ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ 2024 ರ ರೋಮಾಂಚಕ ಆರಂಭಿಕ ಪಂದ್ಯದಲ್ಲಿ, ಸಜೀವನ್ ಸಜನಾ (Sajeevan Sajana) ಕೊನೆಯ ಎಸೆತದಲ್ಲಿ ಅದ್ಭುತ ಸಿಕ್ಸರ್ ಬಾರಿಸುವ ಮೂಲಕ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡಿದ್ದಾರೆ. ಇದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ಗಳ ಗೆಲುವಿಗೆ ಕಾರಣವಾಯಿತು. ಡಬ್ಲ್ಯುಪಿಎಲ್ಗೆ ಪದಾರ್ಪಣೆ ಮಾಡಿದ 29 ವರ್ಷದ ಆಲ್ರೌಂಡರ್ ಸಜನಾ, ಸ್ಪಿನ್ನರ್ ಆಲಿಸ್ ಕ್ಯಾಪ್ಸಿ ಅವರ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ ಈ ಗೆಲುವು ತಂದುಕೊಟ್ಟರು. ಸಿಕ್ಸರ್ ಕಾರಣಕ್ಕೆ ಅವರೀಗ ಬಹುಚರ್ಚಿತ ಕ್ರಿಕೆಟರ್ ಆಗಿ ಮಾರ್ಪಟ್ಟಿದ್ದಾರೆ. ಅವರ ಮೂಲ ಹಾಗೂ ಆಟದ ವೈಖರಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪ್ರಮುಖವಾಗಿ ಕೇರಳದ ಬುಡಕಟ್ಟು ಸಮುದಾಯಕ್ಕೆ ಸೇರಿದ ಕ್ರಿಕೆಟರ್ ಎಂಬ ಚರ್ಚೆ ಜೋರಾಗಿದೆ.
ಉದ್ಘಾಟನಾ ಆವೃತ್ತಿಯ ಹರಾಜಿನಲ್ಲಿ ಮಾರಾಟವಾಗದ ಸಜನಾ ಅವರು ಈ ಬಾರಿ ಮುಂಬೈ ಇಂಡಿಯನ್ಸ್ ಸೇರಿಕೊಮಡಿದ್ದಾರೆ. ಅಲ್ಲದೆ ಅವರು ಏಕಾಏಕಿ ಸ್ಟಾರ್ ಆಗಿದ್ದಾರೆ. ಅಂತಿಮ ಎಸೆತದಲ್ಲಿ 5 ರನ್ಗಳ ಅಗತ್ಯವಿದ್ದಾಗ ಸಜನಾ ಈ ಸಂದರ್ಭವನ್ನು ಚೆನ್ನಾಗಿ ಬಳಸಿಕೊಂಡು ಸಿಕ್ಸರ್ ಬಾರಿಸಿ ತಮ್ಮ ಹೆಸರು ಚಿರಸ್ಥಾಯಿಯಾಗುವಂತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : David Warner : ಡೇವಿಡ್ ವಾರ್ನರ್ಗೆ ಗಾಯ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆತಂಕ
ಮುಂಬೈ ಅಭಿಮಾನಿಗಳಿಗೆ, ಸಜನಾ ವೀರೋಚಿತ ಸಿಕ್ಸರ್ ಬಾರಿಸುವ ತನಕ ಗೆಲುವು ಅಸ್ಪಷ್ಟವಾಗಿ ಕಂಡಿತ್ತು. ಆದರೆ, ಕ್ಯಾಪ್ಸಿಯ ಎಸೆತವನ್ನು ಮುಂದಡಿ ಇಟ್ಟು ಬಾರಿಸಿದ ಸಜನಾ ಮುಂಬಯಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. ಇದು ಟಿ 20 ಕ್ರಿಕೆಟ್ನ ಸೌಂದರ್ಯ ಮತ್ತು ಅನಿರೀಕ್ಷಿತತೆಯೂ ಹೌದು. ಜತೆಗೆ ಸಜನಾ ಅವರೂ ಏಕಾಏಕಿ ಸ್ಟಾರ್ ಆಗಿದ್ದಾರೆ.
ಯಾರಿವರು ಸಜನಾ?
ಜನವರಿ 4, 1995 ರಂದು ಕೇರಳದ ವಯನಾಡ್ನ ಮಾನಂತವಾಡಿಯಲ್ಲಿ ಜನಿಸಿದ ಸಜೀವನ್ ಸಜನಾ ಜೀವನೋಪಾಯಕ್ಕಾಗಿ ರಿಕ್ಷಾ ಓಡಿಸುವ ಕೆಲಸ ಮಾಡುತ್ತಿದ್ದರು. ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದ ಕ್ರಿಕೆಟರ್ ಆಗಿದ್ದಾರೆ. ಎಸ್ ಸಜನಾ ಎಂದೇ ಕರೆಯಲಾಗುವ ಆಲ್ರೌಂಡರ್ ಬಲಗೈ ಆಫ್- ಬ್ರೇಕ್ ಬೌಲಿಂಗ್ ಮತ್ತು ಬಲಗೈ ಬ್ಯಾಟಿಂಗ್ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಕ್ರಿಕೆಟ್ ಪ್ರಯಾಣವು ಸಾಕಷ್ಟು ಕಷ್ಟಕರವಾಗಿತ್ತು. ಮಹಿಳೆಯರ ಪ್ರೀಮಿಯರ್ ಲೀಗ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಪರ ಪಾದಾರ್ಪಣೆ ಮಾಡುವ ಮೊದಲು ಸಜನಾ ಕೇರಳ, ದಕ್ಷಿಣ ವಲಯ ಮತ್ತು ಭಾರತ ಎ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಆದಾಗ್ಯೂ ಉದ್ಘಾಟನಾ ಆವೃತ್ತಿಯಲ್ಲಿ ಅನ್ಸೋಲ್ಡ್ ಆಗುವ ಮೂಲಕ ನಿರಾಸೆ ಎದುರಿಸಿದ್ದರು.
ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಸಜನಾ ಅವರನ್ನು 15 ಲಕ್ಷ ರೂ.ಗೆ ಖರೀದಿಸಿದೆ. ಇದು ಅವರ ಮೂಲ ಬೆಲೆ 10 ಲಕ್ಷ ರೂ.ಗಳನ್ನು ಮೀರಿದೆ. ಕುರಿಚಿಯಾ ಬುಡಕಟ್ಟು ಜನಾಂಗಕ್ಕೆ ಸೇರಿದ ಸಜನಾ ತನ್ನ ಕೇರಳ ತಂಡದ ಸಹ ಆಟಗಾರ್ತಿ ಮಿನ್ನು ಮಣಿ ಅವರ ಹೆಜ್ಜೆಗಳನ್ನು ಅನುಸರಿಸುತ್ತಾರೆ, ಡಬ್ಲ್ಯುಪಿಎಲ್ ವೇದಿಕೆಯನ್ನು ಅಲಂಕರಿಸಿದ ಬುಡಕಟ್ಟು ಜನಾಂಗದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.