Site icon Vistara News

Vistara Water Campaign: ವಿಸ್ತಾರ ನ್ಯೂಸ್‌ನ ʼಜಲವೇ ಜೀವʼನ ಅಭಿಯಾನಕ್ಕೆ ಚಾಲನೆ; ನೀರಿಲ್ಲದೆಡೆಗೆ ನೀರು

Vistara Water Campaign

ಬೆಂಗಳೂರು: ರಾಜ್ಯದಲ್ಲಿ ಕಂಡು ಕೇಳರಿಯದ ಭೀಕರ ಬರ, ಜಲಕ್ಷಾಮ ಸೃಷ್ಟಿಯಾಗಿದೆ. ನೀರಿಗಾಗಿ ಜನರ ಬವಣೆ ಬಗ್ಗೆ ನಿರಂತರವಾಗಿ ವರದಿ ಮಾಡುತ್ತಿರುವ ವಿಸ್ತಾರ ನ್ಯೂಸ್‌, ಇದೀಗ ನೀರಿನ ಸಮಸ್ಯೆಗೆ ಸ್ಪಂದಿಸಲು ʼಜಲವೇ ಜೀವನʼ ಎಂಬ ಅಭಿಯಾನವನ್ನು (Vistara Water Campaign) ಆರಂಭಿಸಿದೆ. ನೀರಿಲ್ಲದೆ ಪರದಾಡುತ್ತಿರುವ ಕುಟುಂಬಗಳಿಗೆ ಟ್ಯಾಂಕರ್‌ಗಳಿಂದ ಶುದ್ಧ ನೀರು ಪೂರೈಸುವ ಈ ಮಹಾ ಅಭಿಯಾನಕ್ಕೆ ವಿವಿಧ ಸಂಘಟನೆಗಳು ಸಹಕಾರ ನೀಡಿವೆ.

ಬಿರು ಬೇಸಿಗೆಯಲ್ಲಿ ನೀರಿಲ್ಲದೆ ಜನ ಪರದಾಡುತ್ತಿದ್ದು, ಬೆಂಗಳೂರಿನಲ್ಲಂತೂ ಬಿಂದಿಗೆ ನೀರಿಗಾಗಿ ಕ್ಯೂನಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೆಲಸ ಅರಸಿ ನಗರಗಳಿಗೆ ಬಂದವರು ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಪುನಃ ಸ್ವಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ಕೆಲವೆಡೆ ನೀರಿಗಾಗಿ ಕಿ.ಮೀ.ಗಟ್ಟಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಟ್ಯಾಂಕರ್‌ಗಳ ಮೂಲಕ ಜನರಿಗೆ ನೀರು ಪೂರೈಸಲು ವಿಸ್ತಾರ ನ್ಯೂಸ್‌ ಮುಂದಾಗಿದೆ.

ʼಜಲವೇ ಜೀವʼನ ಅಭಿಯಾನಕ್ಕೆ ಗೌರಿ ನಾಯ್ಕ ಚಾಲನೆ

ವಿಸ್ತಾರ ನ್ಯೂಸ್‌ನ ʼಜಲವೇ ಜೀವನʼ ಅಭಿಯಾನಕ್ಕೆ ನಗರದ ವಿಸ್ತಾರ ನ್ಯೂಸ್‌ ಕಚೇರಿ ಆವರಣದಲ್ಲಿ ಮಂಗಳವಾರ ಚಾಲನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದಲ್ಲಿ ಬಾವಿ ತೋಡಿ ನೀರು ತೆಗೆದಿದ್ದ ಗೌರಿ ನಾಯ್ಕ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌, ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ನಿರ್ದೇಶಕ ಕಿರಣ್‌ ಕುಮಾರ್‌ ಡಿ.ಕೆ., ಅಸೋಸಿಯೇಟ್‌ ಎಡಿಟರ್‌ ಚಂದನ್‌ ಶರ್ಮಾ, ಸಿಒಒ-ಸಿಟಿಒ ಪರಶುರಾಮ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ʼಜಲವೇ ಜೀವ’ನ ಅಭಿಯಾನಕ್ಕೆ ಏಕಕಾಲದಲ್ಲಿ ಚಾಲನೆ ನೀಡಲಾಗಿದ್ದು, ನೀರು ಪೂರೈಸುವ ಕಾರ್ಯ ನಡೆಯುತ್ತಿದೆ. ವಿಸ್ತಾರ ನ್ಯೂಸ್‌ ಈ ಜನಪರ ಅಭಿಯಾನಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು, ಧಾರವಾಡ, ಕಲಬುರಗಿ, ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ʼಜಲವೇ ಜೀವನʼ ಅಭಿಯಾನಕ್ಕೆ ಸಿಕ್ಕಿದ್ದು, ನೀರಿನ ಸಮಸ್ಯೆ ಇರುವ ಕಡೆ ಉಚಿತವಾಗಿ ಟ್ಯಾಂಕರ್‌ಗಳ ಮೂಲಕ ಶುದ್ಧ ನೀರು ಪೂರೈಸಲಾಗುತ್ತಿದೆ.

