ಸನತ್ ರೈ, ಬೆಂಗಳೂರು
ನೀನೊಬ್ಬ ಮಾಸ್ಟರ್ ಪೀಸ್..! ಮೈದಾನದಲ್ಲಿ ನೀಡಾಡುವ ಆಟದ ಪರಿಯೇ ಅದ್ಭುತ..! ಎದುರಾಳಿಗಳಿಗೆ ನೀನೊಬ್ಬ ಘನಘೋರ ಅಸುರ.. ಟೀಮ್ ಇಂಡಿಯಾದ ಗರ್ಭಗುಡಿಗೆ ನೀನೇ ರಕ್ಷಕ..! ಅಬ್ಬಾ.. ನಿನ್ನ ಬ್ಯಾಟಿಂಗ್ ವೈಖರಿಯನ್ನು ಯಾವ ರೀತಿ ಬಣ್ಣಿಸಬೇಕು ಅಂತನೇ ತಿಳಿಯುತ್ತಿಲ್ಲ. ಯಾಕಂದ್ರೆ ನೀನು ಮೈದಾನದಲ್ಲಿ ಆಡುತ್ತಿದ್ದಿಯೋ ಅಥವಾ ಯುದ್ಧ ಮಾಡುತ್ತಿದ್ದಿಯೋ ಎಂಬುದೇ ಗೊತ್ತಾಗುತ್ತಿಲ್ಲ. ಮೈದಾನದಲ್ಲಿ ನೀನಾಡುವ ಪರಿಯನ್ನು ನೋಡಿದಾಗ ನೀ ರಕ್ಷಕನೋ..ರಕ್ಕಸನೋ ಅನ್ನೋ ಅನುಮಾನ ಕೂಡ ಮೂಡದೇ ಇರುವುದಿಲ್ಲ.
ಹೌದು, ಪುರಾಣ ಕಥೆಗಳಲ್ಲಿ ಏಕಾಂಗಿಯಾಗಿ ಯುದ್ಧ ಮಾಡುವ ಮಹಾ ಶೂರರ ಕಥೆಗಳನ್ನು ಕೇಳಿದ್ರೂ ಕಣ್ಣಾರೆ ನೋಡಿಲ್ಲ. ಆದ್ರೆ 22 ಯಾರ್ಡ್ ನ ಕ್ರಿಕೆಟ್ ಮೈದಾನದಲ್ಲಿ ನಿನ್ನಾಟವನ್ನು ಕಣ್ಣಾರೆ ನೋಡಿದ ಮೇಲೆ ನೀನೊಬ್ಬ ಮಹಾ ಶೂರನಂತೆ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ.
ಟೀಮ್ ಇಂಡಿಯಾದ ದಳಪತಿಯಾಗಿ ತಂಡವನ್ನು ರಕ್ಷಣೆ ಮಾಡುವುದು ನಿನ್ನ ಜವಾಬ್ದಾರಿ ಎಂಬುದನ್ನು ನೀ ಮರೆಯುವುದಿಲ್ಲ. ತಂಡದ ಗೆಲುವಿಗಾಗಿ ನೀ ನಡೆಸುವ ಹೋರಾಟಕ್ಕೆ ಭೇಷ್ ಅನ್ನದಿರಲು ಎಂಥ ಕಠೋರ ಕೂಡ ಮನಸ್ಸು ಒಪ್ಪುವುದಿಲ್ಲ. ಕ್ರಿಕೆಟ್ ಲೋಕದ ಮಹಾನ್ ಬೌಲರ್ಗಳನ್ನು ನೀ ಘನಘೋರ ರಕ್ಕಸನಂತೆ ಕಾಡಿದ್ದು ಸುಳ್ಳಲ್ಲ. ಉಗ್ರಪ್ರತಾಪಿಯಂತೆ ಬ್ಯಾಟ್ ಬೀಸಿದ ನಿನ್ನನ್ನು ಕ್ರಿಕೆಟ್ ಜಗತ್ತು ಮಹಾ ಕ್ರೂರಿ ಅಂತ ಬಣ್ಣಿಸಿದ್ರೂ ಅಚ್ಚರಿ ಏನಿಲ್ಲ. ಹಾಗೇ ಟೀಮ್ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳು ನಿನ್ನನ್ನು ಚೇಸಿಂಗ್ ಮಾಸ್ಟರ್ ಅಂತ ಉಘೇ.. ಉಘೇ ಅನ್ನುವುದರಲ್ಲಿ ತಪ್ಪೇನೂ ಇಲ್ಲ.
