ನವದೆಹಲಿ: ಭಾರತದ ತಂಡದ ಟಿ20 ವಿಶ್ವಕಪ್ 2024 ರ ವಿಜಯವನ್ನು ಆಚರಿಸುವುದರ ಬಗ್ಗೆ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli ) ಹಾಕಿರುವ ಇನ್ಸ್ಟಾಗ್ರಾಮ್ (instagram) ಪೋಸ್ಟ್ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಅವರ ಆ ಪೋಸ್ಟ್ ಇನ್ಸ್ಟಾಗ್ರಾಮ್ ಪೋಸ್ಟ್ ದಾಖಲೆಗಳನ್ನು ಮುರಿದಿದೆ, ಏಷ್ಯಾದಲ್ಲಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಎಂಬ ದಾಖಲೆ ಸೃಷ್ಟಿಸಿದೆ. ಜನಪ್ರಿಯ ಮ್ಯೂಸಿಕ್ ಬ್ಯಾಂಟ್ ಬಿಟಿಎಸ್ನ ಸದಸ್ಯ ವಿ (ಕಿಮ್ ಟೇಹ್ಯುಂಗ್) ಅವರ ಹಿಂದಿನ ದಾಖಲೆಯನ್ನೂ ಮೀರಿಸಿದೆ.
2.1 ಕೋಟಿಗೂ ಹೆಚ್ಚು ಲೈಕ್ಗಳನ್ನು ಗಳಿಸಿದ ಕೊಹ್ಲಿಯ ಪೋಸ್ಟ್ ಈ ಹಿಂದಿನ ಎಲ್ಲ ದಾಖಲೆಗಳನ್ನು ಉಡಾಯಿಸಿದೆ. ಟೀಮ್ ಇಂಡಿಯಾ ತನ್ನ ವಿಜಯೋತ್ಸವವನ್ನು ಆಚರಿಸುವ ಕೊಲಾಜ್ ಮತ್ತು ಹೃತ್ಪೂರ್ವಕ ಶೀರ್ಷಿಕೆಯನ್ನು ಈ ಪೋಸ್ಟ್ಗೆ ನೀಡಲಾಗಿದೆ. “ಇದಕ್ಕಿಂತ ಉತ್ತಮ ದಿನವನ್ನು ಊಹಿಸಲು ಸಾಧ್ಯವಿಲ್ಲ. ದೇವರು ದೊಡ್ಡವನು ಮತ್ತು ನಾನು ಋಣಿಯಾಗಿ ತಲೆ ಬಾಗುತ್ತೇನೆ. ನಾವು ಅಂತಿಮವಾಗಿ ಮಾಡಿ ತೋರಿಸಿದ್ದೇವೆ. ಜೈ ಹಿಂದ್ ಎಂದು ಕೊಹ್ಲಿ ಬರೆದುಕೊಂಡಿದ್ದರು. ಭಾರತವು ಟಿ 20 ವಿಶ್ವಕಪ್ 2024 ಗೆದ್ದ ಮರುದಿನ ಜೂನ್ 30 ರಂದು ಪೋಸ್ಟ್ ಮಾಡಿದ ಕೊಹ್ಲಿಯ ಭಾವನಾತ್ಮಕ ಸಂದೇಶವು ವಿಶ್ವದಾದ್ಯಂತದ ಅಭಿಮಾನಿಗಳ ಮನ ಸೆಳೆದಿದೆ.
ಈ ಗಮನಾರ್ಹ ಸಾಧನೆಯು ವಿರಾಟ್ ಕೊಹ್ಲಿಯನ್ನು ಎಲ್ಲಾ ವಿಭಾಗಗಳಲ್ಲಿ ಬಿಟಿಎಸ್ನ 2 ಕೋಟಿ ಲೈಕ್ಗಳ ದಾಖಲೆಯನ್ನು ಮೀರಿಸಿದ ಏಷ್ಯಾದ ಮೊದಲ ವ್ಯಕ್ತಿ ಎಂಬ ದಾಖಲೆಗೆ ಅರ್ಹರನ್ನಾಗಿದೆ. ಕೊಹ್ಲಿ ಅವರ ಪೋಸ್ಟ್ ಬಾಲಿವುಡ್ ದಂಪತಿಗಳಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹ ಘೋಷಣೆಯ ಹಿಂದಿನ ದಾಖಲೆಯನ್ನು ಮುರಿದಿದೆ.
