ನವದೆಹಲಿ: ಒಟ್ಟು 75,021 ಕೋಟಿ ರೂ.ಗಳ ವೆಚ್ಚದಲ್ಲಿ ದೇಶಾದ್ಯಂತ ಒಂದು ಕೋಟಿ ಮನೆಗಳ ಚಾವಣೆಯಲ್ಲಿ ಸೌರಶಕ್ತಿ ಘಟಕಗಳನ್ನು ಸ್ಥಾಪಿಸುವ ಪಿಎಂ-ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ (PM Surya Ghar Muft Bijli Yojana) ಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. “ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆಯಿತು. ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಗೆ (PM-SGMBY) ಇಂದು ಅನುಮೋದನೆ ನೀಡಲಾಗಿದ್ದು, ಈ ಯೋಜನೆಯಡಿ ಒಂದು ಕೋಟಿ ಕುಟುಂಬಗಳಿಗೆ 300 ಯುನಿಟ್ ಉಚಿತ ವಿದ್ಯುತ್ (300 units of free electricity) ಸಿಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಫೆಬ್ರವರಿ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಈ ಯೋಜನೆಯು ದೇಶದ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯುನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.
#Cabinet approves PM-Surya Ghar: Muft Bijli Yojana for installing rooftop solar in One Crore households with a total outlay of Rs.75,021 crore
— Manish Desai (@DG_PIB) February 29, 2024
Prime Minister had launched the scheme on 13th February, 2024#CabinetDecisions pic.twitter.com/yZsnT3Fl6o
“ಸುಸ್ಥಿರ ಅಭಿವೃದ್ಧಿ ಮತ್ತು ಜನರ ಯೋಗಕ್ಷೇಮ ಹೆಚ್ಚಿಸುವ ಸಲುವಾಗಿ, ನಾವು ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. 75,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಈ ಯೋಜನೆಯು ಪ್ರತಿ ತಿಂಗಳು 300 ಯುನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ 1 ಕೋಟಿ ಮನೆಗಳನ್ನು ಬೆಳಗುವ ಗುರಿಯನ್ನು ಹೊಂದಲಾಗಿದೆ” ಎಂದು ಪಿಎಂ ಮೋದಿ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಸರಣಿ ಪೋಸ್ಟ್ ಗಳಲ್ಲಿ ತಿಳಿಸಿದ್ದರು.
In order to further sustainable development and people’s wellbeing, we are launching the PM Surya Ghar: Muft Bijli Yojana. This project, with an investment of over Rs. 75,000 crores, aims to light up 1 crore households by providing up to 300 units of free electricity every month.
— Narendra Modi (@narendramodi) February 13, 2024
ಒಟ್ಟು 75,021 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ 1 ಕಿಲೋವ್ಯಾಟ್ ಘಟಕಕ್ಕೆ 30,000 ರೂ., 2 ಕಿಲೋವ್ಯಾಟ್ ಘಟಕಕ್ಕೆ 60,000 ರೂ., 3 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಘಟಕಗಳಿಗೆ 78,000 ರೂಪಾಯಿ ಅನುದಾನ ದೊರೆಯಲಿದೆ. ಅದೇ ರೀತಿ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಮಾದರಿ ಸೌರ ಗ್ರಾಮವನ್ನು ಅಭಿವೃದ್ಧಿಪಡಿಸಿ ಅದರ ಮೂಲಕ ಗ್ರಾಮೀಣ ಪ್ರದೇಶಗಳ ಮನೆಗಳ ಮೇಲಿನ ಸೌರಶಕ್ತಿ ಮಾದರಿಯಾಗಿ ಘಟಕ ಸ್ಥಾಫನೆಗೆ ಮಾದರಿ ಎನಿಸಿಕೊಳ್ಳಲಿದೆ.
ಲಾಭಗಳೇನು?
- ಚಾವಣಿಯ ಸೌರ ಫಲಕವನ್ನು ಹೊಂದಿರುವ ಕುಟುಂಬವು ಸೌರ ಶಕ್ತಿಯ ಬಳಕೆಯಿಂದ ವಿದ್ಯುತ್ ಬಿಲ್ ಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಹೆಚ್ಚುವರಿ ವಿದ್ಯುತ್ ಅನ್ನು ಸರ್ಕಾರಕ್ಕೆ ಮಾರಾಟ ಮಾಡುವ ಮೂಲಕ ಆದಾಯವನ್ನೂ ಗಳಿಸಬಹುದು.
