Site icon Vistara News

Sarabjot Singh : ಭಾರತಕ್ಕೆ 2ನೇ ಒಲಿಂಪಿಕ್ಸ್ ಪದಕ ತಂದುಕೊಟ್ಟ ಮನು ಭಾಕರ್ ಶೂಟಿಂಗ್ ಪಾಲುದಾರ ಸರಬ್ಜೋತ್ ಸಿಂಗ್​ ಹಿನ್ನೆಲೆ ಇಲ್ಲಿದೆ

Sarabjot Singh

ಪ್ಯಾರಿಸ್: ಭಾರತದ ಯುವ ಶೂಟಿಂಗ್ ಜೋಡಿ ಸರಬ್ಜೋತ್ ಸಿಂಗ್ (Sarabjot Singh) ಹಾಗೂ ಮನು ಭಾಕರ್​ (Manu Bhaker) ಮಂಗಳವಾರ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಮನು ಮತ್ತು ಸರಬ್ಜೋತ್ ಜೋಡಿ ದಕ್ಷಿಣ ಕೊರಿಯಾದ ಶೂಟರ್​ಗಳನ್ನು 16-10 ಅಂಕಗಳಿಂದ ಮಣಿಸಿ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟರು . ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ನಂತರ ಮನು ಒಲಿಂಪಿಕ್ಸ್​ನ ಒಂದೇ ಆವೃತ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ವೇಳೆ ಸರಬ್ಜೋತ್ ಅವರು ಗಗನ್ ನಾರಂಗ್ ಮತ್ತು ವಿಜಯ್ ಕುಮಾರ್ ನಂತರ ಶೂಟಿಂಗ್ ಪದಕ ಗೆದ್ದ ಭಾರತೀಯ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುತೂಹಲಕಾರಿ ಕಾಕತಾಳಿಯವೆಂದರೆ ನಾರಂಗ್ ಕಂಚಿನ ಪದಕ ಸರಿಯಾಗಿ 12 ವರ್ಷಗಳ ಹಿಂದೆ ಅಂದರೆ ಜುಲೈ 30, 2012 ರಂದು ಭಾರತಕ್ಕೆ ಲಭಿಸಿತ್ತು.

ಭಾರತ 261.3 ಅಂಕಗಳನ್ನು ಗಳಿಸಿತು, ಅದರಲ್ಲಿ ಸರಬ್ಜೋತ್ 110.2 ಅಂಕಗಳನ್ನು ಗಳಿಸಿದರು, ಇದರಲ್ಲಿ ಎರಡು ಬಾರಿ 10.2 ಮತ್ತು ಮನು ಸ್ಪರ್ಧೆಯಲ್ಲಿ ಏಕೈಕ ಬಾರಿ 10.5 ಅಂಕಗಳನ್ನು ಗಳಿಸಿದರು. ಎಂಟನೇ ಪ್ರಯತ್ನದಲ್ಲಿ ಮನು 8.3 10ಕ್ಕಿಂತ ಕಡಿಮೆ ಅಂಕ ಗಳಿಸಿದಾಗ, ಸರಬ್ಜೋತ್ 10.2 ಅಂಕ ಗಳಿಸಿ ಭಾರತ ಮುನ್ನಡೆ ಕಾಯ್ದುಕೊಳ್ಳುವುದಕ್ಕೆ ನೆರವಾಗಿದ್ದರು.

ಈ ಪದಕದ ಮೂಲಕ ಮನು ಇತಿಹಾಸ ಸೃಷ್ಟಿಸಿದರೆ, ಸರಬ್ಜೋತ್ ತನ್ನ ಶೂಟಿಂಗ್ ವೈಭವ ಶುರು ಮಾಡಿದರು. ಅವರಿಗೆ ಇದು ತಮ್ಮ ಚೊಚ್ಚಲ ಒಲಿಂಪಿಕ್ಸ್​ ಸ್ಪರ್ಧೆ. ಒಲಿಂಪಿಕ್ ಕ್ರೀಡಾಕೂಟದ ಆರಂಭಿಕ ದಿನವಾದ ಶನಿವಾರ, ಅವರು ಪುರುಷ ಸಪರ್ಧೆಯ ಫೈನಲ್​ಗೆ ಅರ್ಹತೆ ಪಡೆಯಲು ವಿಫಲರಾಗಿ ಒಂಬತ್ತನೇ ಸ್ಥಾನ ಪಡೆದರು. ಹೀಗಾಗಿ ಅವರಿಗೆ ಈ ಪದಕ ಸಮಾಧಾನ ತರಲಿದೆ.

ಸರಬ್ಜೋತ್ ಸಿಂಗ್ ಅವರ ಅದ್ಭುತ ಪ್ರಯಾಣದ ಹಾದಿ ಇಲ್ಲಿದೆ

ಸರಬ್ಜೋತ್ ಹರಿಯಾಣದ ಅಂಬಾಲಾದ ಧೀನ್ ಗ್ರಾಮದವರು. ಅವರ ತಂದೆ ಜತೀಂದರ್ ಸಿಂಗ್ ರೈತ. ತಾಯಿ ಹರ್ದೀಪ್ ಕೌರ್ ಗೃಹಿಣಿ. ಅವರು ಚಂಡೀಗಢದ ಸೆಕ್ಟರ್ 10 ರ ಡಿಎವಿ ಕಾಲೇಜಿನಲ್ಲಿ ಅಧ್ಯಯನ ಮಾಡಿರುವ ಸರಬ್ಜೋತ್​ ಅಂಬಾಲಾ ಕಂಟೋನ್ಮೆಂಟ್​ನಲ್ಲಿರುವ ಎಆರ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತುದಾರ ಅಭಿಷೇಕ್ ರಾಣಾ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದಾರೆ.

