ಥಾಪಿಸಿದರು. ಗ್ರಾಮೀಣ ಯುವಜನತೆಗೆ ಸ್ವಯಂ ಉದ್ಯೋಗ ಅವಕಾಶಗಳ ಬಗ್ಗೆ ಅರಿವು ಮತ್ತು ತರಬೇತಿ ಒದಗಿಸಿದರು. ಕೇಂದ್ರ ಸರ್ಕಾರವೂ ಇದನ್ನು ಗುರುತಿಸಿ ಅಳವಡಿಸಿಕೊಂಡಿತು. ಯಶಸ್ವಿ ಮಾದರಿ ಮತ್ತು ಗ್ರಾಮೀಣ ಸ್ವಯಂ ಉದ್ಯೋಗ ಸಂಸ್ಥೆಗಳನ್ನು (RSETIs) ಸ್ಥಾಪಿಸಿದರು. ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕಾಗಿ ಹೆಗ್ಗಡೆಯವರು ರೂಪಿಸಿರುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಪ್ರಸ್ತುತ ಈ ಯೋಜನೆಯಲ್ಲಿ 6 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳು ಇವೆ ಮತ್ತು 49 ಲಕ್ಷಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಇದಲ್ಲದೆ ಗುಣಮಟ್ಟ ಮತ್ತು ಕೈಗೆಟಕುವ ದರದಲ್ಲಿ ಶಿಕ್ಷಣ ಒದಗಿಸುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಟ್ರಸ್ಟ್ ಮುಖ್ಯಸ್ಥರೂ ಆಗಿದ್ದಾರೆ. ಇದು 25ಕ್ಕೂ ಹೆಚ್ಚು ಶಾಲೆಗಳು ಮತ್ತು ಕಾಲೇಜುಗಳ ಮೂಲಕ ಶಿಕ್ಷಣ ಒದಗಿಸಿದೆ. ಗುಣಮಟ್ಟದ ಆರೋಗ್ಯ ರಕ್ಷಣೆ, ಸಮಾಜ ಕಲ್ಯಾಣ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಸೇವೆ ಮತ್ತು ಆಧ್ಯಾತ್ಮಿಕತೆಯನ್ನು ಸುಂದರವಾಗಿ ವಿಲೀನಗೊಳಿಸಿ ತೋರಿಸಿದ್ದಾರೆ.
ಹೆಗ್ಗಡೆಯವರಿಗೆ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ (1985), ರಾಷ್ಟ್ರಪತಿಗಳಿಂದ ರಾಜರ್ಷಿ ಗೌರವ (1993), ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ (1994), ವರ್ಷದ ಕನ್ನಡಿಗ ಗೌರವ (2004), ಕರ್ನಾಟಕ ರತ್ನ ಪ್ರಶಸ್ತಿ (2011), ಮಧ್ಯಪ್ರದೇಶದ ಇಂದೋರ್‌ನ ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ (2013), ಭಾರತ ಸರ್ಕಾರದ ಪದ್ಮವಿಭೂಷಣ ಪ್ರಶಸ್ತಿ (2015) ದೊರೆತಿವೆ. 2012ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಲಂಡನ್‌ನ ಪ್ರತಿಷ್ಠಿತ ಆಶ್ಡೆನ್ ಸಂಸ್ಥೆಯ ಜಾಗತಿಕ ಹಸಿರು ಆಸ್ಕರ್ ಎಂದೇ ಪರಿಗಣಿಸಲಾದ ಆಶ್ಡೆನ್ ಸುಸ್ಥಿರ ಇಂಧನ ಪ್ರಶಸ್ತಿ ದೊರೆತಿದೆ.
ಪಿ.ಟಿ ಉಷಾ
ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಜನಿಸಿದ ಉಷಾ ಭಾರತದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರು. ಲಕ್ಷಾಂತರ ಜನರಿಗೆ ಮಾದರಿ ಮತ್ತು ಸ್ಫೂರ್ತಿ. ದೇಶಾದ್ಯಂತ ಯುವ ಹುಡುಗಿಯರು ಕಾಣುವ ಕನಸು. “ಪಯ್ಯೋಳಿ ಎಕ್ಸ್‌ಪ್ರೆಸ್ʼ ಎಂದು ಜನಪ್ರಿಯರಾದವರು. ದೇಶ ಮತ್ತು ವಿವಿಧ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಅವರ ವೃತ್ತಿಜೀವನದಲ್ಲಿ ಅನೇಕ ರಾಷ್ಟ್ರೀಯ ಮತ್ತು ಏಷ್ಯನ್ ಕ್ರೀಡಾಕೂಟ ದಾಖಲೆಗಳಿವೆ. 1984ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವುದನ್ನು ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡರು. ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು.
