ನವದೆಹಲಿ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಆಧುನಿಕ ಕ್ರಿಕೆಟ್ನ ದಂತಕತೆಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿಗೆ (Virat kohli) ಭಯೋತ್ಪಾದಕರಿಂದ ಜೀವ ಬೆದರಿಕೆ ಬಂದಿದೆ. ಆರ್ಸಿಬಿಯ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2024 (IPL 2024)ರ ಎಲಿಮಿನೇಟರ್ ಪಂದ್ಯಕ್ಕೆ ಮುಂಚಿತವಾಗಿ ಈ ಘಟನೆ ನಡೆದಿದೆ. ಹೀಗಾಗಿ ಹಣಾಹಣಿಗೆ ಮುಂಚಿತವಾಗಿ ಇದ್ದ ಏಕೈಕ ಅಭ್ಯಾಸ ಅವಧಿಯನ್ನು ಫಾಫ್ ಡು ಪ್ಲೆಸಿಸ್ ಬಳಗ ರದ್ದು ಮಾಡಿದೆ. ಅಹ್ಮದಾಬಾದ್ನ ಗುಜರಾತ್ ಕಾಲೇಜು ಮೈದಾನದಲ್ಲಿ ಆರ್ಸಿಬಿ ಅಭ್ಯಾಸ ನಡೆಸಲು ನಿರ್ಧರಿಸಿತ್ತು. ಆದರೆ ಯಾವುದೇ ಕಾರಣಗಳನ್ನು ನೀಡದೆ ನೆಟ್ ಪ್ರಾಕ್ಟೀಸ್ ರದ್ದುಗೊಳಿಸಲಾಯಿತು. ಬಳಿಕ ಅದು ಕೊಹ್ಲಿಗೆ ಬೆದರಿಕೆ ಕಾರಣಕ್ಕೆ ಎಂಬುದು ಖಚಿತವಾಯಿತು.
ಬ್ಯಾಟರ್ ವಿರಾಟ್ ಕೊಹ್ಲಿಗೆ ಭದ್ರತಾ ಬೆದರಿಕೆ ಬಂದಿದೆ ಎಂದು ಗುಜರಾತ್ ಪೊಲೀಸ್ ಅಧಿಕಾರಿಗಳು ಸುಳಿವು ನೀಡಿದ್ದಾರೆ ಎಂಬುದಾಗಿ ಬಂಗಾಳಿ ದಿನಪತ್ರಿಕೆ ಆನಂದಬಜಾರ್ ಪತ್ರಿಕೆ ವರದಿ ಮಾಡಿದೆ. ಅದೇ ರೀತಿ ಕೊಹ್ಲಿಗೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾದ ನಾಲ್ವರು ಶಂಕಿತರನ್ನು ಗುಜರಾತ್ ಪೊಲೀಸರು ಅಹ್ಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ. ಅವರ ಬಳಿಯಿಂದ ಹಲವಾರು ಶಸ್ತ್ರಾಸ್ತ್ರಗಳು, ವೀಡಿಯೊ ತುಣುಕುಗಳು ಮತ್ತು ಸಂವಹನ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: LPL 2024 : ಐಪಿಎಲ್ ಎಫೆಕ್ಟ್, ಸಿಕ್ಕಾಪಟ್ಟೆ ದುಡ್ಡು ಬಾಚಿದ ಮಹೀಶ್ ಪತಿರಾನಾ
ಬುಧವಾರ ಎಲಿಮಿನೇಟರ್ ಪಂದ್ಯಕ್ಕೆ ಮುಂಚಿತವಾಗಿ ಬೆದರಿಕೆಗಳ ಬಗ್ಗೆ ಅಧಿಕಾರಿಗಳು ರಾಜಸ್ಥಾನ್ ರಾಯಲ್ಸ್ ಮತ್ತು ಆರ್ಸಿಬಿ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಆರ್ಆರ್ ತಮ್ಮ ಅಭ್ಯಾಸವನ್ನು ಮುಂದುವರಿಸಿದರೆ, ಯಾವುದೇ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿತು.
