ಬೆಂಗಳೂರು : ಜರ್ಮನಿಯ ಮ್ಯೂನಿಕ್ನಿಂದ 33 ದಿನಗಳ ಕಳ್ಳಾಟದ ಬಳಿಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಬಂದಿದ್ದ ಪೆನ್ಡ್ರೈವ್ ಅಶ್ಲೀಲ ವಿಡಿಯೊ ಹಗರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna Case) ಅವರನ್ನು ಆರಂಭದಲ್ಲಿ ವಶಕ್ಕೆ ಪಡೆದುಕೊಂಡಿರುವುದು ಮಹಿಳಾ ಪೊಲೀಸರು ಎಂಬ ಮಾಹಿತಿ ಬಹಿರಂಗವಾಗಿದೆ. ಎಸ್‌ಐಟಿ ಸೇರಿದಂತೆ ವಿವಿಧ ವಿಭಾಗದ ಹಲವಾರು ಪುರುಷ ಅಧಿಕಾರಿಗಳು ಏರ್ಪೋರ್ಟ್ನಲ್ಲಿ ಅವರ ಬಂಧನಕ್ಕೆ ಕಾಯುತ್ತಿದ್ದ ಹೊರತಾಗಿಯೂ ಮಹಿಳಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿರುವುದಕ್ಕೆ ವಿಶೇಷ ಕಾರಣಗಳೇನು ಎಂಬುದು ಬಹಿರಂಗವಾಗಿಲ್ಲ. ಆದರೆ ಹಿರಿಯ ಅಧಿಕಾರಿಗಳ ಈ ನಡೆ ಮಾತ್ರ ಸೋಜಿಗ ಎನಿಸಿದೆ.
ಗುರುವಾರ ಮಧ್ಯರಾತ್ರಿ 12.47ರ ಸುಮಾರಿಗೆ ಲುಫ್ತಾನ್ಸಾ ಏರ್‌ಲೈನ್ಸ್ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣ ಬಂದಿಳಿಯುತ್ತಿದ್ದಂತೆ ವಲಸೆ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡರು. ಬಳಿಕ ಅವರು ಎಸ್ಐಟಿಗೆ ಹಸ್ತಾಂತರ ಮಾಡಿದರು. ಸಾವಿರಾರು ಮಹಿಳೆಯರಿಗೆ ಅನ್ಯಾಯ ಮಾಡಿ ಅವರ ಕಣ್ಣೀರಿಗೆ ಕಾರಣನಾದ ಪ್ರಜ್ವಲ್ ರೇವಣ್ಣನನ್ನು ರೇವಣ್ಣನನ್ನು ಬಂಧಿಸಿದ್ದು ಮಹಿಳಾ ಪೊಲೀಸ್ ಅಧಿಕಾರಿಗಳು.
ಮಹಿಳಾ ಇನ್ಸ್‌ಪೆಕ್ಟರ್ ಸಹಿತ ಇನ್ನಿತರ ಮಹಿಳಾ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಎಸ್‌ಐಟಿ ಕಚೇರಿಗೆ ಕರೆ ತಂದಿರುವ ವಿಡಿಯೊ ವಿಸ್ತಾರನ್ಯೂಸ್ಗೆ ಲಭ್ಯವಾಗಿದೆ. ಎಸ್‌ಐಟಿ ಕಚೇರಿಗೆ ಕರೆತರುವ ವೇಳೆ ಪೊಲೀಸರ ವಾಹನದ ಡ್ರೈವರ್ ಒಬ್ಬರನ್ನು ಬಿಟ್ಟರೆ ಇನ್ನೆಲ್ಲಾ ಅಧಿಕಾರಿಗಳು ಮಹಿಳೆಯರೇ ಆಗಿದ್ದರು. ಮುಂದಿನ ಸೀಟಿನಲ್ಲಿ ಪ್ರಜ್ವಲ್ ಅವರ ಹಿಂದೆ ಹಾಗೂ ಮುಂದೆ ಅವರೇ ಇದ್ದರು.