ನಿವೃತ್ತಿಯ ನಂತರ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಪ್ರಾರಂಭಿಸಿದರು. ಇದು ಪ್ರತಿಭಾವಂತ ಯುವಜನರಿಗೆ ವಿಶ್ವದರ್ಜೆಯ ಕ್ರೀಡಾ ತರಬೇತಿ ನೀಡುತ್ತದೆ. ಅವರಿಂದ ತರಬೇತಿ ಮತ್ತು ಮಾರ್ಗದರ್ಶನ ಪಡೆದ ಹಲವಾರು ಕ್ರೀಡಾಪಟುಗಳು ಸಾಧಕರಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರತಿಷ್ಠಿತ ಪದಕಗಳನ್ನು ಗೆದ್ದಿದ್ದಾರೆ. ಈಕೆ ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪುರಸ್ಕೃತರು ಕೂಡ.
ಸಂಗೀತ ಮಾಂತ್ರಿಕ ಇಳಯರಾಜ
ತಮಿಳುನಾಡಿನ ಮಧುರೈನ ಹಳ್ಳಿಯೊಂದರಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಇಳಯರಾಜ, ದೇಶದ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಅವರ ವೃತ್ತಿಜೀವನದ ಅವಧಿಯಲ್ಲಿ ಇಳಯರಾಜ ಅಸಂಖ್ಯಾತ ಕಷ್ಟಗಳು ಮತ್ತು ಜಾತಿ ಆಧಾರಿತ ತಾರತಮ್ಯ ಎದುರಿಸಬೇಕಾಯಿತು. ಎಲ್ಲಾ ಅಡೆತಡೆಗಳನ್ನು ಎದುರಿಸಿ ದೇಶದ ಪ್ರಮುಖ ಸಂಗೀತ ನಿರ್ದೇಶಕರಾಗಿ ಹೊಮ್ಮಿದರು. ಐದು ದಶಕಗಳಿಗಿಂತಲೂ ಹೆಚ್ಚಿನ ವೃತ್ತಿಜೀವನದಲ್ಲಿ 1000ಕ್ಕೂ ಹೆಚ್ಚು ಸಿನಿಮಾಗಳಿಗೆ 7000ಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 20,000ಕ್ಕೂ ಹೆಚ್ಚು ಸಂಗೀತ ಕಛೇರಿಗಳಲ್ಲಿ ಪ್ರದರ್ಶನ ನೀಡಿದ್ದಾರೆ. 2018ರಲ್ಲಿ ಪದ್ಮವಿಭೂಷಣ ಪಡೆದರು. ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.
ಕೆ.ವಿ ವಿಜಯೇಂದ್ರ ಪ್ರಸಾದ್
ಆಂಧ್ರಪ್ರದೇಶದ ಕೊವ್ವೂರಿನಲ್ಲಿ ಜನಿಸಿದ ಕೆ.ವಿ.ವಿಜಯೇಂದ್ರ ಪ್ರಸಾದ್ ದೇಶದ ಪ್ರಮುಖ ಚಿತ್ರಕಥೆಗಾರ ಹಾಗೂ ನಿರ್ದೇಶಕರಲ್ಲಿ ಒಬ್ಬರು. ತೆಲುಗು ಮತ್ತು ಹಿಂದಿಯಲ್ಲಿ ಅನೇಕ ಖ್ಯಾತನಾಮ ಹೀರೋಗಳ ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದಾರೆ. ಅವರ ಗಮನಾರ್ಹ ಕೃತಿಗಳು ಅತ್ಯಧಿಕ ಗಳಿಕೆ ಮಾಡಿವೆ. ಪ್ಯಾನ್ ಇಂಡಿಯಾ ಚಲನಚಿತ್ರಗಳಾದ ಬಾಹುಬಲಿ ಸರಣಿ, ಆರ್‌ಆರ್‌ಆರ್, ಬಜರಂಗಿ ಭಾಯಿಜಾನ್‌ಗಳು ಇದಕ್ಕೆ ಉದಾಹರಣೆ. ಅವರು ಚಿತ್ರಕತೆ ಬರೆದ ಕೆಲವು ಚಲನಚಿತ್ರಗಳು ಪ್ರಾದೇಶಿಕ ಗಡಿಗಳನ್ನು ಮೀರಿ ಬ್ಲಾಕ್‌ಬಸ್ಟರ್‌ಗಳಾಗಿವೆ. ಹೀಗೆ ಅವರು ಸಾಂಸ್ಕೃತಿಕ ಏಕತೆ ಸಾಧಿಸಿದ್ದಾರೆ. ಕಥೆ ಬರವಣಿಗೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2016ರಲ್ಲಿ ಬಜರಂಗಿ ಭಾಯಿಜಾನ್ ಚಿತ್ರದ ಅತ್ಯುತ್ತಮ ಕಥೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು.
ಇದನ್ನೂ ಓದಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ರಾಜ್ಯಸಭೆಗೆ ನೇಮಕ