Site icon Vistara News

Women’s Day 2023 : ಮಹಿಳಾ ಉದ್ಯೋಗಿಗಳು 2023ರಲ್ಲಿ ತೆರಿಗೆಯಲ್ಲಿ ಹೇಗೆ ಹೆಚ್ಚು ಉಳಿತಾಯ ಮಾಡಬಹುದು?

Women's Day 2023

Women's Day 2023

International Women’s Day 2023 : ಭಾರತದಲ್ಲಿ ಎಲ್ಲ ವಲಯಗಳಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಅವರು ಪುರುಷರಿಗೆ ಕಮ್ಮಿ ಇಲ್ಲದಂತೆ ಸ್ಪರ್ಧಿಸುತ್ತಾರೆ. ಕೆಲವೊಮ್ಮೆ ಅವರಿಗಿಂತಲೂ ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತಾರೆ. ಮಹಿಳೆಯರು ಉದ್ಯೋಗಿಗಳಾದಂತೆ ಅವರ ಆದಾಯವೂ ಹೆಚ್ಚುತ್ತದೆ. ಆದ್ದರಿಂದ ಅವರು ಕೂಡ ತೆರಿಗೆ ಯೋಜನೆಯನ್ನು (tax planning) ಸಮರ್ಪಕವಾಗಿ ಮಾಡಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸುವುದು ಸೂಕ್ತ.

ತೆರಿಗೆ ತಜ್ಞರ ಪ್ರಕಾರ ಆದಾಯ ತೆರಿಗೆ ನಿಯಮಗಳು ಸಾಮಾನ್ಯವಾಗಿ ಲಿಂಗ ತಾರತಮ್ಯವನ್ನು ಮಾಡುವುದಿಲ್ಲ. 2012-13ಕ್ಕೆ ಮೊದಲು ಪುರುಷರು ಮತ್ತು ಮಹಿಳೆಯರಿಗೆ ಭಿನ್ನ ತೆರಿಗೆ ಶ್ರೇಣಿಗಳು ಇದ್ದವು. ಆದರೆ ಈಗ ಎಲ್ಲರಿಗೂ ಸಾಮಾನ್ಯ ತೆರಿಗೆ ಶ್ರೇಣಿಗಳಿವೆ. ಮಹಿಳೆಯರು ಯಾವಾಗಲೂ ಹಣ ಉಳಿತಾಯದ ಕೌಶಲದಲ್ಲಿ ಸಿದ್ಧಹಸ್ತರು. ಕೆಳಕಂಡ ತೆರಿಗೆ ಲಾಭಗಳನ್ನು ಅವರು ಪಡೆಯಬಹುದು.

ಗೃಹ ಸಾಲದ ಮರು ಪಾವತಿ

ನೀವು ಜಂಟಿಯಾಗಿ ಗೃಹ ಸಾಲವನ್ನು ತೆಗೆದುಕೊಂಡಿದ್ದರೆ, ಮೂಲ ಮೊತ್ತ (principal) ಮತ್ತು ಬಡ್ಡಿಯ ಭಾಗಕ್ಕೆ (interest components) ತೆರಿಗೆ ಕಡಿತದ ಅನುಕೂಲ ಪಡೆಯಬಹುದು. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ ಮೂಲ ಮೊತ್ತದಲ್ಲಿ 1.5 ಲಕ್ಷ ರೂ. ತನಕ ಡಿಡಕ್ಷನ್‌ ಪಡೆಯಬಹುದು. ಸೆಕ್ಷನ್‌ 24 ಅಡಿಯಲ್ಲಿ ಬಡ್ಡಿ ದರ ಮರು ಪಾವತಿಯಲ್ಲಿ 2 ಲಕ್ಷ ರೂ. ತನಕ ಡಿಡಕ್ಷನ್‌ ಗಳಿಸಬಹುದು.

