Site icon Vistara News

Morbi Bridge Collapse | ಸೇತುವೆ ಕುಸಿತದಲ್ಲಿ ಮೃತರ ಸಂಖ್ಯೆ 60ಕ್ಕೆ, 143 ವರ್ಷದ ಸೇತುವೆ ಕುಸಿಯಲು ಕಾರಣವೇನು?

Bridge

ಗಾಂಧಿನಗರ: ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು (Machchu) ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆ ಕುಸಿತದಲ್ಲಿ (Morbi Bridge Collapse) ಮೃತಪಟ್ಟವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಮೊರ್ಬಿಗೆ ತೆರಳಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ದುರಂತದಲ್ಲಿ 70ಕ್ಕೂ ಅಧಿಕ ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರವು ಮೃತರ ಕುಟುಂಬಸ್ಥರಿಗೆ ಪರಿಹಾರವನ್ನೂ ಘೋಷಿಸಿದ್ದಾರೆ. ಸಾವಿನ ಸಂಖ್ಯೆ ಜಾಸ್ತಿಯಾಗಲಿದೆ ಎಂದು ತಿಳಿದುಬಂದಿದೆ.

ಸೇತುವೆ ಕುಸಿಯಲು ಕಾರಣವೇನು?

ಮೊರ್ಬಿ ಜಿಲ್ಲೆಯ ಸೇತುವೆಯು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇದಕ್ಕೆ 143 ವರ್ಷಗಳ ಹಿಂದೆ ಅಂದರೆ, 1879ರ ಫೆಬ್ರವರಿ 20ರಂದು ಚಾಲನೆ ನೀಡಿದ್ದಾರೆ. ಆಗಿನ ಕಾಲದಲ್ಲಿಯೇ ತೂಗು ಸೇತುವೆ ನಿರ್ಮಿಸಲು 3.5 ಲಕ್ಷ ರೂ. ಖರ್ಚಾಗಿತ್ತು. ಬ್ರಿಟನ್‌ನಿಂದ ಉಪಕರಣಗಳನ್ನು ತರಿಸಿ ಸೇತುವೆಯನ್ನು ನಿರ್ಮಿಸಲಾಗಿದೆ. ಇಂತಹ ಐತಿಹಾಸಿಕ ಸೇತುವೆ ಕುಸಿದು, ಜನ ಮೃತಪಟ್ಟಿರುವುದರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಆರು ತಿಂಗಳಿಂದ ದುರಸ್ತಿ ಮಾಡಿ, ಇದಕ್ಕಾಗಿ ಎರಡು ಕೋಟಿ ರೂ. ವ್ಯಯಿಸಿ, ಸಂಚಾರಕ್ಕೆ ಮತ್ತೆ ಮುಕ್ತಗೊಳಿಸಿ ಐದು ದಿನ (ಅ.25)ದಲ್ಲಿಯೇ ಸೇತುವೆ ಕುಸಿದಿದ್ದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸೇತುವೆಯು ಮಹಾಪ್ರಭೂಜಿಯಿಂದ ಸಮಾಕಾಂತ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವುದರಿಂದ ನೂರಾರು ಜನ ಇದರ ಮೇಲೆ ತಿರುಗಾಡುತ್ತಾರೆ.

ಇದನ್ನೂ ಓದಿ | Bridge Collapse | ದುರಸ್ತಿಯಾದ 5 ದಿನದಲ್ಲಿ ಗುಜರಾತ್ ಸೇತುವೆ ಕುಸಿತ, 100 ಜನ ನದಿಪಾಲು, ಪರಿಹಾರ ಘೋಷಿಸಿದ ಮೋದಿ

Exit mobile version