Site icon Vistara News

CM Siddaramaiah: ರೈತರ ಬದುಕಿನ ಮೇಲೆ ಚೆಲ್ಲಾಟ ಆಡಿದರೆ ಹುಷಾರ್! ಅಧಿಕಾರಿಗಳಿಗೆ ಸಿದ್ದರಾಮಯ್ಯ ಎಚ್ಚರಿಕೆ

Vijayanagara District Progress Review Meeting by CM Siddaramaiah

ವಿಜಯನಗರ: ರೈತರಿಗೆ ಬಿತ್ತನೆ ಬೀಜ, ಗೊಬ್ಬರದ ಕೊರತೆ ಆಗಬಾರದು. ಆದರೆ ನಿಮ್ಮನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಕೃಷಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಡೆದ ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಗಿರುವ ಮಳೆ ಮತ್ತು ಕೃಷಿ ಚಟುವಟಿಕೆಗಳ ಮಾಹಿತಿ ಪಡೆಯುವ ಮೂಲಕ ಮುಖ್ಯಮಂತ್ರಿಗಳು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಆರಂಭಿಸಿದರು.

ಸಮಾಧಾನಕರವಾಗಿ ಮಳೆ ಆಗಿದ್ದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ರೈತರಿಗೆ ಅಗತ್ಯವಾದ ಬೀಜ, ರಸಗೊಬ್ಬರ ಇತ್ಯಾದಿ ಅಗತ್ಯಗಳ ಸಂಗ್ರಹದ ಪ್ರಮಾಣ ಎಷ್ಟಿದೆ ಎನ್ನುವ ಕುರಿತಂತೆ ಒಂದೊಂದಾಗಿ ಮಾಹಿತಿ ಪಡೆದು, ಒಮ್ಮೆ ಕೊಟ್ಟ ಬೀಜ ಮೊಳಕೆಯೊಡೆಯದಿದ್ದರೆ ಎರಡನೇ ಸುತ್ತು ಕೂಡ ಬೀಜಗಳನ್ನು ಕಡ್ಡಾಯವಾಗಿ ರೈತರಿಗೆ ವಿತರಿಸಬೇಕು. ರೈತರಿಂದ ದೂರು ಬಂದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಖಚಿತ ಎಂದು ಎಚ್ಚರಿಸಿದರು.

ಇದನ್ನೂ ಓದಿ: International Yoga Day 2024: ಸಶಸ್ತ್ರ ಪಡೆಗಳಿಂದ ಮೈಕೊರೆಯುವ ಹಿಮ ಪರ್ವತದಲ್ಲೂ ಯೋಗ ದಿನಾಚರಣೆ; ವಿಡಿಯೊ ನೋಡಿ

ಉಪ ರೈತ ಸಂಪರ್ಕಗಳನ್ನು ಹೆಚ್ಚೆಚ್ಚು ತೆರೆದು ರೈತರಿಗೆ ಬೀಜ, ರಸಗೊಬ್ಬರ ವಿತರಣೆ ಮಾಡಲು ಏನು ಸಮಸ್ಯೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಹಗರಿಬೊಮ್ಮನಹಳ್ಳಿ ಸೇರಿ ನಾನಾ ತಾಲೂಕುಗಳಲ್ಲಿ ಈ ವ್ಯವಸ್ಥೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಬರ ಪರಿಹಾರ 130 ಕೋಟಿ ರೂ. ವಿತರಣೆ

ರಾಜ್ಯ ಸರ್ಕಾರದಿಂದ ನೀಡಿದ ಬರ ಪರಿಹಾರದ ಮೊತ್ತ 130 ಕೋಟಿ ರೂಪಾಯಿ ಸಂಪೂರ್ಣವಾಗಿ ವಿತರಣೆಯಾಗಿದೆ. ಜಿಲ್ಲೆಯಲ್ಲಿ ಯಾವ ಅರ್ಹ ರೈತರಿಗೂ ಬಾಕಿ ಉಳಿಸಿಕೊಂಡಿಲ್ಲ ಎಂದು ಅಧಿಕಾರಿಗಳು ದಾಖಲೆ ಮುಂದಿಟ್ಟು ವಿವರಿಸಿದರು.

