ಚಾಮರಾಜನಗರ: ರಾಜ್ಯದಲ್ಲಿ ತೀವ್ರ ಮಳೆ ಕೊರತೆ (Rainfall deficiency in Karnataka) ಎದುರಾಗಿದೆ. ಈ ಕಾರಣಕ್ಕಾಗಿ ರಾಜ್ಯದ 161 ತಾಲೂಕುಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಸಂಪೂರ್ಣ ಬರಪೀಡಿತ ತಾಲೂಕು (Drought hit taluk) ಎಂದು ಘೋಷಣೆ ಮಾಡಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ 34 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಹೀಗಾಗಿ ರಾಜ್ಯ ಹಲವು ಕಡೆ ನೀರಿಗೆ ತತ್ವಾರ (Water scarcity) ಪ್ರಾರಂಭವಾಗಿದೆ. ಈ ನಡುವೆ ಬಂಡಿಪುರ ರಾಷ್ಟ್ರೀಯ ಉದ್ಯಾನಕ್ಕೂ (Bandipur National Park) ಜಲಕ್ಷಾಮ ಎದುರಾಗಿದೆ.
ಬಂಡೀಪುರ ಅಭಯಾರಣ್ಯದಲ್ಲಿ (Bandipur Sanctuary) ಕೆರೆ-ಕಟ್ಟೆಗಳು ಬರಿದಾಗಿದ್ದು, ಕಾಡು ಪ್ರಾಣಿಗಳ (Wild animals) ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ನೀರು ಅರಸಿ ಗ್ರಾಮಗಳತ್ತ ಕಾಡುಪ್ರಾಣಿಗಳು ದಾಂಗುಡಿ ಇಡುತ್ತಿವೆ. ಆನೆಗಳು ನೀರಿಗಾಗಿ ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ.
ಇದನ್ನೂ ಓದಿ: Life Threat : ಸಾಹಿತಿಗಳಿಗೆ ಬೆದರಿಕೆ ಒಡ್ಡಿ ಬರೆದಿದ್ದ ಪತ್ರಗಳ ಕೈ ಬರಹ ಒಂದೇ! ಪೋಸ್ಟ್ ಆಫೀಸ್ ಹಿಂದೆ ಬಿದ್ದ ಸಿಸಿಬಿ
ಬಂಡೀಪುರದ ಓಂಕಾರ್ ಅರಣ್ಯ ವಲಯದಲ್ಲಿ 31 ಕೆರೆಗಳು ಖಾಲಿಯಾಗಿವೆ. ಕುಡಿಯುವ ನೀರಿಗಾಗಿ ಸುತ್ತಲಿನ ಗ್ರಾಮಗಳತ್ತ ಜಿಂಕೆ, ಕಡವೆ, ಆನೆಗಳು ಬರುತ್ತಿವೆ. ಹೊಸಪುರ, ಶ್ರೀಕಂಠಪುರ, ಯಡವನಹಳ್ಳಿ, ಆಲತ್ತೂರು ಭಾಗದಲ್ಲಿ ನಿತ್ಯ ಆನೆಗಳು ಬರುತ್ತಿವೆ. ಇದು ಜನರನ್ನು ಹಾಗೂ ರೈತರನ್ನು ಆತಂಕಕ್ಕೀಡು ಮಾಡಿದೆ.
ಕಾಡಿನಿಂದ ನಾಡಿಗೆ ಬರುತ್ತಿರುವ ಆನೆಗಳ ಹಿಂಡು ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ. ಕಾಡು ಪ್ರಾಣಿಗಳ ಹಾವಳಿಯಿಂದ ಅನ್ನದಾತ ಕಂಗಾಲಾಗಿದ್ದಾನೆ. ಇದೇ ಬರಗಾಲ ಮುಂದುವರಿದರೆ ಇತರ ವಲಯದಲ್ಲೂ ತೊಂದರೆಯಾಗುವ ಸಾಧ್ಯತೆ ಇದೆ.