ಯಾಕಂದ್ರೆ ನೀ ಆಡುವ ರೀತಿ ಹಾಗಿದೆ. ಚೆಂಡು ಬ್ಯಾಟ್‍ನ ಸಮರದಲ್ಲಿ ಕೋಪ, ರೋಷಾಗ್ನಿ ಜ್ವಾಲೆ ನಿನ್ನ ಮುಖದಲ್ಲಿ ಪ್ರಜ್ವಲಿಸುತ್ತದೆ. ಮಾತಿಗೆ ಮಾತು.. ಏಟಿಗೆ ಏಟು.. ಅಲ್ಲೇ ಡ್ರಾ.. ಆಲ್ಲೇ ಬಹುಮಾನ ಎಂಬಂತೆ ಕೆಣಕಿದವರಿಗೆ ನೀ ಕೊಡುವ ತಿರುಗೇಟನ್ನು ಜೀವಮಾನದಲ್ಲೇ ಅವರು ಮರೆಯಲಿಕ್ಕಿಲ್ಲ. ನೀ ಗಳಿಸಿದ್ದ ಒಂದೊಂದು ರನ್‍ಗಳಿಗೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಇನ್ನು ಬೌಂಡರಿ ಸಿಕ್ಸರ್‍ಗಳ ಅಬ್ಬರಕ್ಕೆ ಅಭಿಮಾನಿಗಳ ಕೂಗು ಝೇಂಕಾರದಂತೆ ಮಾರ್ದನಿಸುತ್ತದೆ.ಈ ಕಾರಣದಿಂದಲೇ ಕ್ರಿಕೆಟ್ ಜಗದಗಲದಲ್ಲಿ ಪ್ರತಿಧ್ವನಿಸುತ್ತಿದೆ ನಿನಗೆ ಕೊಟ್ಟ ಬಿರುದುಗಳು. ಅದುವೇ ಚೇಸಿಂಗ್ ಮಾಸ್ಟರ್..! ಚೇಸಿಂಗ್ ಗಾಡ್..!
ಹೌದು, ನಿನ್ನದು ಕಿರು ನಗೆಯಿಂದಲೇ ಸೂಜಿಗಲ್ಲಿನಂತೆ ಆಕರ್ಷಿಸುವ ನೋಟ… ಆದ್ರೆ ನೀ ನೋಡುವುದಕ್ಕೆ ಮಾತ್ರ ತುಂಬಾನೇ ಒರಟ…ವಯಸ್ಸು 35 ದಾಟಿದ್ರೂ ಇನ್ನೂ ಬಿಟ್ಟಿಲ್ಲ ತುಂಟಾಟ.. ಕ್ರಿಕೆಟ್ ಮೈದಾನಕ್ಕಿಳಿದ್ರೆ ಸಾಕು ಸುನಾಮಿಯನ್ನು ನಾಚಿಸುವಂತಹ ನಿನ್ನ ಆರ್ಭಟ.. ಬೌಲರ್‍ಗಳಿಗೆ ಸುಸ್ತು ಸುಸ್ತಾಗುವಷ್ಟು ಕೊಡ್ತಿಯ ಕಾಟ…ಎಂಥ ಒತ್ತಡದಲ್ಲೂ ಹಿತವಾಗಿ, ಮಜವಾಗಿ ಆಡುವುದು ನಿನ್ನ ಪರಿಪಾಠ..ಎದುರಾಳಿ ಆಟಗಾರರು ಮಾತಿನ ಸಮರ ನಡೆಸಿದ್ರೆ ಹಿಂದೆ ಮುಂದೆ ನೋಡದೆ ಮಾಡ್ತಿಯಾ ಕಿತ್ತಾಟ.. ಬ್ಯಾಟಿಂಗ್ ಲಯವಿದ್ರೂ, ಲಯ ತಪ್ಪಿದ್ರೂ ಮೈದಾನದಲ್ಲೇ ನಿನ್ನದೇ ರಂಪಾಟ.. ಸೋಲನ್ನು ಒಪ್ಪಿಕೊಳ್ಳದ ಮನದಲ್ಲಿದೆ ಗೆಲ್ಲಲೇಬೇಕು ಅನ್ನೋ ಹಠ.… ಕ್ರಿಕೆಟ್‍ನ ಎಲ್ಲಾ ಗ್ರಾಮರ್‍ಗಳನ್ನು ಮಾಡಿಕೊಂಡಿದ್ದೀಯಾ ಕಂಠಪಾಠ. ಕ್ರಿಕೆಟ್ ಜಗತ್ತನ್ನು ಒಂದು ಕ್ಷಣ ಚಕಿತಗೊಳಿಸುವಂತೆ ಮಾಡುತ್ತೆ ನಿನ್ನ ಬೊಂಬಾಟ್ ಆಟ.