Site icon Vistara News

Sanjiv Goenka: ರಾಹುಲ್‌ಗೆ ಬೈದ ಗೋಯೆಂಕಾ; ಈ ಹಿಂದೆ ಧೋನಿಯನ್ನೇ ಕ್ಯಾಪ್ಟನ್ಸಿಯಿಂದ ತೆಗೆದಿದ್ದರು!

Sanjiv Goenka

When Sanjiv Goenka Sacked MS Dhoni As RPSG Captain And Appointed Steve Smith Instead

ನವದೆಹಲಿ: ಸನ್‌ ರೈಸರ್ಸ್‌ ಹೈದರಾಬಾದ್‌ (Sun Risers Hyderabad) ತಂಡದ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಮಹತ್ವದ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡ ಬಳಿಕ ಎಲ್‌ಎಸ್‌ಜಿ ಮಾಲೀಕ ಸಂಜೀವ್‌ ಗೋಯೆಂಕಾ (Sanjiv Goenka) ಅವರು ನಾಯಕ ಕೆ.ಎಲ್.ರಾಹುಲ್‌ (KL Rahul) ಜತೆ ಬಹಿರಂಗವಾಗಿಯೇ ವಾಗ್ವಾದ ನಡೆಸಿದ, ಟೀಕಿಸಿದ ವಿಡಿಯೊ ವೈರಲ್‌ ಆಗಿದೆ. ಅಷ್ಟೇ ಅಲ್ಲ, ಕೆ.ಎಲ್‌.ರಾಹುಲ್‌ ಅವರನ್ನು ಎಲ್‌ಎಸ್‌ಜಿ ನಾಯಕತ್ವದಿಂದ ವಜಾಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಸಂಜೀವ್‌ ಗೋಯೆಂಕಾ, 7 ವರ್ಷದ ಹಿಂದೆ ಮಹೇಂದ್ರ ಸಿಂಗ್‌ ಧೋನಿ (Mahendra Singh Dhoni) ಅವರನ್ನೇ ನಾಯಕತ್ವದಿಂದ ವಜಾಗೊಳಿಸಿದ್ದರು. ಧೋನಿ ನಾಯಕತ್ವವನ್ನೇ ಪ್ರಶ್ನಿಸಿ ಅವರು ಇಂತಹ ತೀರ್ಮಾನ ತೆಗೆದುಕೊಂಡಿದ್ದರು.

ಹೌದು, 2017ರಲ್ಲಿ ಸಂಜೀವ್‌ ಗೋಯೆಂಕಾ ಅವರು ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ (RPS) ತಂಡದ ಮಾಲೀಕರಾಗಿದ್ದರು. ಅವರು ಇದೇ ಆವೃತ್ತಿಯ ಐಪಿಎಲ್‌ನಲ್ಲಿ ಧೋನಿ ಅವರನ್ನು ನಾಯಕತ್ವದಿಂದ ವಜಾಗೊಳಿಸಿ ಸ್ಟೀವ್‌ ಸ್ಮಿತ್‌ ಅವರನ್ನು ಆರ್‌ಪಿಎಸ್‌ ನಾಯಕನನ್ನಾಗಿ ಘೋಷಿಸಿದರು. 2016ನೇ ಆವೃತ್ತಿಯ ಕೊನೆಗೆ ಧೋನಿ ನಾಯಕತ್ವದಲ್ಲಿ ಆರ್‌ಪಿಎಸ್‌ 7ನೇ ಸ್ಥಾನ ಪಡೆದ ಕಾರಣದಿಂದಾಗಿ ಗೋಯೆಂಕಾ ಅವರು ಧೋನಿ ಅವರನ್ನು ಮುಂದಿನ ಆವೃತ್ತಿಯಲ್ಲಿ ನಾಯಕತ್ವದಿಂದ ವಜಾಗೊಳಿಸಿದ್ದರು.

ಸಂಜೀವ್‌ ಗೋಯೆಂಕಾ ಅವರು 2017ರಲ್ಲಿ ಸ್ಟೀವ್‌ ಸ್ಮಿತ್‌ ಅವರಿಗೆ ನಾಯಕತ್ವ ನೀಡಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಮಹೇಂದ್ರ ಸಿಂಗ್‌ ಧೋನಿ ಅಭಿಮಾನಿಗಳು ಇವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, 2017ರಲ್ಲಿ ಸ್ಟೀವ್‌ ಸ್ಮಿತ್‌ ನಾಯಕತ್ವದಲ್ಲಿ ಆರ್‌ಪಿಎಸ್‌ ತಂಡವು ಫೈನಲ್‌ ತಲುಪಿತ್ತು. ಆದರೆ, ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಪಿಎಸ್‌ ಕೇವಲ ಒಂದು ರನ್‌ನಿಂದ ಸೋತು ರನ್ನರ್‌ ಸ್ಥಾನಕ್ಕೆ ತೃಪ್ತಿಕೊಳ್ಳಬೇಕಾಯಿತು. ಸಿಎಸ್‌ಕೆ ಬ್ಯಾನ್‌ ಆದ ಕಾರಣ 2016, 2017ರಲ್ಲಿ ಆರ್‌ಪಿಎಸ್‌ ಪರವಾಗಿ ಆಡಿದ್ದ ಧೋನಿ, 2018ರಲ್ಲಿ ಸಿಎಸ್‌ಕೆಗೆ ಮರಳಿದರು. ಮಹತ್ವದ ವಿಚಾರ ಎಂದರೆ, ಧೋನಿ ನಾಯಕತ್ವದಲ್ಲಿ 2018ರಿಂದ 2023ರ ಅವಧಿಯಲ್ಲಿ ಸಿಎಸ್‌ಕೆ ಮೂರು ಬಾರಿ ಚಾಂಪಿಯನ್‌ ಆಯಿತು.

ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಸಂಜೀವ್‌ ಗೋಯೆಂಕಾ ಮಾಲೀಕತ್ವದ ಎಲ್‌ಎಸ್‌ಜಿಯು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಎಲ್‌ಎಸ್‌ಜಿ ಹೀನಾಯವಾಗಿ ಸೋತ ಬಳಿಕ ನಾಯಕ ರಾಹುಲ್‌ ಅವರಿಗೆ ಬೈದಿದ್ದಾರೆ. ಈ ಕುರಿತು ಗೋಯೆಂಕಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟಾದರೂ, ಮೊಂಡುತನ ಬಿಡದ ಗೋಯೆಂಕಾ, ಪ್ರಸಕ್ತ ಸೀಸನ್‌ನ ಕೊನೆಯ ಎರಡು ಪಂದ್ಯಗಳಿಗೆ ರಾಹುಲ್‌ ಬದಲಿಗೆ ನಿಕೋಲಸ್‌ ಪೂರನ್‌ ಅವರಿಗೆ ನಾಯಕತ್ವ ವಹಿಸಲಿದ್ದಾರೆ ಎನ್ನಲಾಗುತ್ತಿದೆ. 2025ರಲ್ಲೂ ಬೇರೆ ನಾಯಕನನ್ನು ನೇಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral Video: ಪಂದ್ಯ ಸೋತ ಸಿಟ್ಟಿನಲ್ಲಿ ರಾಹುಲ್​ಗೆ ಮೈದಾನದಲ್ಲೇ ಬೈದ ಲಕ್ನೋ ತಂಡದ ಮಾಲಿಕ

Exit mobile version