Site icon Vistara News

Mayank Yadav : ಪಂಜಾಬ್ ವಿರುದ್ಧ 155 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ ಮಯಾಂಕ್​ ಯಾದವ್​ ಯಾರು?

Mayank Yadav

ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ನ 11 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್​ನ ಪ್ರಮುಖ ಬೌಲರ್​ಗಳು ಪ್ರಭಾವ ಬೀರಲು ಹೆಣಗಾಡುತ್ತಿದ್ದ ವೇಳೆ ಚೊಚ್ಚಲ ಆಟಗಾರ ಮಯಾಂಕ್ ಯಾದವ್ (Mayank Yadav) ತಮ್ಮ ಮಾರಕ ಬೌಲಿಂಗ್​ನಿಂದ​ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಅವರು ಹಾಲಿ ಆವೃತ್ತಿಯ ಐಪಿಎಲ್​ನ ಅತಿವೇಗದ ಎಸೆತವನ್ನು ಎಸೆದರು. ಅದು ಗಂಟೆಗೆ 155 ಕಿಲೋ ಮೀಟರ್ ವೇಗ. ಪಂಜಾಬ್ ಬ್ಯಾಟರ್​ಗಳಿಗೆ ಈ ಪ್ರತಿಭೆಯ ವೇಗವನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಮೂರು ಬ್ಯಾಟರ್​ಗಳು ವಿಕೆಟ್​ ಒಪ್ಪಿಸಿದರು.

ಐಪಿಎಲ್ 2024ರಲ್ಲಿ ಅತಿ ವೇಗದ ಚೆಂಡಿನ ದಾಖಲೆ ಮಾಯಾಕ್ ಹೆಸರಿಗೆ ಸೇರಿತು. ಅವರ 155.8 ಕಿ.ಮೀ ವೇಗವು ನಾಂಡ್ರೆ ಬರ್ಗರ್ ಅವರ ಹಿಂದಿನ ಅತ್ಯುತ್ತಮ ಸಾಧನೆಯನ್ನು ಮೀರಿಸಿತು. ದಕ್ಷಿಣ ಆಫ್ರಿಕಾದ ವೇಗಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದು, ಅವರ ವೇಗದ ಎಸೆತ 153 ಕಿಲೋ ಮೀಟರ್ ದಾಟಿದೆ.

ಯುವ ವೇಗಿ ತನ್ನ ಸಂಪೂರ್ಣ ವೇಗದಿಂದ ಅನೇಕರ ಗಮ ಸೆಳೆದಿದ್ದಾರೆ. ಕ್ರಿಕೆಟ್ ವಲಯದಲ್ಲಿ ಅಪರಿಚಿತ ಹೆಸರಾಗಿರುವ ಮಯಾಂಕ್ ಯಾದವ್ ಶೀಘ್ರದಲ್ಲೇ ಮನೆಮಾತಾಗಿದ್ದಾರೆ. ಡೇವಿಡ್ ವಿಲ್ಲಿ ಮತ್ತು ಮಾರ್ಕ್ ವುಡ್ ಅವರಂತಹ ಆಟಗಾರರು ಪಂದ್ಯಾವಳಿಯಿಂದ ಹಿಂದೆ ಸರಿದಿರುವುದರಿಂದ ಎಲ್ಎಸ್ಜಿಯ ವೇಗದ ದಾಳಿ ಈಗಾಗಲೇ ಕ್ಷೀಣಿಸಿದೆ. ಹೀಗಾಗಿ ಋತುವಿನ ಮೊದಲ ತವರು ಪಂದ್ಯಕ್ಕೆ ಮಯಾಂಕ್ ಯಾದವ್​ಗೆ ಪದಾರ್ಪಣೆ ಮಾಡಲು ಸಾಧ್ಯವಾಯಿತು. ಆದರೆ, ಚೊಚ್ಚಲ ಐಪಿಎಲ್ ಪಂದ್ಯದಲ್ಲಿಯೇ ಗಮನ ಸೆಳೆದರು.

ಈ ಋತುವಿನ ಆರಂಭಕ್ಕೂ ಮುನ್ನ ಎಲ್ಎಸ್ಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಮಯಾಂಕ್ ಯಾದವ್ ಅವರನ್ನು ವಿಶ್ವದ ವೇಗದ ಬೌಲರ್​ಗಳಲ್ಲಿ ಒಬ್ಬರಾದ ಮಾರ್ಕ್ ವುಡ್ಗೆ ಹೋಲಿಸಿದ್ದರು. ಅದೀಗ ಸಾಬೀತಾಗಿದೆ.

“ನಮ್ಮಲ್ಲಿ ಶಮರ್ ಜೋಸೆಫ್ ಕೂಡ ಇದ್ದಾರೆ, ನಮ್ಮಲ್ಲಿ ಮಯಾಂಕ್ ಉತ್ತಮ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ವುಡ್ ಅವರ ಅನುಭವವನ್ನು ಅಲ್ಲ ಬದಲಿಗೆ ಅವರ ವೇಗವನ್ನು ಶಮರ್ ಜೋಸೆಫ್ ಮತ್ತು ಮಯಾಂಕ್ ಅವರೊಂದಿಗೆ ಕಾಣಬಹುದು ಎಂದು ಆಶಿಸುತ್ತೇವೆ,” ಎಂದು ಲ್ಯಾಂಗರ್ ಹೇಳಿದ್ದರು.