…ಪ್ರತಿ ಕ್ಷಣವೂ ನಿನ್ನ ಯೋಚನೆಯಲ್ಲಿರುತ್ತೆ ಸಾಧನೆಯ ಹುಡುಕಾಟ. ಆಧುನಿಕ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲವೂ ನಿನ್ನದೇ ಚೆಲ್ಲಾಟ. ಪ್ರಬುದ್ಧ, ಪರಿಪಕ್ವ ಆಟದಿಂದಲೇ ಆಗಿದ್ದಿಯಾ ನೀನು ವಿಶ್ವ ಸಾಮ್ರಾಟ…
ನಿಜ, ನೀನು ಮಾಡಿರುವ ಸಾಧನೆಯೇ ಅಂತಹುದ್ದು. ಅದನ್ನು ಯಾರು ಕೂಡ ಊಹೆ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಸಾಧನೆಯ ಹಿಂದಿನ ಒಂದೊಂದು ಹೆಜ್ಜೆಯಲ್ಲೂ ರಾಜ ಗಾಂಭೀರ್ಯವಿದೆ. ಅಷ್ಟೊಂದು ಅರ್ಥಗರ್ಭಿತವಾಗಿದೆ ನೀನು ನಡೆದು ಬಂದಿರುವ ರಾಜಪಥದ ಹಾದಿ.
ನಿನ್ನಂತಹ ಮ್ಯಾಚ್ ವಿನ್ನರ್ ಮತ್ತೊಬ್ಬನಿಲ್ಲ..!
ನಿಜ, ನಿನ್ನ ಆಟಕ್ಕೆ ಏನೆಂದು ಹೆಸರಿಡಬೇಕು. ಸೋಲಿನ ದವಡೆಯಿಂದ ಪಾರು ಮಾಡುವ ರೀತಿಯನ್ನು ಹೇಗಂತ ವರ್ಣಿಸಬೇಕು. ಒತ್ತಡದಲ್ಲೂ ಆಡುವ ಕಲೆಯನ್ನು ಕರಗತ ಮಾಡ್ಕೊಂಡಿರುವ ಲಯಕ್ಕೆ ಏನಂತ ಹೇಳಬೇಕು. ವಿರೋಧಿಗಳು ತಲೆಬಾಗುವಂತೆ ಆಡುವ ವೈಖರಿಯನ್ನು ಯಾವ ಪರಿ ಕೊಂಡಾಡಬೇಕು. ಅಭಿಮಾನಿಗಳ ಮೊಗದಲ್ಲಿ ನಗುವಿನ ಚಿತ್ತಾರ ಬಿಡಿಸಿರುವುದನ್ನು ಹೇಗೆ ಮರೆಯಲಿ. ಕ್ರಿಕೆಟ್ ಜಗತ್ತನ್ನು ಆಕ್ಷೇಪ ಮಾಡುವ ದಾಟಿಯನ್ನು ಯಾವ ಶಬ್ದದಿಂದ ಕರೆಯಲಿ..ಅಷ್ಟಕ್ಕೂ ಮೈದಾನದಲ್ಲಿ ವಿರಾಟ್ ನಡೆಸುವ ಒಡ್ಡೋಲಗವನ್ನು ಹೇಳಲು ಪದಪುಂಜಗಳು ಸಿಗುತ್ತಿಲ್ಲ. ಏಕಾಂಗಿಯಾಗಿ ನಡೆಸಿದ ಹೋರಾಟದ ಹೊಲಿಕೆಗೆ ನವರಸಗಳು ಸಾಕಾಗುತ್ತಿಲ್ಲ. ಬೌಲರ್ಗಳನ್ನು ಎದುರು ಮಾಡುವ ತಾಂಡವ ನೃತ್ಯಕ್ಕೆ ಮನಸೋಲದವರಿಲ್ಲ. ಬ್ಯಾಟ್ ಅನ್ನು ಗದೆಯಂತೆ ತಿರುಗಿಸುತ್ತ ರನ್ ಗಳಿಸುವ ನಿನ್ನಂತಹ ಚಾಣಾಕ್ಯ ಇನ್ನೊಬ್ಬನಿಲ್ಲ. ಸವಾಲನ್ನು ಸ್ವೀಕರಿಸಿ ತಂಡವನ್ನು ಗೆಲುವಿನ ದಡ ಸೇರಿಸುವ ನಿನ್ನಂತಹ ಮ್ಯಾಚ್ ವಿನ್ನರ್ ಮತ್ತೊಬ್ಬನಿಲ್ಲ.