ಬಂಡಿಪುರದಲ್ಲಿ ಜಲಮೂಲಗಳು ಬತ್ತುತ್ತಿವೆ. ಕಾಡುಪ್ರಾಣಿಗಳಿಗೆ ಬರದ ಛಾಯೆ ಕಂಟಕವಾಗಿ ಪರಿಣಮಿಸುತ್ತಿದೆ. ಸದ್ಯ ಪಂಪ್‌ಸೆಟ್‌ಗಳ ಮೂಲಕ ಕೆರೆಗಳಿಗೆ ನೀರು ತುಂಬಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಆದರೆ, ಈಗಲೇ ಈ ಪರಿಸ್ಥಿತಿ ತಲೆದೋರಿದರೆ ಇನ್ನು ಮುಂದಿನ ಮಾರ್ಚ್ ವೇಳೆಗೆ ಯಾವ ಪರಿಸ್ಥಿತಿ ತಲೆದೋರುತ್ತದೆ ಎಂಬ ಚಿಂತೆ ಕಾಡುತ್ತಿದೆ.
912.04 ಚದರ ಕಿ.ಮೀ ವಿಸ್ತೀರ್ಣ
ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಮೀಸಲು ಪ್ರದೇಶವು ಭಾರತದ 2ನೇ ಅತಿ ದೊಡ್ಡ ಹುಲಿ ಸಂರಕ್ಷಣಾ ತಾಣವಾಗಿದ್ದು, 912.04 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಈ ಬಂಡೀಪುರ ರಾಷ್ಟ್ರೀಯ ಉದ್ಯಾನವು ವಯನಾಡ್ (ವನ್ಯಜೀವಿ ಅಭಯಾರಣ್ಯ), ಮುದುಮಲೈ ಮತ್ತು ನಾಗರಹೊಳೆಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಇನ್ನು ಈ ಬಂಡೀಪುರವು ದಕ್ಷಿಣ ಭಾರತದ ಅತಿದೊಡ್ಡ ಸಂರಕ್ಷಿತ ಪ್ರದೇಶಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಹೊಂದಿದೆ. ದಕ್ಷಿಣ ಏಷ್ಯಾದ ಕಾಡಾನೆಗಳ ಅತಿ ದೊಡ್ಡ ಆವಾಸ ಸ್ಥಾನವೂ ಇದಾಗಿದೆ. ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ.
ಇಲ್ಲಿರುವ ವನ್ಯಜೀವಿಗಳು
ಹುಲಿಗಳು, ಚಿರತೆ, ಜಿಂಕೆ, ಕಡವೆಗಳು, ಕಾಡು ನಾಯಿಗಳು, ಕಾಡುಹಂದಿ, ಕರಡಿಗಳು, ದೈತ್ಯ ಮಲಬಾರ್ ಅಳಿಲುಗಳು, ಕಾಡೆಮ್ಮೆ ಇತ್ಯಾದಿ ವನ್ಯಜೀವಿಗಳನ್ನು ಬಂಡಿಪುರದಲ್ಲಿ ಕಾಣಬಹುದಾಗಿದೆ.
