ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(paris olympics) ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿರುವ ತವಕದಲ್ಲಿದ್ದ ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಅವರಿಗೆ ಆಘಾತವೊಂದು ಎದುರಾಗಿದೆ. ಅವರ ತೂಕ ವಿಭಾಗದಲ್ಲಿ 50 ಕೆಜಿಗಿಂತ 100 ಗ್ರಾಂ ಹೆಚ್ಚು ಇದ್ದ ಕಾರಣಕ್ಕೆ ಅವರನ್ನು ಫೈನಲ್ನಿಂದ ಅನರ್ಹ ಮಾಡಲಾಗಿದೆ ಎಂದು ವರದಿಯಾಗಿದೆ. ಅವರು ಇಂದು(ಬುಧವಾರ) ರಾತ್ರಿ ನಡೆಯುವ ಫೈನಲ್ ಪಂದ್ಯದಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್ ಸವಾಲು ಎದುರಿಸಬೇಕಿತ್ತು. ವಿನೇಶ್ ಫೋಗಟ್ ಅವರನ್ನು ಅನರ್ಹ ಮಾಡಿದ ಕುರಿತು ಭಾರತದ ನಿಯೋಗದಿಂದ ದೂರ ದಾಖಲಿಸಲಾಗಿದೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಕೂಡ ವಿನೇಶ್ ಫೋಗಟ್ ಅನರ್ಹತೆಯನ್ನು ಖಚಿತಪಡಿಸಿದೆ. ವಿನೇಶ್ ಅವರು 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದರು, ಆದರೆ ಅವರ ತೂಕ ನಿಗದಿತ ಮಿತಿಗಿಂತ ಹೆಚ್ಚಿರುವುದರಿಂದ ಅವರನ್ನು ಕುಸ್ತಿ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ನಾವು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ದೂರು ದಾಖಲಿಸಿದ್ದೇವೆ ಎಂದು ಭಾರತೀಯ ಒಲಿಂಪಿಕ್ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಂಗಳವಾರ ನಡೆದಿದ್ದ ಪ್ರೀ ಕ್ವಾರ್ಟರ್, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯದಲ್ಲಿ ವಿನೇಶ್ ಅವರು ತನಗಿಂತ ಮೇಲಿನ ಶ್ರೇಯಾಂಕದ, ಅದರಲ್ಲೂ ಪ್ರೀ ಕ್ವಾರ್ಟರ್ನಲ್ಲಿ 4 ಬಾರಿಯ ವಿಶ್ವ ಚಾಂಪಿಯನ್ ಹಾಗೂ ಸೋಲನ್ನೇ ಕಾಣದ ಕುಸ್ತಿಪಟುವಿಗೆ ಸೋಲುಣಿಸಿದ್ದು ನಿಜಕ್ಕೂ ಸಣ್ಣ ಸಾಧನೆಯಲ್ಲ. 8 ಗಂಟೆಯ ಅಂತರದಲ್ಲಿ ಮೂರು ಗೆಲುವು ಸಾಧಿಸಿ ಅವರು ಫೈನಲ್ ಪ್ರವೇಶಿಸಿದ್ದರು. ಇಡೀ ದಿನದಲ್ಲಿ ಆಡಿದ ಮೂರು ಬೌಟ್‌ಗಳಲ್ಲಿಯೂ ವಿನೇಶ್ ಪಾರಮ್ಯ ಮೆರೆದಿದ್ದು ವಿಶೇಷ.
ಒಲಿಂಪಿಕ್ಸ್‌ನಲ್ಲಿ ಫೈನಲ್ಗೇರಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿನೇಶ್, ಪ್ಯಾರಿಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಇರಾದೆಯೊಂದಿಗೆ ಇಂದು ಕಣಕ್ಕಿಳಿಯಬೇಕಿತ್ತು. ಹರಿಯಾಣದ 29 ವರ್ಷದ ವಿನೇಶ್ ಮಂಗಳವಾರ ರಾತ್ರಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯಸ್ನಿಲಿಸ್ ಗುಜ್ಮನ್ ಲೋಪೆಜ್ ವಿರುದ್ಧ 5-0 ಅಂಕಗಳಿಂದ ಸುಲಭ ಗೆಲುವು ದಾಖಲಿಸಿ ಫೈನಲ್ಗೆ ಮುನ್ನಡೆದಿದ್ದರು.
ಮಹಿಳಾ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಒಲಿಯುವ 2ನೇ ಪದಕ ಇದಾಗಿತ್ತು. ಇದಕ್ಕೂ ಮುನ್ನ ರಿಯೊ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್ ಅವರು ಕಂಚು ಗೆದ್ದಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಮಂಡಿನೋವಿನಿಂದ ಸಮಸ್ಯೆಯಾಗಿತ್ತು. 2021ರ ಟೋಕಿಯೊದಲ್ಲಿ ಅನಿರೀಕ್ಷಿತ ಸೋಲು ಕಂಡು ಹೊರಬಿದಿದ್ದರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿನೇಶ್ ಅವರು ಮೂರು ಬಾರಿಯ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತೆ ಉಕ್ರೇನ್ನ ಒಕ್ಸಾನಾ ಲಿವಾಚ್ ವಿರುದ್ಧ 7-5 ಅಂತರದ ರೋಚಕ ಗೆಲುವು ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿದರು. ಇದಕ್ಕೂ ಮುನ್ನ ನಡೆದಿದ್ದ ಅತ್ಯಂತ ರೋಚಕ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿನೇಶ್ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ನಾಲ್ಕು ಬಾರಿಯ ವಿಶ್ವ ಚಾಂಪಿಯನ್, ಸೋಲನ್ನೇ ಕಾಣದ ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಈ ಮೂಲಕ ಸುಸಾಕಿ ಅವರಿಗೆ ಮೊದಲ ಸೋಲಿನ ರುಚಿ ತೋರಿಸಿದರು.
ಸಸಾಕಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಕಂಡ ಮೊದಲ ಆಘಾತಕಾರಿ ಸೋಲು ಇದಾಗಿದೆ. ಈ ಪಂದ್ಯಕ್ಕೂ ಮುನ್ನ 82 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ಸುಸಾಕಿ ಎಲ್ಲ ಪಂದ್ಯವನ್ನು ಗೆದ್ದು ಬೀಗಿದ್ದರು. ಇದೀಗ ಇವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುವಲ್ಲಿ ಭಾರತೀಯ ಕುಸ್ತಿಪಟು ಯಶಸ್ಸು ಕಂಡಿದ್ದಾರೆ. ಈ ಗೆಲುವು ಸಾಧಿಸಿದಾಗಲೇ ವಿನೇಶ್ ಈ ಬಾರಿ ಪದಕ ಗೆಲ್ಲುವುದು ಖಚಿತ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಇದೀಗ ಅವರ ಪದಕದ ಕನಸು ನುಚ್ಚುನೂರಾಗಿದೆ. ಅವರನ್ನು ಅನರ್ಹಗೊಳಿಸಲಾಗಿದೆ.