Site icon Vistara News

Hardik Pandya : ಕೊಹ್ಲಿ ಮನವಿಗೆ ಕಿಮ್ಮತ್ತಿಲ್ಲ; ಪಾಂಡ್ಯನನ್ನು ಮತ್ತೆ ಗೇಲಿ ಮಾಡಿದ ಮುಂಬೈ ಅಭಿಮಾನಿಗಳು

Hardik Pandya

ಮುಂಬಯಿ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2024 ಪಂದ್ಯದ (IPL 2024) ವೇಳೆ ಮುಂಬೈ ಇಂಡಿಯನ್ಸ್ ನೂತನ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಪ್ರೇಕ್ಷಕರು ಮತ್ತೊಮ್ಮೆ ಗೇಲಿ ಮಾಡಿದ್ದಾರೆ. ರೋಹಿತ್ ಶರ್ಮಾ ಬದಲಿಗೆ ನಾಯಕನಾಗಿ ನೇಮಕಗೊಂಡ ನಂತರ ಹಾರ್ದಿಕ್ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಂದ ಕೆಲವು ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದಾರೆ. ಅಂತೆಯೇ ಆ ತಂಡದ ಆರನೇ ಪಂದ್ಯದಲ್ಲೂ ಅದು ಮುಂದುವರಿಯಿತು.

ಪಾಂಡ್ಯ ಬಗ್ಗೆ ಬೇಸರವಿದ್ದ ಅಭಿಮಾನಿಗಳು ಟೂರ್ನಿಯಲ್ಲಿ ಮೊದಲ ಮೂರು ಸೋಲುಗಳನ್ನು ಕಂಡ ಬಳಿಕ ಹೆಚ್ಚು ಗೇಲಿ ಮಾಡಲು ಆರಂಭಿಸಿದ್ದರು. ಆದರೆ ಕಳೆದ ಕೆಲವು ಪಂದ್ಯಗಳ ಎರಡು ಗೆಲುವುಗಳೊಂದಿಗೆ ತಂಡಕ್ಕೆ ಚೈತನ್ಯ ಸಿಕ್ಕಿತ್ತು. ಏತನ್ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೊನೆಯ ಪಂದ್ಯದ ಸಮಯದಲ್ಲಿ, ಪ್ರೇಕ್ಷಕರು ಹಾರ್ದಿಕ್ ಅವರನ್ನು ದೂಷಿಸಿದ್ದಕ್ಕೆ ವಿರಾಟ್ ಕೊಹ್ಲಿ ಅಭಿಮಾನಿಗಳ ಬಳಿ ಆ ರೀತಿ ಮಾಡದಂತೆ ಕೋರಿದ್ದರು. ಅವರನ್ನು ಹುರಿದುಂಬಿಸಲು ಮತ್ತು ಅವರು ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ವಿನಂತಿಸಿದ್ದರು. ಆದರೆ, ಕೊಹ್ಲಿಯ ಮನವಿಗೆ ಕ್ಯಾರೇ ಎನ್ನದೇ ಅವರು ಮತ್ತೆ ಗೇಲಿ ಮಾಡಿದ್ದಾರೆ.

ಹಾರ್ದಿಕ್ ಅವರನ್ನು ಗೇಲಿ ಮಾಡಬಾರದು ಎಂದು ಅದಕ್ಕಿಂತ ಮೊದಲು ರೋಹಿತ್ ಶರ್ಮಾ ಹೇಳಿದ್ದರು. ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಕೂಡ ಮನವಿ ಮಾಡಿಕೊಂಡಿದ್ದರು. ಆದರೆ ಅವರ್ಯಾರಿಗೂ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಏತನ್ಮಧ್ಯೆ ಪಂದ್ಯದ ಪ್ರಾರಂಭಕ್ಕೆ ಮುಂಚಿತವಾಗಿ “ರೋಹಿತ್ ರೋಹಿತ್” ಎಂಬ ದೊಡ್ಡ ಘೋಷಣೆಗಳು ಕೇಳಿ ಬಂದವು.

ಇದನ್ನೂ ಓದಿ: IPL 2024 : ಚೆನ್ನೈ ತಂಡ ಸೇರ್ತಾರಾ ಚೇತೇಶ್ವರ ಪೂಜಾರಾ? ಅವರ ಟ್ವೀಟ್​ನ ಅರ್ಥವೇನು?

ಸಿಎಸ್ಕೆ ಮತ್ತು ಮುಂಬೈ ಗೆಲುವಿನ ಮುಖಾಮುಖಿ

ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ 36 ಪಂದ್ಯಗಳಲ್ಲಿ ಮುಂಬೈ 20 ರಲ್ಲಿ ಗೆದ್ದಿದ್ದರೆ, ಚೆನ್ನೈ 16 ಪಂದ್ಯಗಳಲ್ಲಿ ಗೆದ್ದಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಕೊನೆಯ ಪಂದ್ಯದಲ್ಲಿ ಚೆನ್ನೈ ಮುಂಬೈ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ವಾಂಖೆಡೆಯಲ್ಲಿ ನಡೆದ ಉಭಯ ತಂಡಗಳ ನಡುವಿನ ಕೊನೆಯ ಪಂದ್ಯದಲ್ಲಿ ಚೆನ್ನೈ 7 ವಿಕೆಟ್ ಗಳಿಂದ ಗೆದ್ದಿತ್ತು.

Exit mobile version