ಬೆಂಗಳೂರು: ರಾಮ ಮಂದಿರವನ್ನು ಕಟ್ಟಿ ಜೈಶ್ರೀರಾಮ್ ಎಂದು ಸಾವಿರಾರು ಬಾರಿ ಕೂಗಿದರೆ ಯಾರಿಗೇನು ಸಮಸ್ಯೆ ಎಂದು ಭಾರತದ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಪ್ರಶ್ನಿಸಿದ್ದಾರೆ. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಂಡ ಬಳಿಕ ಜೈಶ್ರೀರಾಮ್ ಕೂಗುತ್ತಿರುವ ಕುರಿತು ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿ ಸಂಸ್ಥೆಯೊಂದು ಮಾಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ.
ಇನ್ನೊಂದು ಧರ್ಮವನ್ನು ವಿರೋಧಿಸುವ ಅಥವಾ ಇಷ್ಟ ಪಡದವರು ಎಲ್ಲ ಧರ್ಮಗಳಲ್ಲಿಯೂ ಇದ್ದಾರೆ. ಅಂತೆಯೇ ರಾಮ ಮಂದಿರ ಕಟ್ಟಿ ಜೈಶ್ರೀರಾಮ್ ಕೂಗುವುದರಿಂದ ಯಾರಿಗೂ ತೊಂದರೆ ಇಲ್ಲ. ಅದೇ ರೀತಿ ಯಾರಾದರೂ ಅಲ್ಲಾಹು ಅಕ್ಬರ್ ಎಂದು ಕೂಗಿದರೂ ಸಮಸ್ಯೆ ಇಲ್ಲ. ನಾನು ಕೂಡ ಅದಕ್ಕೆ ಧ್ವನಿಗೂಡಿಸುವೆ ಎಂದು ಶಮಿ ಹೇಳಿದ್ದಾರೆ.
ಮೊಹಮ್ಮದ್ ಶಮಿ ವಿಶೇಷ ಸಂದರ್ಶನಗಳಲ್ಲಿ ಹಲವಾರು ಸಂಗತಿಗಳನ್ನು ಮಾತನಾಡಿದ್ದಾರೆ. ತಮ್ಮ ಬೌಲಿಂಗ್, ತಮ್ಮ ಕುಟುಂಬ ಇತ್ಯಾದಿ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ‘
ಪುತ್ರಿ ಐರಾ ದೂರವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಶಮಿ
ಭಾರತ ತಂಡದ ಪರ ತಮ್ಮ ಉತ್ತುಂಗದ ಪ್ರದರ್ಶನ ನೀಡುವುದರ ಹೊರತಾಗಿ ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami ) ಅನೇಕ ಪ್ರತಿಭೆಗಳ ವ್ಯಕ್ತಿ. ಆದಾಗ್ಯೂ, 33 ವರ್ಷದ ಶಮಿ ಅವರ ವೈಯಕ್ತಿಕ ಜೀವನ ಚೆನ್ನಾಗಿಲ್ಲ. ಪತ್ನಿಯಿಂದ ಬೇರ್ಪಟ್ಟ ಹೊರತಾಗಿಯೂ ಅವರು ಕೋರ್ಟ್ ಕೇಸ್ಗಾಗಿ ಪರಿತಪಿಸುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ, ಶಮಿ ತಮ್ಮ ಮಗಳು ಆಯಿರಾಳ ಪ್ರೀತಿಯನ್ನು ನಷ್ಟ ಮಾಡಿಕೊಳ್ಳುತ್ತಿರುವ ವಿಷಯವನ್ನು ಬೇಸರದಿಂದ ಹೇಳಿಕೊಂಡಿದ್ದಾರೆ. ತನ್ನ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ಐರಾಗೆ ತನ್ನೊಂದಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.
ಶಮಿ ತಮ್ಮ ಮಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಯಾರೂ ತಮ್ಮ ರಕ್ತ ಸಂಬಂಧವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಹೇಳಿದ್ದಾರೆ.. ತಮ್ಮ ವಿಚ್ಛೇದಿತ ಹೆಂಡತಿ ಅನುಮತಿ ನೀಡಿದಾಗ ಮಾತ್ರ ತಾನು ಮಗಳೊಂದಿಗೆ ಮಾತನಾಡುತ್ತೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ : Test Cricket : ಟೆಸ್ಟ್ ಸರಣಿಯಲ್ಲಿ 3 ಪಂದ್ಯಗಳು ಇರಲೇಬೇಕು; ಕ್ರಿಕೆಟ್ನಲ್ಲಿ ಹೊಸ ನಿಯಮ
ಯಾರು ತಮ್ಮ ಮಕ್ಕಳು ಮತ್ತು ಕುಟುಂಬವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ನಿಸ್ಸಂಶಯವಾಗಿ, ಎಲ್ಲವೂ ನಿಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ. ಆದರೆ ನಾನು ಅವಳನ್ನು (ಮಗಳನ್ನು) ಮಿಸ್ ಮಾಡಿಕೊಳ್ಳುತ್ತಿದ್ದೇನೆಯೇ ಎಂದು ನೀವು ನನ್ನನ್ನು ಕೇಳಿದರೆ, ಯಾರೂ ನಮ್ಮನ್ನೇ ಬೇರ್ಪಡಿಸಲು ಸಾಧ್ಯವಿಲ್ಲ”ಎಂದು ಶಮಿ ಹೇಳಿದ್ದಾರೆ.
“ನಾನು ಕೆಲವೊಮ್ಮೆ ಅವಳೊಂದಿಗೆ ಮಾತನಾಡುತ್ತೇನೆ. ಅವಳು (ಹಸೀನ್ ಜಹಾನ್) ಮಾತನಾಡಲು ಅನುಮತಿ ನೀಡಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ನಾನು ಇನ್ನೂ ಅವಳನ್ನು ಭೇಟಿ ಮಾಡಿಲ್ಲ. ನಾನು ಅವಳಿಗೆ ಉತ್ತಮ ಆರೋಗ್ಯ ಮತ್ತು ಸಾಕಷ್ಟು ಯಶಸ್ಸನ್ನು ಹಾರೈಸಲು ಬಯಸುತ್ತೇನೆ. ಅವಳ ತಾಯಿ ಮತ್ತು ನನ್ನ ನಡುವೆ ಏನು ನಡೆಯುತ್ತಿದೆ ಅದು ಮುಖ್ಯವಲ್ಲ. ಪುತ್ರಿ ಆರೋಗ್ಯಕರ ಜೀವನವನ್ನು ನಡೆಸಲಿ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ” ಎಂದು ಶಮಿ ಹೇಳಿದ್ದಾರೆ.