Site icon Vistara News

Vinesh Phogat : ಕ್ರೀಡಾ ಕೋರ್ಟ್ ಅನರ್ಹತೆ ಬಳಿಕ ಚಿತ್ರ ಹಾಕಿ ಮೊದಲ ಪ್ರತಿಕ್ರಿಯೆ ನೀಡಿದ ವಿನೇಶ್ ಫೋಗಾಟ್​

Vinesh Phogat

ನವದೆಹಲಿ: ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಿಂದ ಅನರ್ಹತೆ ಮತ್ತು ಜಂಟಿ ಬೆಳ್ಳಿ ಪದಕದ ಬೇಡಿಕೆಯ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (CAS) ಬುಧವಾರ ವಜಾಗೊಳಿಸಿತ್ತು. ಆ ಬಗ್ಗೆ ಗುರುವಾರ ವಿನೇಶ್​ ಫೋಗಟ್​ ಈ ಬಗ್ಗೆ ತಮ್ಮದೇ ಚಿತ್ರ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಮಹಿಳಾ ಫ್ರೀಸ್ಟೈಲ್ 50 ಕೆ.ಜಿ. ವಿಭಾಗದ ಫೈನಲ್​ಗೆ ಮೊದಲು ಅವರ ತೂಕದ ಹೆಚ್ಚಳದ ಕಾರಣಕ್ಕೆ ಅವರು ಅನರ್ಹಗೊಂಡಿದ್ದರು.

ಸಿಎಎಸ್ ತೀರ್ಪಿನ ನಂತರ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ತನ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 6ರಂದು ನಡೆದ ಮಹಿಳಾ ಫ್ರೀಸ್ಟೈಲ್ 50 ಕೆ.ಜಿ ಕುಸ್ತಿ ಪಂದ್ಯದ 16 ನೇ ಸುತ್ತಿನಲ್ಲಿ ಜಪಾನ್​​ನ ಯುಯಿ ಸುಸಾಕಿ ವಿರುದ್ಧ ಗೆಲುವು ಸಾಧಿಸಿದಾಗ ತಾವು ತೋರಿದ ಪ್ರತಿಕ್ರಿಯೆಯನ್ನು ಫೋಟೋವನ್ನು ಹಾಕಿಕೊಂಡಿದ್ದಾರೆ. ಚಿತ್ರದಲ್ಲಿ, ವಿನೇಶ್​ ತಮ್ಮ ಮುಖದ ಮೇಲೆ ಅಂಗೈಗಳನ್ನು ಇಟ್ಟುಕೊಂಡು ಕುಸ್ತಿ ಮ್ಯಾಟ್​ ಮೇಲೆ ಮಲಗಿ ಸಂಭ್ರಮಿಸುತ್ತಿದ್ದಾರೆ. ಅವರು ತಮ್ಮ ಚಿತ್ರಕ್ಕೆ ಪೂರಕವಾಗಿ ಭಾವನಾತ್ಮಕ ಬಿ ಪ್ರಾಕ್ ಹಾಡು ‘ರಬ್ಬಾ ವೆ’ಯ ಜತೆಗೆ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿಕೊಂಡಿದ್ದಾರೆ. ಫೋಟೋ ಹಾಕಿದ ತಕ್ಷಣ ಅವರಿಗೆ ಕಾಮೆಂಟ್​ಗಳು ಬರಲಾರಂಭಿಸಿವೆ. ಅನೇಕರು ಅವರನ್ನು “ಚಾಂಪಿಯನ್” ಮತ್ತು “ಗೋಲ್ಡನ್ ಗರ್ಲ್” ಎಂದು ಕರೆದಿದ್ದಾರೆ.

ಫೋಗಟ್ ಮೇಲ್ಮನವಿ

ಕಳೆದ ವಾರ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಫೈನಲ್​ ವೇಳೆ ತೂಕ ಇಳಿಸಲು ವಿಫಲವಾದ ಕಾರಣ ಪ್ಯಾರಿಸ್ ಒಲಿಂಪಿಕ್ಸ್​​ನ ಆಯೋಜಕರು ವಿಧಿಸಿದ ಅನರ್ಹತೆಯ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ವಜಾಗೊಳಿಸಿದೆ.

ಆಗಸ್ಟ್ 7 ರಂದು ಚಿನ್ನದ ಪದಕಕ್ಕಾಗಿ ಫೋಗಟ್ ಅಮೆರಿಕದ ಸಾರಾ ಹಿಲ್ಡೆಬ್ರಾಂಟ್ ಅವರನ್ನು ಎದುರಿಸಲು ಸಜ್ಜಾಗಿದ್ದರು ಆದರೆ ಹಸಿವಿನಿಂದ ಬಳಲುತ್ತಿದ್ದರೂ ಮತ್ತು ಹಿಂದಿನ ರಾತ್ರಿ ಸೌನಾದಲ್ಲಿ ಗಂಟೆಗಳ ಕಾಲ ಕಳೆದರೂ 100 ಗ್ರಾಂ (3.5 ಔನ್ಸ್) ಅಧಿಕ ತೂಕ ಹೊಂದಿರುವುದು ಕಂಡುಬಂದಿತ್ತು. ಅನರ್ಹತೆಯಿಂದಾಗಿ ಫೋಗಟ್ ಪದಕ ಕಳೆದುಕೊಂಡಿದ್ದರು. ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಮಾಡಿರುವ ನಿಯಮವನ್ನು ಪ್ರಶ್ನಿಸಿ ಅವರು ಕ್ರೀಡೆಯ ಅತ್ಯುನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: Paris Paralympics : ಪ್ಯಾರಾಲಿಂಪಿಕ್ಸ್​​ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ

ಫೋಗಟ್ ಅವರು ಆಗಸ್ಟ್ 8 ರಂದು ಕ್ರೀಡೆಯಿಂದ ನಿವೃತ್ತರಾಗುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ಹಿಂದಿಯಲ್ಲಿ ಬರೆಯಲಾದ ಪೋಸ್ಟ್​​ನ ಭಾಷಾಂತರ ಹೀಗಿದೆ: “ನನ್ನ ಧೈರ್ಯ ಮುರಿದಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್​ಬೈ ಕುಸ್ತಿ, 2001-2024.” ಎಂದು ಅವರು ಬರೆದುಕೊಂಡಿದ್ದರು.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತ ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕಗಳೊಂದಿಗೆ ಒಟ್ಟು ಆರು ಪದಕಗಳನ್ನು ಗೆದ್ದಿದೆ.

Exit mobile version