ಏಷ್ಯಾದ ದಾಖಲೆ ಮುರಿದ ಕೊಹ್ಲಿ
ಕೊಹ್ಲಿಯ ಪೋಸ್ಟ್ ಏಷ್ಯಾದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ ಮಾತ್ರವಲ್ಲ, 2 ಕೋಟಿ ಲೈಕ್ಗಳ ಮೈಲಿಗಲ್ಲನ್ನು ತಲುಪಿದ ಏಷ್ಯಾದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಯು ಕೊಹ್ಲಿಯನ್ನು ವಿಶ್ವಾದ್ಯಂತ ಕ್ರೀಡಾಪಟುಗಳು ಹೆಚ್ಚು ಲೈಕ್ ಮಾಡಿದ ಮೊದಲ ಐದು ಪೋಸ್ಟ್ಗಳಲ್ಲಿ ಒಂದಾಗಿದೆ. ಇದು ಅವರ ಅಪಾರ ಜಾಗತಿಕ ಅಭಿಮಾನಿ ಬಳಗವನ್ನು ಎತ್ತಿ ತೋರಿಸುತ್ತದೆ.
ಈ ಐತಿಹಾಸಿಕ ಗೆಲುವಿನ ನಂತರ, ವಿರಾಟ್ ಕೊಹ್ಲಿ ಟಿ 20 ಅಂತರರಾಷ್ಟ್ರೀಯ ಸ್ವರೂಪದಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ವಿರಾಟ್ ಕೊಹ್ಲಿ ಪ್ರಸ್ತುತ ಪತ್ನಿ ಅನುಷ್ಕಾ ಶರ್ಮಾ ಮತ್ತು ಅವರ ಮಕ್ಕಳೊಂದಿಗೆ ಲಂಡನ್ನಲ್ಲಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯ ಬಳಿಕ ಲಂಡನ್ನಲ್ಲಿ ವಾಸ ಮಾಡುತ್ತಾರೆ ಎಂಬುದಾಗಿಯೂ ಸುದ್ದಿಯಾಗಿದೆ. ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಯುಕೆ ಮೂಲದ ಸಂಸ್ಥೆಯೊಂದರ ನಿರ್ದೇಶಕರಾಗಿದ್ದಾರೆ. ಎರಡನೇ ಮಗು ಅಕಾಯ್ಗೆ ಅನುಷ್ಕಾ ಲಂಡನ್ನಲ್ಲಿಯೇ ಜನ್ಮ ನೀಡಿದ್ದರು. ಅಲ್ಲಿಂದ ಬಳಿಕ ಅವರು ಅಲ್ಲಿಯೇ ವಾಸವಾಗಿದ್ದಾರೆ. ಮೊದಲ ಮಗು ವಾಮಿಕಾ ಕೂಡ ತಾಯಿಯೊಂದಿಗೆ ಇದ್ದಾಳೆ.
ವಿರಾಟ್ ಕೊಹ್ಲಿ ವಿಶ್ವ ಕಪ್ ತಂಡ ಸೇರುವ ಮೊದಲು ಕೂಡ ಲಂಡನ್ನಿಂದಲೇ ಪ್ರಯಾಣ ಆರಂಭಿಸಿದ್ದರು. ಅವರು ಐಪಿಎಲ್ನ ಮುಗಿಸಿದ ತಕ್ಷಣ ಭಾರತವನ್ನು ಬಿಟ್ಟು ಲಂಡನ್ ಸೇರಿಕೊಂಡಿದ್ದರು. ಅವರು ಮೊದಲ ಹಂತದಲ್ಲಿ ಭಾರತ ತಂಡದ ಜತೆ ಅಮೆರಿಕಕ್ಕೆ ಪ್ರಯಾಣ ಮಾಡಿರಲಿಲ್ಲ. ತಂಡವಾಗಿ ತಂಡ ಸೇರಿಕೊಂಡಿದ್ದರು.