Site icon Vistara News

PM Modi: ರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ ಎಂದ ಮೋದಿ

PM Modi

Want 400 seats to ensure Congress doesn't put 'Babri lock' on Ram Temple: PM Narendra Modi

ಭೋಪಾಲ್:‌ ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಭಾಷಣಗಳು ಚುರುಕು ಪಡೆದಿವೆ. ಹತ್ತಾರು ವಿಷಯಗಳನ್ನು ಮುಂದಿಟ್ಟುಕೊಂಡು ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈಗ ಮಧ್ಯಪ್ರದೇಶದ (Madhya Pradesh) ಧಾರ್‌ನಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, “ಕಾಂಗ್ರೆಸ್‌ ಮತ್ತೆ ರಾಮಮಂದಿರ ತಂಟೆಗೆ ಹೋಗಬಾರದು ಎಂದರೆ ಎನ್‌ಡಿಎಗೆ 400 ಕ್ಷೇತ್ರಗಳನ್ನು ಕೊಡಿ” ಎಂಬುದಾಗಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

“ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 400 ಕ್ಷೇತ್ರಗಳಲ್ಲಿ ಗೆಲ್ಲಿಸಿ ಎಂಬುದಾಗಿ ನಾನು ನಿಮ್ಮಲ್ಲಿ ಮನವಿ ಮಾಡಲು ಹಲವು ಕಾರಣಗಳಿವೆ. ನೀವು ಬಹುಮತ ನೀಡಿದ ಕಾರಣಕ್ಕಾಗಿಯೇ ನಾವು 370ನೇ ವಿಧಿಯನ್ನು ರದ್ದುಗೊಳಿಸಿದೆವು. ಹಾಗಾಗಿ, ಕಾಂಗ್ರೆಸ್‌ 370ನೇ ವಿಧಿಯನ್ನು ಮತ್ತೆ ಜಾರಿಗೆ ತರಬಾರದು, ಅಯೋಧ್ಯೆಯ ರಾಮಮಂದಿರಕ್ಕೆ ಬಾಬ್ರಿ ಮಸೀದಿ ಬೀಗ ಜಡಿಯಬಾರದು, ನಮ್ಮ ದೇಶದ ದ್ವೀಪಗಳನ್ನು ಬೇರೆ ದೇಶಗಳಿಗೆ ನೀಡಬಾರದು, ಒಬಿಸಿ ಮೀಸಲಾತಿಯನ್ನು ಕಿತ್ತು ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ನೀಡಬಾರದು ಎಂಬ ಕಾರಣಕ್ಕಾಗಿ ಬಿಜೆಪಿಗೆ ಬಹುಮತ ನೀಡಿ” ಎಂಬುದಾಗಿ ಮನವಿ ಮಾಡಿದರು.

ಸಂವಿಧಾನ, ಅಂಬೇಡ್ಕರ್‌ ವಿಷಯ ಪ್ರಸ್ತಾಪ

ಭಾರತದ ಸಂವಿಧಾನ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಹೆಸರನ್ನು ಪ್ರಸ್ತಾಪಿಸಿಯೂ ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್‌ ಪರಿವಾರಕ್ಕೆ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನ ಆಗಿಬರುವುದಿಲ್ಲ. ಅವರು ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ವಿರೋಧಿಸುತ್ತಾರೆ. ಇದೇ ಕಾರಣಕ್ಕಾಗಿಯೇ, ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ ಪಾತ್ರವು ತುಂಬ ಕಡಿಮೆ ಇದೆ ಎಂಬುದಾಗಿ ಕಾಂಗ್ರೆಸ್‌ ಹೇಳುತ್ತದೆ. ಕಾಂಗ್ರೆಸ್‌ಗೆ ಸಂವಿಧಾನಕ್ಕಿಂತ ಕುಟುಂಬದ ಮೇಲೆಯೇ ಹೆಚ್ಚು ಪ್ರೀತಿ” ಎಂದು ವಾಗ್ದಾಳಿ ನಡೆಸಿದರು.

“ಕಳೆದ 10 ವರ್ಷಗಳಲ್ಲಿ ಬಿಜೆಪಿಯು ಗಣನೀಯ ಸಾಧನೆ ಮಾಡಿದೆ. ನೀವೆಲ್ಲ ನಮಗೆ ಬಹುಮತದ ಸರ್ಕಾರ ನೀಡಿದ ಕಾರಣ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಮತಬ್ಯಾಂಕ್‌ಗಾಗಿ ಬೇರೆಯವರಿಗೆ ನೀಡುವುದರಿಂದ ತಡೆಯಲಾಯಿತು. ಇದೇ ಕಾರಣಕ್ಕಾಗಿ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಲು ಸಾಧ್ಯವಾಯಿತು” ಎಂದರು. “ಕಾಂಗ್ರೆಸ್‌ನವರು ಒಬಿಸಿ, ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಮತಬ್ಯಾಂಕ್‌ಗೆ ನೀಡುವುದಿಲ್ಲ ಎಂಬುದಾಗಿ ಬರೆದುಕೊಂಡಿ ಎಂದು ಕೂಡ ಸವಾಲು ಹಾಕಿದ್ದೇನೆ” ಎಂಬುದಾಗಿ ತಿಳಿಸಿದರು.

ಇದನ್ನೂ ಓದಿ: ಎಲ್ಲ ಮೀಸಲಾತಿಯನ್ನು ಮುಸ್ಲಿಮರಿಗೇ ಕೊಡಬೇಕು ಎಂದ ಲಾಲು ಪ್ರಸಾದ್‌ ಯಾದವ್;‌ ಕೆಂಡವಾದ ಮೋದಿ!

Exit mobile version