ಬೆಳೆ ಸಮೀಕ್ಷೆಗಳನ್ನು ವೈಜ್ಞಾನಿಕವಾಗಿ ನಡೆಸಿ, ಒಬ್ಬರಿಗೂ ಅನ್ಯಾಯ ಆಗದಂತೆ ಪ್ರತಿಯೊಬ್ಬ ರೈತರಿಗೂ ಡಿಬಿಟಿ ಮೂಲಕ ಒಬ್ಬರಿಗೂ ಬಾಕಿ ಉಳಿಯಂತೆ ಅವರ ಖಾತೆಗಳಿಗೆ ಹಣ ಜಮೆ ಆಗಿರುವುದನ್ನು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಅತಿ ಹೆಚ್ಚು ಮಳೆಯಿಂದ ಆದ ಹಾನಿ, ನೋಂದಣಿ ಮಾಡಿಕೊಂಡ ಎಲ್ಲಾ ರೈತರಿಗೂ, ಬೆಳೆ ಕಟಾವು ಹೊತ್ತಲ್ಲೂ ಅಗತ್ಯಕ್ಕೆ ತಕ್ಕಂತೆ ಬೆಳೆ ವಿಮೆ ವಿತರಣೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದನ್ನೂ ಓದಿ: International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ರೈತರ ಜಮೀನುಗಳಿಗೆ ಹೋಗಿ ಮಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ರೈತರಿಗೆ ತಿಳಿವಳಿಕೆ ನೀಡಿದ್ದೀರಾ? ಯಾವ ಯಾವ ಅಧಿಕಾರಿಗಳು ಯಾವ ಯಾವ ಹಳ್ಳಿಗೆ ಹೋಗಿದ್ದೀರಿ? ಎಷ್ಟು ರೈತರಿಗೆ ತಿಳಿವಳಿಕೆ ನೀಡಿದ್ದೀರಿ? ನೀವು ಭೇಟಿ ನೀಡಿ ತಿಳಿವಳಿಕೆ ನೀಡಿದ ಡೈರಿ ಎಲ್ಲಿದೆ ಎಂದು ಪ್ರಶ್ನಿಸಿದರು. ಡೈರಿ ಬರೆದಿದ್ದೀನಿ. ಆದರೆ ಅದನ್ನು ಕಚೇರಿಯಲ್ಲೇ ಬಿಟ್ಟು ಬಂದಿದ್ದೀನಿ ಎಂದು ಮಾಹಿತಿ ನೀಡಿದ ಅಧಿಕಾರಿ ವಿರುದ್ಧ ಸಿಎಂ ಗರಂ ಆದರು. ಡೈರಿ ಇಲ್ಲದೆ ಬರಿ ಕೈಲಿ ಬಂದಿದ್ದಕ್ಕೆ ತರಾಟೆಗೆ ತೆಗೆದುಕೊಂಡು ಮುಂದೆ ಹೀಗಾಗದಂತೆ ಎಚ್ಚರ ವಹಿಸಲು ಸೂಚನೆ ನೀಡಿದರು.

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ವಿಳಂಬ, ತರಾಟೆ

2023-24 ರಲ್ಲಿ ಒಟ್ಟು 34 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಾಲಿನಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಅಧಿಕಾರಿಗಳ ಮಾಹಿತಿಗೆ ಪ್ರತಿಯಾಗಿ, ಇವರಲ್ಲಿ ಪ್ರತಿಯೊಬ್ಬ ರೈತರ ಕುಟುಂಬಕ್ಕೆ ಪರಿಹಾರ ದೊರಕಿದೆಯೇ ಎಂದು ಪ್ರಶ್ನಿಸಿದರು. ಉಳಿದೆಲ್ಲರಿಗೂ ಸರಿಯಾದ ಸಮಯಕ್ಕೆ ಆತ್ಮಹತ್ಯೆ ಪರಿಹಾರದ 5 ಲಕ್ಷ ಮೊತ್ತ ಜಮೆ ಆಗಿದೆ. ಐದು ಮಂದಿ ರೈತರ ಕುಟುಂಬಕ್ಕೆ ಮಾತ್ರ ತಾಂತ್ರಿಕ ತೊಂದರೆ ಆಗಿದ್ದು ಏಕೆ? ಎಫ್ಎಸ್ಎಲ್ ವರದಿ 20 ದಿನದೊಳಗೆ ಬರುತ್ತದೆ. ಆದರೂ ಪ್ರಕ್ರಿಯೆ ತಡವಾಗಿದ್ದಕ್ಕೆ ಮುಖ್ಯಮಂತ್ರಿಗಳು ಗರಂ ಆಗಿ ತರಾಟೆಗೆ ತೆಗೆದುಕೊಂಡರು. ರೈತರ ಬದುಕು ಮತ್ತು ಬವಣೆಗಳ ಬಗ್ಗೆ ಚೆಲ್ಲಾಟ ಆಡಿದರೆ ಹುಷಾರ್ ಎಂದು ಎಚ್ಚರಿಸಿದರು.

