ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants ) ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಆರ್ಸಿಬಿ ಈವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಒಂದು ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈಗೆ ಮಣಿದಿದ್ದರೆ ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ದ ಗೆದ್ದಿತ್ತು. ಮೂರನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್ರೈಡರ್ಸ್ ವಿರುದ್ಧ ಸೋತಿದೆ.
If scoring runs this consistently was a crime… 🚔 pic.twitter.com/k05EuWj26s
— Royal Challengers Bengaluru (@RCBTweets) March 29, 2024
ಪ್ರಸ್ತುತ ಆರ್ಸಿಬಿ ತಂಡವು ಮೂರು ಪಂದ್ಯಗಳಲ್ಲಿ 2 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ಆಡಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಮುಂಬರುವ ಪಂದ್ಯದಲ್ಲಿ ತಂಡವು ಋತುವಿನ ಎರಡನೇ ಪಂದ್ಯವನ್ನು ಗೆಲ್ಲುವ ಭರವಸೆ ಹೊಂದಿದೆ. ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಸೋಲು ಕಂಡಿದ್ದರೆ ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ದ ಗೆಲುವು ಸಾಧಿಸಿತ್ತು.
ಐಪಿಎಲ್ 2024 ರ 15 ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರ್ಸಿಬಿ ಪರ ಅತ್ಯುತ್ತಮ ಬ್ಯಾಟರ್ ಎನಿಸಿಕೊಳ್ಳಬಹುದು. ಕೊಹ್ಲಿ ಪಂದ್ಯಾವಳಿಯಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಅವರ ಹಿಂದಿನ ಪಂದ್ಯಗಳಲ್ಲಿ ಅದ್ಭುತ ಇನ್ನಿಂಗ್ಸ್ಗಳನ್ನು ಆಡಿ ಎರಡು ಅರ್ಧ ಶತಕ ಬಾರಿಸಿದ್ದರು. ಅನುಭವಿ ಬ್ಯಾಟರ್ ಮುಂಬರುವ ಪಂದ್ಯದಲ್ಲೂ ಮತ್ತೊಂದು ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದಾರೆ. ಇದೇ ವೇಳೆ ಉಳಿದ ಬ್ಯಾಟರ್ಗಳು ಮೈ ಚಳಿ ಬಿಟ್ಟು ಆಡಲೇಬೇಕಾಗಿದೆ.
ಇದನ್ನೂ ಓದಿ: IPL 2024 : ಅರ್ಧ ಶತಕ ಬಾರಿಸಿದರೂ ರಿಷಭ್ ಪಂತ್ಗೆ ಬಿತ್ತು ದಂಡ
ಲಕ್ನೋ ಸೂಪರ್ ಜೈಂಟ್ಸ್ನ ನವೀನ್-ಉಲ್-ಹಕ್ ಈ ಪಂದ್ಯದಲ್ಲಿ ಪರಿಣಾಮ ಬೀರಬಹುದು. ಹಿಂದಿನ ಆವೃತ್ತಿಯ ಏಳು ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಪಡೆದಿರುವ ಅಫ್ಘಾನಿಸ್ತಾನದ ವೇಗಿ ಉತ್ತಮವಾಗಿ ಆಡುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ಈ ತಂಡ ಉತ್ತಮ ಲಯದಲ್ಲಿದೆ. ಹೀಗಾಗಿ ತಂಡಕ್ಕೆ ಆ ಚಿಂತೆ ಇಲ್ಲ.
ಎಂ ಚಿನ್ನಸ್ವಾಮಿ ಕ್ರೀಡಾಂಗಣ ಪಿಚ್ ವರದಿ
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟರ್ಗಳಿಗೆ ಸ್ವರ್ಗವಾಗಿದೆ. ಕಡಿಮೆ ಅಂತರದ ಬೌಂಡರಿಗಳೊಂದಿಗೆ ಹೆಚ್ಚಿನ ಸ್ಕೋರಿಂಗ್ ಮುಖಾಮುಖಿ ಇಲ್ಲಿ ಮಾಮೂಲಿ. ಸ್ಪಿನ್ನರ್ಗಳಿಗೆ ಅಲ್ಪ ಸಹಾಯ ಮಾಡುವ ಈ ಪಿಚ್ ತಾಳ್ಮೆ ವಹಿಸಿದ ಬ್ಯಾಟರ್ಗಳಿಗೆ ದೊಡ್ಡ ಮೊತ್ತ ಪೇರಿಸಲು ನೆರವಾಗುತ್ತದೆ. ಟಾಸ್ ಗೆದ್ದ ನಾಯಕ ಚೇಸಿಂಗ್ ಮಾಡಲು ಮುಂದಾಗುತ್ತಾರೆ.
ಸಂಭಾವ್ಯ ಆಡುವ ಬಳಗ
ಲಕ್ನೊ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್ (ವಿಕೆ), ದೇವದತ್ ಪಡಿಕ್ಕಲ್, ನಿಕೋಲಸ್ ಪೂರನ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಮಣಿಮಾರನ್ ಸಿದ್ಧಾರ್ಥ್.
ಆರ್ಸಿಬಿ : ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್ವೆಲ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್ ಕೀಪರ್), ಮಯಾಂಕ್ ದಾಗರ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್, ವಿಜಯಕುಮಾರ್ ವೈಶಾಕ್.
ಇತ್ತಂಡಗಳ ಮುಖಾಮುಖಿ
- ಆಡಿದ ಪಂದ್ಯಗಳು, 4
- ರಾಯಲ್ ಚಾಲೆಂಜರ್ಸ್ ಬೆಂಗಳೂರು 3ರಲ್ಲಿ ಗೆಲುವು ಸಾಧಿಸಿದೆ.
- ಲಕ್ನೋ ಸೂಪರ್ ಜೈಂಟ್ಸ್ 1ರಲ್ಲಿ ಗೆಲುವು ಸಾಧಿಸಿದೆ
- ಮೊದಲ ಪಂದ್ಯ ಏಪ್ರಿಲ್ 19, 2022
- ಕೊನೆಯದಾಗಿ ಆಡಿದ್ದು ಮೇ 1, 2023
ಪಂದ್ಯದ ವಿವರ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿ
ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ದಿನಾಂಕ ಮತ್ತು ಸಮಯ: ಮಂಗಳವಾರ, ಏಪ್ರಿಲ್ 2, ಸಂಜೆ 7:30 (ಭಾರತೀಯ ಕಾಲಮಾನ)
ನೇರ ಪ್ರಸಾರ ವಿವರ: ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳು, ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್