Site icon Vistara News

Water Crisis: ಬೆಂಗಳೂರಿನ 14 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು; ಕುಡಿಯಲು, ಗೃಹ ಬಳಕೆಗೆ ಬಳಸುವಂತಿಲ್ಲ!

Lake in Bangalore

ಬೆಂಗಳೂರು: ಬೇಸಿಗೆ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ (Water Crisis) ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹಲವೆಡೆ ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿರುವುದರಿಂದ ನೀರಿನ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ಅಂತರ್ಜಲ ಮಟ್ಟ ವೃದ್ಧಿಸಲು ರಾಜ್ಯ ಸರ್ಕಾರವು ಬೆಂಗಳೂರಿನ 14 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸುತ್ತಿದ್ದು, ಈ ಕೆರೆಗಳ ನೀರನ್ನು ಕುಡಿಯಲು, ಗೃಹ ಬಳಕೆಗೆ ಬಳಸಬಾರದು ಎಂದು ಬೆಂಗಳೂರು ಜಲಮಂಡಳಿ ಸೂಚಿಸಿದೆ.

ಈ ಬಗ್ಗೆ‌ ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್ ಮನೋಹರ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಎರಡನೇ ಹಂತದಲ್ಲಿ ಸಂಸ್ಕರಿಸಿ, ನಗರದ ಅಂತರ್ಜಲ ವೃದ್ಧಿಯ ದೃಷ್ಟಿಯಿಂದ ಕೆರೆಗಳಿಗೆ ತುಂಬಿಸಲಾಗುತ್ತಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟುನಿಟ್ಟಿನ ಮಾನದಂಡಗಳ ಆಧಾರದ ಮೇಲೆ ನೀರು ಸಂಸ್ಕರಿಸಲಾಗುತ್ತಿದೆ. ಈ ನೀರನ್ನು ನೇರವಾಗಿ ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಕೆರೆಯ ನೀರನ್ನು ಬಳಸಬಾರದು ಎಂದು ತಿಳಿಸಿದ್ದಾರೆ.

ಕೆಂಗೇರಿ ಕೆರೆಗೆ ಸಂಸ್ಕರಿಸಿದ ನೀರನ್ನು ಹರಿಸುವ ಮೂಲಕ ಕುಸಿದಿರುವ ಅಂತರ್ಜಲವನ್ನು ಮರುಪೂರಣಗೊಳಿಸಲು ಜಲಮಂಡಳಿ ಮುಂದಾಗಿದೆ. ಬೆಂಗಳೂರು ನಗರದಲ್ಲಿ ಅವ್ಯಾಹತವಾಗಿ ಅಂತರ್ಜಲ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಅವಶ್ಯಕತೆ ಪೂರೈಸಲು ಅಂತರ್ಜಲ ಮರುಪೂರಣ ಮಾಡಬೇಕಿದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮಗಳನ್ನು ಜಲಮಂಡಳಿ ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Vijayanagara News: ಹೊಸಪೇಟೆಯಲ್ಲಿ ಹೂವು ಎರಚಿ ಹೋಳಿ ಆಚರಣೆ; ನೈಸರ್ಗಿಕ ಬಣ್ಣವೇ ಅಚ್ಚುಮೆಚ್ಚು ಎಂದ ಮಂದಿ!

ವೃಷಭಾವತಿ ವ್ಯಾಲಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ನಾಯಂಡಹಳ್ಳಿ ಕೆರೆ, ಕೆಂಗೇರಿ ಎಸ್‌ಟಿಪಿ ಮಂಡಳಿ ವತಿಯಿಂದ ಸಂಸ್ಕರಿಸಿದ ನೀರನ್ನು ಕೆಂಗೇರಿ ಕೆರೆಗೆ ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಂಡಳಿ ವತಿಯಿಂದ ಸಂಸ್ಕರಿಸಿ ನೀರನ್ನು ದುಬಾಸಿಪಾಳ್ಯ, ಹೊಸಕೆರೆಹಳ್ಳಿ ಹಾಗೂ ಹಲಗೇವಡೆರಹಳ್ಳಿ ಕೆರೆಗಳಿಗೆ ತುಂಬಿಸಲಾಗುವುದು ಎಂದು ರಾಮ್‌ ಪ್ರಸಾತ್ ತಿಳಿಸಿದ್ದಾರೆ.

ಕಾವೇರಿ ನೀರಿನ ದುರ್ಬಳಕೆ; 1.05 ಲಕ್ಷ ದಂಡ ವಸೂಲಿ ಮಾಡಿದ ಜಲಮಂಡಳಿ

ಬೆಂಗಳೂರು: ರಾಜಧಾನಿಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ (Bangalore Water Crisis) ಉಂಟಾಗಿರುವುದರಿಂದ ನೀರಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಬೆಂಗಳೂರು ಜಲಮಂಡಳಿ ಹಲವು ಕ್ರಮ ಕೈಗೊಂಡಿದೆ. ಕಾವೇರಿ ನೀರು ದುರ್ಬಳಕೆ ಮಾಡಿದರೆ ದಂಡಾಸ್ತ್ರ ಪ್ರಯೋಗ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಇದೀಗ ನಿಯಮ ಉಲ್ಲಂಘಿಸಿದವರಿಂದ 1,05,000 ರೂ. ದಂಡವನ್ನು ವಸೂಲಿ ಮಾಡಿರುವುದು ಕಂಡುಬಂದಿದೆ.

ಇದನ್ನೂ ಓದಿ | World Water Day: ನಮ್ಮ ಜೀವ ನದಿಗಳಿಗೆ ಮರುಜೀವ ನೀಡೋಣ; ಶ್ರೀ ಶ್ರೀ ರವಿಶಂಕರ್ ವಿಶೇಷ ಲೇಖನ

ಕುಡಿಯುವ ನೀರಿನ ಅಭಾವದ ಹಿನ್ನಲೆ ಕಾವೇರಿ ನೀರು ದುರುಪಯೋಗ ಮಾಡದಂತೆ ಜಲಮಂಡಳಿ ಸೂಚನೆ ನೀಡಿತ್ತು. ಆದಾಗ್ಯೂ ಹಲವೆಡೆ ನೀರಿನ ದುಂದುವೆಚ್ಚ ಮಾಡುವುದು ಕಂಡುಬರುತ್ತಿದೆ. ಕಾವೇರಿ ನೀರಿನಿಂದ ಕಾರು ತೊಳೆಯುವುದು, ಸ್ವಚ್ಛತೆ ಸೇರಿ ಅನ್ಯ ಉದ್ದೇಶಗಳಿಂದ ಕಾವೇರಿ ನೀರು ದುರುಪಯೋಗ ಮಾಡಿದವರಿಗೆ ಜುಲ್ಮಾನೆ ವಿಧಿಸಲಾಗಿದೆ.

Exit mobile version