ಸರ್ಕಾರ ಅಗತ್ಯವಿದ್ದಷ್ಟು ಹಣವನ್ನು ಕೊಟ್ಟು ಯಾವ ಕಾಲ ಆಯ್ತು. ಆದರೂ ಸರ್ಕಾರ ಕೊಟ್ಟ ಹಣವನ್ನು ರೈತರ ಕುಟುಂಬಗಳಿಗೆ ತಲುಪಿಸಲು ಏನು ತೊಂದರೆ ಆಗಿದೆ ಎಂದು ಪ್ರಶ್ನಿಸಿದ ಸಿಎಂ ಇದನ್ನು ಸಹಿಸುವುದಿಲ್ಲಎಂದರು.

ನೀರು, ಮೇವು, ನರೇಗಾ ಉದ್ಯೋಗಕ್ಕೆ ಯಾವ ಕಾರಣಕ್ಕೂ ತೊಂದರೆ ಆಗಬಾರದು. ಪಿಡಿ ಖಾತೆಯಲ್ಲಿರುವ ಇರುವ ಹಣವನ್ನು ಇದಕ್ಕಾಗಿ ಸರಿಯಾಗಿ ಬಳಸಬೇಕು ಎಂದು ಸಿಎಂ ಸೂಚಿಸಿದರು.

ಕೆರೆ ಒತ್ತುವರಿ ಮುಲಾಜಿಲ್ಲದೆ ತೆರವುಗೊಳಿಸಿ

ಕೆರೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು. ಒತ್ತುವರಿಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಕೊರತೆಯಾಗುತ್ತದೆ. ನರೇಗಾದಲ್ಲಿ ಕೆರೆ ಹೂಳು ತೆಗೆದು ಕೆರೆಗಳಿಗೆ ಮರು ಜೀವ ಒದಗಿಸಬೇಕು ಎಂದು ಸೂಚನೆ ನೀಡಿದರು.

52 ಶುದ್ಧ ನೀರಿನ ಘಟಕಗಳು ಕೆಲಸ ಸ್ಥಗಿತಗೊಳಿಸಿದ್ದರೂ ಸರಿಯಾದ ಸಮಯಕ್ಕೆ ರಿಪೇರಿ ಮಾಡಿಸಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು. ಕೆಲವು ಬೋರ್‌ಗಳು ಪದೇ ಪದೇ ರಿಪೇರಿಗೆ ಬರುತ್ತಿವೆ ಎನ್ನುವ ಅಧಿಕಾರಿಗಳ ಉತ್ತರಕ್ಕೆ ಗರಂ ಆದ ಸಿಎಂ ರಿಪೇರಿ ಮಾಡಿದ್ದು ಇಲಾಖೆಯವರೇ ತಾನೆ? ಪದೇ ಪದೇ ಕೆಟ್ಟು ಹೋಗುವ ರೀತಿ ರಿಪೇರಿ ಯಾಕೆ ಮಾಡ್ತಾರೆ. ಅದರಲ್ಲಿ ಏನಾದರೂ ರಿಪೇರಿಯಾಗದ ಸಮಸ್ಯೆ ಇದೆಯಾ ಪರಿಶೀಲಿಸಿ ಎಂದರು.

ಇದನ್ನೂ ಓದಿ: Gold Rate Today: ಮತ್ತೆ ಚಿನ್ನದ ಧಾರಣೆ ಏರಿಕೆ; ಕೊಂಡುಕೊಳ್ಳಲು ಹೊರಡುವ ಮುನ್ನ ದರ ಪರಿಶೀಲಿಸಿ

ಊರಿನ ಹೊರಗೆ ಇರುವ ಬೋರ್‌ಗಳ ಮೋಟಾರ್‌ಗಳನ್ನು ಪದೇ ಪದೇ ಕದಿಯುತ್ತಿದ್ದಾರೆ ಎನ್ನುವ ಉತ್ತರ ಅಧಿಕಾರಿಗಳಿಂದ ಬಂತು. ಹಾಗಿದ್ದರೆ ಏಕೆ ಇದುವರೆಗೂ ದೂರು ದಾಖಲಿಸಿಲ್ಲ? ಕಳ್ಳರ ಮೇಲೆ ನೀವು ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಸರ್ಕಾರಕ್ಕೆ ನಷ್ಟ ಆಗುತ್ತಿದೆ. ಈ ನಷ್ಟಕ್ಕೆ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಪ್ರಶ್ನಿಸಿದರು.

