Site icon Vistara News

Vistara Money+| ವಿಸ್ತಾರ ಮೀಡಿಯಾದಿಂದ ಹಣಕಾಸು ಕುರಿತ ಯೂಟ್ಯೂಬ್‌ ಚಾನೆಲ್‌ ಲೋಕಾರ್ಪಣೆ

Vistara money plus

ಬೆಂಗಳೂರು: ರಾಜ್ಯದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಜನರಲ್ಲಿ ಹಣಕಾಸು ಸಾಕ್ಷರತೆ ಹೆಚ್ಚಿಸುವ ಉದ್ದೇಶದಿಂದ ʻವಿಸ್ತಾರ ಮನಿ ಪ್ಲಸ್‌ʼ ಎಂಬ ಹೊಸ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದೆ. ಇದರ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ವಿಸ್ತಾರ ನ್ಯೂಸ್‌ ಕಚೇರಿಯಲ್ಲಿ ನಡೆಯಿತು.
ವಿಸ್ತಾರ ಮೀಡಿಯಾದ ವೆಬ್‌ಸೈಟ್‌ vistaranews.com ಕಳೆದ ಜುಲೈ ೨೩ರಂದು ಲೋಕಾರ್ಪಣೆಗೊಂಡು ಜನಪ್ರಿಯತೆ ಪಡೆಯುತ್ತಿರುವಂತೆಯೇ, ಕೇವಲ ಆರೇ ದಿನಗಳಲ್ಲಿ ಕನ್ನಡ ನಾಡಿಗೆ ಎರಡನೇ ಕೊಡುಗೆಯಾಗಿ ವಿಸ್ತಾರ ಮನಿ ಪ್ಲಾಸ್‌ ಯೂ ಟ್ಯೂಬ್‌ ಚಾನೆಲ್‌ ಅನಾವರಣಗೊಂಡಿದೆ.

ಅರ್ಥಶಾಸ್ತ್ರಜ್ಞ, ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಅವರು ಯೂಟ್ಯೂಬ್‌ ಚಾನೆಲ್‌ಗೆ ಶುಕ್ರವಾರ ಚಾಲನೆ ನೀಡಿದರು. ಏಮ್‌ ಹೈ ಕನ್ಸಲ್ಟೆನ್ಸಿ ಸಂಸ್ಥೆಯ ಸಿಇಒ ಆಗಿರುವ ಎನ್‌. ರವಿಶಂಕರ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಿಇಒ ಮತ್ತು ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ, ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾಗಿರುವ ಎಚ್‌.ವಿ. ಧರ್ಮೇಶ್‌ ಹಾಗೂ ನಿರ್ದೇಶಕರಾಗಿರುವ ಶ್ರೀನಿವಾಸ ಹೆಬ್ಬಾರ್‌ ಅವರ ಮಾರ್ಗದರ್ಶನದಲ್ಲಿ ಈ ಚಾನೆಲ್‌ ಮೂಡಿಬರುತ್ತಿದೆ. ಎಕ್ಸಿಕ್ಯೂಟಿವ್‌ ಎಡಿಟರ್‌ ಶರತ್‌ ಎಂ.ಎಸ್‌ ನೇತೃತ್ವದಲ್ಲಿ ಈ ಚಾನೆಲ್‌ ರೂಪುಗೊಂಡಿದೆ.

ಅಜ್ಞಾನ ನಿರ್ಮೂಲನೆಯ ಪ್ರಯತ್ನ: ರಂಗಸ್ವಾಮಿ ಮೂಕನಹಳ್ಳಿ
ವಿಸ್ತಾರ ಮನಿ ಪ್ಲಸ್‌ ಚಾನೆಲ್‌ ಉದ್ಘಾಟಿಸಿ ಮಾತನಾಡಿದ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರು “”ಏಳು ಕೋಟಿ ಜನರು ಇರುವ ಕರ್ನಾಟಕದಲ್ಲಿ ಇಲ್ಲಿನ ಜನತೆಯನ್ನು ಆರ್ಥಿಕವಾಗಿ ಸಾಕ್ಷರರನ್ನಾಗಿ ಮಾಡಲು ಮೀಸಲಾದ ಒಂದು ವಾಹಿನಿ ಇಲ್ಲದಿರುವುದು ಖೇದಕರ. ಜಗತ್ತು ಬಿಟ್‌ಕಾಯಿನ್‌ನತ್ತ ಹೊರಳುತ್ತಿದ್ದರೂ ನಮಗಿನ್ನೂ ಸಾಂಪ್ರದಾಯಿಕ ಹಣದ ಬಳಕೆ, ಉಳಿಕೆಯ ಬಗ್ಗೆಯೇ ಗೊತ್ತಿಲ್ಲ. ಕರ್ನಾಟಕದಲ್ಲಾದರೂ ನಾವು ಹಣಕಾಸಿನ ಅಜ್ಞಾನ ನಿರ್ಮೂಲನೆ ಮಾಡಲು ವಿಸ್ತಾರ ನ್ಯೂಸ್‌ ಮನಿ ಪ್ಲಸ್‌ ಮೂಲಕ ಪ್ರಯತ್ನ ಮಾಡೋಣʼʼ ಎಂದು ಹೇಳಿದರು.