ಏನೇ ಆದ್ರೂ ಕ್ರಿಕೆಟ್ ಅನ್ನೋ ಇಂಗ್ಲೀಷರ ಆಟದಲ್ಲೂ ನವರಸಗಳನ್ನು ಬೆರೆಸಿದ ಮಹಾ ಮಾಂತ್ರಿಕ. ಶೃಂಗಾರ ಕಾವ್ಯದಂತೆ ರನ್‍ಗಳಿಸುವ ಕಲಾಕಾರ. ಮಹೋನ್ನತ ಇನಿಂಗ್ಸ್ ನಡುವೆಯೇ ಹಾಸ್ಯ ಮಾಡುವ ಹಾಸ್ಯಗಾರ. ಕೆಣಕಲು ಬಂದ್ರೆ ಮೈದಾನದಲ್ಲೇ ನಿನ್ನ ರೌದ್ರಾವತಾರ. ಕಠಿಣ ಸಂದರ್ಭದಲ್ಲಿ ಕರುಣಾ ರಸದಂತೆ ಆಡುವ ಆಟಗಾರ. ಸವಾಲಿನ ಪ್ರಶ್ನೆ ಬಂದಾಗ ಭೀಭತ್ಸ ತೋರುವ ಮಹಾಶೂರ . ಅಷ್ಟೇ ಅಲ್ಲ, ಏಕಾಂಗಿಯಾಗಿ ಎದುರಾಳಿಯನ್ನು ಧ್ವಂಸಗೊಳಿಸುವ ವೀರ ಹೋರಾಟಗಾರ. ಎಂತಹ ಸನ್ನಿವೇಶದಲ್ಲೂ ಅದ್ಭುತ ಆಟ ಪ್ರದರ್ಶಿಸುವ ಜಾದುಗಾರ. ಕ್ರೀಸ್‍ಗೆ ಆಗಮಿಸುವಾಗಲೇ ಎದುರಾಳಿ ತಂಡಕ್ಕೆ ಭಯಮೂಡಿಸುವ ರಣಧೀರ. ಶಾಂತ ಚಿತ್ತದಿಂದಲೇ ಎಲ್ಲವನ್ನು ಅರಿತುಕೊಂಡು ಕ್ರಿಕೆಟ್ ಜಗತ್ತನ್ನು ಮೋಡಿ ಮಾಡುವ ಮೋಡಿಗಾರ.
ಒಂದಂತೂ ನಿಜ, ನಿನ್ನ ಅಭಿಮಾನಿಗಳಿಗೆ ನೀನು ಎಷ್ಟು ಆಡಿದ್ರೂ, ಎಷ್ಟು ರನ್ ಗಳಿಸಿದ್ರೂ ಅವರ ಮನ ತಣಿಸುವುದಿಲ್ಲ. ಅಭಿಮಾನಿಗಳ ಹೃದಯಕ್ಕೆ ಇನ್ನಷ್ಟು ಬೇಕು ಅಂತ ಅನ್ನಿಸುತ್ತಲೇ ಇರುತ್ತದೆ. ಯಾಕಂದ್ರೆ ನಿನ್ನ ಮೇಲೆ ಅವರಿಗೆ ಆಗಾಧವಾದ ನಂಬಿಕೆ ಮತ್ತು ಪ್ರೀತಿ ಇದೆ. ಅಂತಹ ಒಂದು ಸ್ಥಾನವನ್ನು ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿಟ್ಟುಕೊಳ್ಳುವಂತೆ ಮಾಡಿದ್ದೀಯಾ… ಅದಕ್ಕಾಗಿಯೇ ನೀನು ಚುಟುಕು ಕ್ರಿಕೆಟ್‍ಗೆ ವಿದಾಯ ಹೇಳಿದಾಗ ನಿನ್ನ ಅಭಿಮಾನಿಗಳು ಕಣ್ಣೀರು ಸುರಿಸಿದ್ರು. ಆದ್ರೆ ನೀನು ಟಿ-20 ವಿಶ್ವಕಪ್ ಗೆದ್ದು ಸಾರ್ಥಕತೆಯೊಂದಿಗೆ ಟಿ-20 ಕ್ರಿಕೆಟ್‍ಗೆ ವಿದಾಯ ಹೇಳಿದ್ದೀಯ. ಆದ್ರೂ ಒಂದು ರೀತಿಯ ಸಮಾಧಾನ ಅವರಿಗಿದೆ. ಏಕದಿನ, ಟೆಸ್ಟ್ ಮತ್ತು ಐಪಿಎಲ್‍ನಲ್ಲಿ ನಿನ್ನ ಆಟವನ್ನು ಕಣ್ತುಂಬಿಕೊಳ್ಳಬಹುದು ಎಂಬ ಆಸೆ ಅವರಲ್ಲಿದೆ.