2019 ರ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ ಚಿನ್ನದ ಪದಕ ಗೆಲ್ಲುವ ಮೂಲಕ ಹಿರಿಯ ಶ್ರೇಣಿಗಳನ್ನು ಪ್ರವೇಶಿಸಿದ ಸರಬ್ಜೋತ್, 2023 ರಲ್ಲಿ ಏಷ್ಯನ್ ಗೇಮ್ಸ್ ತಂಡದ ಚಿನ್ನ ಮತ್ತು ಮಿಶ್ರ ತಂಡ ಬೆಳ್ಳಿ ಗೆದ್ದಿದ್ದರು. ಅವರು 2023ರ ಏಷ್ಯನ್ ಚಾಂಪಿಯನ್​ಶಿಪ್​​ನ ವೈಯಕ್ತಿಕ ಕಂಚಿನ ಪದಕವನ್ನು ಗೆದ್ದಿದ್ದರು. ಇದು ಪ್ಯಾರಿಸ್ ಒಲಿಂಪಿಕ್ಸ್​​ಗೆ ಅವರಿಗೆ ಅರ್ಹತೆ ಕೊಟ್ಟಿತ್ತು.

ಸರಬ್ಜೋತ್ ಆರಂಭದಲ್ಲಿ ಫುಟ್ಬಾಲ್ ಆಟಗಾರನಾಗಲು ಬಯಸಿದ್ದರು. ಆದರೆ ಬೇಸಿಗೆ ಶಿಬಿರದಲ್ಲಿ ಮಕ್ಕಳು ಆಟಿಕೆ ಪಿಸ್ತೂಲ್ ಬಳಲಿ ಗುರಿ ಹೊಡೆಯುವುದನ್ನು ನೋಡಿದ ಬಳಿಕ ಮನಸ್ಸು ಬದಲಾಯಿಸಿದ್ದರು. ಈ ಅನುಭವವು ಅವರ ಮನಸ್ಸಿನ ಮೇಲೆ ಪ್ರಮುಖ ಪರಿಣಾಮ ಬೀರಿತು. ಹೀಗಾಗಿ ಶೂಟಿಂಗ್ ಮುಂದುವರಿಸಲು ನಿರ್ಧರಿಸಿದರು.

ಶೂಟಿಂದ್ ದುಬಾರಿ. ಹೀಗಾಗಿ ತನ್ನ ತಂದೆಯ ಆರಂಭಿಕ ಹಿಂಜರಿಕೆಯ ಹೊರತಾಗಿಯೂ ಅದನ್ನೇ ವೃತ್ತಿಯಾಗಿ ಮುಂದುವರಿಸುವ ನಿರ್ಧಾರವನ್ನು ಬೆಂಬಲಿಸುವಂತೆ ತನ್ನ ಹೆತ್ತವರ ಮನವೊಲಿಸುವಲ್ಲಿ ಸರಬ್ಜೋತ್​ ಯಶಸ್ವಿಯಾಗಿದ್ದರು.

ಜಿಲ್ಲಾಮಟ್ಟದಿಂದ ಆರಂಭ

ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗೆದ್ದ ನಂತರ, ಅವರು 2016ರಿಂದ ಅವರು ಅಭಿಷೇಕ್ ರಾಣಾ ಅವರ ಅಡಿಯಲ್ಲಿ ವೃತ್ತಿಪರ ತರಬೇತಿ ಪಡೆಯಲು ಪ್ರಾರಂಭಿಸಿದರು. ಡಿಸೆಂಬರ್ 2022 ರಲ್ಲಿ ಭೋಪಾಲ್​​ನ ಮಧ್ಯಪ್ರದೇಶ ರಾಜ್ಯ ಶೂಟಿಂಗ್ ಅಕಾಡೆಮಿ ಆಫ್ ಎಕ್ಸಲೆನ್ಸ್​ನಲ್ಲಿ ನಡೆದ ತಂಡ ಸ್ಪರ್ಧೆಯಲ್ಲಿ ಜಯಗಳಿಸಿದ ಸರಬ್ಜೋತ್ 2022 ರ ಡಿಸೆಂಬರ್​ನಲ್ಲಿ ನಡೆದ 65 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದರು.

ಇದನ್ನೂ ಓದಿ: Dinesh Mongia : ಭಾರತ ತಂಡದ ಮಾಜಿ ಆಟಗಾರ ದಿನೇಶ್ ಮೋಂಗಿಯಾ ಗೋವಾ ಕ್ರಿಕೆಟ್​ ತಂಡದಲ್ಲಿ ಹೊಸ ಜವಾಬ್ದಾರಿ

2021 ರ ಜೂನಿಯರ್ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಸರಬ್ಜೋತ್ ತಂಡ ಮತ್ತು ಮಿಶ್ರ-ತಂಡ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು. ಮಾರ್ಚ್ 2023 ರಲ್ಲಿ ವಿಶ್ವಕಪ್​ನ ಮೊದಲ ಫೈನಲ್ ಪಂದ್ಯದಲ್ಲಿ 16-0 ಪರಿಪೂರ್ಣ ಸ್ಕೋರ್​ನೊಂದಿಗೆ ಚಿನ್ನದ ಪದಕವನ್ನು ಗಳಿಸುವ ಮೂಲಕ ಅವರು ಮತ್ತಷ್ಟು ಉತ್ತಮ ಸಾಧನೆ ಮಾಡಿದ್ದರು. ಸ್ಪರ್ಧೆಯುದ್ದಕ್ಕೂ, ಅವರು 585 ಅಂಕಗಳೊಂದಿಗೆ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು ಮತ್ತು ಒಟ್ಟು 253.2 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದಿದ್ದರು

Exit mobile version