ಇದನ್ನೂ ಓದಿ | ವಿಸ್ತಾರ ಗ್ರಾಮ ದನಿ: ಅಡಿಕೆ ತೋಟಗಳಲ್ಲಿ ಈಗ ಪ್ರೆಸ್‌ಮಡ್ ಗೊಬ್ಬರಗಳದ್ದೇ ದಾಂಗುಡಿ!

ವಿಪರ್ಯಾಸ ಅಂದ್ರೆ ಮುಕ್ಕಾಲು ಕರ್ನಾಟಕ ಬರದಿಂದ ನರಳಾಡುತ್ತಿದ್ದರೆ, ಪರಿಹಾರದ ವಿಚಾರದಲ್ಲಿ ಪಾಲಿಟಿಕ್ಸ್ ಕೂಡಾ ಜೋರಾಗಿದೆ. ರಾಜ್ಯದ ಮೇಲೆ ಕೇಂದ್ರ ಗರಂ ಆದ್ರೆ, ಕೇಂದ್ರದ ವಿರುದ್ಧ ರಾಜ್ಯ ಸರ್ಕಾರವೂ ನಮ್ಮ ತೆರಿಗೆ ನಮ್ಮ ಹಕ್ಕು ಅಂತಾ ಹೇಳ್ತಾ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದೆ. ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ, ರಾಜ್ಯದಲ್ಲಿ ಕೇಂದ್ರದ ಜಲಜೀವನ್‌ ಮಿಷನ್‌ ನಿಲ್ಲಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿಯೇ ಬರ ಪರಿಹಾರಕ್ಕೆ ಹೊಡೆತ ಬಿದ್ದಿದೆ ಅಷ್ಟೇ ಅಂತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲೇ ಬಂದು ಗುಡುಗಿದ್ದಾರೆ. ಈ ಮಧ್ಯೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಷ್ಟೋ ಇಷ್ಟೋ ಪರಿಹಾರ ಕಾರ್ಯಕ್ಕೆ ಆದೇಶಿಸಿದ್ದರೂ ಅಧಿಕಾರಿಗಳ ಅದೆಷ್ಟು ಮಟ್ಟಿಗೆ ಕಾರ್ಯರೂಪಕ್ಕೆ ತಂದಿದ್ದಾರೆ ಗೊತ್ತಿಲ್ಲ. ಈ ಮಧ್ಯೆ ವಿಸ್ತಾರ ನ್ಯೂಸ್‌ ನಡೆಸುತ್ತಿರೋ ಜಲ ಜೀವನ ಅಭಿಯಾನಕ್ಕೆ ಜನ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ʼಜಲವೇ ಜೀವನʼ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಜನ ಆಗಲಿ ಜಾನುವಾರು ಆಗಲಿ, ತಿನ್ನಲು ಆಹಾರ ಸಿಗದಿದ್ದರೆ ಬದುಕಬಹುದು, ಆದರೆ ಕುಡಿಯೋಕೆ ನೀರಿಲ್ಲದಿದ್ದರೆ ಹೇಗೆ ತಾನೇ ಬದುಕಲು ಸಾಧ್ಯ?. ಆದ್ದರಿಂದಲೇ ನಿಖರ ಹಾಗೂ ಜನಪರ ಸುದ್ದಿಗೆ ನಂಬರ್‌ 1 ಆಗಿರೋ ವಿಸ್ತಾರ ನ್ಯೂಸ್‌ ಈಗ ನೀರಿಲ್ಲದ ಕಡೆಗೆ ನೀರಲು ತಲುಪಿಸಲು ಜಲ ಜೀವನ ಅಭಿಯಾನ ಆರಂಭಿಸಿದೆ. ಸಮಾಜದ ವಿವಿಧ ಕ್ಷೇತ್ರಗಳ ಸಹೃದಯಿಗಳ ಸಹಕಾರದೊಂದಿಗೆ ಬರದಿಂದ ಕಂಗೆಟ್ಟ ಜನರಿಗೆ ನೆರವಿಗೆ ಮುಂದಾಗಿದೆ. ಜತೆ ಜತೆಯಲ್ಲೇ ನೀರು ಉಳಿಸು ಕರ್ನಾಟಕ ಅಂತಲೂ ಜನ ಜಾಗೃತಿ ಮೂಡಿಸುತ್ತಿದ್ದೇವೆ. ಹೇಗಾದರೂ ಸರಿ, ಭೀಕರ ಬರದಿಂದ ನಮ್ಮ ಕರುನಾಡಿನ ಜನರಿಗೆ ಮುಕ್ತಿ ಸಿಗಬೇಕೆಂಬುದು ನಮ್ಮ ಆಶಯ.

ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಉಚಿತ ನೀರು ಪೂರೈಕೆ ಮಾಡಲಾಯಿತು.

Exit mobile version