ಅದೇನೇ ಇರಲಿ, ನೀನು ಈಗಾಗಲೇ ಏಕದಿನ ಕ್ರಿಕೆಟ್‍ನಲ್ಲಿ ಸಚಿನ್ ತೆಂಡುಲ್ಕರ್ ಅವರ ಶತಕದ ದಾಖಲೆಯನ್ನು ನಿನ್ನ ಹೆಸರಿಗೆ ಬರೆಸಿಕೊಂಡಿದ್ದಿಯ. ಆದ್ರೆ ಟೆಸ್ಟ್ ಶತಕ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‍ನ ಗರಿಷ್ಠ ರನ್ ದಾಖಲೆ ಅಳಿಸಿ ಹಾಕೋದು ಅಂದುಕೊಂಡಷ್ಟು ಸುಲಭವಿಲ್ಲ. ಆದ್ರೂ ನೀನು ಕ್ರಿಕೆಟ್ ದೇವ್ರ ಮಾತು ನಂಬಿಕೆಯನ್ನು ಹುಸಿಗೊಳಿಸಿಲ್ಲ. 14 ವರ್ಷಗಳ ಕಾಲ ಚುಟುಕು ಕ್ರಿಕೆಟ್‍ನಲ್ಲಿ ನಿನ್ನ ಆಟವನ್ನು ನೋಡಿ ಮನಸ್ಸಿಗೆ ಖುಷಿಯಾಗಿದೆ. ಆದ್ರೆ ನಿನ್ನ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬ ಕೊರಗು ಇರಬಹುದು. ಆದ್ರೆ ನಿನ್ನ ಸಮಯ ಅಲ್ಲ ಅಂದಾಗ ಆ ದೇವರು ಕೂಡ ಕೈಹಿಡಿಯುವುದಿಲ್ಲ. ಆದ್ರೆ ನೀನು ನಿನ್ನ ಕರ್ತವ್ಯವನ್ನು ನಿಸ್ವಾರ್ಥದಿಂದ ಮಾಡಿದ್ದೀಯಾ. ಅದರ ಪುಣ್ಯದ ಫಲವೇ ಟಿ-20 ವಿಶ್ವಕಪ್ ಗೆಲುವು ನಿನಗೆ ಸಿಕ್ಕಿರುವುದು. ಕಡೆಯ ಟಿ-20 ಪಂದ್ಯದಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದಿರುವುದು. ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂಡು ಗೆಲುವನ್ನು ಸಂಭ್ರಮಿಸಿರುವುದು. ಭಾವುಕನಾಗಿ ನೀನು ನಲಿದಾಡಿದ ಕ್ಷಣಗಳನ್ನ ಎಂದೆಂದಿಗೂ ಮರೆಯಲು ಆಗಲ್ಲ. ಆದ್ರೂ ಚುಟುಕು ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾದ ಗರ್ಭಗುಡಿಯಲ್ಲಿ ನೀನು ಇಲ್ಲ ಅನ್ನೋ ಬೇಸರವಂತೂ ಇದ್ದೇ ಇದೆ. ಏನೇ ಇರಲಿ…ನಿನ್ನ ಬಗ್ಗೆ ಇಷ್ಟು ಬರೆಯುವಂತೆ ಮಾಡಿದ ನಿನ್ನ ಆಟದ ಖದರ್, ನಿನ್ನ ವ್ಯಕ್ತಿತ್ವಕ್ಕೆ ಸಲಾಂ.. ಪ್ರೀತಿಪೂರ್ವಕ ಧನ್ಯವಾದಗಳು ಕಿಂಗ್ ವಿರಾಟ್ ಕೊಹ್ಲಿ..!