ಆಶಾದಾಯಕ ಬೆಳವಣಿಗೆ: ಎನ್‌. ರವಿಶಂಕರ್
ʻʻನಮ್ಮಲ್ಲಿ ಹಣಕಾಸಿನ ಸಾಕ್ಷರತೆ ಶೂನ್ಯದ ಸಮೀಪ ಇದೆ. ಶಾಲೆಗಳಲ್ಲೂ ಹಣಕಾಸು ಸಾಕ್ಷರತೆ ಬಗ್ಗೆ ಹೇಳಿ ಕೊಡುತ್ತಿಲ್ಲ. ಹಣ ಬೆಳೆಸುವುದು ದೂರವೇ ಉಳಿಯಿತು, ಗಳಿಸುವುದನ್ನೂ ಸರಿಯಾಗಿ ಮಕ್ಕಳಿಗೆ ಹೇಳಿಕೊಡುತ್ತಿಲ್ಲ. ಈ ನಿಟ್ಟಿನಲ್ಲಿ ಹಣಕಾಸು ಸಾಕ್ಷರತೆ ಹೆಚ್ಚಿಸಲು ವಿಸ್ತಾರ ನ್ಯೂಸ್ ಮನಿ ಪ್ಲಸ್‌ ಯೂಟ್ಯೂಬ್‌ ಚಾನೆಲ್‌ ಆರಂಭಿಸುತ್ತಿರುವುದು ಆಶಾದಾಯಕ‌ʼʼ ಎಂದರು ಮುಖ್ಯ ಅತಿಥಿ ಏಮ್‌ ಹೈ ಕನ್ಸಲ್ಟಿಂಗ್‌ನ ಸಿಇಒ, ಸಂವಹನ ತಜ್ಞ ಎನ್. ರವಿಶಂಕರ್‌.

ಜೀವನ ಮಟ್ಟ ಉತ್ತಮಗೊಳಿಸಲು ಯತ್ನ: ಹರಿಪ್ರಕಾಶ್‌ ಕೋಣೆಮನೆ
ಮಾಧ್ಯಮ ಸಂಸ್ಥೆ ಎಂದ ಕೂಡಲೆ ಸುದ್ದಿಗಳನ್ನು ಪ್ರಸಾರ ಮಾಡುವುದಷ್ಟೆ ಅಲ್ಲ, ಕರ್ನಾಟಕದ ಜನಜೀವನದ ಗುಣಮಟ್ಟವನ್ನು ಉತ್ತಮಗೊಳಿಸುವ ಎಲ್ಲ ಪ್ರಯತ್ನವನ್ನೂ ʻವಿಸ್ತಾರ ಮೀಡಿಯಾʼ ಮಾಡಲಿದೆ ಎಂದು ವಿಸ್ತಾರ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.

