ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರ ಫೈನಲ್ನಲ್ಲಿ ಆಘಾತಕಾರಿ ಸೋಲಿನ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಡೇವಿಡ್ ಮಿಲ್ಲರ್ ಟಿ 20ಯಿಂದ ನಿವೃತ್ತರಾಗುವ ವದಂತಿಗಳು ಬಂದಿದ್ದವು. ಅದಕ್ಕವರು ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಭರವಸೆ ಭಗ್ನಗೊಂಡಿತ್ತು. ದಕ್ಷಿಣ ಆಫ್ರಿಕಾ ಫೈನಲ್ನಲ್ಲಿ ಭಾರತದ ವಿರುದ್ಧ 7 ರನ್ಗಳ ಸೋಲು ಅನುಭವಿಸಿತ್ತು. ಪಂದ್ಯದ ಅಂತಿಮ ಕ್ಷಣಗಳಲ್ಲಿ ದಕ್ಷಿಣ ಆಫ್ರಿಕಾ ಕೈಚೆಲ್ಲಿತ್ತು. ಅದರಲ್ಲೂ ಡೇವಿಡ್ ಮಿಲ್ಲರ್ ಕೊನೇ ಓವರ್ನ ಮೊದಲ ಎಸೆತಕ್ಕೆ ಔಟಾಗಿದ್ದರು. ಇದು ಅವರಿಗೆ ಬೇಸರ ಮೂಡಿಸಿತ್ತು.
15ನೇ ಓವರ್ನಲ್ಲಿ ಅಕ್ಷರ್ ಪಟೇಲ್ ಓವರ್ಗೆ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಬಾರಿಸುವ ಮೂಲಕ ಹೆನ್ರಿಚ್ ಕ್ಲಾಸೆನ್ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವಿನ ಅವಕಾಶ ತಂದುಕೊಟ್ಟಿದ್ದರು. 16ನೇ ಓವರ್ ಮುಗಿದಾಗ ದಕ್ಷಿಣ ಆಫ್ರಿಕಾಕ್ಕೆ ಅಂತಿಮ ನಾಲ್ಕು ಓವರ್ಗಳಲ್ಲಿ ಕೇವಲ 26 ರನ್ಗಳನ್ನು ಬಾರಿಸಬೇಕಿತ್ತು.
ಇದನ್ನೂ ಓದಿ: IPL 2025 : ಐಪಿಎಲ್ ತಂಡಗಳಲ್ಲಿ ಉಳಿಸಿಕೊಳ್ಳುವ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ
ಕ್ಲಾಸೆನ್ 17 ನೇ ಓವರ್ನ ಮೊದಲ ಎಸೆತದಲ್ಲೇ ಔಟಾದರು. ಈ ವೇಳೆ ತಂಡವನ್ನು ಗುರಿ ಮುಟ್ಟಿಸುವ ಕೆಲಸ ಡೇವಿಡ್ ಮಿಲ್ಲರ್ ಅವರ ಹೆಗಲ ಮೇಲಿತ್ತು. ಅಂತಿಮವಾಗಿ ಅಂತಿಮ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಎದುರಿಸಿದ ಅನುಭವಿ ಬ್ಯಾಟರ್ 16 ರನ್ಗಳಿಗೆ ಔಟಾದರು. 20ನೇ ಓವರ್ನ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಪಾಂಡ್ಯ ಅವರ ಲೋ ಫುಲ್ ಟಾಸ್ ಅನ್ನು ನೇರವಾಗಿ ಹೊಡೆದರು. ಸೂರ್ಯಕುಮಾರ್ ಯಾದವ್ ರೋಚಕ ಕ್ಯಾಚ್ ಅನ್ನು ಹಿಡಿದು ಮಿಲ್ಲರ್ ಅವರನ್ನು ಹಿಂದಕ್ಕೆ ಕಳುಹಿಸಿದರು. ಭಾರತವು ಪಂದ್ಯವನ್ನು 7 ರನ್ಗಳಿಂದ ಗೆದ್ದಿತು. ಒಂದು ಹಂತದಲ್ಲಿ ಗೆಲುವು ದಕ್ಷಿಣ ಆಫ್ರಿಕಾಗೆ ಎಂದು ತೋರುತ್ತಿತ್ತು. ಅಂತಿಮವಾಗಿ ಭಾರತದ ಪರವಾಯಿತು.
ನಿವೃತ್ತಿ ವದಂತಿಗಳ ಬಗ್ಗೆ ಡೇವಿಡ್ ಮಿಲ್ಲರ್ ಹೇಳಿಕೆಯೇನು?
ದಕ್ಷಿಣ ಆಫ್ರಿಕಾ ಸೋಲಿನ ಬಳಿಕ ಡೇವಿಡ್ ಮಿಲ್ಲರ್ ಟಿ20 ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎಂಬ ವದಂತಿಗಳು ಹರಿದಾಡಿದವು. 35 ವರ್ಷದ ಆಟಗಾರ ಕ್ರಿಕೆಟ್ನ ಕಿರು ಸ್ವರೂಪದಿಂದ ನಿವೃತ್ತರಾಗಿದ್ದಾರೆ ಎಂದು ವದಂತಿಗಳು ತಿಳಿಸಿವೆ. ಆದಾಗ್ಯೂ, ಡೇವಿಡ್ ಮಿಲ್ಲರ್ ಮಂಗಳವಾರ (ಜುಲೈ 2) ಆ ವದಂತಿಗಳನ್ನು ತಳ್ಳಿಹಾಕಿದರು ಮತ್ತು ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಟಿ 20 ಪಂದ್ಯಗಳನ್ನು ಆಡಲು ಲಭ್ಯವಿರುವುದಾಗಿ ಹೇಳಿದರು.
ಕೆಲವು ವರದಿಗಳ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ. ನಾನು ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿಲ್ಲ. ನಾನು ದಕ್ಷಿಣ ಆಫ್ರಿಕಾ ಪರ ಆಡಲು ಲಭ್ಯವಿದ್ದೇನೆ. ಅತ್ಯುತ್ತಮ ಫಲಿತಾಂಶ ಇನ್ನೂ ಬರಬೇಕಿದೆ ಎಂದು ಡೇವಿಡ್ ಮಿಲ್ಲರ್ ಹೇಳಿದ್ದಾರೆ.