ದಿನ 3 ತಿಂಗಳುಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಬಂದ್ ಆಗಬೇಕು

ಮೋಟಾರ್ ಕಳ್ಳರು ಯಾರು ಎನ್ನುವುದು, ಠಾಣಾಧಿಕಾರಿಗಳಿಗೆ ಅವರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳು ಗೊತ್ತಿರುತ್ತವೆ. ಆದರೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಮಟ್ಕಾ, ಬೆಟ್ಟಿಂಗ್, ಜೂಜು ಹೆಚ್ಚಾಗಿದೆ ಎನ್ನುವ ವರದಿ ಇದೆ. ಇವನ್ನೆಲ್ಲಾ ಸಂಪೂರ್ಣವಾಗಿ ನಿಲ್ಲಿಸಲು ಏಕೆ ಸಾಧ್ಯವಾಗಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಪ್ರಶ್ನಿಸಿದರು. ಕೇವಲ ನಿಯಂತ್ರಣ ಸಾಲಲ್ಲ. ಸಂಪೂರ್ಣ ನಿಲ್ಲಿಸಬೇಕು. ಅವರವರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ರೀತಿಯ ಕ್ರೈಂಗಳು ಠಾಣಾಧಿಕಾರಿಗಳಿಗೆ ಸಂಪೂಣ ಮಾಹಿತಿ ಇರುತ್ತದೆ. ಆದರೂ ಕ್ರಮ ತೆಗೆದುಕೊಳ್ಳುವುದಿಲ್ಲ. ಮುಂದಿನ ಮೂರು ತಿಂಗಳುಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಬಂದ್ ಆಗಬೇಕು. ಇಲ್ಲದಿದ್ದರೆ ನಿಮ್ಮನ್ನೇ ಹೊಣೆ ಮಾಡಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸಿಎಂ ಸೂಚಿಸಿದರು.

ಜಿಲ್ಲೆಯಲ್ಲಿ ಶೌಚಾಲಯಗಳು ಇಲ್ಲದ ಮನೆಗಳು ಇವೆಯೇ ಎಂದು ಸಿಎಂ ಪ್ರಶ್ನಿಸಿದರು. ಇದ್ದಾವೆ ಎಂದು ಅಧಿಕಾರಿಗಳು ವರದಿ ನೀಡಿದರು. ಹೀಗಿದ್ದೂ ಜಿಲ್ಲೆಯನ್ನು ಶೌಚಮುಕ್ತ ಜಿಲ್ಲೆ ಎಂದು ಘೋಷಿಸಿದ್ದು ಏಕೆ ಎಂದು ತೀವ್ರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿಗಳು, ನೀವು ಕೊಡುವ ತಪ್ಪು ಮಾಹಿತಿಯನ್ನು ನಾವು ಅಧಿವೇಶನದಲ್ಲಿ ಹೇಳುವುದಕ್ಕೆ ಆಗುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿ, ಸರ್ಕಾರಕ್ಕೆ ಸುಳ್ಳು ಮತ್ತು ತಪ್ಪು ಮಾಹಿತಿ ಕೊಡಬಾರದು ಎಂದು ಎಚ್ಚರಿಸಿದರು.

ಪಿಡಿಒಗಳ ಮೂಲಕ ಮನೆ ಮನೆ ಸಮೀಕ್ಷೆ ಮಾಡಿ ಎಷ್ಟು ಮನೆಗಳಲ್ಲಿ ಶೌಚಾಲಯಗಳಿಲ್ಲ, ಶೌಚಾಲಯಗಳಿಲ್ಲದ್ದಿದ್ದರೂ ಅವರು ಏಕೆ ಶೌಚಾಲಯಗಳಿಗಾಗಿ ಅರ್ಜಿ ಸಲ್ಲಿಸುತ್ತಿಲ್ಲ? ಎಷ್ಟು ಶೌಚಾಲಯಗಳ ಅಗತ್ಯ ಇದೆ? ಎಷ್ಟು ಅರ್ಜಿಗಳು ಬಂದಿವೆ ಎನ್ನುವ ಸಂಪೂರ್ಣ ವಿವರ ಕೇಳಿದ ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಮುಂದಿನ ಸಭೆಯೊಳಗೆ ಸಮೀಕ್ಷೆ ಮುಗಿದು ಶೌಚಾಲಯಗಳ ನಿರ್ಮಾಣ ಆಗಿರಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: Engineering Seats: ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಸಿಹಿಸುದ್ದಿ; ಈ ಬಾರಿ ಹೆಚ್ಚು ಸೀಟುಗಳು ಲಭ್ಯ!

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಗವಿಯಪ್ಪ, ಗಣೇಶ್, ಎಂ.ಪಿ. ಲತಾ, ಶ್ರೀನಿವಾಸ್ ಉಪಸ್ಥಿತರಿದ್ದರು.

Exit mobile version