ಪಂದ್ಯದಲ್ಲಿ ಎಲ್ಎಸ್​ಜಿ ತಂಡ ಎದುರಾಳಿ ತಂಡದ ಯಾವುದೇ ವಿಕೆಟ್ ಪಡೆಯಲು ವಿಫಲವಾದ ನಂತರ ಬಲಗೈ ವೇಗಿಯನ್ನು 10 ನೇ ಓವರ್​ನಲ್ಲಿ ಆಕ್ರಮಣಕ್ಕೆ ಇಳಿಸಿತು. ಅವರು ಪ್ರಭಾವ ಬೀರಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಅವರು ತಮ್ಮ ಮೊದಲ ಓವರ್​ನಲ್ಲಿಯೇ ನಿರಂತರವಾಗಿ 145 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದರು ಮತ್ತು 150 ಕಿ.ಮೀ ವೇಗವನ್ನು ಮುಟ್ಟಿದರು. ತಮ್ಮ ಎರಡನೇ ಓವರ್​ನಲ್ಲಿ ಅವರು ಜಾನಿ ಬೈರ್ಸ್ಟೋವ್ ಅವರನ್ನು ಔಟ್ ಮಾಡಿದರು. ಅದೇ ಓವರ್​ನಲ್ಲಿ ಅವರು 154 ಕಿ.ಮೀ ವೇಗವನ್ನು ಮುಟ್ಟಿದರು.

ಮಯಾಂಕ್ ಯಾದವ್ ಯಾರು?


ಬಲಗೈ ವೇಗಿ ಮಯಾಂಕ್ ಯಾದವ್ 17 ಜೂನ್ 2002 ರಂದು ಜನಿಸಿದರು ಮತ್ತು ಪ್ರಸ್ತುತ ದೇಶೀಯ ಸರ್ಕೀಟ್​ನಲ್ಲಿ ದೆಹಲಿ ಪರ ಆಡುತ್ತಿದ್ದಾರೆ. ಅವರು 2021 ರಲ್ಲಿ ಲಿಸ್ಟ್ ಎ ಕ್ರಿಕೆಟ್ ಮೂಲಕ ದೆಹಲಿ ಪರ ವೃತ್ತಿಪರ ಚೊಚ್ಚಲ ಪಂದ್ಯವನ್ನು ಆಡಿದರು. ಅಕ್ಟೋಬರ್ 2022 ರಲ್ಲಿ, ಅವರು ಡಿಸೆಂಬರ್​ನಲ್ಲಿ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಆಡುವ ಮೊದಲು ದೆಹಲಿ ಪರ ಟಿ 20 ಗೆ ಪಾದಾರ್ಪಣೆ ಮಾಡಿದರು.

ಇದನ್ನೂ ಓದಿ: IPL 2024 : ಪಂಜಾಬ್​ ವಿರುದ್ಧ 21 ರನ್​ಗಳ ಭರ್ಜರಿ ಜಯ ದಾಖಲಿಸಿದ ಲಕ್ನೊ

ಡೆಲ್ಲಿ ಪರ ವೃತ್ತಿಪರ ಟಿ20 ಆಡುವ ಮೊದಲೇ ಅವರು ತಮ್ಮ ಮೊದಲ ಐಪಿಎಲ್ ಒಪ್ಪಂದವನ್ನು ಪಡೆದರು. 2022 ರ ಮೆಗಾ ಹರಾಜಿನಲ್ಲಿ ಎಲ್ಎಸ್​​ಜಿ ಅವರನ್ನು ಅವರ ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿತು. ಗಾಯದ ಸಮಸ್ಯೆಯಿಂದಾಗಿ 2023ರ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡುವ ನಿರೀಕ್ಷೆ ಭಗ್ನಗೊಂಡಿತು.

2023 ರ ದಿಯೋಧರ್ ಟ್ರೋಫಿಯಲ್ಲಿ ತಮ್ಮ ಪ್ರದರ್ಶನದ ಮೂಲಕ ಅವರು ಮೊದಲು ಬೆಳಕಿಗೆ ಬಂದರು. ಉತ್ತರ ವಲಯ ಪರ ಆಡಿದ ಅವರು 18 ಕ್ಕಿಂತ ಕಡಿಮೆ ಸರಾಸರಿಯಲ್ಲಿ 12 ವಿಕೆಟ್​ಗಳನ್ನು ಪಡೆಯುವ ಮೂಲಕ ಪಂದ್ಯಾವಳಿಯನ್ನು ಎರಡನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿ ಮುಗಿಸಿದರು. 17 ಲಿಸ್ಟ್ ಎ ಪಂದ್ಯಗಳಲ್ಲಿ 34 ವಿಕೆಟ್ ಹಾಗೂ 10 ಟಿ20 ಪಂದ್ಯಗಳಲ್ಲಿ 12 ವಿಕೆಟ್ ಕಬಳಿಸಿದ್ದಾರೆ.

Exit mobile version