Site icon Vistara News

Vinesh Phogat : ವಿನೇಶ್​ ಫೈನಲ್ ತಲುಪಿದ್ದೇ ಹೆಮ್ಮೆಯ ವಿಷಯ; ಫೋಗಟ್ ಸಾಧನೆಯನ್ನು ಕೊಂಡಾಡಿದ ಮೋದಿ

Vinesh Phogat

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಸ್ಪರ್ಧಿಸಿದ್ದ ಭಾರತೀಯ ಕ್ರೀಡಾಪಟುಗಳು ಮತ್ತು ಪದಕ ವಿಜೇತರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ತಮ್ಮ ನಿವಾಸದಲ್ಲಿ ಸತ್ಕರಿಸಿದ್ದಾರೆ. ಈ ವೇಳೆ ವಿನೇಶ್ ಅವರ ಸಾಧನೆಯನ್ನು ಉಲ್ಲೇಖಿಸಿದ್ದಾರೆ. ಒಲಿಂಪಿಕ್ಸ್​ ಕುಸ್ತಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ (ಮಹಿಳೆ) ಎಂಬ ಹೆಗ್ಗಳಿಕೆಗೆ ವಿನೇಶ್ ಪಾತ್ರರಾಗಿದ್ದನ್ನು ಅವರು ಕೊಂಡಾಡಿದ್ದಾರೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು.

ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಮಹಿಳೆಯರ 50 ಕೆ.ಜಿ ಚಿನ್ನದ ಪದಕದ ಸ್ಪರ್ಧೆಯಿಂದ ವಿನೇಶ್ ಅನರ್ಹಗೊಂಡಿದ್ದರು. ಅವರು ಮಿತಿಗಿಂತ 100 ಗ್ರಾಂ ಹೆಚ್ಚುವರಿ ತೂಕ ಹೊಂದಿದ್ದಕ್ಕೆ ಅನರ್ಹಗೊಳಿಸಲಾಯಿತು. ಗ್ರ್ಯಾಂಡ್ ಸ್ಪೋರ್ಟ್ಸ್ ಅಖಾಡದಲ್ಲಿ ಆದ ನೋವಿನಿಂದಾಗಿ ಅವರು ಕುಸ್ತಿಯಿಂದ ನಿವೃತ್ತರಾಗುವ ನಿರ್ಧಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದರು.

ಹರಿಯಾಣದ ಕುಸ್ತಿಪಟು ಮೂರು ಕಾಮನ್ವೆಲ್ತ್ ಗೇಮ್ಸ್ ಚಿನ್ನ, ಎರಡು ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ಮತ್ತು ಒಂದು ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದಿದ್ದಾರೆ. ಅವರು 2021ರಲ್ಲಿ ಏಷ್ಯನ್ ಚಾಂಪಿಯನ್ ಕಿರೀಟವನ್ನು ಪಡೆದವರು. ಅವರು ಒಲಿಂಪಿಕ್ ಅನರ್ಹತೆಯ ವಿರುದ್ಧ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ (ಸಿಎಎಸ್) ಗೆ ಮೇಲ್ಮನವಿ ಸಲ್ಲಿಸಿದರು. 50 ಕೆಜಿ ವಿಭಾಗದಲ್ಲಿ ಜಂಟಿ ಬೆಳ್ಳಿ ಪದಕವನ್ನು ಒತ್ತಾಯಿಸಿದರು. ಸಿಎಎಸ್​​ನ ತಾತ್ಕಾಲಿಕ ವಿಭಾಗವು ಅನರ್ಹತೆಯ ವಿರುದ್ಧ ವಿನೇಶ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಇದು ಅವರ ಚೊಚ್ಚಲ ಒಲಿಂಪಿಕ್ ಪದಕವನ್ನು ಗೆಲ್ಲುವ ಕನಸನ್ನು ಭಗ್ನಗೊಳಿಸಿತು.

ಇದನ್ನು ಓದಿ: Vinesh Phogat : ತೂಕ ಇಳಿಸಲು ಹೋಗಿ ಸಾವಿನ ಬಾಗಿಲು ತಟ್ಟಿದ್ದ ವಿನೇಶ್​ ಫೋಗಟ್​; ಭಯಾನಕ ಕ್ಷಣಗಳನ್ನು ವಿವರಿಸಿದ ಕೋಚ್​!

ಪ್ಯಾರಿಸ್ ಕ್ರೀಡಾಕೂಟದಲ್ಲಿ ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಕ್ವೆಸ್ಟ್ರಿಯನ್​​, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್, ನೌಕಾಯಾನ, ಶೂಟಿಂಗ್, ಈಜು, ಕುಸ್ತಿ, ಟೇಬಲ್ ಟೆನಿಸ್ ಮತ್ತು ಟೆನಿಸ್ ಸೇರಿದಂತೆ 16 ಕ್ರೀಡೆಗಳಲ್ಲಿ ಒಟ್ಟು 117 ಭಾರತೀಯ ಕ್ರೀಡಾಪಟುಗಳು ಭಾಗವಹಿಸಿದ್ದರು.

ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತ ಆರು ಪದಕಗಳನ್ನು ಗೆದ್ದಿದೆ. ಒಂದು ಬೆಳ್ಳಿ ಮತ್ತು ಐದು ಕಂಚು. ಪ್ರದರ್ಶನದ ನಿರೀಕ್ಷೆಗಳು ಹೆಚ್ಚಿದ್ದರೂ, 2021 ರಲ್ಲಿ ಟೋಕಿಯೊ ಒಲಿಂಪಿಕ್ಸ್​ನಲ್ಲಿ ದೇಶವು ಏಳು ಪದಕಗಳನ್ನು (1 ಚಿನ್ನ, 2 ಬೆಳ್ಳಿ ಮತ್ತು 4 ಕಂಚು) ಗಳಿಸಿ 48 ನೇ ಸ್ಥಾನದಲ್ಲಿತ್ತು.

Exit mobile version