ವಿಸ್ತಾರ ಮನಿ ಪ್ಲಸ್‌ ಉದ್ದೇಶ
ಬಹುಪಾಲು ಜನರು ದುಡಿಯುವುದಕ್ಕೇ ಹೆಚ್ಚು ಒತ್ತು ಕೊಡುತ್ತಿದ್ದಾರೆಯೇ ಹೊರತು ಅದರ ಮೂಲಕ ಗಳಿಸಿದ ದುಡ್ಡನ್ನು ವ್ಯವಸ್ಥಿತವಾಗಿ ಬಳಸುವ ಹಣಕಾಸು ನಿರ್ವಹಣೆ ಜ್ಞಾನ ಹೊಂದಿಲ್ಲ. ಇದಕ್ಕೆ ದುಡಿಮೆಯ ಹಾರ್ಡ್‌ ವರ್ಕ್‌ ಜತೆಗೆ ಹಣಕಾಸಿನ ನಿರ್ವಹಣೆಯ ಸ್ಮಾರ್ಟ್‌ ವರ್ಕ್‌ ಜತೆಯಾಗಬೇಕಾಗುತ್ತದೆ. ವಿಸ್ತಾರ ಮನಿ ಪ್ಲಸ್‌ ಈ ವಿಚಾರದಲ್ಲಿ ಒಂದು ಸೇತುವೆಯಾಗಿ ಕೆಲಸ ಮಾಡಲಿದೆ.
ನಾವು ಮಾಂಟೆಸ್ಸರಿಯಿಂದ ಮಾಸ್ಟರ್‌ ಡಿಗ್ರಿವರೆಗೆ ಸುಮಾರು ೨೦ ವರ್ಷ ಶಿಕ್ಷಣ ಪಡೆದರೂ ಈ ಕಲಿಕೆಯ ಯಾವ ಹಂತದಲ್ಲೂ ಹಣಕಾಸು ನಿರ್ವಹಣೆ ಹೇಗೆ ಮಾಡಬೇಕು ಎಂಬ ಪಾಠವನ್ನು ಯಾವತ್ತೂ ಕಲಿಸಿಲ್ಲ. ಅದಕ್ಕಾಗಿಯೇ ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಶೇ. ೭೪ರಷ್ಟಿದ್ದರೆ, ಹಣಕಾಸು ಸಾಕ್ಷರತೆ ಪ್ರಮಾಣ ಕೇವಲ ಶೇಕಡಾ ೨೪ ಮಾತ್ರ. ಕರ್ನಾಟಕದಲ್ಲಿ ಸಾಕ್ಷರತೆ ಪ್ರಮಾಣ ಶೇ. ೭೫ ಇದ್ದರೂ ಹಣಕಾಸು ಸಾಕ್ಷರತೆ ಪ್ರಮಾಣ ಕೇವಲ ಶೇ. ೨೫ ಮಾತ್ರ. ಅಂದರೆ ಕರ್ನಾಟಕದ ಪ್ರತಿ ೧೦೦ ಜನರಲ್ಲಿ ೨೫ ಮಂದಿ ಮಾತ್ರ ಗಳಿಸಿದ ಹಣವನ್ನು ಬೆಳೆಸುವ ಸಣ್ಣ ಐಡಿಯಾಗಲಾದರೂ ಇದೆ. ಉಳಿದವರಿಗೆ ಅಷ್ಟೂ ಇಲ್ಲ.
ಹಣ ನಮ್ಮ ಸಹಾಯಕ್ಕೆ ಒದಗುವಂತಾಗಬೇಕು. ಹಣವನ್ನು ಉಳಿಸುವ ವಿಚಾರದಲ್ಲಿ ನಾವು ಇಟ್ಟುಕೊಂಡಿರುವ ಶ್ರದ್ಧೆಯನ್ನು ಹಣಕಾಸು ಸಾಕ್ಷರತೆ ಪಡೆಯುವಲ್ಲೂ ಹೊಂದಿದ್ದರೆ ಮಾತ್ರ ಬದುಕು ಚೆನ್ನಾಗಿರುತ್ತದೆ. ಇಲ್ಲವಾದರೆ ಬದುಕು ಸವಾಲಾಗುತ್ತದೆ.
ಈ ನಿಟ್ಟಿನಲ್ಲಿ ನಾಡಿನ ಮನೆ ಮನೆಗಳಿಗೆ ಹಣಕಾಸಿನ ಪಾಠವನ್ನು ಒಂದು ಆಂದೋಲನ ರೂಪದಲ್ಲಿ ತಲುಪಿಸಿ, ಜನರ ಬದುಕಿನಲ್ಲಿ ಹೊಸ ಕ್ರಾಂತಿಯನ್ನು ಮೂಡಿಸುವುದರ ಜತೆಗೆ ನಾಡಿನ ಅಭ್ಯುದಯಕ್ಕೆ ಕೈಜೋಡಿಸುವುದು ವಿಸ್ತಾರ ಮನಿ ಪ್ಲಸ್‌ ಚಾನೆಲ್‌ ಉದ್ದೇಶ.

ಹಣಕಾಸಿನ ಆರಂಭಿಕ ಮಾಹಿತಿಗಳಿಂದ ಹಿಡಿದು, ಷೇರು, ಮ್ಯೂಚುವಲ್‌ ಫಂಡ್‌ ಸೇರಿದಂತೆ ಎಲ್ಲ ರೀತಿಯ ಜ್ಞಾನವನ್ನು ಅತ್ಯಂತ ವ್ಯವಸ್ಥಿತವಾಗಿ ನೀಡುವುದು, ಅತ್ಯಂತ ಸರಳ ಭಾಷೆಯಲ್ಲಿ, ಎಲ್ಲರಿಗೂ ಅರ್ಥವಾಗುವಂತೆ ನೀಡುವ ಗುರಿಯನ್ನು ಮನಿಪ್ಲಸ್‌ ಹೊಂದಿದೆ. ಇಲ್ಲಿ ಉಳಿತಾಯ, ಹೂಡಿಕೆ ಸೇರಿದಂತೆ ಹಣಕಾಸು ನಿರ್ವಹಣೆಯ ಎಲ್ಲ ಆಯಾಮಗಳನ್ನು ಒಳಗೊಂಡ ವಿಡಿಯೊಗಳನ್ನು ಅಪ್‌ ಲೋಡ್‌ ಮಾಡಲಾಗುತ್ತದೆ. ಆಯಾ ಕ್ಷೇತ್ರದ ತಜ್ಞರು ಮಾತನಾಡುತ್ತಾರೆ, ಅಧ್ಯಯನ ಪೂರ್ಣ ವಿಡಿಯೊಗಳಿರುತ್ತದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಂದು ಕೂಡಾ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಮಾಹಿತಿಯೇ ಆಗಿರುತ್ತದೆ.

Exit mobile version