ಇದನ್ನೂ ಓದಿ: Bhavani Revanna: ʼತನಿಖೆ ಬೇಕಿದ್ರೆ ಮನೆಗೇ ಬನ್ನಿʼ ಎಂದ ಭವಾನಿ ರೇವಣ್ಣ; ʼಆಯ್ತು ಅಲ್ಲಿಗೇ ಬರ್ತೀವಿʼ ಎಂದ ಎಸ್‌ಐಟಿ! —
ಇದಕ್ಕೆ ನಾನಾ ರೀತಿಯ ವಿಶ್ಲೇಷಣೆ ನೀಡಲಾಗುತ್ತದೆ. ಸಾವಿರಾರ ಮಹಿಳೆಯರಿಗೆ ದೌರ್ಜನ್ಯ ಮಾಡಿರುವ ಪ್ರಜ್ವಲ್ಗೆ ಅವಮಾನ ಮಾಡಲೆಂದೇ ಅವರನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ ಎಂದು ಕೆಲವರು ಹೇಳಿದರೆ, 33 ದಿನಗಳ ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ಅವರಿಗೆ ಪಾಠ ಕಲಿಸಲೆಂದೇ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಅದೇ ರೀತಿ ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ಕೆಲವೊಂದು ಮಾಹಿತಿಯನ್ನು ಅವರಿಂದ ಸಂಗ್ರಹಿಸಲು ಅನುಕೂಲವಾಗಲು ಮಹಿಳಾ ಪೊಲೀಸರ ನೆರವು ಪಡೆಯಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಮಾಹಿತಿಯೂ ಇದೆ.
ಎಸ್‌ಐಟಿ ಕಚೇರಿಯಲ್ಲಿ ವಿಶ್ರಾಂತಿ
ಏರ್ಪೋರ್ಟ್ನಲ್ಲಿ ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ನನ್ನು ನೇರವಾಗಿ ಎಸ್‌ಐಟಿ ಕಚೇರಿಗೆ ಕರೆತಂದ ಬಳಿಕ ಅಲ್ಲೇ ವಿಶ್ರಾಂತಿಗೆ ಅವಕಾಶ ಕೊಟ್ಟರು. ಶುಕ್ರವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಪ್ರಜ್ವಲ್ ರೇವಣ್ಣನನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಎಸ್‌ಐಟಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಮೆಡಿಕಲ್ ಟೆಸ್ಟ್ ಮುಗಿಸಿದ ಬಳಿಕ ಸುಮಾರು ಹನ್ನೊಂದು ಗಂಟೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಪ್ರಜ್ವಲ್ ಪರ ವಕೀಲರು ಈ ವೇಳೆ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ. ಆದರೆ ಅವರ ಮೇಲೆ ಹಾಕಿರುವ ಕೆಲವೊಂದು ಸೆಕ್ಷನ್ಗಳು ಜಾಮೀನು ರಹಿತವಾಗಿದೆ. ಜತೆಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಅವಕಾಶದ ಜೊತೆಗೆ ಪ್ರಜ್ವಲ್ ರೇವಣ್ಣನನ್ನು ಎಸ್ ಐಟಿ ಕಸ್ಟಡಿ ಪಡೆಯಲಿದೆ.
ಎರಡು ಅತ್ಯಾಚಾರ ಪ್ರಕರಣ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಎಸ್‌ಐಟಿ ಅಧಿಕಾರಿಗಳು ವಿವರಣೆ ನೀಡಲಿದ್ದಾರೆ. ಹೀಗಾಗಿ ಅರ್ಜಿ ಸಲ್ಲಿಸಿದ್ರೂ ಜಾಮೀನು ಸಿಗದು. ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಈಗಾಗಲೇ ಪ್ರಜ್ವಲ್ ರೇವಣ್ಣನ ಮೊಬೈಲ್ ಫೋನ್‌ಅನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೆ ಅದರಲ್ಲಿ ಎಷ್ಟು ಡೇಟಾಗಳಿವೆ ಎಂಬುದು ಅಸ್ಪಷ್ಟ.