ಬೆಂಗಳೂರು: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆ (Village Administrative Officer) ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮತ್ತೆ ವಿಸ್ತರಣೆ ಮಾಡಿದೆ. ಅರ್ಜಿ ಸಲ್ಲಿಕೆಗೆ ಮೇ 5 ಕೊನೆಯ ದಿನವಾಗಿತ್ತು. ಆದರೆ, ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಸಲು ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲು ಹುದ್ದೆ ಆಕಾಂಕ್ಷಿಗಳು ಕೋರಿದ್ದರು. ಹೀಗಾಗಿ ಮೇ 15ರವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಲಾಗಿದೆ.
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ (Job News) ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (Karnataka Examinations Authority) ಫೆ.20ರಂದು ಅಧಿಸೂಚನೆ (VAO Recruitment 2024) ಪ್ರಕಟಿಸಿತ್ತು. ಅದರಂತೆ ಮಾರ್ಚ್ 3 ರಿಂದ ಏಪ್ರಿಲ್ 3ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ, ಆನ್‌ಲೈನ್ ಅರ್ಜಿಯಲ್ಲಿ ಕೆಲವು ಬದಲಾವಣೆಯ ಕಾರಣ ಅರ್ಜಿಯನ್ನು ಸಲ್ಲಿಸಲು ದಿನಾಂಕವನ್ನು ಮುಂದೂಡಿ, ಮೇ 4 ವರೆಗೆ ಅರ್ಜಿ ಸಲ್ಲಿಸಲು ಹಾಗೂ ಮೇ 7 ರ ರೆಗೆ ಶುಲ್ಕ ಪಾವತಿಸಲು ಅವಕಾಶ ನೀಡಲಗಿತ್ತು. ಹೀಗಿದ್ದರೂ ಮತ್ತೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಎರಡನೇ ಬಾರಿ ಅರ್ಜಿ ಸಲ್ಲಿಕೆ ಅವಧಿ (ಮೇ 15ರವರೆಗೆ) ವಿಸ್ತರಿಸಲಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ವಿಸ್ತರಿಸಲಾದ ಕೊನೆಯ ದಿನಾಂಕ: ಮೇ 15
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ (ಬ್ಯಾಂಕ್ ಕೆಲಸದ ವೇಳೆ ವರೆಗೆ): ಮೇ 18
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ
ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಫೆ.20ರಂದು ಅಧಿಸೂಚನೆ ಹೊರಡಿಸಿತ್ತು. ಆಸಕ್ತ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 15 ಕೊನೆಯ ದಿನವಾಗಿದೆ.
ವಿದ್ಯಾರ್ಹತೆ
- ದ್ವಿತೀಯ ಪಿಯುಸಿ ಅಥವಾ ತತ್ಸಮಾನ (ಆದೇಶ ಸಂಖ್ಯೆ: ಇಡಿ 09 ಟಿವಿಇ 2019, ದಿನಾಂಕ 06.08.2021 ಮತ್ತು ಆದೇಶ ಸಂಖ್ಯೆ ಇಡಿ 33 ಟಿವಿಇ 2021 ದಿನಾಂಕ 30.09.2021ಗಳನ್ನು ಮತ್ತು ಉಳಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆ ಸಂಖ್ಯೆ ಸಿಆಸುಇ 81 ಸೇವನೆ 2017 ದಿನಾಂಕ 27.02.2018ರ ಅನ್ವಯ ಈ ಕೆಳಕಂಡ ವಿದ್ಯಾರ್ಹತೆಗಳನ್ನು ತತ್ಸಮಾನವೆಂದು ಆದೇಶಿದೆ.)
- ಸಿಬಿಎಸ್ಸಿ ಮತ್ತು ಐಸಿಎಸ್ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ.
- ಇತರ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ.
- ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಒ.ಎಸ್) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್/ ಎಚ್.ಎಸ್.ಸಿ.
- ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ (ಜೆ.ಒ.ಸಿ/ಜೆ.ಒ.ಡಿ.ಸಿ/ಜೆ.ಎಲ್.ಡಿ.ಸಿ)
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಪ್ರವರ್ಗ 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ / ಪಂಗಡ, ಪ್ರವರ್ಗ -1, ಮಾಜಿ ಸೈನಿಕರು ಮತ್ತು ವಿಶೇಷ ಚೇತನ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಆನ್‌ಲೈನ್ ಮೂಲಕ ಪಾವತಿಸುವುದು ಕಡ್ಡಾಯ.
ಆಯ್ಕೆ ಹೇಗೆ?
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭರ್ತಿ ಮಾಡಲಿದೆ. ಕರ್ನಾಟಕ ಪರೀಕ್ಷಾ ಪ್ರಾದಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳು ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆಯನ್ನು ಆಫ್‌ಲೈನ್-ಒಎಂಆರ್ ಮಾದರಿಯಲ್ಲಿ ನಡೆಸಲಾಗುತ್ತದೆ. ಪರೀಕ್ಷೆಗೆ 200 ಅಂಕಗಳನ್ನು ಒಳಗೊಂಡ 2 ಪತ್ರಿಕೆ ಇರುತ್ತದೆ. ಜತೆಗೆ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿದ್ದು, ಇದರಲ್ಲಿ ಕನಿಷ್ಠ 50 ಅಂಕ ಗಳಿಸಬೇಕು. ಪರೀಕ್ಷೆಗಳನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಹಿಂದೆ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಅಂಕಗಳ ಆಧಾರದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೆರಿಟ್ ಆಧಾರದಲ್ಲಿ ಹುದ್ದೆಗಳಿಗೆ ಆಯ್ಕೆ ನಡೆಯುತ್ತಿತ್ತು. ಆದರೆ ಈ ಸಲದಿಂದ ಆಯ್ಕೆ ವಿಧಾನವನ್ನು ಬದಲಾಯಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ ಬಳಿಕ ಅಭ್ಯರ್ಥಿಗಳ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಲಿದೆ. ನಂತರ ಜಿಲ್ಲಾವಾರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದವರನ್ನು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯೋಜನೆಗೊಳಿಸಲಾಗುತ್ತದೆ. ನಿಗದಿತ ಮೀಸಲಾತಿಯಂತೆ ಹುದ್ದೆಗಳನ್ನು ಗುರುತಿಸಿ, ಆ ಪ್ರಕಾರ ಹುದ್ದೆ ಭರ್ತಿಯಾಗಲಿವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 080-23460460.
ಇದನ್ನೂ ಓದಿ: Job Alert: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆಗೆ ತಿದ್ದುಪಡಿ; ಹೊಸ ಅಧಿಸೂಚನೆಯಲ್ಲಿ ಏನಿದೆ?
ಇದನ್ನು ಗಮನಿಸಿ
- ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
- ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಒಟ್ಟು ಅಂಕಗಳ ಪೈಕಿ ಕನಿಷ್ಠ ಶೇ. 35ರಷ್ಟು ಅಂಕ ಗಳಿಸುವುದು ಕಡ್ಡಾಯ.
- ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶದಷ್ಟು ಅಂಕ ಕಳೆಯಲಾಗುತ್ತದೆ. ಹೀಗಾಗಿ ಉತ್ತರ ಬರೆಯುವಾಗ ಎಚ್ಚರಿಕೆ ವಹಿಸಿ.
- ಪ್ರಶ್ನೆಪತ್ರಿಕೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿರುತ್ತದೆ.
- ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಎಲ್ಲ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಅರ್ಜಿ ಫಾರಂನ ಒಂದು ಪ್ರತಿಯ ಪ್ರಿಂಟ್ ಔಟ್ ಮತ್ತು ಶುಲ್ಕ ಪಾವತಿಯ ಚಲನ್ ಅನ್ನು ತಮ್ಮ ಬಳಿ ಇರಿಸಿಕೊಳ್ಳಬೇಕು.