Site icon Vistara News

Water Crisis: ಇನ್ನೆರಡು ತಿಂಗಳು ಕಾವೇರಿ ನೀರು ಹೊಸ ಕನೆಕ್ಷನ್‌ ಇಲ್ಲ; 11 ಸಾವಿರ ಮಂದಿ ಕಂಗಾಲು

Bwssb

ಬೆಂಗಳೂರು: ರಾಜಧಾನಿಯ ನೀರಿನ ಸಮಸ್ಯೆ (Bangalore Water Crisis) ಇನ್ನೊಂದು ಮಜಲನ್ನು ಮುಟ್ಟಿದೆ. ಬೋರ್‌ವೆಲ್ ನೀರು (Borewell water) ನಂಬಿಕೊಂಡಿದ್ದ ಬೆಂಗಳೂರಿನ ಸುಮಾರು 11 ಸಾವಿರ ಮಂದಿಗೆ ಈಗ ಗಂಡಾಂತರ ಒದಗಿದೆ.

ನೀರಿನ ಅಲಭ್ಯತೆಯಿಂದಾಗಿ ಮುಂದಿನ ಎರಡು ತಿಂಗಳು ಕಾವೇರಿ (Kaveri Water) ಹೊಸ ಕನೆಕ್ಷನ್ ಇಲ್ಲ ಎಂದು ಜಲಮಂಡಳಿ ತಿಳಿಸಿದೆ. ಈಗಾಗಲೇ ಇರುವ ಸಂಪರ್ಕಗಳಿಗೇ ವಾರದಲ್ಲಿ ಎರಡು ದಿನ ಮಾತ್ರ ನೀರು ಬಿಡಲಾಗುತ್ತಿದೆ. ಹೀಗಾಗಿ ಹೊಸ ಸಂಪರ್ಕ ಸಾಧ್ಯತೆಯೇ ಇಲ್ಲ ಎನ್ನಲಾಗಿದೆ.

ಆದರೆ ನಗರದಲ್ಲಿ 50 ಲಕ್ಷ ಬೋರ್‌ವೆಲ್‌ಗಳ ಅಂತರ್ಜಲ ಕುಸಿತವಾಗಿದೆ. ಇಲ್ಲಿ ನೀರು ಮೇಲೆ ಬರುತ್ತಿಲ್ಲ. ಬೋರ್‌ವೆಲ್ ಕೈಕೊಟ್ಟ ಹಿನ್ನೆಲೆಯಲ್ಲಿ ಸುಮಾರು 11 ಸಾವಿರ ಮನೆ ಮಾಲೀಕರು ಕಾವೇರಿ ನೀರು ಕನೆಕ್ಷನ್‌ಗೆ ಅರ್ಜಿ ಹಾಕಿದ್ದಾರೆ. ಬೋರ್‌ವೆಲ್ ನೀರು ಇಲ್ಲ ಹಾಗೂ ಕಾವೇರಿ ನೀರಿನ ಸಂಪರ್ಕವೂ ಇಲ್ಲದ ಕಾರಣ ಹೊಸದಾಗಿ ಕನೆಕ್ಷನ್ ಪಡೆಯಲು ಜಲಮಂಡಳಿಗೆ ಅರ್ಜಿ ಹಾಕಿದ್ದಾರೆ.

ಆದರೆ ಇವರ ಅರ್ಜಿಗಳನ್ನು ಇನ್ನು 2 ತಿಂಗಳು ಕಾಲ ಜಲಮಂಡಳಿ ತಡೆಹಿಡಿದಿದೆ. ಹೀಗಾಗಿ ಈ ಬೇಸಿಗೆ ಮುಗಿಯುವರೆಗೂ ಇವರಿಗೆ ನೀರಿಲ್ಲ ಎಂಬಂತಾಗಿದೆ. ಇವರು ಸದ್ಯ ಟ್ಯಾಂಕರ್‌ಗಳನ್ನು ಮಾತ್ರ ಆಶ್ರಯಿಸಬೇಕಾಗಿದೆ. ಜೂನ್‌ನಲ್ಲಿ ಮಳೆ ಬಂದ ನಂತರ ಪರಿಸ್ಥಿತಿ ಸುಧಾರಿಸಬಹುದು ಎಂಬುದು ಜಲಮಂಡಳಿ ಲೆಕ್ಕಾಚಾರ.

