ಡಂಬುಲ್ಲಾ: ಭಾರತದ ಮಹಿಳೆಯರ ಕ್ರಿಕೆಟ್ ತಂಡ ಏಷ್ಯಾ ಕಪ್ನಲ್ಲಿ (Women’s Asia Cup) ತನ್ನ ಎರಡನೇ ಗೆಲುವು ಸಾಧಿಸಿದೆ. ಈ ಮೂಲಕ ಸೆಮೀಸ್ ಪ್ರವೇಶವನ್ನು ಸುಲಭಗೊಳಿಸಿದೆ. ಯುಎಇ (UAE Women’s Cricket Team) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ 78 ರನ್ ಗೆಲುವು ಸಾಧಿಸಿ ಗುಂಪು ಹಂತದಲ್ಲಿ ಒಟ್ಟು 4 ಅಂಕಗಳನ್ನು ಗಳಿಸಿದೆ. ಭಾರತ ತಂಡದ ಆಟಗಾರರು ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಪಾರಮ್ಯ ಸಾಧಿಸಿ ತನ್ನ ಅಜೇಯ ಓಟ ಮುಂದುವರಿಸಿದೆ. ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಮತ್ತೊಂದು ಸ್ಮರಣೀಯ ವಿಜಯವನ್ನು ತನ್ನದಾಗಿಸಿಕೊಂಡಿತು.
2⃣ wins in 2⃣ Matches 🙌
— BCCI Women (@BCCIWomen) July 21, 2024
Another clinical performance, another comprehensive victory for #TeamIndia as they beat the United Arab Emirates by 78 runs 👌
Scorecard ▶️ https://t.co/fnyeHav1sS#WomensAsiaCup2024 | #ACC | #INDvUAE
📸 ACC pic.twitter.com/NaKha21O7m
ಇಲ್ಲಿನ ರಣಗಿರಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆಯಿತು. ಅಂತೆಯೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಬಾರಿಸಿತು. ಇದು ಭಾರತ ಮಹಿಳೆಯರ ಕ್ರಿಕೆಟ್ ತಂಡದ ಇದುವರೆಗಿನ ಗರಿಷ್ಠ ಸ್ಕೋರ್ ಆಗಿದೆ. ಪ್ರತಿಯಾಗಿ ಬ್ಯಾಟ್ ಮಾಡಿದ ಯುಎಇ ವನಿತೆಯರು ತಮ್ಮ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 7 ವಿಕೆಟ್ಗೆ 123 ರನ್ ಬಾರಿಸಿ ಹೀನಾಯವಾಗಿ ಸೋಲೊಪ್ಪಿಕೊಂಡರು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಶಫಾಲಿ ವರ್ಮಾ 18 ಎಸೆತಕ್ಕೆ 37 ರನ್ ಬಾರಿಸಿದರೆ ಸ್ಮೃತಿ ಮಂಧಾನಾ 9 ಎಸೆತಕ್ಕೆ 13 ರನ್ ಗಳಿಸಿದರು. ಆದರೆ, ಸ್ಮೃತಿ ಬೇಗ ನಿರ್ಗಮಿಸಿದರು. ಈ ವೇಳೆ ಭಾರತದ ಸ್ಕೋರ್ 23. ಆದರೆ, ನಂತರ ಬಂದ ದಯಾಳನ್ ಹೇಮಲತಾ 4 ಎಸೆತಗಳನ್ನು ಎದುರಿಸಿ 2 ರನ್ ಬಾರಿಸುವ ಮೂಲಕ ನಿರಾಸೆ ಮೂಡಿಸಿದರು. 52 ರನ್ಗೆ 2 ವಿಕೆಟ್ ಕಳೆದುಕೊಂಡ ಹೊರತಾಗಿಯೂ ಭಾರತದ ರನ್ ಗಳಿಕೆ ವೇಗ ಕಡಿಮೆ ಆಗಲಿಲ್ಲ. ನಾಯಕಿ ಹರ್ಮನ್ಪ್ರೀತ್ ಕೌರ್ (66 ರನ್) ಅರ್ಧ ಶತಕ ಬಾರಿಸಿದರು. ತಾವೆದುರಿಸಿದ 47 ಎಸೆತಗಳಲ್ಲಿ 7 ಫೋರ್ ಹಾಗೂ 1 ಸಿಕ್ಸರ್ ಬಾರಿಸಿದರು. ಹೀಗಾಗಿ ನಾಲ್ಕನೇ ವಿಕೆಟ್ ಪತನಗೊಳ್ಳುವಾಗ ಭಾರತ 104 ರನ್ ಬಾರಿಸಿತು.
