ನವದೆಹಲಿ: ಟಾಟಾ ಸಮೂಹವು ಏರ್ ಇಂಡಿಯಾದ ಸುಧಾರಣೆಗೆ ಕೈ ಹಾಕಿದ್ದು, ಹಿರಿಯ ಹಾಗೂ ಕಾಯಂ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೊಳಿಸಿದೆ.
ಏರ್ ಇಂಡಿಯಾದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಮಾನಗಳ ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಉದ್ಯೋಗಿಗಳಿಗೆ ವಿಆರ್‌ಎಸ್ ಜಾರಿಗೊಳಿಸಲಾಗಿದ್ದು, 55 ವರ್ಷ ವಯಸ್ಸಿನವರು ಅಥವಾ ಎರಡು ದಶಕಗಳ ಸೇವೆ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು.
ಕೆಲ ವಿಭಾಗದ ಉದ್ಯೋಗಿಗಳಿಗೆ ವಿಆರ್‌ಎಸ್ ಗೆ ಅರ್ಹ ವಯಸ್ಸನ್ನು 40 ವರ್ಷ ವಯೋಮಿತಿಗೆ ಇಳಿಸಲಾಗಿದೆ. ಜೂನ್ 1ರಿಂದ ಜುಲೈ 31ರ ಅವಧಿಯಲ್ಲಿ ಸ್ವಯಂ ನಿವೃತ್ತಿ ಯೋಜನೆಯನ್ನು ಆಯ್ಕೆ ಮಾಡುವ ಸಿಬ್ಬಂದಿಗೆ ಹೆಚ್ಚುವರಿ ಇನ್ಸೆಂಟಿವ್ ಲಭಿಸಲಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಟಾಟಾ ಸಮೂಹವು ಏರ್ ಇಂಡಿಯಾದ ಹರಾಜಿನಲ್ಲಿ ಬಿಡ್ ಅನ್ನು ಗೆದ್ದುಕೊಂಡಿತ್ತು. ಇದರೊಂದಿಗೆ ಏರ್ ಇಂಡಿಯಾ ಮರಳಿ ತನ್ನ ಸ್ಥಾಪಕರ ಅಂಗಳ ಸೇರಿತ್ತು.
ಏರ್ ಇಂಡಿಯಾವು 12,085 ಉದ್ಯೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 8,084 ಕಾಯಂ ಹಾಗೂ 4,001 ಮಂದಿ ಗುತ್ತಿಗೆ ಆಧಾರಿತ ಉದ್ಯೋಗಿಗಳಾಗಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ಸುಮಾರು 5,000 ಉದ್ಯೋಗಿಗಳು ನಿವೃತ್ತಿಯಾಗಲಿದ್ದಾರೆ.