ಕೊಹ್ಲಿ ರಾಷ್ಟ್ರೀಯ ಸಂಪತ್ತು; ಅವರ ಭದ್ರತೆ ನಮ್ಮ ಆದ್ಯತೆ ಎಂದ ಪೊಲೀಸರು
ವಿರಾಟ್ ಕೊಹ್ಲಿ ಅಹಮದಾಬಾದ್ಗೆ ಬಂದ ನಂತರ ಶಂಕಿತರ ಬಂಧನದ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ರಾಷ್ಟ್ರೀಯ ಸಂಪತ್ತು, ಮತ್ತು ಅವರ ಭದ್ರತೆ ನಮ್ಮ ಆದ್ಯತೆಯಾಗಿದೆ” ಎಂದು ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಜ್ವಾಲಾ ಹೇಳಿದ್ದಾರೆ.
“ಆರ್ಸಿಬಿ ಅಪಾಯ ತೆಗೆದುಕೊಳ್ಳಲು ಬಯಸಲಿಲ್ಲ. ಯಾವುದೇ ಅಭ್ಯಾಸ ಮಾಡಲಿಲ್ಲ ಎಂದು ಅವರು ನಮಗೆ ಮಾಹಿತಿ ನೀಡಿದೆ. ಈ ಬೆಳವಣಿಗೆಯ ಬಗ್ಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೂ ಮಾಹಿತಿ ನೀಡಲಾಯಿತು, ಆದರೆ ಅವರ ಅಭ್ಯಾಸವನ್ನು ಮುಂದುವರಿಸಿದ್ದಾರೆ “ಎಂದು ವಿಜಯ್ ಸಿಂಗ್ ಹೇಳಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಆರ್ಸಿಬಿ ತಂಗಿರುವ ಹೋಟೆಲ್ ಹೊರಗೆ ಭದ್ರತಾ ಪಡೆಗಳನ್ನು ಬಿಗಿಗೊಳಿಸಲಾಗಿದೆ. ಹೆಚ್ಚುವರಿಯಾಗಿ ಕ್ರಿಕೆಟಿಗನಿಗೆ ಪ್ರತ್ಯೇಕ ಪ್ರವೇಶ ಕಾರಿಡಾರ್ ಅನ್ನು ಸೃಷ್ಟಿ ಮಾಡಲಾಗಿದೆ. ಈ ಮೂಲಕ ಮ್ಯಾನೇಜ್ಮೆಂಟ್ ಮಾತ್ರ ಪ್ರವೇಶಿಸಬಹುದು. ಐಪಿಎಲ್ ಸಂಬಂಧಿತ ಮಾಧ್ಯಮ ಸಿಬ್ಬಂದಿಯನ್ನು ಸಹ ಒಳಗೆ ಅನುಮತಿಸಲಾಗುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.
ಗ್ರೀನ್ ಕಾರಿಡಾರ್ ಬಳಸಿ ಆರ್ಆರ್ ತಂಡ ಮೈದಾನಕ್ಕೆ ಬಂದತ್ತು. ಮೂರು ಪೊಲೀಸ್ ವಾಹನಗಳು ಎರಡೂ ಬದಿ ತಂಡದ ಬಸ್ ಅನ್ನು ಬೆಂಗಾವಲು ಮಾಡಿದವು ಎಂದು ವರದಿ ತಿಳಿಸಿದೆ. ತರಬೇತಿ ಅವಧಿಯಲ್ಲಿ ಹಾಜರಿದ್ದ ಆರ್ಆರ್ ಆಟಗಾರರಿಗೆ ಪೊಲೀಸರು ಭಾರಿ ಭದ್ರತೆ ಒದಗಿಸಿದ್ದರು, ಅಧಿಕಾರಿಗಳು ಇಡೀ ಮೈದಾನದಲ್ಲಿ ಗಸ್ತು ತಿರುಗುತ್ತಿದ್ದರು. ಇದಲ್ಲದೆ, ರವಿಚಂದ್ರನ್ ಅಶ್ವಿನ್, ರಿಯಾನ್ ಪರಾಗ್ ಮತ್ತು ಯಜುವೇಂದ್ರ ಚಾಹಲ್ ಅಭ್ಯಾಸವನ್ನು ಬಿಟ್ಟು ಹೋಟೆಲ್ನಲ್ಲಿ ಉಳಿಯಲು ನಿರ್ಧರಿಸಿದರೆ. ನಾಯಕ ಸಂಜು ಸ್ಯಾಮ್ಸನ್ ತಡವಾಗಿ ಅಭ್ಯಾಸಕ್ಕೆ ಬಂದಿದ್ದರು.