- ಯೋಜನೆಯ ಸಹಾಯದಿಂದ, ರಾಷ್ಟ್ರವ್ಯಾಪಿ ವಸತಿ ವಲಯದಲ್ಲಿ ಚಾವಣಿ ಸೌರಶಕ್ತಿಯ ಮೂಲಕ ಹೆಚ್ಚುವರಿ 30 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ವ್ಯವಸ್ಥೆಗಳೊಂದಿಗೆ 25 ವರ್ಷಗಳ ಜೀವಿತಾವಧಿಯಲ್ಲಿ 720 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ (ಸಿಒ 2) ಪರಿಸರ ಸೇರುವುದನ್ನು ತಪ್ಪಿಸಬಹುದು.
- ಹೆಚ್ಚುವರಿಯಾಗಿ, ಪಿಎಂ-ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಉತ್ಪಾದನೆ, ಲಾಜಿಸ್ಟಿಕ್ಸ್, ಪೂರೈಕೆ ನೆಟ್ವರ್ಕ್ , ಮಾರಾಟ, ಸ್ಥಾಪನೆ, ಕಾರ್ಯಾಚರಣೆಗಳು ಮತ್ತು ನಿರ್ವಹಣೆ ಮತ್ತು ಇತರ ಸೇವೆಗಳಲ್ಲಿ ಸುಮಾರು 17 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.
ಅರ್ಜಿ ಸಲ್ಲಿಸುವುದು ಹೇಗೆ?
ಒಬ್ಬ ವ್ಯಕ್ತಿಯು ಪಿಎಂ-ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಮತ್ತು ಆರ್ಥಿಕ ಸಬ್ಸಿಡಿಗೆ ರಾಷ್ಟ್ರೀಯ ಪೋರ್ಟಲ್ https://pmsuryaghar.gov.in/ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ಚಾವಣಿ ಸೌರಶಕ್ತಿಯನ್ನು ಸ್ಥಾಪಿಸಲು ಸೂಕ್ತ ಮಾರಾಟಗಾರರನ್ನು ಆಯ್ಕೆ ಮಾಡಬಹುದು. ಅವರು ಸುಮಾರು 7% ಆಧಾರ ರಹಿತ ಕಡಿಮೆ ಬಡ್ಡಿಯ ಸಾಲ ಉತ್ಪನ್ನಗಳನ್ನು ಪಡೆಯಬಹುದು.
ಈ ಯೋಜನೆಯನ್ನು ಘೋಷಿಸುವಾಗ, ಗಣನೀಯ ಸಬ್ಸಿಡಿಗಳನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ನೀಡಲಾಗುತ್ತತ್ತದೆ. ಕೇಂದ್ರ ಸರ್ಕಾರವು ಜನರಿಗೆ ಯೋಜನೆಯಿಂದ ಯಾವುದೇ ಹೊರೆಯಾಗದಂತೆ ನೋಡಿಕೊಳ್ಳುತ್ತದೆ ಎಂದು ಪ್ರಧಾನಿ ಹೇಳಿದರು.
ಹಸಿರು ಇಂಧನಕ್ಕೆ ಕೇಂದ್ರದ ಒತ್ತು
ಸೌರ ಫಲಕಗಳನ್ನು ಸ್ಥಾಪಿಸುವ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಮಧ್ಯಂತರ ಬಜೆಟ್ನಲ್ಲಿ ಘೋಷಿಸಿದ್ದರು. ಸೌರ ವಿದ್ಯುತ್ ಘಟಕಗಳನ್ನು ಖರೀದಿಸಲು ಮತ್ತು ಗ್ರಿಡ್ಗೆ ಶಕ್ತಿಯನ್ನು ಮತ್ತೆ ಪೂರೈಸಲು ಜನರಿಗೆ ಪ್ರೋತ್ಸಾಹ ನೀಡುವ ಮೇಲ್ಛಾವಣಿ ಸೌರ ವಿದ್ಯುತ್ ಯೋಜನೆಯು ವಾರ್ಷಿಕವಾಗಿ 15,000 ರೂ.ಗಳ ಉಳಿತಾಯಕ್ಕೆ ಕಾರಣವಾಗಬಹುದು ಎಂದು ಸೀತಾರಾಮನ್ ಹೇಳಿದ್ದಾರೆ.
2023-24ರಲ್ಲಿ 4,970 ಕೋಟಿ ರೂ.ಗಳಷ್ಟಿದ್ದ ಅನುದಾನವನ್ನು ಮುಂದಿನ ಹಣಕಾಸು ವರ್ಷಕ್ಕೆ 10,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಪವನ ವಿದ್ಯುತ್ (ಗ್ರಿಡ್) ಗಾಗಿ 2023-24ರಲ್ಲಿ 930 ಕೋಟಿ ರೂ. ಬಿಡುಗಡೆಯಾಗಲಿದೆ.