ಜೆಮಿಮಾ ರೋಡ್ರಿಗಸ್ 14 ರನ್ಗೆ ಸೀಮಿತಗೊಂಡರೆ ಕೊನೆಯಲ್ಲಿ ವಿಕೆಟ್ ಕೀಪರ್ ರಿಚಾ ಘೋಷ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 29 ಎಸೆತಗಳನ್ನು ಎದುರಿಸಿದ ಅವರು 12 ಫೋರ್ ಹಾಗೂ 1 ಸಿಕ್ಸರ್ ಮೂಲಕ 64 ರನ್ ಬಾರಿಸಿದರು. ಇವರ ಬ್ಯಾಟಿಂಗ್ ವೇಗಕ್ಕೆ ಯುಎಇ ಬೌಲರ್ಗಳು ಸಂಪುರ್ಣವಾಗಿ ಮಂಕಾದರು. ಅಲ್ಲದೆ ಭಾರತ ತಂಡಕ್ಕೆ ದಾಖಲೆಯ 200 ರನ್ಗಳ ಗುರಿ ದಾಟಲು ನೆರವಾದರು.
ಬೌಲರ್ಗಳ ಪಾರಮ್ಯ
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಮುಂದಾದ ಯುಎಇ ತಂಡವೂ ವೇಗದ ಆಟಕ್ಕೆ ಮೊರೆ ಹೋಗುವ ಪ್ರಯತ್ನ ಮಾಡಿತು. ಆದರೆ, ಭಾರತೀಯ ಬೌಲರ್ಗಳು ಅದಕ್ಕೆ ಸೊಪ್ಪು ಹಾಕಲಿಲ್ಲ. ಆರಂಭಿಕ ಬ್ಯಾಟರ್ ಇಶ್ ಒಜಾ 3 ರನ್ ಬಾರಿಸಿದ ಹೊರತಾಗಿಯೂ ತೀರ್ಥ ಸತೀಶ್ (4), ರಿನಿತಾ ರಜಿತ್ (7 ರನ್), ಸಮೈರಾ (5 ರನ್) ಬೇಗನೆ ವಿಕೆಟ್ ಒಪ್ಪಿಸಿದರು. 36ಕ್ಕೆ 3 ವಿಕೆಟ್ ನಷ್ಟ ಮಾಡಿಕೊಂಡರ ಯುಎಇ ಸಂಕಷ್ಟಕ್ಕೆ ಒಳಗಾಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕವಿಶಾ ಎಗೋಡ್ಗೆ 32 ಎಸೆತಕ್ಕೆ 40 ರನ್ ಬಾರಿಸಿ ಮಿಂಚಿದರು. ಆದರೆ, ಉಳಿದವರಿಂದ ಹೆಚ್ಚಿನ ನೆರವು ಸಿಗದ ಕಾರಣ ಅವರಿಗೆ ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಎ ಗುಂಪಿನಲ್ಲಿರುವ ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಲಿದೆ. ಈಗಾಗಲೇ ಎರಡು ಪಂದ್ಯ ಗೆದ್ದಿರುವ ಕಾರಣ ಭಾರತ ಬಹುತೇಕ ಸೆಮಿಫೈನಲ್ ತಲುಪಿದೆ. ಭಾರತ ಹಾಲಿ ಚಾಂಪಿಯನ್ ತಂಡವಾಗಿದ್ದು ಕಪ್ ಉಳಿಸಲು ಯತ್ನಿಸಲಿದೆ.