Site icon Vistara News

Womens Asia Cup : ಭಾರತದ ಮಹಿಳೆಯರನ್ನು ಸೋಲಿಸಿ ಚೊಚ್ಚಲ ಏಷ್ಯಾ ಕಪ್​ ಗೆದ್ದ ಶ್ರೀಲಂಕಾ ತಂಡ

Women's Asia Cup

ಪಲ್ಲೆಕೆಲೆ: ಫೈನಲ್ ಪಂದ್ಯದಲ್ಲಿ ವೈಫಲ್ಯ ಕಂಡ ಭಾರತ ಮಹಿಳೆಯರ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ 8 ವಿಕೆಟ್​ಗಳ ಸೋಲು ಕಂಡಿದ್ದು, ಮಹಿಳೆಯರ ಏಷ್ಯಾ ಕಪ್​ (Womens Asia Cup) ಟ್ರೋಫಿ ಉಳಿಸಲು ವಿಫಲಗೊಂಡಿದೆ. ಕಳೆದ ಬಾರಿ ಭಾರತ ಚಾಂಪೊಯನ್ ಆಗಿತ್ತು, ಅಲ್ಲದೆ, ಈ ಬಾರಿಯೂ ತಂಡ ಉತ್ತಮವಾಗಿತ್ತು. ಆದರೆ, ಕಪ್ ಗೆಲ್ಲುವಲ್ಲಿ ಕೊನೇ ಕ್ಷಣದಲ್ಲಿ ಎಡವಿತು. ಇದೇ ವೇಳೆ ಚಾಮರಿ ಅಟ್ಟಪಟ್ಟು ನೇತೃತ್ವದ ಲಂಕಾ ವನಿತೆಯರು ಮೊದಲ ಬಾರಿಗೆ ಏಷ್ಯಾ ಕಪ್​ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಫೈನಲ್​ ಪಂದ್ಯದಲ್ಲಿ ಸಂಪೂರ್ಣವಾಗಿ ಪಾರಮ್ಯ ಮೆರೆದ ಲಂಕಾ ತಂಡ ಟ್ರೋಫಿ ಗೆದ್ದು ಸಂಭ್ರಮಿಸಿತು.

ಭಾರತ ತಂಡ ಹಾಲಿ ಆವೃತ್ತಿಯಲ್ಲೂ ಬಲಾಢ್ಯ ತಂಡವಾಗಿತ್ತು. ಈ ಹಿಂದಿನ ಎಂಟು ಆವೃತ್ತಿಗಳಲ್ಲಿ 7 ಟ್ರೋಫಿ ಗೆದ್ದಿತ್ತು. ಅಂತೆಯೇ 8ನೇ ಕಪ್​ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ, ಅದಕ್ಕೆ ಲಂಕಾ ವನಿತೆಯರು ಅವಕಾಶ ಕೊಡಲಿಲ್ಲ. ಕಳೆದ 8 ಆವೃತ್ತಿಗಳಲ್ಲಿ 5 ಬಾರಿ ಫೈನಲ್​​ನಲ್ಲಿ ಪ್ರವೇಶಿಸಿದ್ದ ದ್ವೀಪರಾಷ್ಟ್ರ, ಕೊನೆಗೂ 6ನೇ ಪ್ರಯತ್ನದಲ್ಲಿ ಗೆಲುವಿನ ಕನಸು ನನಸಾಗಿಸಿಕೊಂಡಿದೆ.

ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 165 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟಿ್​ ಮಾಡಿದ ಲಂಕಾ 18.4 ಓವರ್​ಗಳಲ್ಲೇ 2 ವಿಕೆಟ್​ ನಷ್ಟಕ್ಕೆ 167 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ 7 ರನ್ ಗಳಿಸಿ ಮೊದಲ ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಬಿತ್ತು. ಆರಂಭಿಕ ಹಿನ್ನಡೆ ಮಧ್ಯೆಯೂ ನಾಯಕಿ ಚಾಮರಿ ಅಟ್ಟಪಟ್ಟು ಭಾರತೀಯ ಬೌಲರ್​ಗಳನ್ನು ಹಿಮ್ಮೆಟ್ಟಿಸಿದರು. ಅವರಿಗೆ ಹರ್ಷಿತಾ ಸಮರವಿಕ್ರಮ ಬೆಂಬಲವಾಗಿನಿಂತರು. ಹೀಗಾಗಿ ಎರಡನೇ ವಿಕೆಟ್​ಗೆ ಲಂಕಾ ತಂಡ 87 ರನ್ ಗಳಿಸಿತು. ಇದೇ ವೇಳೆ ಚಾಮರಿ ಅರ್ಧ ಶತಕ ಬಾರಿಸಿದರು.
43 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ ಸಹಿತ 61 ರನ್ ಗಳಿಸಿದ್ದ ಚಾಮರಿ ಔಟಾದರೂ ಹರ್ಷಿತಾ ಗೆಲುವಿನ ಕಡೆಗೆ ಮುನ್ನುಗ್ಗಿದರು. ಹರ್ಮನ್ ಪಡೆಯ ವಿರುದ್ಧ ಸವಾರಿ ಮಾಡಿ ಗೆಲುವಿನತ್ತ ಮುನ್ನಡೆಸಿದರು. ಹಾಗೆಯೇ ಅರ್ಧಶತಕ ಪೂರೈಸಿದರು.

ಇದನ್ನೂ ಓದಿ: Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

ಮಂಧಾನ ಏಕಾಂಗಿ ಹೋರಾಟ

ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 44 ರನ್ ಬಂದರೂ ಶಫಾಲಿ ವರ್ಮಾ 16 ರನ್​ಗಳಿಗೆ ಆಟ ಮುಗಿಸಿದರು. ಫೈನಲ್​ಗೆ ಎಂಟ್ರಿ ಪಡೆದ ಉಮಾ ಚೆಟ್ರಿ 9 ರನ್​ಗೆ ನಿರ್ಗಮಿಸಿದರು. ಹರ್ಮನ್​ಪ್ರೀತ್​ ಕೌರ್​ (11) ಬೇಗನೆ ಔಟಾದ ಕಾರಣ ದೊಡ್ಡ ಮೊತ್ತ ಪೇರಿಸುವ ಕನಸಿಗೆ ಬ್ರೇಕ್ ಬಿತ್ತು. ಸತತ ವಿಕೆಟ್​ ಪತನದ ಮಧ್ಯೆಯೂ ಮಂಧಾನ ಅರ್ಧಶತಕ ಸಿಡಿಸಿ ಆಸರೆಯಾದರು.

ಮಂಧಾನ 47 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್ ಗಳಿಸಿ ತಂಡವನ್ನು 150ರ ಗಡಿ ದಾಟಿಸಲು ನೆರವಾದರು. ಜೆಮಿಮಾ ರೊಡ್ರಿಗಸ್ 29 ರನ್ ಗಳಿಸಿದರು. ಕೊನೆಯಲ್ಲಿ ರಿಚಾ ಘೋಷ್ ಅಬ್ಬರದ 30 ರನ್ ಕಲೆ ಹಾಕಿದರು. ಪೂಜಾ ವಸ್ತ್ರಾಕರ್ 5, ರಾಧಾ ಯಾದವ್ 1 ರನ್ ಗಳಿಸಿದರು.

Exit mobile version