Site icon Vistara News

NDA Meet: ಭಾರತದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸವೇ ನಮ್ಮ ‘ಗ್ಯಾರಂಟಿ’! ಪ್ರಧಾನಿ ಮೋದಿ ವಾಗ್ದಾನ

PM Narendra Modi

ನವದೆಹಲಿ: ಇಂಡಿಯಾ (INDIA) ಹೆಸರಿನಲ್ಲಿ ಒಂದಾಗಿರುವ ಪ್ರತಿಪಕ್ಷಗಳ (Opposition Meet) ವಿರುದ್ಧ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಕಾರಾತ್ಮಕ ವಿಚಾರಗಳೊಂದಿಗೆ ಒಂದಾಗಿರುವ ಕೂಟವು ಎಂದಿಗೂ ಸಕ್ಸೆಸ್ ಆಗಲು ಸಾಧ್ಯವಿಲ್ಲ ಎಂದು ಎಂದು ಇಂಡಿಯಾ ಕೂಟವನ್ನು ಹೆಸರಿಸದೇ ಪ್ರತಿಪಕ್ಷಗಳ ವಿರುದ್ಧ ಮೋದಿ ಹರಿ ಹಾಯ್ದಿದ್ದಾರೆ. ದಿಲ್ಲಿಯಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮ ಕೂಟ (NDA) ಸಭೆಯಲ್ಲಿ ಮಿತ್ರ ಪಕ್ಷಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕುಟುಂಬ ಹಾಗೂ ಭ್ರಷ್ಟಾಚಾರ ಆಧಾರದ ಮೇಲೆ ಮೈತ್ರಿ ಏರ್ಪಟ್ಟರೆ ಆಗ ದೇಶ ಸೋಲುತ್ತದೆ ಎಂದು ಹೇಳಿದರು. ಇಂಡಿಯಾ ದೇಶದ ಧ್ವನಿಯನ್ನು ಪ್ರತಿನಿಧಿಸುತ್ತದೆ ಎಂದು ಪ್ರತಿಪಕ್ಷಗಳು ಹೇಳಿದ್ದವು. ಇದಕ್ಕೆ ಪ್ರತ್ಯುತ್ತರ ನೀಡಿದ ಮೋದಿ, ಎನ್‌ಡಿಎ ಬಡವರು ಮತ್ತು ಹಿಂದುಳಿದ ವರ್ಗದ ಭಾರತ(Bharat)ವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು(NDA Meet).

ಇಂದು ಎಲ್ಲರೂ ಎನ್‌ಡಿಎ ಭಾಗವಾಗಿದ್ದಾರೆಂದು ಜನರು ನೋಡುತ್ತಿದ್ದಾರೆ. ಅವರು ಶೋಷಿತರು ಮತ್ತು ವಂಚಿತರಿಗಾಗಿ, ಆದಿವಾಸಿಗಳು ಮತ್ತು ಹಿಂದುಳಿದವರ ಪರವಾಗಿ ಕೆಲಸ ಮಾಡುತ್ತಾರೆ. ಎನ್ ಡಿ ಎ ದೇಶದ ಜನರಿಗೆ ಸಮರ್ಪಿಸಲಾಗಿದೆ. ಅದರ ಧ್ಯೇಯವಾಕ್ಯ ರಾಷ್ಟ್ರ ಮೊದಲು, ಪ್ರಗತಿ ಮೊದಲು, ಜನರ ಸಬಲೀಕರಣ ಮೊದಲು… ಗಾಂಧಿ ಮತ್ತು ಅಂಬೇಡ್ಕರ್ ಅವರ ಆಶಯದಂತೆ ಎನ್‌ಡಿಎ ಸಾಮಾಜಿಕ ನ್ಯಾಯವನ್ನು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಕೇರಳದಲ್ಲಿ ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷಗಳು ಕಾದಾಡುತ್ತವೆ. ಆದರೆ, ಬೆಂಗಳರೂಲ್ಲಿ ಅವರು ಒಬ್ಬರಿಗೊಬ್ಬರು ತಬ್ಬಿಕೊಳ್ಳುತ್ತಾರೆ. ಅವರು ಸಮೀಪಕ್ಕೆ ಬರಬಹುದು. ಆದರೆ, ಜತೆಯಾಗಿ ನಡೆಯಲಾರರು ಎಂದು ಪ್ರತಿಪಕ್ಷಗಳ ವಿರುದ್ಧ ಟೀಕೆ ಮಾಡಿದರು.

ನಮ್ಮದು ಅಭಿವೃದ್ಧಿಶೀಲ, ವಿಕಾಸ ಭಾರತವೊಂದೇ ಅಜೆಂಡಾ. ಇದಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಇದೇ ನಮ್ಮ ಗ್ಯಾರಂಟಿಯಾಗಿದೆ. ದೇಶದಲ್ಲಿ ಈಗ ಆತ್ಮ ಸಮ್ಮಾನ್, ಆತ್ಮ ವಿಶ್ವಾಸ ಹೆಚ್ಚಾಗಿದೆ. ನಾವೆಲ್ಲರೂ ದೇಶದ ವಿಕಾಸಕ್ಕಾಗಿ ಕೆಲಸ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಅಲ್ಲದೇ, ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ವೋಟ್ ಷೇರ್ ಶೇ.50 ದಾಟಲಿದೆ ಎಂದು ಇದೇ ವೇಳೆ ಭವಿಷ್ಯ ನುಡಿದರು.

ಈ ಸುದ್ದಿಯನ್ನೂ ಓದಿ: Opposition Meet: ಯಾವ ಪಕ್ಷ ಯಾವ ಕೂಟದಲ್ಲಿದೆ? ‘ಎನ್‌ಡಿಎ’, ‘ಇಂಡಿಯಾ’ ಪರ ಇರುವ ಪಕ್ಷಗಳೆಷ್ಟು?

ಹೊಸ ಭಾರತ ನಿರ್ಮಾಣಕ್ಕೆ ಕಳೆದ 9 ವರ್ಷದಲ್ಲಿ ಭದ್ರ ಅಡಿಪಾಯ ಹಾಕಿದ್ದೇವೆ. ನಾವೆಲ್ಲರೂ ಹೊಸ ಭಾರತವನ್ನು ಕಟ್ಟೋಣ. ಆತ್ಮನಿರ್ಭರ ಭಾರತವನ್ನು ಕಟ್ಟೋಣ. ವಿಕಸಿತ ಭಾರತ ನಿರ್ಮಾಣ ಮಾಡೋಣ. ನೀವು ನನ್ನಲ್ಲಿ ವಿಶ್ವಾಸ ತೋರಿಸಿದ್ದೀರಿ. ಅದಕ್ಕೆ ಚ್ಯುತಿಯಾಗದಂತೆ ಕೆಲಸ ಮಾಡೋಣ ಎಂದು ಪ್ರಧಾನಿ ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version