ಮೊದಲ ಸಲ ಮನೆ ಖರೀದಿಸುವುದಿದ್ದರೆ:

ನೀವು ಮೊದಲ ಸಲ ಮನೆ ಖರೀದಿಸುವುದಿದ್ದರೆ ಸೆಕ್ಷನ್‌ 80ಇಇ ಅಡಿಯಲ್ಲಿ 50,000 ರೂ, ಅಥವಾ ಸೆಕ್ಷನ್‌ 80 ಇಇಎ ಅಡಿಯಲ್ಲಿ 150000 ರೂ. ತನಕ ಹೆಚ್ಚುವರಿ ತೆರಿಗೆ ಅನುಕೂಲ ಪಡೆಯಬಹುದು.

ಸೆಕ್ಷನ್‌ 80 ಇಇ ಅಡಿಯಲ್ಲಿ ಮೊದಲ ಸಲ ಮನೆ ಖರೀದಿಸುವವರಿಗೆ ಹೆಚ್ಚುವರಿ 50,000 ರೂ. ತೆರಿಗೆ ಅನುಕೂಲ (tax benefit) ಪಡೆಯಬಹುದು. ಆದರೆ ಪ್ರಾಪರ್ಟಿಯು 50 ಲಕ್ಷ ರೂ. ಮೌಲ್ಯ ಮೀರುವಂತಿಲ್ಲ. ಜತೆಗೆ ಗೃಹ ಸಾಲ 35 ಲಕ್ಷ ರೂ. ದಾಟುವಂತಿಲ್ಲ.

ಉಳಿತಾಯ ಖಾತೆ:

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಟಿಟಿಎ ಅಡಿಯಲ್ಲಿ ಉಳಿತಾಯ ಖಾತೆಯಲ್ಲಿ ಗಳಿಸುವ ಬಡ್ಡಿಗೆ 10,000 ರೂ. ತನಕ ತೆರಿಗೆ ಡಿಡಕ್ಷನ್‌ ಸಿಗುತ್ತದೆ. ಹಲವು ಬ್ಯಾಂಕ್‌ಗಳು ಜೀರೊ ಬ್ಯಾಲೆನ್ಸ್‌ ಖಾತೆ ಸೌಲಭ್ಯ ಒದಗಿಸುತ್ತವೆ. ಹಿರಿಯ ಮಹಿಳಾ ನಾಗರಿಕರಿಗೆ ಸೆಕ್ಷನ್‌ 80 ಟಿಟಿಬಿ ಅಡಿಯಲ್ಲಿ 50,000 ರೂ. ತನಕ ಬಡ್ಡಿಗೆ ತೆರಿಗೆ ಉಳಿತಾಯದ ಲಾಭ ಸಿಗುತ್ತದೆ.

ಎಚ್‌ಆರ್‌ಎ (ಮನೆ ಬಾಡಿಗೆ ಭತ್ಯೆ):

ಎಚ್‌ಆರ್‌ಎ ವೇತನದ ಭಾಗವಾಗಿದ್ದು, ಬಾಡಿಗೆ ಮನೆಯಲ್ಲಿದ್ದರೆ ಅದಕ್ಕೆ ಸಂಬಂಧಿಸಿದ ತೆರಿಗೆ ಅನುಕೂಲದ ಸೌಲಭ್ಯ ಪಡೆಯಬಹುದು.

ಶಿಕ್ಷಣ ಸಾಲ: ಸೆಕ್ಷನ್‌ 80 ಇ ಅಡಿಯಲ್ಲಿ ಉನ್ನತ ಶಿಕ್ಷಣಕ್ಕೆ ಪಡೆದ ಸಾಲದಲ್ಲಿ ಬಡ್ಡಿಯ ಭಾಗಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಸಂಗಾತಿ ಅಥವಾ ಮಕ್ಕಳ ಸಲುವಾಗಿ ಪಡೆದ ಶಿಕ್ಷಣ ಸಾಲಕ್ಕೂ ಲಭ್ಯ. ಗರಿಷ್ಠ 8 ವರ್ಷ ಕಾಲ ಈ ಸೌಲಭ್ಯ ಪಡೆಯಬಹುದು.