ಅಂತರ್ಜಲ ಹೆಚ್ಚಳಕ್ಕೆ ಕ್ರಮ

ನಗರದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯಿಂದ ಹೊರಬರಲು ಜಲಮಂಡಳಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜುಲೈ 1ಕ್ಕೆ ನೀರು ಹೆಚ್ಚಾಗಲು ಯೋಜನೆ ರೂಪಿಸಿ ನೀರಿನ ಉಳಿತಾಯ ಹಾಗೂ ಅಂತರ್ಜಜಲ ಮಟ್ಟ ಹೆಚ್ಚಳಕ್ಕೆ ಮೂರು ರೀತಿಯ ಕ್ರಮಗಳಿಗೆ ಮುಂದಾಗಿದೆ. ಬಳಕೆಗೆ ಬರುವ ಕಾವೇರಿ, ಬೋರ್ ನೀರು ಉಳಿತಾಯ ಮಾಡುವುದು, ಈ ಮೂಲಕ ಶೇ 30-40% ನೀರಿನ ಉಳಿತಾಯ, 1300 ಎಮ್‌ಎಲ್‌ಡಿ ನೀರು ಎಸ್‌ಟಿಪಿ ಮೂಲಕ ಸಂಸ್ಕರಿಸಿ ಈ ನೀರನ್ನು ಕಮರ್ಶಿಯಲ್, ಇಂಡಸ್ಟ್ರಿಗಳಿಗೆ ಉಪಯೋಗ ಮಾಡಬಹುದು. ಹಾಗೂ ಮರು ಬಳಕೆ ನೀರನ್ನು ಕೆರೆಗೆ ತುಂಬಿಸಿ ಅಂತರ್ಜಲ ಹೆಚ್ಚು ಮಾಡಲು ಜಲಮಂಡಳಿ ಯೋಜನೆ ಹಾಕಿಕೊಂಡಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ನೀರು ದುರುಪಯೋಗಕ್ಕೆ 1 ಲಕ್ಷ ರೂ. ದಂಡ

ಕಾವೇರಿ ನೀರು ದುರುಪಯೋಗ ಮಾಡಿದ ಸುಮಾರು 2000 ಮಂದಿಯಿಂದ ಇದುವರೆಗೆ 1,05,000 ದಂಡ ವಸೂಲಿ ಮಾಡಲಾಗಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ. ಕುಡಿಯುವ ನೀರಿನ ಅಭಾವದ ಹಿನ್ನೆಲೆಯಲ್ಲಿ ಕಾವೇರಿ ನೀರು ದುರುಪಯೋಗ ಮಾಡದಂತೆ ಸೂಚನೆ ನೀಡಲಾಗಿತ್ತು. ಜಲಮಂಡಳಿ ಸೂಚನೆ ನೀಡಿದರೂ ಅದನ್ನು ಹಲವರು ಕಡೆಗಣಿಸಿ ಕಾವೇರಿ ನೀರಿನಿಂದ ಕಾರ್ ವಾಶ್, ಗಾರ್ಡನ್ ಕ್ಲೀನ್, ಫುಟ್‌ಪಾತ್ ಕ್ಲೀನ್ ಮಾಡಿಸಿದ್ದರು. ಹೀಗಾಗಿ ಕಾವೇರಿ ನೀರು ದುರುಪಯೋಗ ಮಾಡಿದವರ ವಿರುದ್ಧ ಮಂಡಳಿ ದಂಡಾಸ್ತ್ರ ಪ್ರಯೋಗಿಸಿದೆ.

ಇದನ್ನೂ ಓದಿ: Water Crisis: ಬೆಂಗಳೂರಿನ 14 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು; ಕುಡಿಯಲು, ಗೃಹ ಬಳಕೆಗೆ ಬಳಸುವಂತಿಲ್ಲ!

Exit mobile version