ದಿನಕ್ಕೆರಡು ಬಾರಿ ಅರಣ್ಯ ಸಫಾರಿ
ಬಂಡೀಪುರದಲ್ಲಿ ಪ್ರತಿದಿನ ಎರಡು ಬಾರಿ ಸಫಾರಿ ನಡೆಸಲಾಗುತ್ತದೆ. ಇಲ್ಲಿ ಎರಡು ರೀತಿಯ ಸಫಾರಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಬಸ್ ಹಾಗೂ ಜೀಪ್ ವ್ಯವಸ್ಥೆ ಇದೆ. ಬಸ್‌ನಲ್ಲಿ ಹೆಚ್ಚಿನ ಜನರು ಒಮ್ಮೆಲೆಗೆ ಹೋಗಬಹುದಾಗಿದ್ದು, ಇದು 45 ನಿಮಿಷಗಳಿಂದ 1 ಗಂಟೆಯ ಅವಧಿಯನ್ನು ಹೊಂದಿರುತ್ತದೆ. ಇನ್ನು ಜೀಪ್ ಸಫಾರಿಯಲ್ಲಿ ಸರಿಸುಮಾರು 2 ಗಂಟೆಗಳ ಅವಧಿ ಇರುತ್ತದೆ. ಈ ಎರಡೂ ಸಫಾರಿಗಳು ಬೆಳಗ್ಗೆ 6 ರಿಂದ 9 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆ ನಡುವೆ ಕಾರ್ಯನಿರ್ವಹಿಸುತ್ತವೆ. ಇನ್ನು ನೀವು ಕ್ಯಾಮೆರಾಗಳನ್ನು ಕೊಂಡೊಯ್ಯುವುದಾದರೆ ಅದಕ್ಕೆ ಹೆಚ್ಚುವರಿ ಶುಲ್ಕವಿರುತ್ತದೆ.
ಎಷ್ಟು ದೂರ?
ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ರಕ್ಷಿತಾರಣ್ಯವು ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿದೆ. ಮೈಸೂರಿನ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದ ದೂರ ಬಂಡೀಪುರದಿಂದ 73 ಕಿ.ಮೀ ದೂರ ಇದೆ. ಮೈಸೂರಿನಿಂದ ಬಂಡೀಪುರ ತಲುಪಲು ಬಸ್‌ಗಳು ಅಥವಾ ಟ್ಯಾಕ್ಸಿಗಳು ಸಿಗುತ್ತವೆ.
ವಸತಿ ವ್ಯವಸ್ಥೆಯೂ ಇದೆ
ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ರಾಷ್ಟ್ರೀಯ ಉದ್ಯಾನವನದ ಹೊರಗಡೆ ಬಂಡೀಪುರ ಸಫಾರಿ ಲಾಡ್ಜ್ ಅನ್ನು ನಡೆಸುತ್ತಿದೆ. ಕೆಲವು ಖಾಸಗಿ ರೆಸಾರ್ಟ್‌ಗಳು ಲಭ್ಯವಿವೆ. ಮೈಸೂರು ನಗರದಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳೂ ಇದ್ದು, ಪ್ರವಾಸಿಗರು ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಬಹುದು.
ಯಾವ ಸಮಯ ಹೆಚ್ಚು ಸೂಕ್ತ
ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ವರ್ಷದ ಯಾವ ಸಮಯದಲ್ಲಿ ಭೇಟಿ ನೀಡಬಹುದಾದರೂ ಮುಂಗಾರು ನಂತರದ ಅಂದರೆ, ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಭೇಟಿ ನೀಡುವುದು ಉತ್ತಮ ಸಮಯ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Auto Drivers : ಡಬಲ್ ಮೀಟರ್ ಕೇಳಿದ, ಕರೆದ ಕಡೆ ಬಾರದ ಆಟೋ ಡ್ರೈವರ್ಸ್ ಮೇಲೆ 670 ಕೇಸ್!
ರಾತ್ರಿ ಸಂಚಾರ ನಿಷೇಧ
ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ಬಂಡೀಪುರ ಕಾಡಿನ ಮೂಲಕ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ. ಕಾರಣ ರಾತ್ರಿ ವಾಹನಗಳ ಸಂಚಾರದಿಂದ ಅಪಘಾತಗಳು ಸಂಭವಿಸಿ ಕಾಡು ಪ್ರಾಣಿಗಳು ಮೃತಪಡುತ್ತವೆ. ಹೀಗಾಗಿ ರಾತ್ರಿ ಸಂಚಾರವನ್ನು ನಿಷೇಧ ಮಾಡಲಾಗಿದೆ.