ಆರೋಗ್ಯ ವಿಮೆ: ಸೆಕ್ಷನ್‌ 80ಡಿ ಅಡಿಯಲ್ಲಿ ಮಹಿಳೆ ಆರೋಗ್ಯ ವಿಮೆಯ ಪ್ರೀಮಿಯಂನಲ್ಲಿ 25,000 ರೂ. ತನಕ ವೆಚ್ಚಕ್ಕೆ ತೆರಿಗೆ ಉಳಿತಾಯ ಕ್ಲೇಮ್‌ ಮಾಡಬಹುದು. ಪೋಷಕರು 60 ವರ್ಷ ವಯಸ್ಸಿಗಿಂತ ಕೆಳಗಿದ್ದರೆ ಪ್ರತ್ಯೇಕ 25,000 ರೂ. ಡಿಡಕ್ಷನ್‌ ಪಡೆಯಬಹುದು. ಪೋಷಕರು 60 ವರ್ಷಕ್ಕಿಂತ ಮೇಲಿದ್ದರೆ 50,000 ರೂ. ತೆರಿಗೆ ಅನುಕೂಲವನ್ನು ನಿಮ್ಮದಾಗಿಸಬಹುದು.

ಫುಡ್‌ ಕೂಪನ್‌ಗಳು: ಕಂಪನಿಗಳು ನೀಡುವ ಫುಡ್‌ ಕೂಪನ್‌ಗಳ ಮೂಲಕ ವರ್ಷಕ್ಕೆ 26,400 ರೂ. ತನಕ ತೆರಿಗೆಗೆ ಅರ್ಹ ಆದಾಯವನ್ನು ಇಳಿಸಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಮೂಲಕ ಮಗಳ ಭವಿಷ್ಯಕ್ಕೆ ತೆರಿಗೆ ವಿನಾಯಿತಿಯ ಅನುಕೂಲ ಪಡೆಯಬಹುದು.

ತೆರಿಗೆ ಉಳಿಸುವ ಹೂಡಿಕೆಯ ಆಯ್ಕೆಗಳು:

ಮಹಿಳಾ ಉದ್ಯೋಗಿಗಳಿಗೆ ತೆರಿಗೆ ಉಳಿತಾಯಕ್ಕೆ ಸಹಕರಿಸುವ ನಾನಾ ಹೂಡಿಕೆಯ ಯೋಜನೆಗಳು:

ಸಾರ್ವಜನಿಕ ಭವಿಷ್ಯನಿಧಿ (PPF)

ಈಕ್ವಿಟಿ ಲಿಂಕ್ಡ್‌ ಸೇವಿಂಗ್‌ ಸ್ಕೀಮ್‌ (ELSS)

ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫಂಡ್‌ (EPF)

ಟ್ಯಾಕ್ಸ್‌ ಸೇವಿಂಗ್‌ ಫಿಕ್ಸೆಡ್‌ ಡಿಪಾಸಿಟ್‌ (FDs)

ನ್ಯಾಶನಲ್‌ ಸೇವಿಂಗ್‌ ಸರ್ಟಿಫಿಕೇಟ್‌ (NSE)

ಸುಕನ್ಯಾ ಸಮೃದ್ಧಿ ಯೋಜನೆ (SSY)

ಯುನಿಟ್‌ ಲಿಂಕ್ಡ್‌ ಇನ್ಷೂರೆನ್ಸ್‌ ಪ್ಲಾನ್‌ (ULIP)

ನ್ಯಾಶನಲ್‌ ಪೆನ್ಷನ್‌ ಪ್ಲಾನ್‌ (NPS)

Exit mobile version